"ರಾಜಕೀಯ ಒಂದು ಶಾಶ್ವತ ಯುದ್ಧ": TMC ಚಿಹ್ನೆ ವಿವಾದ ನಡುವೆ Ritabrata Banerjee ಮಾರ್ಮಿಕ ನುಡಿ..!
ರಾಜಕೀಯ ಎಂಬುದು ಶಾಶ್ವತ ಯುದ್ಧ, ಪ್ರತಿ ಗಂಟೆ, ಪ್ರತಿ ನಿಮಿಷ, ಪ್ರತಿ ಕ್ಷಣ ನಡೆಯುವ ಯುದ್ಧ. ಇದು ಬದಲಾಗುವ ಹಿತಾಸಕ್ತಿಗಳು, ಅಗತ್ಯಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ರೂಪಾಂತರಗೊಳ್ಳುವ ಯುದ್ಧ.

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆ ಯಾರಿಗೆ ಸೇರಬೇಕು ಎಂಬ ವಿವಾದ ತೀವ್ರಗೊಂಡಿರುವ ನಡುವೆಯೇ ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ ಅವಪು ‘ರಾಜಕೀಯ ಒಂದು ಶಾಶ್ವತ ಯುದ್ಧ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಿತಬ್ರತ ಬ್ಯಾನರ್ಜಿ ಅವರು, “ರಾಜಕೀಯ ಎಂಬುದು ಶಾಶ್ವತ ಯುದ್ಧ, ಪ್ರತಿ ಗಂಟೆ, ಪ್ರತಿ ನಿಮಿಷ, ಪ್ರತಿ ಕ್ಷಣ ನಡೆಯುವ ಯುದ್ಧ. ಇದು ಬದಲಾಗುವ ಹಿತಾಸಕ್ತಿಗಳು, ಅಗತ್ಯಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ರೂಪಾಂತರಗೊಳ್ಳುವ ಯುದ್ಧ. ಭಾರತದ ಸಂವಿಧಾನದಲ್ಲಿ ಪ್ರತಿಷ್ಠಾಪಿತವಾಗಿರುವ ಪ್ರಜಾಪ್ರಭುತ್ವದ ಶಾಶ್ವತ ವಿಚಾರಗಳು ಮತ್ತು ಮೌಲ್ಯಗಳು ಚಿರಾಯುವಾಗಲಿ ಎಂದು ಬರೆದಿದ್ದಾರೆ.
ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆಗೆ ಮುನ್ನ ಟಿಎಂಸಿಯ ಹೆಸರು, ಸಂಘಟನಾ ನಿಯಂತ್ರಣ ಹಾಗೂ ಚುನಾವಣಾ ಚಿಹ್ನೆಯ ವಿಚಾರದಲ್ಲಿ ಎರಡು ಬಣಗಳ ನಡುವೆ ವಿವಾದ ಮುಂದುವರಿದಿರುವ ಸಂದರ್ಭದಲ್ಲೇ ಅವರ ಈ ಹೇಳಿಕೆ ಬಂದಿದೆ.
ಪ್ರತಿಸ್ಪರ್ಧಿ ಬಣಗಳು ತಮ್ಮ ಅಂತಿಮ ವಾದಗಳನ್ನು ಸಲ್ಲಿಸುವಂತೆ ಸೂಚಿಸಿದ್ದ ಚುನಾವಣಾ ಆಯೋಗ ಗುರುವಾರ ಎರಡೂ ಬಣಗಳ ವಾದವನ್ನು ಆಲಿಸಿತ್ತು.
ಇದಕ್ಕೂ ಮುನ್ನ ಗುರುವಾರ ರಿತಬ್ರತ ಬ್ಯಾನರ್ಜಿ ಅವರು, ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಉಪಚುನಾವಣೆಗೆ ಎರಡೂ ಬಣಗಳು ‘ಎ’ ಮತ್ತು ‘ಬಿ’ ನಮೂನೆಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಟಿಎಂಸಿಯ ಹೆಸರು ಮತ್ತು ಚುನಾವಣಾ ಚಿಹ್ನೆ ಹಂಚಿಕೆ ಕುರಿತು ಚುನಾವಣಾ ಆಯೋಗವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದ್ದರು.
ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲನುಭವಿಸಿದ ಬಳಿಕ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ದೂರ ಸರಿದ 80 ನೂತನ ಟಿಎಂಸಿ ಶಾಸಕರ ಪೈಕಿ ಸುಮಾರು 60 ಶಾಸಕರ ಗುಂಪಿನ ನೇತೃತ್ವ ವಹಿಸಿರುವ ರಿತಬ್ರತ, ದೆಹಲಿಯಲ್ಲಿ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ನಾವು ಇಂದು ಚುನಾವಣಾ ಆಯೋಗವನ್ನು ಭೇಟಿಯಾದೆವು. ರೆಜಿನಗರ ಮತ್ತು ನಂದಿಗ್ರಾಮ ಉಪಚುನಾವಣೆಗೆ ಸಂಬಂಧಿಸಿದಂತೆ ನಮ್ಮ ವಾದಗಳನ್ನು ಮಂಡಿಸಿ, ಆಯೋಗ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ ಎಂದು ತಿಳಿಸಿದ್ದರು.
ಈ ಉಪಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು. ಇಂದು ನಾಮಪತ್ರಗಳ ಪರಿಶೀಲನೆ ನಡೆದಿದೆ. ಹೀಗಾಗಿ ಈಗ ಚುನಾವಣಾ ಚಿಹ್ನೆ ಹಂಚಿಕೆಯ ವಿಚಾರ ಬಾಕಿ ಉಳಿದಿದೆ. ನಾವು ‘ಎ’ ಮತ್ತು ‘ಬಿ’ ನಮೂನೆಗಳನ್ನು ಸಲ್ಲಿಸಿದ್ದೇವೆ. ಆದರೆ, ಕಾಳಿಘಾಟ್‌ನಿಂದಲೂ ‘ಎ’ ಮತ್ತು ‘ಬಿ’ ನಮೂನೆಗಳನ್ನು ಸಲ್ಲಿಸಲಾಗಿದೆ. ಹೀಗಾಗಿ ಚುನಾವಣಾ ಆಯೋಗವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದ್ದರು.
ಎರಡೂ ಬಣಗಳು ತಾವೇ “ನಿಜವಾದ” ತೃಣಮೂಲ ಕಾಂಗ್ರೆಸ್ ಎಂದು ಪ್ರತಿಪಾದಿಸಿದ್ದು, ಪಕ್ಷದ ಅಧಿಕೃತ ನಾಯಕತ್ವವೆಂದು ಗುರುತಿಸುವಂತೆ ಚುನಾವಣಾ ಆಯೋಗದ ಮೊರೆ ಹೋಗಿವೆ.
ರಿತಬ್ರತ ನೇತೃತ್ವದ ನಿಯೋಗದಲ್ಲಿ ಅಖ್ರುಜ್ಜಮಾನ್, ಅರೂಪ್ ರಾಯ್, ಚಂದ್ರಿಮಾ ಭಟ್ಟಾಚಾರ್ಯ ಮತ್ತು ರಿಜು ದತ್ತಾ ಸೇರಿದಂತೆ ಹಲವರು ಇದ್ದರು.
ಮುಂಬರುವ ಉಪಚುನಾವಣೆಗೆ ಎರಡೂ ಬಣಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಟಿಎಂಸಿಯ ಸಾಂಪ್ರದಾಯಿಕ ಚುನಾವಣಾ ಚಿಹ್ನೆಯ ಮೇಲೆ ಹಕ್ಕು ಮಂಡಿಸಿರುವುದರಿಂದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ತಮ್ಮ ತಮ್ಮ ಹಕ್ಕುಗಳನ್ನು ಸಮರ್ಥಿಸುವ ದಾಖಲೆಗಳನ್ನು ಎರಡೂ ಬಣಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



