ವಿದೇಶ

West-Asia war: ಲೆಬನಾನ್ ನಮ್ಮ ಒಪ್ಪಂದದಲ್ಲಿರಲಿಲ್ಲ- ಅಮೆರಿಕಾ ಸ್ಪಷ್ಟನೆ; ಅತಂತ್ರ ಸ್ಥಿತಿಯಲ್ಲಿ ಕದನ ವಿರಾಮ..!

ಲೆಬನಾನ್ ವಿಚಾರದಲ್ಲಿ ಅಮೆರಿಕಾ ಯಾವುದೇ ಭರವಸೆ ನೀಡಿಲ್ಲ ಎಂದು ಅಮೆರಿಕಾ ಸ್ಪಷ್ಟಪಡಿಸಿದ್ದು, ಇದು ಕದನ ವಿರಾಮದ ಸುತ್ತಲಿನ ಗೊಂದಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

West-Asia war: ಲೆಬನಾನ್ ನಮ್ಮ ಒಪ್ಪಂದದಲ್ಲಿರಲಿಲ್ಲ- ಅಮೆರಿಕಾ ಸ್ಪಷ್ಟನೆ; ಅತಂತ್ರ ಸ್ಥಿತಿಯಲ್ಲಿ ಕದನ ವಿರಾಮ..!
ಡೊನಾಲ್ಡ್ ಟ್ರಂಪ್-ಜೆಡಿ ವ್ಯಾನ್ಸ್
Published On :

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದವು ಈಗ ಮುರಿದುಬೀಳುವ ಹಂತಕ್ಕೆ ತಲುಪಿದೆ.

ಕದನ ವಿರಾಮ ಒಪ್ಪಂದದ ವ್ಯಾಪ್ತಿಗೆ 'ಲೆಬನಾನ್' ಬರುತ್ತದೆಯೇ ಎಂಬ ಬಗ್ಗೆ ಇರಾನ್ ಮತ್ತು ಅಮೆರಿಕ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ.

ಲೆಬನಾನ್‌ನಲ್ಲಿ ಯುದ್ಧ ನಿಲ್ಲಿಸುವುದು ಒಪ್ಪಂದದ ಭಾಗವಾಗಿತ್ತು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

ಈ ತಾತ್ಕಾಲಿಕ ಕದನ ವಿರಾಮವು ಲೆಬನಾನ್ ವಿಷಯವನ್ನು ಒಳಗೊಂಡಿಲ್ಲ ಎಂದು ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಲೆಬನಾನ್ ವಿಚಾರದಲ್ಲಿ ಅಮೆರಿಕಾ ಯಾವುದೇ ಭರವಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇದು ಕದನ ವಿರಾಮದ ಸುತ್ತಲಿನ ಗೊಂದಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಈ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ ಪ್ರಧಾನಿ, ಕದನ ವಿರಾಮವು ಲೆಬನಾನ್ ಸೇರಿದಂತೆ ಎಲ್ಲಾ ಕಡೆ ಅನ್ವಯಿಸುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು. ಆದರೀಗ ಅಮೆರಿಕಾ ಹಾಗೂ ಇಸ್ರೇಲ್ ನೀಡುತ್ತಿರುವ ಹೇಳಿಕೆ ಗೊಂದಲಗಳನ್ನು ಹೆಚ್ಚಿಸಿದೆ.

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಪ್ರತಿಕ್ರಿಯಿ, ಅಮೆರಿಕಾ ಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.ಟೆಹ್ರಾನ್ ಮುಂದಿಟ್ಟಿದ್ದ 10 ಅಂಶಗಳ ಶಾಂತಿ ಒಪ್ಪಂದಕ್ಕೆ ಧಕ್ಕೆ ಉಂಟಾಗಿದೆ ಎಂದು ಹೇಳಿದ್ದಾರೆ.

ಅಮೆರಿಕಾದ ಮೇಲೆ ಇತಿಹಾಸದಿಂದಲೇ ಅವಿಶ್ವಾಸವಿದೆ ಎಂದು ಘಾಲಿಬಾಫ್ ಹೇಳಿದ್ದು, ಒಪ್ಪಂದಗಳನ್ನು ಪಾಲಿಸದ ಮಾದರಿ ಮತ್ತೆ ಮರುಕಳಿಸಿದೆ. ಲೆಬನಾನ್ ಮೇಲೆ ಮುಂದುವರಿದ ದಾಳಿ, ಇರಾನ್ ವಾಯುಪ್ರದೇಶಕ್ಕೆ ಡ್ರೋನ್ ಪ್ರವೇಶ ಮತ್ತು ಯುರೇನಿಯಂ ಪುಷ್ಟೀಕರಣ ಹಕ್ಕಿನ ನಿರಾಕರಣೆ ಪ್ರಮುಖ ಉಲ್ಲಂಘನೆಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ದ್ವಿಪಕ್ಷೀಯ ಕದನ ವಿರಾಮ ಅಥವಾ ಸಂಧಾನ ಪ್ರಯತ್ನ ಅರ್ಥವಿಲ್ಲದ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಲೆಬನಾನ್‌ನ ರಾಜಧಾನಿ ಬೈರುತ್ ನಲ್ಲಿ ಇಸ್ರೇಲ್ ತನ್ನ ದಾಳಿಗಳು ಮುಂದುವರಿದಿದ್ದು, ಈ ದಾಳಿಗಳಿಂದ ಜನರಲ್ಲಿ ಭೀತಿ ಮತ್ತು ಗೊಂದಲ ಉಂಟಾಗಿದೆ. ಕಳೆದ ತಿಂಗಳಿನಿಂದ ನಡೆದ ದಾಳಿಗಳಲ್ಲಿ 1,700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್, ಇಸ್ರೇಲ್ ದಾಳಿಗಳು ನಿಲ್ಲದಿದ್ದರೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ್ದು, ಹಿಜ್ಬುಲ್ಲಾ ಕೂಡ ಪ್ರತಿದಾಳಿ ನಡೆಸುವ ಹಕ್ಕು ನಮಗಿದೆ ಎಂದು ಘೋಷಿಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಅಗತ್ಯವಿದ್ದರೆ ಇರಾನ್ ವಿರುದ್ಧವೂ ಎದುರಿಸಲು ದೇಶ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಅಮೆರಿಕಾ ರಕ್ಷಣಾ ಇಲಾಖೆ ಮುಖ್ಯಸ್ಥ ಪೀಟ್ ಹೆಗ್ಸೆತ್ ಅವರು, ಪರಿಸ್ಥಿತಿ ಮರುಕಳಿಸಿದರೆ ಅಮೆರಿಕಾ ಸೇನೆ ತಕ್ಷಣ ಕ್ರಮ ಕೈಗೊಳ್ಳಲು ಸಜ್ಜಾಗಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಕದನ ವಿರಾಮ ಜಾರಿಯಲ್ಲಿದ್ದರೂ ದಾಳಿಗಳು ನಡೆಯುತ್ತಿದ್ದು, ಲೆಬನಾನ್ ವಿಚಾರ ಕದನ ವಿರಾಮದ ಭವಿಷ್ಯವೇ ಸಂಕಷ್ಟಕ್ಕೆ ಸಿಲುವ ಸಾಧ್ಯತೆಗಳು ಕಂಡು ಬರುತ್ತಿದೆ. ಇದರೊಂದಿಗೆ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಲಕ್ಷಣಗಳು ಕಂಡು ಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.