ಬಲೂಚಿಸ್ತಾನದಲ್ಲಿ ಪಾಕ್ ನಿಂದ ರಹಸ್ಯ ಅಣ್ವಸ್ತ್ರ ಗೋದಾಮು ಬಂಕರ್ ನಿರ್ಮಾಣ!
ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ರಹಸ್ಯವಾಗಿ ಅಣ್ವಸ್ತ್ರ ಗೋದಾಮು ಬೃಹತ್ ಬಂಕರ್ ನಿರ್ಮಾಣ ಮಾಡಿದೆ ಎಂದು ಅಮೆರಿಕದ ತಜ್ಞರು ಹೇಳಿದ್ದಾರೆ.

ವಾಷಿಂಗ್ಟನ್: ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ರಹಸ್ಯವಾಗಿ ಅಣ್ವಸ್ತ್ರ ಗೋದಾಮು ಬೃಹತ್ ಬಂಕರ್ ನಿರ್ಮಾಣ ಮಾಡಿದೆ ಎಂದು ಅಮೆರಿಕದ ತಜ್ಞರು ಹೇಳಿದ್ದಾರೆ.
ಅಮೆರಿಕದ ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಭದ್ರತಾ ಸ್ವತಂತ್ರ ಸಂಸ್ಥೆಯ ತಜ್ಞರು ಇಂತಹುದೊಂದು ಸ್ಫೋಟಕ ಮಾಹಿತಿ ಹೊರಹಾಕಿದ್ದು, ಈಗಾಗಲೇ ಈ ಬೃಹತ್ ಬಂಕರ್ ನಲ್ಲಿ ಪಾಕಿಸ್ತಾನ ಸೇನೆ ಅತ್ಯಾಧುನಿಕ ಕ್ಷಿಪಣಿಗಳನ್ನು ಮತ್ತು ಅಣ್ವಸ್ತ್ರಗಳನ್ನು ಅಡಗಿಸಿ ಇಟ್ಟಿದೆ ಎಂದು ಅವರು ಹೇಳಿದ್ದಾರೆ. ಸಂಸ್ಥೆಯ ತಜ್ಞರಾದ ಡೇವಿಡ್ ಆಲ್ಬ್ರೈಟ್, ಸಾರಾ ಬರ್ಕ್ಹಾರ್ಡ್, ಆಲಿಸನ್ ಲಾಚ್ ಮತ್ತು ಫ್ರಾಂಕ್ ಪ್ಯಾಬಿಯನ್ ಅವರು ಹೇಳುವಂತೆ ಈ ವರೆಗೂ ಪಾಕಿಸ್ತಾನ ತನ್ನ ಈ ರಹಸ್ಯ ಬಂಕರ್ ಕುರಿತಂತೆ ವಿಶ್ವ ಸಮುದಾಯಕ್ಕೆ ಮಾಹಿತಿ ನೀಡಿಲ್ಲ. ಆದರೆ ರಹಸ್ಯವಾಗಿ ಅಲ್ಲಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದ್ದು, ಕ್ಷಿಪಣಿಗಳ ಮತ್ತು ಅಣ್ವಸ್ತ್ರಗಳ ಗೋದಾಮುಗಳಾಗಿ ಇದನ್ನು ಬಳಕೆ ಮಾಡಲಾಗುತ್ತಿದೆ.
ಈ ಬೃಹತ್ ಬಂಕರ್ ನಿರ್ಮಾಣದ ಹಿಂದಿರುವ ಪಾಕಿಸ್ತಾನದ ಉದ್ದೇಶ ಬಹಿರಂಗವಾಗಿಲ್ಲವಾದರೂ, ಭದ್ರತಾ ದೃಷ್ಟಿಯಿಂದ ತನ್ನ ನೆರೆಹೊರೆಯ ರಾಷ್ಟ್ರಗಳ ಸಂಭಾವ್ಯದಾಳಿಗಳಿಂದ ರಕ್ಷಣೆ ಪಡೆಯಲು ಈ ಬಂಕರ್ ನಿರ್ಮಾಣ ಮಾಡಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಪಾಕಿಸ್ತಾನ ವಿಶ್ವ ಸಮುದಾಯಕ್ಕಿ ತಿಳಿಯದಂತೆ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದಲೂ ಈ ಬೃಹತ್ ಬಂಕರ್ ಹಾಗೂ ಗೋದಾಮು ನಿರ್ಮಾಣ ಮಾಡಿಕೊಂಡಿರಬಹುದು ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬೃಹತ್ ಬಂಕರ್ ಮೂರು ಜಿಲ್ಲೆಗಳ ಗಡಿಯಲ್ಲಿ ನಿರ್ಮಾಣವಾಗಿದ್ದು, ಮೂರೂ ಜಿಲ್ಲೆಗಳಿಂದ ಬಂಕರ್ ಗೆ ಬೃಹತ್ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದೆ. ಬೃಹತ್ ವಾಹನಗಳು ಈ ಪ್ರವೇಶ ದ್ವಾರದಿಂದ ನಿರಾಯಾಸವಾಗಿ ಚಲಿಸುವಂತೆ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದೆ. ಬಂಕರ್ ನಲ್ಲಿ ಕನಿಷ್ಠ ಒಂದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಬಲ್ಲ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದಲ್ಲದೆ ಹಲವು ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದೆ.
ಮೂಲಭೂತವಾದಿಗಳ ಪ್ರಾಬಲ್ಯವಿರುವ ಪ್ರದೇಶದಲ್ಲಿ ಅತ್ಯಂತ ಸೂಕ್ಷ್ಮ ಗೋದಾಮು
ಇನ್ನೂ ಆತಂಕಕಾರಿ ವಿಚಾರವೆಂದರೆ ಪಾಕಿಸ್ತಾನ ನಿರ್ಮಾಣ ಮಾಡಿರುವ ಈ ಬೃಹತ್ ಗೋದಾಮು ಬಲೂಚಿಸ್ತಾನದ ಪ್ರಾಂತ್ಯದಲ್ಲಿದ್ದು, ಇಲ್ಲಿ ಸ್ಥಳೀಯ ಮೂಲಭೂತವಾದಿಗಳು ಮತ್ತು ಉಗ್ರರ ಉಪಟಳ ಹೆಚ್ಚಾಗಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಪಾಕಿಸ್ತಾನ ಅಣ್ವಸ್ತ್ರಗಳ ಗೋದಾಮು ನಿರ್ಮಾಣ ಮಾಡಿರುವುದು ಕೇವಲ ಅಮೆರಿಕ ಮಾತ್ರವಲ್ಲ ವಿಶ್ವ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಗೋದಾಮು ಸಂಪೂರ್ಣ ಪಾಕ್ ಸೇನೆಯ ವಶದಲ್ಲಿದೆಯಾದರೂ ಯಾವುದೇ ಕ್ಷಣದಲ್ಲೂ ಉಗ್ರರು ಇದರ ಮೇಲೆ ದಾಳಿ ಮಾಡಿ ಗೋದಾಮಿನ ಮೇಲೆ ಹತೋಟಿ ಸಾಧಿಸಿದರೆ ಮುಂದಿನ ಪರಿಸ್ಥಿತಿ ಹೇಗೆ ಎಂಬ ಆತಂಕ ಇದೀಗ ವಿಶ್ವ ಸಮುದಾಯವನ್ನು ಕಾಡುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದೊಂದಿಗೆ ಭಾರತವೂ ಸೇರಿದಂತೆ ಆಫ್ಘಾನಿಸ್ತಾನ ಮತ್ತು ಚೀನಾ ದೇಶಗಳು ಗಡಿ ಹಂಚಿಕೊಂಡಿದ್ದು, ಪಾಕಿಸ್ತಾನದ ಈ ನಡೆ ಇದೀಗ ಭಾರತ ಮಾತ್ರವಲ್ಲದೇ ಇತರೆ ದೇಶಗಳಿಗೂ ಬೆದರಿಕೆಯಾಗಿ ಪರಿಣಮಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


