ವಿಶ್ವಾದ್ಯಂತ ಝಿಕಾ ವೈರಸ್ ಭೀತಿ
ಈ ಹಿಂದೆ ಎಬೊಲಾ ವೈರಸ್ ವಿಶ್ವದ ನಿದ್ದೆಗೆಡಿಸಿತ್ತು. ಈಗ ಜಗತ್ತಿನಾದ್ಯಂತ ಝಿಕಾ ವೈರಸ್ ನ ಭಯ ಆವರಿಸತೊಡಗಿದೆ...

ವಾಷಿಂಗ್ಟನ್/ರಿಯೋ ಡಿ ಜನಾರಿಯೋ: ಈ ಹಿಂದೆ ಎಬೊಲಾ ವೈರಸ್ ವಿಶ್ವದ ನಿದ್ದೆಗೆಡಿಸಿತ್ತು. ಈಗ ಜಗತ್ತಿನಾದ್ಯಂತ ಝಿಕಾ ವೈರಸ್ ನ ಭಯ ಆವರಿಸತೊಡಗಿದೆ. ಆರಂಭದಲ್ಲಿ ಆಫ್ರಿಕಾ, ಆಗ್ನೇಯ ಏಷ್ಯಾ, ಪೆಸಿಫಿಕ್ ದ್ವೀಪಗಳಲ್ಲಿ ಕಂಡು ಬಂದಿದ್ದ ಜನನ ದೋಷಕ್ಕೆ ಸಂಬಂಧಿಸಿದ ಈ ವೈರಸ್ ಈಗ ವಿಶ್ವಾದ್ಯಂತ ವ್ಯಾಪಿಸತೊಡಗಿದೆ. 20ಕ್ಕೂ ಹೆಚ್ಚು ದೇಶಗಳಲ್ಲಿ ವೈರಸ್ ಪತ್ತೆಯಾಗಿರವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಘೋಷಿಸಿದೆ.
ಅಮೆರಿಕದ ಅರ್ಕಾನ್ಸಾಸ್, ವರ್ಜೀನಿಯಾ, ಕ್ಯಾಲಿಪೋರ್ನಿಯಾದಲ್ಲೂ ಝಿಕಾ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಅಧ್ಯಕ್ಷ ಒಬಾಮ, ಕೂಡಲೇ ಈ ವೈರಸ್ ಗೆ ಲಸಿಕೆ ಅಭಿವೃದ್ಧಿಪಡಿಸುವಂತೆ ಸೂಚಿಸಿದ್ದಾರೆ. ಬುಧವಾರ ಶ್ವೇತಭವನದಲ್ಲಿ ಹಿರಿಯ ಆರೋಗ್ಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಭದ್ರತಾ ತಂಡದ ತುರ್ತು ಸಭೆ ಕರೆದ ಒಬಾಮ, ನಾಗರಿಕರಿಗೆ ಝಿಕಾ ವೈರಸ್ ಬಗೆಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸುವಂತೆ ಹಾಗೂ ವೈರಸ್ ಗೆ ಔಷಧ ಅಭಿವೃದ್ಧಿಪಡಿಸುವಂತೆ ಸೂಚಿಸಿದ್ದಾರೆ. ಜತೆಗೆ, ಸೋಂಕನ್ನು ಬೇಗನೆ ಪತ್ತೆ ಹಚ್ಚುವಂತಹ ಕೇಂದ್ರಗಳನ್ನು ಸ್ಥಾಪಿಸುವಂತೆಯೂ ಆದೇಶಿಸಿದ್ದಾರೆ.
ಹಣ ಮರುಪಾವತಿ: ಝಿಕಾ ದಾಳಿಗೆ ತುತ್ತಾಗಿರುವ ಬ್ರೆಜಿಲ್ ನಲ್ಲೂ ಆತಂಕ ಮನೆ ಮಾಡಿದ್ದು, ಆಗಸ್ಟ್ ನಲ್ಲಿ ಒಲಿಂಪಿಕ್ಸ್ ಆಯೋಜಿಸುವುದು ಹೇಗೆ ಎಂಬ ಬಗ್ಗೆಯೂ ಪ್ರಶ್ನೆಗಳು ಮೂಡಿವೆ, ಝಿಕಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುವಂತೆ ಲ್ಯಾಟಿನ್ ಅಮೆರಿಕ ಮತ್ತು ಕೆರೀಬಿಯನ್ ಗಳ 33 ಸದಸ್ಯರ ಸಮುದಾಯಕ್ಕೆ ಬ್ರೆಜಿಲ್ ಅಧ್ಯಕ್ಷ ದಿಲ್ಮಾ ರೂಸೆಫ್ ಮನವಿ ಮಾಡಿದ್ದಾರೆ.
ಇದೇ ವೇಳೆ, ಸೋಂಕು ಹರಡಿರುವ ಬ್ರೆಜಿಲ್ ಹಾಗೂ ಇತರೆ 10 ದೇಶಗಳಿಗೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದ ಗರ್ಭಿಣಿಯರ ಟಿಕೆಟ್ ಮೊತ್ತವನ್ನು ಮರುಪಾವತಿಸುವುದಾಗಿ ಅಮೆರಿಕದ ವಿಮಾನ ಕಂಪನಿಗಳು ಘೋಷಿಸಿವೆ.
ಬ್ರೆಜಿಲ್ ನಲ್ಲಿ ಒಂದು ವರ್ಷದಲ್ಲಿ 3,718 ಝಿಕಾ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಇಲ್ಲಿ 68 ಶಿಶುಗಳು ಸಾವನ್ನಪ್ಪಿವೆ. ಕೊಲಂ ಬಿಯಾ, ಈಕ್ವೆಡಾರ್, ಎಲ್ ಸಲ್ವಡಾರ್, ಜಮೈಕಾದಲ್ಲಿ ಗರ್ಭಿಣಿಯಾಗುವುದನ್ನು ಮುಂದೂಡವಂತೆ ಮಹಿಳೆಯರಿಗೆ ಸಲಹೆಗಳನ್ನೂ ನೀಡಲಾಗಿದೆ,
ಕುಲಾಂತರಿ ಸೊಳ್ಳೆ: ಝಿಕಾ ಹರಡುವಿಕೆ ತಪ್ಪಿಸಲು ಬ್ರೆಜಿಲ್ ನಲ್ಲಿ ಕುಲಾಂತರಿ ಸೊಳ್ಳೆಗಳ ಬಳಕೆ ಆರಂಭವಾಗಿದೆ. ಆಕ್ಸಿಟೆಕ್ ಎಂಬ ಕಂಪನಿಯು ಸ್ಟೆರೈಲ್ ಇನ್ ಸೆಕ್ಟ್ ಟೆಕ್ನಿಕ್ ಅನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿ ಕುಲಾಂತರಿ ಸೊಳ್ಳೆಗಳನ್ನು ಅಭಿವೃದ್ಧಿಪಡಿಸಿದೆ. ಅದರಂತೆ, ಸ್ವಯಂ ನಿಯಂತ್ರಿತ ಜೀನ್ ಉಳ್ಳ ಗಂಡು ಸೊಳ್ಳೆಯನ್ನು ಸೃಷ್ಟಿಸಿ, ಅವುಗಳನ್ನು ವಾತಾವರಣಕ್ಕೆ ಬಿಟ್ಟು ಬಿಡುವುದು. ಅವುಗಳು ಹೆಣ್ಣು ಸೊಳ್ಳೆಗಳೊಂದಿಗೆ ಸಂಪರ್ಕ ಸಾಧಿಸಿದ ಬಳಿಕ, ಸಂತಾನೋತ್ಪತ್ತಿ ವೇಳೆ ಹೆಣ್ಣು ಸೊಳ್ಳೆಗಳು ತನ್ನಿಂತಾನೇ ಸಾಯುತ್ತವೆ. ಈ ಮೂಲಕ ಝಿಕಾ ವೈರಸ್ ಹರಡುವ ಸೆಳ್ಳೆಗಳನ್ನು ನಾಶಪಡಿಸುವುದೇ ಈ ಕಂಪನಿಯ ಗುರಿ. ಬಿಲ್ ಗೇಟ್ಸ್ ಪ್ರತಿಷ್ಠಾನದ ಹಣಕಾಸು ನೆರವು ಪಡೆದು ಈ ಕಂಪನಿಯು ಕುಲಾಂತರಿ ಸೊಳ್ಳೆಗಳ ಉತ್ಪತ್ತಿ ಮಾಡುತ್ತಿವೆ.
ಏನಿದು ಝಿಕಾ?
ಇದು ಸೊಳ್ಳೆ ಕಡಿತದಿಂದ ಬರುವ ಕಾಯಿಲೆ. ಸೋಂಕಿತ ಏಡಿಸ್ ಜಾತಿಯ ಸೊಳ್ಳೆ ಕಡಿತದಿಂದಾಗಿ ಈ ವೈರಸ್ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಇಧಕ್ಕೆ ಯಾವುದೇ ಔಷಧ ಕಂಡು ಹಿಡಿಯಲಾಗಿಲ್ಲ. ಈ ವೈರಸ್ ಹೆಚ್ಚಾಗಿ ಗರ್ಭಿಣಿಯರಲ್ಲಿ ಕಂಡು ಬರುತ್ತಿದ್ದು, ಹುಟ್ಟುವ ಮಕ್ಕಳ ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಇಂಥ ಮಕ್ಕಳ ತಲೆ ಅತ್ಯಂತ ಸಣ್ಣದಾಗಿರುತ್ತದೆ.
ರೋಗ ಲಕ್ಷಣಗಳೇನು?
ಡೇಂಘೀ ಹಾಗೂ ಚಿಕೂನ್ ಗುನ್ಯಾ ಮಾದರಿಯ ಲಕ್ಷಣಗಳು ಅಂದರೆ ಜ್ವರ, ಕೀಲು ನೋವು, ಗುಳ್ಳೆಗಳು, ಕಣ್ಣುಗಳ ಕೆಂಪಾಗುವಿಕೆ ಇತ್ಯಾದಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


