ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನೇಪಾಳದ 'ಜೀವಂತ ದೇವತೆ' ತ್ರಿಶ್ನಾ ಶಕ್ಯ
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಟ್ಟಾಭಿಷೇಕವಾದ ನಂತರ ನೇಪಾಳದ ಜೀವಂತ ದೇವತೆ ತ್ರಿಶ್ನಾ ಶಕ್ಯ ...

ಕಾಠ್ಮಂಡು: ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಟ್ಟಾಭಿಷೇಕವಾದ ನಂತರ ನೇಪಾಳದ ಜೀವಂತ ದೇವತೆ ತ್ರಿಶ್ನಾ ಶಕ್ಯ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಳೆ.
ಮಳೆ ಹಾಗೂ ಬೆಳೆಯ ದೇವತೆ ಇಂದ್ರನನ್ನು ಪೂಜಿಸುವ ನೇಪಾಳದ ಸಾಂಪ್ರದಾಯಿಕ ಉತ್ಸವ ಇಂದ್ರಜಾತ್ರ ಸಂದರ್ಭದಲ್ಲಿ ನಿನ್ನೆ ಸಾರ್ವಜನಿಕವಾಗಿ ಎಲ್ಲರೆದುರು ಆಕೆಯನ್ನು ಹೊರತರಲಾಯಿತು. ಯುನೆಸ್ಕೊದ ವಿಶ್ವ ಪಾರಂಪರಿಕ ಕೇಂದ್ರವಾದ ಬಸಂತಪುರ್ ದರ್ಬಾರ್ ಸ್ಕ್ವೇರ್ ಪ್ರದೇಶದಲ್ಲಿರುವ ಕುಮಾರಿ ಘರ್ ಶಕ್ಯಳ ನಿವಾಸವಾಗಿದೆ.
ನಿನ್ನೆ ಮುಂಜಾನೆಯಿಂದಲೇ ಸಾವಿರಾರು ಮಂದಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ತ್ರಿಶ್ನಾ ಶಕ್ಯಳನ್ನು ರಥದಲ್ಲಿ ಕೂರಿಸಿ ಅರಮನೆಯಿಂದ ಹೊರತಂದು ಪುರಾತನ ನಗರದಾದ್ಯಂತ ರಥದಲ್ಲಿ ಸುತ್ತಿಸಲಾಯಿತು. ಜೀವಂತ ದೇವತೆ ಜೊತೆ ಗಣೇಶನ ವಿಗ್ರಹ ಮತ್ತು ಭೈರವನ ಮೂರ್ತಿಗಳನ್ನು ಕೂಡ ನಗರದಾದ್ಯಂತ ರಥದಲ್ಲಿ ಸುತ್ತಿಸಲಾಯಿತು. ನೇಪಾಳದ ಸಾಂಪ್ರದಾಯಿಕ ಪುರಾತನ ಅರಮನೆ ಆವರಣದ ಎದುರು ಈ ಸಂದರ್ಭದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಡುಲಿಕೆಲ್ ಮತ್ತು ದೊಲಖ ಜೊತೆ ಕಾಠ್ಮಂಡು ಕಣಿವೆಯಲ್ಲಿ 8 ದಿನಗಳ ಇಂದ್ರಜಾತ್ರ ಉತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ನೇಪಾಳದಲ್ಲಿ ಭಾದ್ರಪದ ತಿಂಗಳಿನಲ್ಲಿ ಶುಕ್ಲ ಚತುರ್ದಶಿಯಂದು ಇಂದ್ರಜಾತ್ರ ಉತ್ಸವ ಪ್ರತಿವರ್ಷ ನಡೆಯುತ್ತದೆ.
ಶತ್ರುಗಳನ್ನು ಸೋಲಿಸಿದ ನಂತರ ವಿಜಯದ ಸಂಕೇತವಾಗಿ ಇಂದ್ರಜಾತ್ರ ಉತ್ಸವವನ್ನು ಆಚರಿಸಲಾಗುತ್ತದೆ ಎಂಬ ನಂಬಿಕೆಯಿದೆ. ಇಂದ್ರ ದೇವನನ್ನು ಪೂಜಿಸಿದರೆ ಶಕ್ತಿ ಬರುತ್ತದೆ ಎಂಬ ಬಲವಾದ ನಂಬಿಕೆ ಇದಕ್ಕೆ ಕಾರಣ.
ಹೆಣ್ಣು ಮಗುವನ್ನು ಒಂದು ಬಾರಿ ಜೀವಂತ ದೇವತೆ ಎಂದು ಅಭಿಷೇಕ ಮಾಡಿದ ನಂತರ ಕಠ್ಮಂಡು ಕಣಿವೆಗೆ ಸೇರಿದ ನೆವರ್ ಸಮುದಾಯಕ್ಕೆ ಸೇರುತ್ತಾಳೆ. ವಿಶೇಷ ಸಂದರ್ಭಗಳಲ್ಲಿ ವರ್ಷದಲ್ಲಿ 13 ಬಾರಿ ಅವಳು ತನ್ನ ಹೊಸ ಮನೆಯನ್ನು ಬಿಟ್ಟು ಹೊರ ಹೋಗಬಹುದು. ಕಠ್ಮಂಡುವಿನ ಸುತ್ತ ಸಾಂಪ್ರದಾಯಿಕ ದಿರಿಸಿನೊಂದಿಗೆ ಆಕೆಯನ್ನು ಮೆರವಣಿಗೆಯಲ್ಲಿ ಕರೆದೊಯ್ದು ದೇವಿಯಂತೆ ಆರಾಧನೆ ಮಾಡಲು ಅಲಂಕಾರ ಮಾಡಲಾಗುತ್ತದೆ ಎಂದು ಅರ್ಚಕರು ವಿವರಿಸುತ್ತಾರೆ.
ಕುಮಾರಿಯನ್ನು ಹಿಂದೂ ದೇವತೆ ತಲೆಜುವಿನ ಸಾಕಾರ ಎಂದು ಪರಿಗಣಿಸಲಾಗುತ್ತಿದ್ದು, ಆಕೆಯ ಪಾದಗಳನ್ನು ನೆಲಕ್ಕೆ ತಾಗಿಸಲು ಬಿಡುವುದಿಲ್ಲ. ಕುಮಾರಿಯಾಗಬೇಕಾದರೆ ಆಯ್ಕೆ ಪ್ರಕ್ರಿಯೆ ಕಠಿಣವಾಗಿರುತ್ತದೆ. ಕಳಂಕವಿಲ್ಲದ ದೇಹ, ಸಿಂಹದಂತೆ ಎದೆ ಮತ್ತು ಜಿಂಕೆಯಂತಹ ತೊಡೆಗಳನ್ನು ಹೊಂದಿರಬೇಕಾಗುತ್ತದೆ. ಹುಡುಗಿ ಈ ಎಲ್ಲಾ ಗುಣಗಳನ್ನು ಹೊಂದಿದ್ದರೂ ಕೂಡ ಎತ್ತನ್ನು ಬಲಿ ಕೊಡುವಾಗ ಹುಡುಗಿ ಅಳದೆ ತನ್ನ ಧೈರ್ಯ, ಸಾಹಸಗಳನ್ನು ತೋರಿಸಬೇಕಾಗುತ್ತದೆ.
ನೆವರ್ ಸಮುದಾಯದಲ್ಲಿ ಹಿಂದೂ ಮತ್ತು ಬೌದ್ಧ ಧರ್ಮ ಸಮ್ಮಿಳಿತಗೊಂಡಿರುತ್ತದೆ. ನೇಪಾಳದಲ್ಲಿ ಹಿಂದೂ ರಾಜರ ವಂಶ 2008ಕ್ಕೆ ಕೊನೆಯಾದರೂ ಕೂಡ ಕುಮಾರಿಗಳ ಆಯ್ಕೆ ಸಂಪ್ರದಾಯ ಮಾತ್ರ ಮುಂದುವರಿದಿದೆ.
ಜೀವಂತ ದೇವತೆ ಎಂದು ಪರಿಗಣಿಸಲ್ಪಡುವ ಬಾಲಕಿಯರಿಗೆ ಶಿಕ್ಷಣ ನೀಡಬೇಕೆಂದು 2008ರಲ್ಲಿ ನೇಪಾಳ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಹೀಗಾಗಿ ಅರಮನೆಯೊಳಗೆ ಓದಲು ವ್ಯವಸ್ಥೆ ಮಾಡಿ ಅಲ್ಲಿಯೇ ಪರೀಕ್ಷೆ ಬರೆಯಲು ಹೇಳಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


