ಇಂಡೋ-ಪಾಕ್ ಗಡಿ ಶಾಶ್ವತ ಬಂದ್ ಅಧಿಕೃತವೇನಲ್ಲ: ಪಾಕಿಸ್ತಾನ
ಭಾರತ-ಪಾಕಿಸ್ತಾನದ ಗಡಿಯನ್ನು 2018 ರೊಳಗೆ ಸಂಪೂರ್ಣವಾಗಿ ಬಂದ್ ಮಾಡುವ ಕುರಿತಂತೆ ನವದೆಹಲಿ ಅಧಿಕೃತವಾಗಿ ಹೇಳಕೆ ನೀಡಿಲ್ಲ ಎಂದು ಪಾಕಿಸ್ತಾನ ಶನಿವಾರ...

ಲಾಹೋರ್: ಭಾರತ-ಪಾಕಿಸ್ತಾನದ ಗಡಿಯನ್ನು 2018 ರೊಳಗೆ ಸಂಪೂರ್ಣವಾಗಿ ಬಂದ್ ಮಾಡುವ ಕುರಿತಂತೆ ನವದೆಹಲಿ ಅಧಿಕೃತವಾಗಿ ಹೇಳಕೆ ನೀಡಿಲ್ಲ ಎಂದು ಪಾಕಿಸ್ತಾನ ಶನಿವಾರ ಹೇಳಿದೆ.
ಭಯೋತ್ಪಾದನಾ ಚಟುವಟಿಕೆಗಳಿಗೆ ಸೀಮಿತ ದಾಳಿ ಮೂಲಕ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿರುವ ಹಿನ್ನೆಲೆಯಲ್ಲಿ ಈ ಹಿಂದೆ ರಾಜನಾಥ ಸಿಂಗ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ಡಿಸೆಂಬರ್ 2018ರ ವೇಳೆಗೆ ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ಸಂಪೂರ್ಣವಾಗಿ ಹಾಗೂ ಶಾಶ್ವತವಾಗಿ ಬಂದ್ ಮಾಡಲಾಗುತ್ತದೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ನಫೀಸ್ ಜಕಾರಿಯಾ ಅವರು, ನಮಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಭಾರತ ಒಂದೆಡೆ ನೆರೆರಾಷ್ಟ್ರದೊಂದಿಗೆ ಶಾಂತಿಯುತ ಸಂಬಂಧಬೇಕೆಂದು ಹೇಳುತ್ತಿದೆ. ಮತ್ತೊಂದೆಡೆ ಶಾಂತಿಗೆ ವಿರುದ್ಧವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆಂದು ಡಾನ್ ವರದಿ ಮಾಡಿದೆ.
ಕಾಶ್ಮೀರದಲ್ಲಿ ಸೃಷ್ಟಿಯಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎಲ್ಲಾ ದ್ವಿಪಕ್ಷೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನ ಪ್ರಸ್ತಾಪ ಮಾಡಲಿದೆ. ಕಾಶ್ಮೀರ ಕುರಿತಾಗಿರುವ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಸಮ್‌ಜೋತಾ ರೈಲು ಸ್ಫೋಟ ಪ್ರಕರಣ ಸಂಬಂಧ ಭಾರತ ಸಾಕ್ಷ್ಯಾಧಾರಗಳನ್ನು ಪಾಕಿಸ್ತಾನಕ್ಕೆ ನೀಡುತ್ತಿಲ್ಲ. ಸ್ಫೋಟವನ್ನು ಆರ್ ಎಸ್ಎಸ್ ಹಾಗೂ ಅಭಿನವ್ ಭಾರತ್ ಕಾರ್ಯಕರ್ತರು ಮಾಡಿದ್ದರು. ಈ ಸ್ಫೋಟ ಪ್ರಕರಣ ಸಂಬಂಧ ಇಡೀ ವಿಶ್ವಕ್ಕೇ ಮಾಹಿತಿ ಇದೆ. ಸ್ಫೋಟದಲ್ಲಿ ಸಾಕಷ್ಟು ಪಾಕಿಸ್ತಾನದ ಜನತೆ ಸಾವನ್ನಪ್ಪಿದ್ದರು ಎಂದಿದ್ದಾರೆ.
ಇದೇ ವೇಳೆ ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಬಹಿರಂಗ ಪಡಿಸುವ ಉದ್ದೇಶ ನಮಗಿಲ್ಲ ಎಂಬ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಶ್ಮೀರದಲ್ಲಿ ಎದುರಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಂದಿಟ್ಟುಕೊಂಡು ಭಾರತ ಅಂತರಾಷ್ಟ್ರೀಯ ಸಮುದಾಯದ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಪಾಕಿಸ್ತಾನ ಎಂದಿಗೂ ಅಂತರಾಷ್ಟ್ರೀಯ ಸಮುದಾಯದಿಂದ ಪ್ರತ್ಯೇಕಗೊಂಡಿಲ್ಲ. ರಾಷ್ಟ್ರೀಯ ವ್ಯವಹಾರಗಳೊಂದಿಗೆ ತೊಡಗಿಕೊಂಡಿದೆ. ಪಾಕಿಸ್ತಾನದಲ್ಲಿ ಸಾಕಷ್ಟು ಬಹುಪಕ್ಷೀಯ ಕಾರ್ಯಕ್ರಮಗಳು ಹಾಗೂ ಉನ್ನತ ಮಟ್ಟದ ಭೇಟಿಗಳು ಆಗುತ್ತಲೇ ಇದೆ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


