ಆಸ್ಟ್ರೇಲಿಯಾದಲ್ಲಿ ಭಾರತ ಮೂಲದ ವಿದ್ಯಾರ್ಥಿ ಮೇಲೆ ಭೀಕರ ದಾಳಿ: 11 ಬಾರಿ ಇರಿತ, ಪರಿಸ್ಥಿತಿ ಗಂಭೀರ
ಭಾರತ ಮೂಲದ ವಿದ್ಯಾರ್ಥಿಯೊಬ್ಬರ ಮೇಲೆ ಆಸ್ಟ್ರೇಲಿಯಾದಲ್ಲಿ ಭೀಕರ ದಾಳಿ ನಡೆದಿದ್ದು, ದುಷ್ಕರ್ಮಿಯೊಬ್ಬ 11 ಬಾರಿ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಸಿಡ್ನಿ: ಭಾರತ ಮೂಲದ ವಿದ್ಯಾರ್ಥಿಯೊಬ್ಬರ ಮೇಲೆ ಆಸ್ಟ್ರೇಲಿಯಾದಲ್ಲಿ ಭೀಕರ ದಾಳಿ ನಡೆದಿದ್ದು, ದುಷ್ಕರ್ಮಿಯೊಬ್ಬ 11 ಬಾರಿ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 6ರಂದು ದಾಳಿ ನಡೆಸಲಾಗಿದ್ದು, ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಗರ್ಗ್, ತಮ್ಮ ನಿವಾಸಕ್ಕೆ ವಾಪಸ್ ಆಗುತ್ತಿದ್ದಾಗ ಸಿಡ್ನಿಯಲ್ಲಿ ದಾಳಿಗೊಳಗಾಗಿದ್ದಾರೆ. ಸಂತ್ರಸ್ಥ ವಿದ್ಯಾರ್ಥಿಯನ್ನು ಉತ್ತರ ಪ್ರದೇಶದ ಆಗ್ರಾ ನಿವಾಸಿ ಶುಭಮ್ ಗರ್ಗ್ ಎಂದು ಗುರುತಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಯೋರ್ವ ಗರ್ಗ್ ಮೇಲೆ 11 ಬಾರಿ ಚಾಕು ಇರಿದು ಹತ್ಯೆಗೆ ಯತ್ನಿಸಿದ್ದು, ವಿದ್ಯಾರ್ಥಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ 27 ವರ್ಷದ ಡೆನಿಯಲ್ ನೋರ್‌ವುಡ್ ಎಂಬಾತನನ್ನು ಘಟನಾ ಸ್ಥಳದಲ್ಲೇ ಪೊಲೀಸರು ಬಂಧಿಸಿ, ಚಾಟ್ಸ್‌ವುಡ್ ಠಾಣೆಗೆ ಕರೆದೊಯ್ದಿದ್ದಾರೆ. ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ದಾಳಿಕೋರನಿಗೆ ಹಾರ್ನ್ಸ್‌ಬಿ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಹೀಗಾಗಿ ಡಿಸೆಂಬರ್ 14ರಂದು ನಡೆಯುವ ಮುಂದಿನ ವಿಚಾರಣೆವರೆಗೆ ಜೈಲಿನಲ್ಲಿ ಇರಲಿದ್ದಾನೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿದೆ.
ಪೆಸಿಫಿಕ್ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಗ್ ಅವರಿಗೆ ಹಣ ಮತ್ತು ಮೊಬೈಲ್ ನೀಡುವಂತೆ ನಾರ್ವುಡ್ ಬೆದರಿಕೆ ಹಾಕಿದ್ದ. ಇದಕ್ಕೆ ಗರ್ಗ್ ಒಪ್ಪದಿದ್ದಾಗ ಚಾಕುವಿನಿಂದ ಹಲವು ಬಾರಿ ಇರಿದು ಹಲ್ಲೆ ಮಾಡಿದ್ದಾನೆ. ಗರ್ಗ್ ಮುಖ, ಎದೆ ಮತ್ತು ಹೊಟ್ಟೆಗೆ ಚಾಕು ಇರಿಯಲಾಗಿದೆ ಎಂದೂ ಉಲ್ಲೇಖಿಸಿದೆ.
ಜನಾಂಗೀಯ ದಾಳಿ ಆರೋಪ
ಭಾರತದಲ್ಲಿರುವ ಗರ್ಗ್ ಕುಟುಂಬ ಈ ದಾಳಿಯನ್ನು ಖಂಡಿಸಿದ್ದು, ಇದೊಂದು ಜನಾಂಗೀಯ ದ್ವೇಷದ ದಾಳಿ ಎಂದು ಆರೋಪಿಸಿದೆ. ಸಂತ್ರಸ್ತ ವಿದ್ಯಾರ್ಥಿಯ ಸಹೋದರಿ ಕಾವ್ಯ ಗರ್ಗ್ ಅವರು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಉಲ್ಲೇಖಿಸಿ ಅಕ್ಟೋಬರ್ 12ರಂದು ಟ್ವೀಟ್ ಮಾಡಿದ್ದಾರೆ. 'ಉತ್ತರ ಪ್ರದೇಶದವನಾದ ನನ್ನ ಸಹೋದರ ಶುಭಮ್ ಗರ್ಗ್, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭೀಕರವಾಗಿ ಹಲ್ಲೆಗೊಳಗಾಗಿದ್ದಾನೆ. ಅವನಿಗೆ ಚಾಕುವಿನಿಂದ 11 ಬಾರಿ ಇರಿಯಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ವಿಚಾರದಲ್ಲಿ ನಾವು ನಿಮ್ಮ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಕುಟುಂಬದವರಿಗೆ ತುರ್ತು ವೀಸಾ ಒದಗಿಸಿಕೊಡಿ' ಎಂದು ಮನವಿ ಮಾಡಿದ್ದಾರೆ.
ಏತನ್ಮಧ್ಯೆ ಆಗ್ರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಚಾಹಲ್ ಅವರು, ಸಂತ್ರಸ್ತ ವಿದ್ಯಾರ್ಥಿಯ ಕುಟುಂಬದ ವೀಸಾ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಆಡಳಿತವು ವಿದೇಶಾಂಗ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸುತ್ತಿದೆ. ಸಿಡ್ನಿಯಲ್ಲಿರುವ ರಾಯಭಾರ ಕಚೇರಿಯನ್ನೂ ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


