ವಿದೇಶ

ಒರ್ಲಾಂಡೋ ಮಾರಣಹೋಮ ನಡೆಸಿದಾತ ಪೊಲೀಸ್ ಅಧಿಕಾರಿ ಆಗಬೇಕೆಂದುಕೊಂಡಿದ್ದನಂತೆ!

50 ಜನರ ಧಾರುಣ ಮಾರುಣಹೋಮಕ್ಕೆ ಕಾರಣನಾದ ಇಸ್ಲಾಮಿಕ್ ಸ್ಟೇಟ್ ಉಗ್ರಸಂಘಟನೆಯ ಉಗ್ರಗಾಮಿ ಒಮರ್ ಮಾಟಿನ್ ಪೊಲೀಸ್ ಅಧಿಕಾರಿಯಾಗಬೇಕು ಎಂದು ಆಸೆ ಪಟ್ಟಿದ್ದ ವಿಚಾರ ತನಿಖೆಯಿಂದ ಬಹಿರಂಗಗೊಂಡಿದೆ.

ಒರ್ಲಾಂಡೋ ಮಾರಣಹೋಮ ನಡೆಸಿದಾತ ಪೊಲೀಸ್ ಅಧಿಕಾರಿ ಆಗಬೇಕೆಂದುಕೊಂಡಿದ್ದನಂತೆ!
ಒರ್ಲಾಂಡೋ ಮಾರಣಹೋಮ ನಡೆಸಿದ ಒಮರ್ ಮಾಟೀನ್ (ಎಪಿ ಚಿತ್ರ)
Published On :

ಫ್ಲೋರಿಡಾ: 50 ಜನರ ಧಾರುಣ ಮಾರುಣಹೋಮಕ್ಕೆ ಕಾರಣನಾದ ಇಸ್ಲಾಮಿಕ್ ಸ್ಟೇಟ್ ಉಗ್ರಸಂಘಟನೆಯ ಉಗ್ರಗಾಮಿ ಒಮರ್ ಮಾಟಿನ್ ಪೊಲೀಸ್ ಅಧಿಕಾರಿಯಾಗಬೇಕು ಎಂದು ಆಸೆ  ಪಟ್ಟಿದ್ದ ವಿಚಾರ ತನಿಖೆಯಿಂದ ಬಹಿರಂಗಗೊಂಡಿದೆ.

ಅತ್ತ ಒರ್ಲಾಂಡೋ ಸಲಿಂಗಿ ಕ್ಲಬ್ ನಲ್ಲಿ ಮಾರಣ ಹೋಮ ನಡೆಸಿದ ಒಮರ್ ಮಾಟೀನ್ ನ ಗುರುತು ಪತ್ತೆಯಾಗುತ್ತಿದ್ದಂತೆಯೇ ಆತನ ಹಿನ್ನಲೆ ಜಾಲಾಡಿರುವ ಫ್ಲೋರಿಡಾ ಪೊಲೀಸರು, ಆತನ  ತಂದೆ ಮೂಲತಃ ಆಮೆರಿಕದಲ್ಲಿ ನೆಲೆಸಿರುವ ಆಫ್ಘನ್ ನಿರಾಶ್ರಿತರು ಎಂದು ಪತ್ತೆ ಮಾಡಿದ್ದಾರೆ. ಒಮರ್ ಮಾಟೀನ್ ಇಸ್ಲಾಂ ಧರ್ಮದ ಕಟ್ಟಾ ಅನುಯಾಯಿಯಾಗಿದ್ದು, ನಗರದಲ್ಲಿರುವ ಖ್ಯಾತ  ಮಸೀದಿಗೆ ವಾರದಲ್ಲಿ ಕನಿಷ್ಠ 4ರಿಂದ 5 ಬಾರಿ ಭೇಟಿ ನೀಡುತ್ತಿದ್ದನಂತೆ. ಆತನೊಂದಿಗೆ ತನ್ನ ಪುಟ್ಟ ಮಗನನ್ನು ಕೂಡ ಮಾಟೀನ್ ಕರೆದೊಯ್ಯುತ್ತಿದ್ದ ಎಂದು ಮಾಟೀನ್ ಪೋಷಕರು ತಿಳಿಸಿದ್ದಾರೆ.

ಇನ್ನು ಒಮರ್ ಮಾಟೀನ್ ಗೆ ಪೊಲೀಸ್ ಅಧಿಕಾರಿಯಾಗಬೇಕು ಎಂದು ತುಂಬಾ ಆಸೆ ಪಟ್ಟಿದ್ದನಂತೆ. ಇದೇ ಕಾರಣಕ್ಕಾಗಿ ಜಿಮ್ ಗೆ ಹೋಗಿ ದೇಹ ದಂಡಿಸುತ್ತಿದ್ದ ಎಂದು ಪೋಷಕರು ತಿಳಿಸಿದ್ದಾರೆ.

ಟಾಕ್ ಶೋಯಿಂದ ಖ್ಯಾತಿ ಪಡೆದಿದ್ದ ಒಮರ್ ಮಾಟೀನ್
ಇನ್ನು ಖಾಸಗಿ ವಾಹಿನಿಯಲ್ಲಿ ಡ್ಯೂರಂಡ್ ಜಿರ್ಗಾ ಶೋ (Durand Jirga Show) ಎಂಬ ಟಾಕ್ ಶೋ ನಡೆಸುತ್ತಿದ್ದ ಒಮರ್ ಮಾಟೀನ್, ತಾಲಿಬಾನ್ ಮತ್ತು ಇಸ್ಲಾಂ ಪರವಾದ  ವಿಚಾರಗಳನ್ನು ಚರ್ಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಕೆಲ ಸಂದರ್ಭಗಳಲ್ಲಿ ಪಾಕಿಸ್ತಾನ ವಿರೋಧಿ ಹೇಳಿಕೆಗಳನ್ನು ನೀಡಿ ಕೆಲವರ ವಿರೋಧ ಕೆಂಗಣ್ಣಿಗೆ ಗುರಿಯಾಗಿದ್ದ  ಹೇಳಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿರುವ ವಿದೇಶಿಯರ ನಡವಳಿಕೆಗಳನ್ನು ಟೀಕಿಸುತ್ತಿದ್ದ ಒಮರ್ ಹಲವು ಬಾರಿ ಆಫ್ಘನ್ ನಲ್ಲಿ ಅಮೆರಿಕ ಕೈಗೊಂಡಿದ್ದ ಸೈನಿಕ ಕಾರ್ಯಾಚರಣೆಯನ್ನು  ವಿರೋಧಿಸಿದ್ದನಂತೆ. 2014 ಜನವರಿ ತಿಂಗಳಲ್ಲಿ ಪ್ರಸಾರವಾದ ಟಾಕ್ ಶೋನಲ್ಲಿ ಆಫ್ಘನ್ ಪ್ರಧಾನಿ ಅಶ್ರಫ್ ಘನಿ ಅವರನ್ನು ಶ್ಲಾಘಿಸಿ ಕಾರ್ಯಕ್ರಮ ನೆಡೆಸಿದ್ದ ಎಂದೂ ತಿಳಿದುಬಂದಿದೆ.

ಪತ್ನಿಯೊಂದಿಗಿನ ಜಗಳದಿಂದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ
ತೀರ ಶಾಂತ ಸ್ವಭಾವದವನಾಗಿದ್ದ ಒಮರ್ ಮಾಟೀನ್, ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲವಂತೆ. ಇದೇ ಕಾರಣಕ್ಕೆ ಆತ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಎಂದು ಆತನ  ಪರಿಚಿತರಾದ ಇಮಾನ್ ಸೈಯ್ಯದ್ ಶಫೀಕ್ ರೆಹಮಾನ್ ಹೇಳಿದ್ದಾರೆ. ಅಂತೆಯೆ ಮಸೀದಿಯಲ್ಲಿಯೂ ಕೂಡ ನಮಾಜ್ ಮುಗಿಯುತ್ತಿದ್ದಂತೆಯೇ ಆತ ಹೊರಟುಹೋಗುತ್ತಿದ್ದ. ಹೆಚ್ಚಾಗಿ  ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎಂದು ರೆಹಮಾನ್ ತಿಳಿಸಿದ್ದಾರೆ. ಆದರೆ ತನ್ನ ಕೌಟುಂಬಿಕ ಕಲಹದಿಂದಾಗಿ ಒಮರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ವಿಚಾರ ಆತನ ಕುಟುಂಬಸ್ಥರಿಂದ  ತಿಳಿದುಬಂದಿದೆ.

ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿರುವಂತೆ ಒಮರ್ ಮಾಟೀನ್ ಗೆ 8 ವರ್ಷಗಳ ಹಿಂದೆಯೇ ವಿವಾಹವಾಗಿತ್ತು. 2009ರಲ್ಲಿ ಮಾಟೀನ್ ಸಿತೋರಾ ಯೂಸುಫೈ ಎಂಬ ಯುವತಿಯನ್ನು ಲೂಸಿಯಲ್ಲಿ  ವಿವಾಹವಾಗಿದ್ದ. ವಿವಾಹವಾದ ಒಂದು ವರ್ಷದವರೆಗೂ ದಂಪತಿಗಳ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿರಲಿಲ್ಲ. ಆದರೆ ಬಳಿಕ ಒಮರ್ ಪತ್ನಿ ಪೀಡಕನಾಗಿ ಬದಲಾಗಿದ್ದ ಎಂದು  ಆತನ ಪತ್ನಿ ಪತ್ರಿಕೆಗೆ ಹೇಳಿಕೆ ನೀಡಿದ್ದಾಳೆ. ಇದೇ ಕಾರಣಕ್ಕೆ 2 ವರ್ಷಗಳ ಹಿಂದೆ ಇಬ್ಬರೂ ತಲಾಖ್ ಪಡೆದಿದ್ದರಂತೆ.

ಧಾರ್ಮಿಕವಾಗಿ ಒಮರ್ ಮೂಲಭೂತವಾದಿ ಅಲ್ಲದೇ ಇದ್ದರೂ ಕಟ್ಟಾ ಇಸ್ಲಾಂ ಅನುಯಾಯಿಯಾಗಿದ್ದ ಹೇಳಿರುವ ಆತನ ಮಾಜಿ ಪತ್ನಿ, ಅತನ ಬಳಿ ಸಣ್ಣ ಪಿಸ್ತೂಲ್ ಇತ್ತು. ಜಿ4ಎಸ್ ಎಂಬ  ಸಂಸ್ಥೆಯಲ್ಲಿ ಆಗ ಒಮರ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.