ವಿದೇಶ

ನ್ಯೂಜಿಲೆಂಡ್ ಭೂಕಂಪನ: ಕನಿಷ್ಟ 2 ಸಾವು, ನೂರಾರು ಬಹುಮಹಡಿ ಕಟ್ಟಡ ಜಖಂ

ನ್ಯೂಜಿಲೆಂಡ್ ನಲ್ಲಿ ಸಂಭವಿಸಿದ ಭಾರಿ ಭೂಕಂಪನಕ್ಕೆ ಕನಿಷ್ಟ ಇಬ್ಬರು ಬಲಿಯಾಗಿದ್ದು, ನೂರಾರು ಕಟ್ಟಡಗಳ ಧರೆಗುರುಳಿವೆ ಎಂದು ತಿಳಿದುಬಂದಿದೆ.

ನ್ಯೂಜಿಲೆಂಡ್ ಭೂಕಂಪನ: ಕನಿಷ್ಟ 2 ಸಾವು, ನೂರಾರು ಬಹುಮಹಡಿ ಕಟ್ಟಡ ಜಖಂ
ನ್ಯೂಜಿಲೆಂಡ್ ನಲ್ಲಿ ಭೂಕಂಪ (ಎಫ್ ಪಿ ಚಿತ್ರ)
Published On :

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ನಲ್ಲಿ ಸಂಭವಿಸಿದ ಭಾರಿ ಭೂಕಂಪನಕ್ಕೆ ಕನಿಷ್ಟ ಇಬ್ಬರು ಬಲಿಯಾಗಿದ್ದು, ನೂರಾರು ಕಟ್ಟಡಗಳ ಧರೆಗುರುಳಿವೆ ಎಂದು ತಿಳಿದುಬಂದಿದೆ.

ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಕಂಪನ ಪ್ರಮಾಣ ದಾಖಲಾಗಿದ್ದು, ಕ್ರೈಸ್ಟ್ ಚರ್ಚ್ ನಿಂದ 90 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ. ಪ್ರಬಲ  ಭೂಕಂಪನದ ಪರಿಣಾಮ ಕ್ರೈಸ್ಟ್ ಚರ್ಚ್ ನ ಬಹುಮಹಡಿ ಕಟ್ಟಡಗಳು ಜಖಂಗೊಂಡಿದ್ದು, ಸ್ಥಳೀಯ ಕಾಲಮಾನ ಮಧ್ಯರಾತ್ರಿ 12.02ರ ಸಂದರ್ಭದಲ್ಲಿ ಭೂಕಂಪನ ಸಂಭವಿಸಿದೆ ಎಂದು ತಿಳಿದುಬಂದಿದೆ. ಇನ್ನು ಪ್ರಬಲ  ಭೂಕಂಪನದಿಂದಾಗಿ ಕ್ರೈಸ್ಟ್ ಚರ್ಚ್ ಕರಾವಳಿಯಲ್ಲಿ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರ್ಲ್ ಬಾರೋ ಮತ್ತು ಪೆನಿನ್ಸುಲಾ ಕರಾವಳಿ ತೀರದಲ್ಲಿ ಸುಮಾರು 10 ಅಡಿಗೂ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕರಾವಳಿ ತೀರದ ಜನರು ಎತ್ತರದ ಪ್ರದೇಶಗಳಿಗೆ  ಸ್ಥಳಾಂತರವಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಭೂಕಂಪನದಿಂದಾಗಿ ಕೈಕೌರಾ ಮತ್ತು ಮೆಂಟ್ ಲೇಫೋರ್ಡ್ ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈವರೆಗೂ ನ್ಯೂಜಿಲೆಂಡ್  ಸರ್ಕಾರವಾಗಲೀ ಅಥವಾ ಸ್ಥಳೀಯ ಸರ್ಕಾರಗಳಾಗಲಿ ಸಾವುನೋವಿನ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಈಗಾಗಲೇ ಕ್ರೈಸ್ಟ್ ಚರ್ಚ್ ಕರಾವಳಿ ತೀರದಲ್ಲಿ ಭಾರಿ ಪ್ರಮಾಣದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಸುನಾಮಿ ಅಲೆಗಳು ಏಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಭೂಕಂಪನದ ಬೆನ್ನಲ್ಲೇ ಕರಾವಳಿ  ತೀರದಲ್ಲಿ ಸುನಾಮಿ ಎಚ್ಚರಿಕಾ ಕೇಂದ್ರದಿಂದ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಕರಾವಳಿ ತೀರದ ಜನರನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ. ಈ ಬಗ್ಗೆ ನ್ಯೂಜಿಲೆಂಡ್ ರೇಡಿಯೋ ಮೂಲಕ ಜನರಿಗೆ ಎಚ್ಚರಿಕೆ  ನೀಡಲಾಗಿದೆ. 2011 ಫೆಬ್ರವರಿಯಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ನ್ಯೂಜಿಲೆಂಡ್ ನಲ್ಲಿ 185 ಮಂದಿ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.