ಪಾಕ್ ಸರ್ಕಾರ ದುರ್ಬಲ, ಇತ್ತೀಚಿನ ಪ್ರತಿಭಟನೆಯಿಂದ ಉಗ್ರವಾದಕ್ಕೆ ಉತ್ತೇಜನ: ಅಮೆರಿಕ ಕಳವಳ
ಧಾರ್ಮಿಕ ಮೂಲಭೂತವಾದಿಗಳ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಸರ್ಕಾರದ ಮಾನ ಹರಾಜು ಹಾಕಿದ್ದು, ಹಾಲಿ ಪಾಕಿಸ್ತಾನ ಸರ್ಕಾರ ದುರ್ಬಲ ಸರ್ಕಾರ ಎಂದು ಅಮೆರಿಕ ಟೀಕಿಸಿದೆ.

Published On :
ವಾಷಿಂಗ್ಟನ್: ಧಾರ್ಮಿಕ ಮೂಲಭೂತವಾದಿಗಳ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಸರ್ಕಾರದ ಮಾನ ಹರಾಜು ಹಾಕಿದ್ದು, ಹಾಲಿ ಪಾಕಿಸ್ತಾನ ಸರ್ಕಾರ ದುರ್ಬಲ ಸರ್ಕಾರ ಎಂದು ಅಮೆರಿಕ ಟೀಕಿಸಿದೆ.
ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಇಸ್ಲಾಮಿಕ್ ಪ್ರತಿಭಟನೆ ನಿಯಂತ್ರಿಸುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದ್ದು, ಪ್ರತಿಭಟನಾಕಾರರ ನಡುವೆ ಸಂಧಾನ ನಡೆಸುವಲ್ಲಿ ಅಲ್ಲಿನ ಪ್ರಬಲ ಸೇನೆ ಕೂಡ ವಿಫಲವಾಗಿದೆ ಎಂದು ಅಮೆರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಸ್ಲಾಮಿಕ್ ಪ್ರತಿಭಟನೆ ವೇಳೆ ಪಾಕಿಸ್ತಾನ ಸರ್ಕಾರ ಕೈಗೊಂಡ ಕ್ರಮಗಳು ಅಲ್ಲಿನ ಮೂಲಭೂತವಾದಿಗಳಿಗೆ ಪ್ರಚೋದನೆ ನೀಡುವಂತಿದ್ದವು ಎಂದು ಹೇಳುವ ಮೂಲಕ ಪಾಕಿಸ್ತಾನ ಸರ್ಕಾರದ ಕ್ರಮಗಳನ್ನು ಅಮೆರಿಕ ಕಟುವಾಗಿ ಟೀಕಿಸಿದೆ.
ಇಸ್ಲಾಮಿಕ್ ಪ್ರತಿಭಟನೆ ವೇಳೆ ಪಾಕಿಸ್ತಾನ ಸರ್ಕಾರ ಕೈಗೊಂಡ ಪ್ರತೀಯೊಂದು ನಿರ್ಧಾರಗಳು ಪ್ರತಿಭಟನೆ ನಡೆಸುತ್ತಿದ್ದ ಮೂಲಭೂತ ಮತ್ತು ಉಗ್ರವಾದಿಗಳಿಗೆ ಉತ್ತೇಜನ ನೀಡುವಂತಿತ್ತು. ಇನ್ನು ಧಾರ್ಮಿಕ ನೆಲೆಗಟ್ಟಿನಲ್ಲೇ ರಾಜಕೀಯ ಮಾಡುತ್ತಿರುವ ಅಲ್ಲಿನ ರಾಜಕೀಯ ಪಕ್ಷಗಳು ಮೂಲಭೂತವಾದಿಗಳಿಗೆ ಮತ್ತು ಅಲ್ಲಿನ ಉಗ್ರವಾದಿಗಳಿಗೆ ಉತ್ತೇಜನ ನೀಡುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಆಡಳಿತ ಪಾಕ್ ಸರ್ಕಾರವನ್ನು ಟೀಕಿಸಿದೆ. ಅಂತೆಯೇ ಪ್ರಸ್ತುತ ಪಾಕಿಸ್ತಾನದಲ್ಲಿನ ಪರಿಸ್ಥಿತಿ ಆತಂಕದಿಂದ ಕೂಡಿದೆ ಎಂದು ಅಮೆರಿಕ ತನ್ನ ಕಳವಳ ವ್ಯಕ್ತಪಡಿಸಿದೆ. ಅಂತೆಯೇ ಪ್ರಸ್ತುತ ಪಾಕಿಸ್ತಾನ ಸರ್ಕಾರ ದುರ್ಬಲವಾಗಿದ್ದು, ದೇಶದ ಎಲ್ಲ ಸಮುದಾಯದ ನಾಗರೀಕರ ರಕ್ಷಣೆ ಅದರ ಕರ್ತವ್ಯವಾಗಿದೆ. ಆರೋಪ ಪ್ರತ್ಯಾರೋಪ ಗಳು ಸಮಸ್ಯೆಗೆ ಪರಿಹಾರವಲ್ಲ. ಸರ್ಕಾರದ ಬಳಿ ಅಧಿಕಾರವಿದ್ದು, ಇಸ್ಲಾಮಿಕ್ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗುವುದನ್ನು ತಪ್ಪಿಸಬಹುದಿತ್ತು. ಸರ್ಕಾರದ ಈ ವೈಫಲ್ಯ ಉಗ್ರವಾದಿಗಳಿಗೆ ಉತ್ತೇಜನ ನೀಡುತ್ತದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.
ಕೇವಲ ಅಮೆರಿಕ ಸರ್ಕಾರ ಮಾತ್ರವಲ್ಲದೇ ಪಾಕಿಸ್ತಾನ ನ್ಯಾಯಾಲಯ ಕೂಡ ಪಾಕ್ ಸರ್ಕಾರವನ್ನು ಮತ್ತು ಪಾಕಿಸ್ತಾನ ಸೇನೆಯನ್ನು ಟೀಕಿಸಿದ್ದು, ಪ್ರತಿಭಟನಾ ನಿರತ ಮೂಲಭೂತವಾದಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂದು ಕಿಡಿಕಾರಿತ್ತು.
ಚುನಾವಣಾ ಕಾಯ್ದೆಗೆ ತಿದ್ದುಪಡಿ ತಂದು ಪ್ರತಿಜ್ಞಾ ವಿಧಿ ಬದಲಾಯಿಸಿದ್ದ ಕಾನೂನು ಸಚಿವರ ನಡೆಗೆ ಇಸ್ಲಾಮಿಕ್ ಮೂಲಭೂತವಾದಿಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದಲ್ಲದೇ ಅವರ ರಾಜಿನಾಮೆಗೆ ಆಗ್ರಹಿಸಿ ವ್ಯಾಪಕ ಪ್ರತಿಭಟನೆ ನಡೆಸಿದ್ದರು. 2017ರ ಚುನಾವಣಾ ಕಾಯ್ದೆಯಲ್ಲಿ ಪ್ರವಾದಿತ್ವದ ಅಂತಿಮ ಪ್ರಮಾಣಕ್ಕೆ(ಖತಂ-ಇ-ನಬೂವ್ವತ್) ಬದಲಾವಣೆಗಳನ್ನು ಕಳೆದ ಸೆಪ್ಟೆಂಬರ್ ನಲ್ಲಿ ಮಾಡಲಾಗಿತ್ತು. ಈ ಕಾರಣಕ್ಕೆ ಕಾನೂನು ಸಚಿವ ಝಾಹೀದ್ ಹಮೀದ್ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 6 ಮಂದಿ ಮೃತರಾಗಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ಪಾಕಿಸ್ತಾನದ ಕಾನೂನು ಸಚಿವರಾಗಿದ್ದ ಝಹೀದ್ ಹಮೀದ್ ರಾಜೀನಾಮೆ ನೀಡಿದ್ದರು.
ಸರ್ಕಾರದ ಆದೇಶವನ್ನೇ ಧಿಕ್ಕರಿಸಿದ್ದ ಪಾಕ್ ಮಾಧ್ಯಮಗಳು
ಇನ್ನು ಪಾಕಿಸ್ತಾನ ಸರ್ಕಾರದ ಆದೇಶಗಳು ಎಷ್ಟು ದುರ್ಬಲವಾಗಿದ್ದವು ಎನ್ನುವುದಕ್ಕೆ ಅಲ್ಲಿನ ಮಾಧ್ಯಮಗಳೇ ಸರ್ಕಾರದ ಆದೇಶವನ್ನು ಧಿಕ್ಕರಿಸಿದ್ದು ಸಾಕ್ಷ್ಯವಾಗಿತ್ತು. ಇಸ್ಲಾಮಿಕ್ ಪ್ರತಿಭಟನೆ ವೇಳೆ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಪ್ರಸ್ತುತ ಹೊತ್ತಿ ಉರಿಯುತ್ತಿತ್ತು. ಇಸ್ಲಾಮಿಕ್ ಪ್ರತಿಭಟನಾಕರರನ್ನು ಚದುರಿಸುವಲ್ಲಿ ಪಾಕ್ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದರೂ ಅದು ಫಲಪ್ರದವಾಗಿರಲಿಲ್ಲ. ಈ ಕಾರಣಕ್ಕೆ ಪಾಕಿಸ್ತಾನದಲ್ಲಿನ ಖಾಸಗಿ ಟಿವಿ ವಾಹಿನಿಗಳು ತಮ್ಮ ಪ್ರಸಾರ ಕಾರ್ಯವನ್ನು ಬಂದ್ ಮಾಡುವಂತೆ ಪಾಕಿಸ್ತಾನ ಸರ್ಕಾರ ಆದೇಶಿಸಿತ್ತು. ಆದರೆ ನಿರ್ಬಂಧದ ಹೊರತಾಗಿಯೂ ಖಾಸಗಿ ಟಿವಿ ಮಾಧ್ಯಮಗಳು ಇಸ್ಲಾಮಿಕ್ ಪ್ರತಿಭಟನಕಾರರ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡುತ್ತಿದ್ದವು. ಆ ಮೂಲಕ ಹಿಂಸಾಚಾರ ಹೆಚ್ಚಲು ಒಂದು ರೀತಿಯಲ್ಲಿ ಅಲ್ಲಿನ ಮಾಧ್ಯಮಗಳೂ ಕೂಡ ಕಾರಣವಾಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


