"ದಿನಕ್ಕೊಂದು, ಕ್ಷಣಕ್ಕೊಂದು ಮಾತನಾಡಬೇಡಿ": ಇರಾನ್ ಯುದ್ಧದ ಬಗ್ಗೆ ಟ್ರಂಪ್ಗೆ ಮ್ಯಾಕ್ರನ್ ಮಂಗಳಾರತಿ!
ನೀವು ಗಂಭೀರವಾಗಿರಬೇಕು. ದಿನಕ್ಕೊಂದು ಕ್ಷಣಕ್ಕೊಂದು ಮಾತನಾಡಬೇಡಿ. ಒಂದು ದಿನ ಒಂದು ಮಾತು, ಮತ್ತೊಂದು ದಿನ ಇನ್ನೊಂದು ಮಾತು ಹೇಳಬಾರದು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಪ್ರಾಚ್ಯ ಸಂಘರ್ಷದ ಬಗ್ಗೆ ಪದೇ ಪದೇ ಮಾತನಾಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ಹೇಳಿದ್ದಾರೆ.
"ನೀವು ಗಂಭೀರವಾಗಿರಬೇಕು. ದಿನಕ್ಕೊಂದು ಕ್ಷಣಕ್ಕೊಂದು ಮಾತನಾಡಬೇಡಿ. ಒಂದು ದಿನ ಒಂದು ಮಾತು, ಮತ್ತೊಂದು ದಿನ ಇನ್ನೊಂದು ಮಾತು ಹೇಳಬಾರದು. ನಿತ್ಯವೂ ಇಂತಹ ಹೇಳಿಕೆಗಳನ್ನು ನೀಡುವ ಬದಲು, ಪರಿಸ್ಥಿತಿಯನ್ನು ತಿಳಿಗೊಳಿಸಿ ಶಾಶ್ವತ ಶಾಂತಿಯತ್ತ ಗಮನ ಹರಿಸುವುದು ಉತ್ತಮ" ಎಂದು ಮ್ಯಾಕ್ರನ್ ಅವರು ಟ್ರಂಪ್ಗೆ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.
"ಕದನ ವಿರಾಮ ಘೋಷಿಸಬೇಕು"
ಹೋರ್ಮುಜ್ ಜಲಸಂಧಿಯನ್ನು ಸ್ವತಂತ್ರಗೊಳಿಸಲು ಮಿಲಿಟರಿ ಕಾರ್ಯಾಚರಣೆ ನಡೆಸುವುದು "ಅವಾಸ್ತವಿಕ" ಎಂದು ಮ್ಯಾಕ್ರನ್ ಹೇಳಿದ್ದಾರೆ.
"ಮಿಲಿಟರಿ ಕಾರ್ಯಾಚರಣೆಯ ಮೂಲಕ ಬಲವಂತವಾಗಿ ಹಾರ್ಮುಜ್ ಜಲಸಂಧಿಯನ್ನು ವಿಮೋಚನೆಗೊಳಿಸಲು ಪ್ರತಿಪಾದಿಸುವವರಿದ್ದಾರೆ, ಈ ನಿಲುವನ್ನು ಕೆಲವೊಮ್ಮೆ ಯುನೈಟೆಡ್ ಸ್ಟೇಟ್ಸ್ ವ್ಯಕ್ತಪಡಿಸಿದೆ. ಇದು ಅವಾಸ್ತವಿಕ. ಏಕೆಂದರೆ ಇದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಜಲಸಂಧಿಯನ್ನು ದಾಟುವ ಪ್ರತಿಯೊಬ್ಬರು ಇರಾನಿನ ಕ್ರಾಂತಿಕಾರಿ ಗಾರ್ಡ್‌ಗಳಿಂದ ಭಾರೀ ಬೆದರಿಕೆ ಎದುರಿಸಬೇಕಾಗುತ್ತದೆ. ಹೀಗಾಗಿ ಕದನ ವಿರಾಮ ಘೋಷಿಸಬೇಕು" ಎಂದು ಮ್ಯಾಕ್ರನ್ ಹೇಳಿದ್ದಾರೆ.
'ನ್ಯಾಟೋವನ್ನು ದುರ್ಬಲಗೊಳಿಸಿದ ಟ್ರಂಪ್ '
ಮ್ಯಾಕ್ರಾನ್ ಅವರು ಗುರುವಾರ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಟ್ರಂಪ್ ಅವರು ಅಮೆರಿಕದ ಮೈತ್ರಿಕೂಟದ ಬದ್ಧತೆಯ ಬಗ್ಗೆ "ನಿತ್ಯವೂ ಅನುಮಾನ" ಸೃಷ್ಟಿಸುವ ಮೂಲಕ ನಾರ್ತ್ ಆಟ್ಲಾಂಟಿಕ್ ಟ್ರೀಟಿ ಆರ್ಗ್ನೈಸೇಷನ್ (ನ್ಯಾಟೋ)ಅನ್ನು ದುರ್ಬಲಗೊಳಿಸಿದ್ದಾರೆ ಎಂದು ಮ್ಯಾಕ್ರನ್ ಆರೋಪಿಸಿದರು.
ಮಿತ್ರರಾಷ್ಟ್ರಗಳು ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ಕ್ರಮವನ್ನು ಬೆಂಬಲಿಸಲು ವಿಫಲವಾದ ನಂತರ ಅಮೆರಿಕ ನ್ಯಾಟೋದಿಂದ ಹೊರಬರುವ ಬಗ್ಗೆ ಪರಿಗಣಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದರು.
ನ್ಯಾಟೋವನ್ನು "ಪೇಪರ್ ಟೈಗರ್" ಎಂದು ಟೀಕಿಸಿದ ಟ್ರಂಪ್, ದೊಡ್ಡ ಯುದ್ಧ ಬಂದರೆ ನ್ಯಾಟೋ ನಿಷ್ಪ್ರಯೋಜಕವಾಗಲಿದೆ ಎಂದರು. ಅಮೆರಿಕಕ್ಕೆ ತಮ್ಮ ಸೇನಾ ನೆಲೆಗಳನ್ನು ಬಳಸಲು ಅವಕಾಶ ನೀಡದಿರುವ ಯುರೋಪಿಯನ್ ರಾಷ್ಟ್ರಗಳ ಕ್ರಮಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕವನ್ನು ನ್ಯಾಟೋದಿಂದ ಹೊರತರುವ ಬಗ್ಗೆಯೂ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



