ಆಫ್ಘಾನಿಸ್ತಾನದ ಮೇಲೆ ಅಮೆರಿಕ ಹಾಕಿದ ಅತೀ ದೊಡ್ಡ ಬಾಂಬ್ (ಮೊಆಬ್)ನ ವಿಶೇಷತೆಗಳೇನು ಗೊತ್ತೆ?
ಅಫ್ಘಾನಿಸ್ತಾನದಲ್ಲಿ ಅಡಗಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರ ಮೇಲೆ ಅಮೆರಿಕ ಸೇನಾಪಡೆ ವಿಶ್ವದ ಅತೀ ದೊಡ್ಡ ಬಾಂಬ್ ಹಾಕುವ ಮೂಲಕ ಇದೀಗ ಇಡೀ ವಿಶ್ವದ ಗಮನ ಸೆಳೆದಿದೆ.

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಅಡಗಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರ ಮೇಲೆ ಅಮೆರಿಕ ಸೇನಾಪಡೆ ವಿಶ್ವದ ಅತೀ ದೊಡ್ಡ ಬಾಂಬ್ ಹಾಕುವ ಮೂಲಕ ಇದೀಗ ಇಡೀ ವಿಶ್ವದ ಗಮನ ಸೆಳೆದಿದೆ.
ತನ್ನ ತೂಕ ಮತ್ತು ಗಾತ್ರದ ಮೂಲಕವೇ ವಿಶ್ವದ ಗಮನ ಸೆಳೆಯುತ್ತಿರುವ ಮದರ್ ಆಫ್ ಆಲ್ ಬಾಂಬ್ಸ್ (ಎಂಒಎಬಿ) ವಿಶೇಷತೆಗಳು ಇಲ್ಲಿವೆ.
ಎಂಒಇಬಿ ಎಂದರೇನು?
ಎಂಒಇಬಿ ಎಂದರೆ ಮ್ಯಾಸ್ಸಿವ್ ಆರ್ಡನೆನ್ಸ್ ಎರ್ ಬ್ಲಾಸ್ಟ್ ಬಾಂಬ್ ಎಂದು.. ಇಡೀ ವಿಶ್ವದಲ್ಲೇ ಅತೀ ದೊಡ್ಡ ಬಾಂಬ್ ಎಂದು ಖ್ಯಾತಿ ಪಡೆದ ಬಾಂಬ್ ಇದಾಗಿದ್ದು, ಇದೇ ಕಾರಣಕ್ಕೆ ಈ ಜಿಬಿಯು 43/ಬಿ ಬಾಂಬ್ ಗೆ ಎಂಒಇಬಿ ಎಂದು ಹೆಸರಿಡಲಾಗಿದೆ. ಇದರ ತೂಕ ಸುಮಾರು 10 ಸಾವಿರ ಕೆಜಿಗಳಷ್ಟಿದ್ದು, ಬಾಂಬ್ ನಲ್ಲಿನ ಸ್ಫೋಟಕ ಪ್ರಮಾಣವೇ 11 ಟನ್ ತೂಗುತ್ತದೆ. ಇದೊಂದು ಜಿಪಿಎಸ್ ನಿರ್ದೇಶಿತ ಬಾಂಬ್ ಆಗಿದ್ದು, ಅಮೆರಿಕ ಸೇನೆ ಬಳಿ ಇರುವ ಅತೀದೊಡ್ಡ ಪರಮಾಣು ರಹಿತ ಬಾಂಬ್ ಆಗಿದೆ. ಈ ಬಾಂಬ್ ಭೂಮಿಗೆ ಅಪ್ಪಳಿಸಿದರೆ ಸುಮಾರು 300 ಮೀ. ಕಂದಕ ಸೃಷ್ಟಿಯಾಗುತ್ತದೆ.
ಪರಮಾಣು ಬಾಂಬ್ ಹಾಗೂ ಈ ಬಾಂಬ್ ರಚನೆ ಹಾಗೂ ಪರಿಣಾಮದಲ್ಲಿ ಸಾಕಷ್ಟು ವ್ಯತ್ಯಾಸವಿದ್ದು, ಅಣುಬಾಂಬ್ ನಷ್ಟು ಈ ದೊಡ್ಡ ಬಾಂಬ್ ಪರಿಣಾಮಕಾರಿಯೇನಲ್ಲ. ಅಣುಬಾಂಬ್ ಸ್ಫೋಟಿಸಿದರೆ ನೂರಾರು ಕಿ.ಮೀ ಸುತ್ತಳತೆಯ ಪ್ರದೇಶಕ್ಕೆ ಭಾರಿ ಹಾನಿಯಾಗುತ್ತದೆ. ಆದರೆ ಈ ಬಾಂಬ್ ಸ್ಫೋಟದಿಂದ ಕೇವಲ 1 ಕಿ.ಮೀ ನಷ್ಟು ಭೂಪ್ರದೇಶ ಹಾನಿಗೊಳಗಾಗುತ್ತದೆ. ಈ ಮೊಅಬ್ ಬಾಂಬ್ ನಲ್ಲಿ ಆರ್ ಡಿಎಕ್ಸ್, ಟಿಎನ್ ಟಿ, ಅಲ್ಯೂಮಿನಿಯಂ ಪೌಡರ್, ಪ್ಯಾರಾಫಿನ್ ವ್ಯಾಕ್ಸ್, ಕ್ಯಾಲ್ಸಿಯಂ ಕ್ಲೋರೈಡ್ ನಂತಹ ರಾಸಾಯನಿಕಗಳನ್ನು ಬಳಸಿ ಸ್ಫೋಟಕಗಳನ್ನು ಸಿದ್ಧಪಡಿಸಲಾಗುತ್ತದೆ.
ದಾಳಿಗೆ ಬೇಕು ಆತೀದೊಡ್ಡ ವಿಮಾನ
ಇನ್ನು ಈ ಮೊಅಬ್ ಬಾಂಬ್ ಅನ್ನು ಯಾವುದೇ ದೇಶದ ಮೇಲೆ ಪ್ರಯೋಗಿಸಲು ಸಾಮಾನ್ಯ ಯುದ್ಧ ವಿಮಾನಗಳಿಂದ ಸಾಧ್ಯವಿಲ್ಲ. ಕಾರಣ ಇದರ ತೂಕ ಮತ್ತು ಗಾತ್ರ. ಆ ಭಾರಿ ಪ್ರಮಾಣ ಬಾಂಬ್ ಅನ್ನು ಹೊತ್ತೊಯ್ಯಲು ಅತೀದೊಡ್ಡ ವಿಮಾನಗಳೇ ಬೇಕು. ಅತೀ ದೊಡ್ಡ ವಿಮಾನಗಳು ಎಂದು ಖ್ಯಾತಿ ಪಡೆದಿರುವ ಸಿ-130 ಹರ್ಕ್ಯೂಲಸ್, ಎಂಸಿ-130ಇ ಅಥವಾ ಎಂಸಿ-130 ಹೆಚ್ ವಿಮಾನಗಳು ಮಾತ್ರ ಈ ಬಾಂಬ್ ಅನ್ನು ಹೊತ್ತೊಯ್ಯಬಲ್ಲವು.
ಆಫ್ಘಾನಿಸ್ತಾನದಲ್ಲಿ ಇದೇ ಬಾಂಬ್ ಬಳಕೆ ಏಕೆ?
ಇನ್ನು ಆಫ್ಘಾನಿಸ್ತಾನ ಇಸ್ಲಾಮಿಕ್ ಸ್ಟೇಟ್ ಉಗ್ರರ ಮೇಲೆ ದಾಳಿ ಮಾಡಲು ಅಮೆರಿಕ ಇದೇ ಬಾಂಬ್ ಅನ್ನು ಬಳಕೆ ಮಾಡಿದ್ದು ಏಕೆ ಪ್ರಶ್ನೆಗೆ ಉತ್ತರ ಇದರ ನಿಖರತೆ. ಇದಕ್ಕಿಂತಲೂ ಗಾತ್ರದಲ್ಲಿ ಚಿಕ್ಕದಾದ ಮತ್ತು ಅತ್ಯಂತ ಪ್ರಭಾವಶಾಲಿ ಅಣು ಬಾಂಬ್ ಗಳು ಅಮೆರಿಕದ ಬಳಿ ಇದೆಯಾದರೂ, ಅವುಗಳು ಕೇವಲ ಗುರಿಯನ್ನು ಮಾತ್ರವಲ್ಲದೇ ಅದರ ಸುತ್ತಮುತ್ತಲಿನ ನೂರಾರು ಕಿ.ಮೀ ಭೂಪ್ರದೇಶವನ್ನೂ ನಾಶಮಾಡಿ ಬಿಡುತ್ತವೆ. ಆದರೆ ಈ ಮೊಅಬ್ ಬಾಂಬ್ ತನಗೆ ನಿಗದಿ ಪಡಿಸಿದ ಗುರಿಯನ್ನು ಮಾತ್ರ ನಾಶಪಡಿಸುತ್ತಿದೆ.
ಗಾಳಿಯಲ್ಲೇ ಸ್ಫೋಟಗೊಳ್ಳುವ ಬಾಂಬ್!
ಇನ್ನು ಈ ಮೊಅಬ್ ಬಾಂಬ್ ನ ಮತ್ತೊಂದು ವಿಶೇಷತೆ ಎಂದರೆ ಇದು ಭೂಮಿ ಅಪ್ಪಳಿಸುವ ಮುನ್ನ ಅಂದರೆ ಗಾಳಿಯಲ್ಲೇ ಸ್ಫೋಟಗೊಳ್ಳುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಭೂಮಿ ಇನ್ನೇನು ಅಪ್ಪಳಿಸ ಬೇಕು ಎನ್ನುವಾಗ ಅಂದರೆ ಭೂಮಿಗೆ ಸುಮಾರು 2 ಮೀಟರ್ ಅಂತರ ಇರುವಂತೆಯೇ ಈ ಬಾಂಬ್ ಸ್ಫೋಟಗೊಳ್ಳುತ್ತದೆ. ಆಗ ಸ್ಫೋಟದ ಪರಿಣಾಮ ಮತ್ತಷ್ಟು ಪ್ರಬಲವಾಗಿರುತ್ತದೆ. ಬಾಂಬ್ ಸ್ಫೋಟದ ಬಳಿಕ ಪ್ರದೇಶದಲ್ಲಿ ಸುಮಾರು 300ಮೀ ಪ್ರದೇಶದಲ್ಲಿ ಕಂದಕ ಸೃಷ್ಟಿಯಾಗುತ್ತದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2003ರಲ್ಲೇ ಸಿದ್ದವಾಗಿದ್ದ "ಮಹಾತಾಯಿ"
ಮದರ್ ಆಫ್ ಆಲ್ ಬಾಂಬ್ ಎಂಬ ಖ್ಯಾತಿ ಪಡೆದಿರುವ ಈ ಮೊಅಬ್ ಬಾಂಬ್ ಅನ್ನು 2003ರಲ್ಲೇ ಅಮೆರಿಕದ ಸೇನಾಪಡೆಗಳು ಸಿದ್ದಪಡಿಸಿದ್ದವು. ಸದ್ದಾಂ ಹುಸೇನ್ ಆಡಳಿತದ ಸಂದರ್ಭದಲ್ಲಿ ಅಮೆರಿಕ ಇದನ್ನು ಇರಾಕ್ ಮೇಲೆ ಬಳಕೆ ಮಾಡಲು ನಿರ್ಧರಿಸಿತ್ತು. ಆದರೆ ಸದ್ದಾಂ ಹುಸೇನ್ ಸರ್ಕಾರ ಅಮೆರಿಕದ ದಾಳಿಗೆ ಹೆಚ್ಚಿನ ಪ್ರತಿರೋಧ ತೋರಲಿಲ್ಲ. ಹೀಗಾಗಿ ಈ ಬಾಂಬ್ ಅಮೆರಿಕದ ಬತ್ತಳಿಕೆಯಲ್ಲಿ ಬಳಕೆಯಾಗದೇ ಹಾಗೆಯೇ ಉಳಿಯಿತು.
ರಷ್ಯಾ ಬಳಿ ಇದೆ ಫಾದರ್ ಆಫ್ ಆಲ್ ಬಾಂಬ್!
ಅಮೆರಿಕ ಬಳಿ ಇರುವ ಈ ಮೊಅಬ್ ಬಾಂಬ್ ಗಿಂತಲೂ ಹೆಚ್ಚಿನ ತೂಕದ ಮತ್ತು ಹೆಚ್ಚಿನ ಗಾತ್ರ ಬಾಂಬ್ ವೊಂದು ರಷ್ಯಾ ಬಳಿ ಇದ್ದು, ಇದನ್ನು ಫಾದರ್ ಆಫ್ ಆಲ್ ಬಾಂಬ್ಸ್ ಎಂದು ಕರೆಯುತ್ತಾರೆ. ಈ ಬಾಂಬ್ ನ ಹೆಸರು ಏವಿಯೇಷನ್ ಥರ್ಮೇಬೇರಿಕ್ ಬಾಂಬ್ ಆಫ್ ಇನ್ ಕ್ರೀಸ್ಡ್ ಪವರ್ (ಎಫ್ ಒಎಬಿ)ಎಂದು. ಇದನ್ನು ಫಾದರ್ ಆಫ್ ಆಲ್ ಬಾಂಬ್ಸ್ ಎಂದು ಕರೆಯಲಾಗುತ್ತದೆ. 2007ರಲ್ಲಿ ರಷ್ಯಾ ಇದನ್ನು ಪರೀಕ್ಷೆ ಮಾಡಿತ್ತು. ಆದರೆ ಈ ವರೆಗೂ ರಷ್ಯಾ ಇದನ್ನು ಯಾವುದೇ ದೇಶದ ಮೇಲೆ ಪ್ರಯೋಗ ಮಾಡಿಲ್ಲ. ಈ ಬಾಂಬ್ ಕೂಡ ಅಣು ರಹಿತ ಬಾಂಬ್ ಆಗಿದ್ದು, ಸಣ್ಣಪುಟ್ಟ ಅಣುಬಾಂಬ್ ಗಳು ಸೃಷ್ಟಿಸುವ ವಿಧ್ವಂಸಕ ಪ್ರಭಾವವನ್ನೇ ಈ ಬಾಂಬ್ ಕೂಡ ಸೃಷ್ಟಿಸುತ್ತದೆ. ಮೊಅಬ್ ಸಿಡಿದರೆ ಸುಮಾರು 450 ಮೀ, ಸುತ್ತಳತೆಯಲ್ಲಿ ಕಂದಕ ಸೃಷ್ಟಿಯಾದರೆ ಫೊಅಬ್ ಸಿಡಿದರೆ ಸುಮಾರು 900 ಮೀ ಪ್ರದೇಶದಲ್ಲಿ ಭಾರಿ ಕಂದಕ ಸೃಷ್ಟಿಯಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


