ವಿದೇಶ

ಇರಾನ್ ಯುದ್ಧ ಮುಕ್ತಾಯ ಹಂತದಲ್ಲಿದೆ, ಇನ್ನು 2-3 ವಾರ ಟೆಹ್ರಾನ್ ಮೇಲೆ ದಾಳಿ ತೀವ್ರ; ದೇಶವನ್ನುದ್ದೇಶಿಸಿ ಡೊನಾಲ್ಡ್ ಟ್ರಂಪ್ ಭಾಷಣ; Video

ವೈಟ್ ಹೌಸ್‌ನಿಂದ ನಿನ್ನೆ ಬುಧವಾರ ಸಂಜೆ ನೀಡಿದ ಭಾಷಣದಲ್ಲಿ, ಯುದ್ಧ ಹೇಗೆ ಅಂತ್ಯಗೊಳ್ಳುತ್ತದೆ ಎಂಬುದರ ಕುರಿತು ಹೊಸದಾಗಿ ಏನನ್ನೂ ತಿಳಿಸದೇ, ಇನ್ನೂ ಎರಡು–ಮೂರು ವಾರಗಳ ಕಾಲ ಅತ್ಯಂತ ಕಠಿಣ ದಾಳಿಗಳನ್ನು ಮುಂದುವರಿಸುವುದಾಗಿ ಹೇಳಿದರು.

ಇರಾನ್ ಯುದ್ಧ ಮುಕ್ತಾಯ ಹಂತದಲ್ಲಿದೆ, ಇನ್ನು 2-3 ವಾರ ಟೆಹ್ರಾನ್ ಮೇಲೆ ದಾಳಿ ತೀವ್ರ; ದೇಶವನ್ನುದ್ದೇಶಿಸಿ ಡೊನಾಲ್ಡ್ ಟ್ರಂಪ್ ಭಾಷಣ; Video
ಡೊನಾಲ್ಡ್ ಟ್ರಂಪ್
Published On :

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಆರಂಭಿಸಿ ಒಂದು ತಿಂಗಳು ಮೇಲಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ದಾಳಿ ಮಾಡುವುದನ್ನು ಸಮರ್ಥಿಸಿಕೊಂಡು, ಅಮೆರಿಕಾ ವಿಜಯದ ಅಂಚಿನಲ್ಲಿದೆ ಎಂದು ಹೇಳಿದ್ದಾರೆ.

ವೈಟ್ ಹೌಸ್‌ನಿಂದ ನಿನ್ನೆ ಬುಧವಾರ ಸಂಜೆ ನೀಡಿದ ಭಾಷಣದಲ್ಲಿ, ಯುದ್ಧ ಹೇಗೆ ಅಂತ್ಯಗೊಳ್ಳುತ್ತದೆ ಎಂಬುದರ ಕುರಿತು ಹೊಸದಾಗಿ ಏನನ್ನೂ ತಿಳಿಸದೇ, ಇನ್ನೂ ಎರಡು–ಮೂರು ವಾರಗಳ ಕಾಲ ಅತ್ಯಂತ ಕಠಿಣ ದಾಳಿಗಳನ್ನು ಮುಂದುವರಿಸುವುದಾಗಿ ಹೇಳಿದರು.

ನಾವು ಹಿಡಿದ ಕೆಲಸವನ್ನು ಪೂರ್ಣಗೊಳಿಸುತ್ತೇವೆ, ಅದನ್ನೂ ಬಹಳ ಬೇಗ ಮಾಡುತ್ತೇವೆ. ನಾವು ಜಯದತ್ತ ಬಹಳ ಹತ್ತಿರದಲ್ಲಿದ್ದೇವೆ ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಮಾಧ್ಯಮ ಸಂದರ್ಶನಗಳಲ್ಲಿ ಹೇಳುತ್ತಿದ್ದ ಮಾತನ್ನೇ ನಿನ್ನೆ ಭಾಷಣದಲ್ಲಿ ಕೂಡ ಪುನರಾವರ್ತಿಸಿದರು.

ಆದರೆ, ಅವರ ಜನಮನ್ನಣೆ ಕುಸಿಯುತ್ತಿರುವುದು ಹಾಗೂ ಇಂಧನ ಬೆಲೆ ಏರಿಕೆಯಿಂದ ಅಮೆರಿಕನ್ನರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ, ಫೆಬ್ರವರಿ 28ರಂದು ಇಸ್ರೇಲ್ ಆರಂಭಿಸಿದ ದಾಳಿಯಲ್ಲಿ ಅಮೆರಿಕಾ ಏಕೆ ಸೇರಿತು ಎಂಬುದಕ್ಕೆ ಟ್ರಂಪ್ ಸಮರ್ಥನೆ ನೀಡಿದರು.

ಅಮೆರಿಕಾ ಇರಾನ್ ಸೇನೆಯನ್ನು ಕುಗ್ಗಿಸುವುದು, ಪ್ರಾದೇಶಿಕ ಶಸ್ತ್ರಸಜ್ಜಿತ ಗುಂಪುಗಳಿಗೆ ಕ್ಲೆರಿಕಲ್ ಸರ್ಕಾರ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವುದು ಹಾಗೂ ಇರಾನ್ ಅಣುಬಾಂಬ್ ಪಡೆಯುವುದನ್ನು ತಡೆಯುವುದು ತನ್ನ ಗುರಿಯಾಗಿದೆ ಎಂದು ಟ್ರಂಪ್ ಹೇಳಿದರು. ಆದರೆ, ಈ ಅಣು ಅಪಾಯ ತಕ್ಷಣದದ್ದಲ್ಲ ಎಂದು ವಿಶ್ವಸಂಸ್ಥೆ ಅಣು ಮೇಲ್ವಿಚಾರಣಾ ಸಂಸ್ಥೆ ಹಾಗೂ ಹಲವು ವಿಶ್ಲೇಷಕರು ಹೇಳಿದ್ದಾರೆ.

ಈ ಮುಖ್ಯ ತಂತ್ರಾತ್ಮಕ ಗುರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ವೈಟ್ ಹೌಸ್‌ನ ಕ್ರಾಸ್ ಹಾಲ್‌ನಲ್ಲಿ 19 ನಿಮಿಷಗಳ ಕಾಲ ಮಾಡಿದ ಭಾಷಣದಲ್ಲಿ ಹೇಳಿದರು.

ಕಳೆದ ನಾಲ್ಕು ವಾರಗಳಲ್ಲಿ, ನಮ್ಮ ಸಶಸ್ತ್ರ ಪಡೆಗಳು ವೇಗವಾಗಿ, ನಿರ್ಣಾಯಕವಾಗಿ ಹಾಗೂ ಭಾರೀ ಜಯಗಳನ್ನು ಸಾಧಿಸಿವೆ. ಇಂತಹ ವಿಜಯಗಳನ್ನು ಕೆಲವರು ಮಾತ್ರ ಕಂಡಿರಬಹುದು ಎಂದು ಅವರು ಹೇಳಿದರು.

ಯುದ್ಧದ ಮೊದಲ ದಿನವೇ ಇರಾನ್‌ನ ದೀರ್ಘಕಾಲದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂದು ಹೇಳಿ, ಅವರ ನಾಯಕರು ಹೆಚ್ಚಿನವರು ಈಗ ಜೀವಂತ ಇಲ್ಲ ಎಂದರು.

ಇರಾನ್ ಪ್ರತಿಕ್ರಿಯೆ ಏನು?

ಆದರೆ, ಇರಾನ್ ಪ್ರತಿಕ್ರಿಯೆ ನೀಡುತ್ತಾ ಜಗತ್ತಿನ ಐದನೇ ಭಾಗದ ತೈಲ ಸಾಗಾಟ ನಡೆಯುವ ಹಾರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಿದೆ.

ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಗ್ಯಾಲನ್‌ಗೆ 4 ಡಾಲರ್ ಗಿಂತ ಮೇಲಾಗಿದ್ದು, ಗ್ರಾಹಕರ ವಿಶ್ವಾಸ ಕುಸಿದಿದೆ. ಇದರಿಂದ ಟ್ರಂಪ್ ಅವರ ಆರ್ಥಿಕ ನಾಯಕತ್ವದ ಮೇಲೆ ಇರುವ ವಿಶ್ವಾಸ ಮತ್ತಷ್ಟು ದುರ್ಬಲವಾಗಿದೆ.

ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಟ್ರಂಪ್ ಅವರ ಅನುಮೋದನೆ ಪ್ರಮಾಣ 40 ಶೇಕಡಾಕ್ಕಿಂತ ಕಡಿಮೆಯಾಗಿದ್ದು, ಯುದ್ಧದ ವಿರುದ್ಧ ಅಸಮಾಧಾನ ಪ್ರಮಾಣ 50 ಶೇಕಡಾಕ್ಕಿಂತ ಹೆಚ್ಚು ಏರಿಕೆಯಾಗಿದೆ. ಯುದ್ಧಕ್ಕೆ ಅವರದೇ ರಿಪಬ್ಲಿಕನ್ ಪಕ್ಷದ ಕೆಲವರಿಂದಲೂ ವಿರೋಧ ವ್ಯಕ್ತವಾಗಿದೆ.

ಇರಾನ್ ಗೆ ಎಚ್ಚರಿಕೆ

ಇರಾನ್ ತನ್ನೊಂದಿಗೆ ಮಾತುಕತೆ ಮೂಲಕ ಒಪ್ಪಂದಕ್ಕೆ ಬರದಿದ್ದರೆ, ಅದರ ಪ್ರತಿಯೊಂದು ವಿದ್ಯುತ್ ಉತ್ಪಾದನಾ ಘಟಕಗಳನ್ನೂ ಗುರಿಯಾಗಿಸಿ ದಾಳಿ ಮಾಡುತ್ತೇವೆ ಎಂದು ಟ್ರಂಪ್ ಮತ್ತೊಮ್ಮೆ ಎಚ್ಚರಿಕೆ ನೀಡಿದರು.

ನಾಗರಿಕ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು ಯುದ್ಧ ಕಾನೂನುಗಳ ಪ್ರಕಾರ ಅಕ್ರಮವಾಗಿದ್ದು, ಇದು ಯುದ್ಧ ಅಪರಾಧವಾಗಬಹುದು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಮುಂದಿನ ಎರಡರಿಂದ ಮೂರು ವಾರಗಳಲ್ಲಿ ನಾವು ಇನ್ನಷ್ಟು ದಾಳಿ ಮಾಡಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ ನೈಜ ರಾಜತಾಂತ್ರಿಕ ಮಾತುಕತೆಗಳ ಬಗ್ಗೆ ಟ್ರಂಪ್ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.