ನೇಪಾಳ ಸರ್ಕಾರದ ಉದ್ಧಟತನ: ಭಾರತದ ಭೂಭಾಗವನ್ನು ತನ್ನ ನಕಾಶೆಯಲ್ಲಿ ಸೇರಿಸುವ ಮಸೂದೆ ಮಂಡನೆ
ಭಾರತದ ಮಿತ್ರ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ನೆರೆಯ ನೇಪಾಳ ಇದೀಗ ಭಾರತದ ಭೂಭಾಗದ ಮೇಲೆ ಕಣ್ಣು ಹಾಕಿದ್ದು, ಭಾರತ ಭೂಭಾಗವನ್ನು ತನ್ನ ನಕಾಶೆಯಲ್ಲಿ ಸೇರಿಸುವ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿದೆ.

ಕಠ್ಮಂಡು: ಭಾರತದ ಮಿತ್ರ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ನೆರೆಯ ನೇಪಾಳ ಇದೀಗ ಭಾರತದ ಭೂಭಾಗದ ಮೇಲೆ ಕಣ್ಣು ಹಾಕಿದ್ದು, ಭಾರತ ಭೂಭಾಗವನ್ನು ತನ್ನ ನಕಾಶೆಯಲ್ಲಿ ಸೇರಿಸುವ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿದೆ.
ದೇಶದ ನಕ್ಷೆಯನ್ನು ಬದಲಾಯಿಸುವ ಉದ್ದೇಶದೊಂದಿಗೆ ನೇಪಾಳ ಸರ್ಕಾರವು ಭಾನುವಾರ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಭಾರತದ ಜೊತೆಗಿನ ಗಡಿ ವಿವಾದದ ನಡುವೆಯೇ ನೇಪಾಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವುದು ಆ ಸರ್ಕಾರದ ಉದ್ಧಟತನವನ್ನು ತೋರಿಸುತ್ತಿದೆ.
ನೇಪಾಳದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಿವಮಯ ತುಂಬಹಾಂಗ್‌ಪೆ ಅವರು ನೇಪಾಳ ಸರ್ಕಾರದ ಪರವಾಗಿ ಮಸೂದೆಯನ್ನು ಮಂಡಿಸಿದ್ದು, ನೇಪಾಳ ಸಂವಿಧಾನದ 3ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿರುವ ಆಡಳಿತಾತ್ಮಕ ನಕಾಶೆ ತಿದ್ದುಪಡಿಗೆ ಸಂಬಂಧಿಸಿದ ಮಸೂದೆ ಇದಾಗಿದೆ. ಇದಕ್ಕೆ ಅನುಮೋದನೆ ದೊರೆತು ಕಾನೂನಾಗಿ ರೂಪುಗೊಂಡರೆ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಪರಿಷ್ಕೃತ ನಕಾಶೆಯನ್ನೇ ಬಳಸಲಾಗುತ್ತದೆ. ಸದ್ಯ ಸಂಸತ್ತಿನಲ್ಲಿ ಮಸೂದೆ ಮೇಲೆ ಚರ್ಚೆ ನಡೆಯಲಿದ್ದು, ಉಭಯ ಸದನಗಳು ಅನುಮೋದನೆ ನೀಡಿದ ನಂತರ ಮಸೂದೆ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಿಕೊಡಲಾಗುತ್ತದೆ.
ಮೂಲಗಳ ಪ್ರಕಾರ ಲಿಪುಲೇಶ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡ ರಾಜಕೀಯ ಮತ್ತು ಆಡಳಿತಾತ್ಮಕ ಪರಿಷ್ಕೃತ ನಕಾಶೆ ಸ್ವೀಕರಿಸುವ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿದೆ ಎನ್ನಲಾಗಿದೆ. ಈ ಹಿಂದೆಯೇ ಈ ಬಗ್ಗೆ ಚರ್ಚೆ ನಡೆಸಿದ್ದ ನೇಪಾಳ ಸರ್ಕಾರಕ್ಕೆ ಅಲ್ಲಿನ ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಶನಿವಾರ ಬೆಂಬಲ ಸೂಚಿಸಿತ್ತು. ಕಳೆದ ವಾರ ಮಸೂದೆ ಮಂಡನೆ ಆಗಬೇಕಿತ್ತು. ಆದರೆ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಮನವಿ ಮೇರೆಗೆ ಕೊನೇ ಕ್ಷಣದಲ್ಲಿ ಮಸೂದೆಯನ್ನು ಹಿಂಪಡೆಯಲಾಗಿತ್ತು. ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಉನ್ನತ ಮಟ್ಟದ ಚರ್ಚೆಯಾಗಬೇಕು ಎಂದಿದ್ದರಿಂದ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ವಿಳಂಬವಾಗಿತ್ತು. ‘ಭಾರತದ ನಕ್ಷೆಯೊಳಗೆ ಸೇರಿಕೊಂಡಿರುವ ‘ಕಾಲಾಪಾನಿ’ ಮತ್ತು ‘ಲಿಪುಲೇಶ್’ ಪ್ರದೇಶಗಳನ್ನು ಮರಳಿ ಪಡೆದೇ ತೀರುತ್ತೇವೆ’ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಇತ್ತೀಚೆಗೆ ಹೇಳಿದ್ದರು.
ಲಿಪುಲೇಶ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡ ರಾಜಕೀಯ ಮತ್ತು ಆಡಳಿತಾತ್ಮಕ ಪರಿಷ್ಕೃತ ನಕಾಶೆಯನ್ನು ನೇಪಾಳ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕೃತ್ರಿಮವಾಗಿ ಭೂಪ್ರದೇಶವನ್ನು ವಿಸ್ತರಿಸಿ ನಕಾಶೆ ಸಿದ್ಧಪಡಿಸುವ ಈ ಕ್ರಮ ನ್ಯಾಯಸಮ್ಮತವಲ್ಲ. ಇಂತಹ ಚಟುವಟಿಕೆಗಳಿಂದ ದೂರವಿರಬೇಕು ಎಂದು ನೇಪಾಳಕ್ಕೆ ಸೂಚಿಸಿತ್ತು,.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


