ವಿದೇಶ

ಅಮೆರಿಕದಲ್ಲಿ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಮೈಸೂರಿನ ಉದ್ಯಮಿ ಆತ್ಮಹತ್ಯೆ: ಯಾರು ಈ ಹರ್ಷವರ್ಧನ ಕಿಕ್ಕೇರಿ, ಹಿನ್ನೆಲೆ ಏನು?

ಕಿಂಗ್ ಕೌಂಟಿ ಪೊಲೀಸರು 911 ಕರೆಗೆ ಸ್ಪಂದಿಸಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಕಿರಿಯ ಮಗ ಘಟನೆ ನಡೆದಾಗ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಆತ ಸಾವಿನ ದವಡೆಯಿಂದ ಬಚಾವಾಗಿದ್ದಾನೆ.

ಅಮೆರಿಕದಲ್ಲಿ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಮೈಸೂರಿನ ಉದ್ಯಮಿ ಆತ್ಮಹತ್ಯೆ: ಯಾರು ಈ ಹರ್ಷವರ್ಧನ ಕಿಕ್ಕೇರಿ, ಹಿನ್ನೆಲೆ ಏನು?
ಹರ್ಷವರ್ಧನ್ ಕಿಕ್ಕೇರಿ ಮತ್ತು ಶ್ವೇತಾ
Published On :

ಮೈಸೂರು:‌ ಉದ್ಯಮಿ ಹರ್ಷವರ್ಧನ ಕಿಕ್ಕೇರಿ ಅವರು ಅಮೆರಿಕದ ವಾಷಿಂಗ್ಟನ್ ಬಳಿಯ ನ್ಯೂಕ್ಯಾಸಲ್‌ನಲ್ಲಿ ತಮ್ಮ ಪತ್ನಿ ಶ್ವೇತಾ ಮತ್ತು 14 ವರ್ಷದ ಮಗನನ್ನು ಗುಂಡಿಕ್ಕಿ ಕೊಂದಿದ್ದಾರೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಏ.24 ರಂದು ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಿಂಗ್ ಕೌಂಟಿ ಪೊಲೀಸರು 911 ಕರೆಗೆ ಸ್ಪಂದಿಸಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಕಿರಿಯ ಮಗ ಘಟನೆ ನಡೆದಾಗ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಆತ ಸಾವಿನ ದವಡೆಯಿಂದ ಬಚಾವಾಗಿದ್ದಾನೆ.

ಕಿಂಗ್ ಕೌಂಟಿ ಶೆರಿಫ್ ವಕ್ತಾರ ಬ್ರಾಂಡಿನ್ ಹಲ್ ಪ್ರತಿಕ್ರಿಯಿಸಿದ್ದು, ‘ಮನೆಯ ಕಿಟಕಿಯಲ್ಲಿ ರಕ್ತದ ಕಲೆಗಳು, ಬೀದಿಯಲ್ಲಿ ಒಂದು ಗುಂಡು ಮತ್ತು ಮೂರು ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಮೈಸೂರಿನಲ್ಲಿರುವ ಕುಟುಂಬದ ಸ್ನೇಹಿತರೊಬ್ಬರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಘಟನೆ ಮೃತ ಹರ್ಷವರ್ಧನ ಅವರ ತಾಯಿ ಗಿರಿಜಾ ಅಮೆರಿಕಕ್ಕೆ ತೆರಳಿದ್ದಾರೆ.

ಮಂಡ್ಯದ ಕೆ.ಆರ್‌.ಪೇಟೆ ತಾಲ್ಲೂಕಿನ ಕಿಕ್ಕೇರಿಯವರಾದ ಹರ್ಷವರ್ಧನ್‌ ಅವರು ಮೈಸೂರಿನ ಎಸ್‌ಜೆಸಿಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಮೈಕ್ರೋಸಾಫ್ಟ್‌ ನಲ್ಲಿ ಉದ್ಯೋಗಕ್ಕೆ ಸೇರಿದ್ದರು. ನಂತರ ರೋಬೊಟಿಕ್‌ ತಂತ್ರಜ್ಞಾನ ಆಧಾರಿತ ‘ಹೋಲೊವರ್ಲ್ಡ್’ ಹಾಗೂ ‘ಹೋಲೊಸ್ಯೂಟ್‌’ ಕಂಪೆನಿಗಳನ್ನು ಸ್ಥಾಪಿಸಿದ್ದರು.

ಹರ್ಷವರ್ಧನ್ ಅವರು ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಸ್ಟಾರ್ಟಪ್ ಸ್ಥಾಪಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದ್ದರು. ಹರ್ಷವರ್ಧನ್ ಅವರ ತಾಯಿ ಗಿರಿಜಾ ನಾರಾಯಣ್‌ ಅವರು ಮೈಸೂರಿನ ವಿಜಯನಗರದಲ್ಲಿ ನೆಲೆಸಿದ್ದಾರೆ.

ಕುಟುಂಬದ ಸ್ನೇಹಿತರ ಪ್ರಕಾರ, ಹರ್ಷವರ್ಧನ ಅವರು 2022 ರಿಂದ ಮೈಸೂರಿಗೆ ಭೇಟಿ ನೀಡಿಲ್ಲ. ಅವರ ಅಣ್ಣ ಚೇತನ್ ಕೂಡ ಅಮೆರಿಕದಲ್ಲಿದ್ದು, ಇತ್ತೀಚೆಗಷ್ಟೇ ಮೈಸೂರಿಗೆ ವಾಪಸ್ಸಾಗಿದ್ದರು. ಮೃತ ಹರ್ಷವರ್ಧನ ಅವರ ತಂದೆ ಡಾ. ಕಿಕ್ಕೇರಿ ನಾರಾಯಣ ಅವರು ಪ್ರಸಿದ್ಧ ಭಾಷಾ ತಜ್ಞ ಮತ್ತು ಪ್ರಗತಿಪರ ಹೋರಾಟಗಾರರಾಗಿದ್ದರು.

ವಿಶ್ವಸಂಸ್ಥೆಯ ‘ನೊವುಸ್' ಸಮ್ಮೇಳನದಲ್ಲಿ ಕಂಪನಿಗೆ 'ಸುಸ್ಥಿರ ತಂತ್ರಜ್ಞಾನ ಕಂಪನಿ' ಎಂಬ ಶ್ರೇಯ ಸಿಕ್ಕಿತ್ತು. ಅಲ್ಲದೆ ಗಡಿ ಕಾಯುವ ರೋಬೊಟ್‌ಗಳ ಅಭಿವೃದ್ಧಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹರ್ಷ ಈ ಹಿಂದೆ ಮಾತುಕತೆ ನಡೆಸಿದ್ದರು. ವಿಜಯನಗರ ಮೂರನೇ ಹಂತದ ನಿರ್ಮಿತಿ ಕೇಂದ್ರದ ರಸ್ತೆಯಲ್ಲಿ 2018ರಲ್ಲಿ 'ಹೋಲೊವರ್ಲ್ಡ್' ಕಂಪನಿಯ ಕಾರ್ಪೊರೇಟ್ ಕಚೇರಿ ಆರಂಭಿಸಿ, ಕೋವಿಡ್‌ ನಂತರ ಅಮೆರಿಕಕ್ಕೆ ವಾಪಸಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.