ನಾಯಿ ಬಂತು, ಹೊಸ ಹೆಂಡ್ತಿ ಮನೆ ಬಿಟ್ಟು ಹೋದ್ಲು; ಇಮ್ರಾನ್ ಖಾನ್ ಮೂರನೇ ಮದುವೆಗೂ ಕುತ್ತು!
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ತೆಹ್ರೀಕ್ ಇ ಇನ್ಸಾಫ್ ಪಕ್ಷಗ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಮೂರನೇ ವಿವಾಹ ಕೂಡ ಸಂಕಷ್ಚಕ್ಕೆ ಸಿಲುಕಿದ್ದು, ಇಮ್ರಾನ್ ಮೂರನೇ ಪತ್ನಿ ಮನೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

Published On :
ಇಸ್ಲಾಮಾಬಾದ್: ಇತ್ತೀಚೆಗಷ್ಟೇ ತಮ್ಮ 65ನೇ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ತೆಹ್ರೀಕ್ ಇ ಇನ್ಸಾಫ್ ಪಕ್ಷಗ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಮೂರನೇ ವಿವಾಹ ಕೂಡ ಸಂಕಷ್ಚಕ್ಕೆ ಸಿಲುಕಿದ್ದು, ಇಮ್ರಾನ್ ಮೂರನೇ ಪತ್ನಿ ಮನೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಇಮ್ರಾನ್ ಖಾನ್ ಅವರ ಶ್ವಾನ ಪ್ರೇಮವೇ ಅವರ ಮೂರನೇ ವಿವಾಹಕ್ಕೆ ತೊಡಕಾಗಿದ್ದು, ಮೂರನೇ ಪತ್ನಿ ಬುಷ್ರಾ ಮನೇಕಾಗೆ ಇಮ್ರಾನ್ ಖಾನ್ ನಾಯಿಯನ್ನು ಮನೆಯಲ್ಲಿಟ್ಟುಕೊಳ್ಳುವುದು ಇಷ್ಟವಿಲ್ಲ. ಆದರೆ ಇದಕ್ಕೆ ಇಮ್ರಾನ್ ಒಪ್ಪದೇ ಇದ್ದುದರಿಂದ ಇಬ್ಬರ ನಡುವೆ ಆಗಾಗ್ಗೆ ವಾಗ್ವಾದ ಮತ್ತು ಜಗಳವಾಗುತ್ತಿತ್ತಂತೆ. ವೃತ್ತಿಯಲ್ಲಿ ಧಾರ್ಮಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಬುಷ್ರಾ ಮನೇಕಾ ನಾಯಿ ಮುಂದೆ ಮನೆಯಲ್ಲಿ ಧಾರ್ಮಿಕ ಆಚರಣೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರಂತೆ. ಇದೇ ಕಾರಣಕ್ಕೆ ಈ ಹಿಂದೆ ಇಮ್ರಾನ್ ಖಾನ್ ತನ್ನ ಪ್ರೀತಿಯ ಶ್ವಾನ ಶೇರು (ಸಿಂಹ)ವನ್ನು ತನ್ನ ಸಹೋದರಿಯ ಮನೆಯಲ್ಲಿ ಬಿಟ್ಟಿದ್ದರಂತೆ.
ಆದರೆ ಇತ್ತೀಚೆಗಷ್ಟೇ ಇಮ್ರಾನ್ ಖಾನ್ ಮತ್ತೆ ತಮ್ಮ ನಾಯಿಯನ್ನು ಮನೆಗೆ ವಾಪಸ್ ಕರೆದುಕೊಂಡು ಬಂದಾಗ ಬುಷ್ರಾ ಮನೇಕಾ ಕೆಂಡಾಮಂಡಲರಾಗಿ ಇಮ್ರಾನ್ ಜೊತೆ ಜಗಳ ಮಾಡಿಕೊಂಡಿದ್ದರಂತೆ. ಇದಲ್ಲದೆ ಬುಷ್ರಾ ಮನೇಕಾ ಅವರ ತಮ್ಮ ಮಕ್ಕಳನ್ನು (ಮೊದಲ ಪತಿಯ ಮಕ್ಕಳು) ಇಮ್ರಾನ್ ಖಾನ್ ಅವರ ಬಾನಿಗಾಲಾ ನಿವಾಸದಲ್ಲಿ ಇರಿಸಿದ್ದರಂತೆ. ಆದರೆ ಅದೇ ನಿವಾಸಕ್ಕೆ ಇಮ್ರಾನ್ ಖಾನ್ ತಮ್ಮ ಸಹೋದರಿಯನ್ನು ಕರೆತಂದು ಇರಿಸಿದ್ದು ಅಷ್ಟು ಮಾತ್ರವಲ್ಲದೇ ತಮ್ಮ ಅನುಮತಿ ಇಲ್ಲದೇ ಇಮ್ರಾನ್ ಸಹೋದರಿ ಮನೆಯ ನವೀಕರಣ ಕೆಲಸ ಮಾಡಿಸಿದ್ದು, ಬುಷ್ರಾ ಮನೇಕಾ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಈ ಎಲ್ಲ ಕಾರಣಗಳಿಂದಾಗಿ ಅಲ್ಲದೆ ಬುಷ್ರಾ ಮನೇಕಾ ಇಮ್ರಾನ್ ಖಾನ್ ಅವರ ನಿವಾಸ ಬಿಟ್ಟುಹೋಗುವಂತೆ ಮಾಡಿದ್ದು, ಇಬ್ಬರು ಪರಸ್ಪರ ವಿಚ್ಛೇದನದತ್ತ ಮುಖ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ಲಾಮಾಬಾದ್ ವರದಿ ಮಾಡಿದೆ.
ಕಳೆದ ಫ್ರೆಬ್ರವರಿಯಲ್ಲಷ್ಟೇ ಇಮ್ರಾನ್ ಖಾನ್ ಪಂಜಾಬ್ ಪ್ರಾಂತ್ಯದ ಮನೇಕಾ ಮನೆತನ ಬುಷ್ರಾ ಮನೇಕಾ ಅವರನ್ನು ವಿವಾಹವಾಗಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿ ವ್ಯಾಪಕ ವೈರಲ್ ಆಗಿತ್ತು.
1995ರಲ್ಲಿ ಜೆಮಿಮಾ ಗೋಲ್ಡ್‌ಸ್ಮಿತ್ (ಜೆಮಿಮಾ ಖಾನ್) ಅವರನ್ನು ಮದುವೆಯಾಗಿದ್ದ ಇಮ್ರಾನ್ 2004ರಲ್ಲಿ ಅವರಿಗೆ ವಿಚ್ಛೇದನ ನೀಡಿದ್ದರು. ಹೋದ ವರ್ಷ ಅವರು ಬಿಬಿಸಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಾಮ್ ಖಾನ್ ಅವರನ್ನು ವರಿಸಿದ್ದರು . ಇಬ್ಬರ ನಡುವಣ ದಾಂಪತ್ಯ ಒಂದೇ ವರ್ಷದಲ್ಲಿ ಮುರಿದುಬಿದ್ದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


