ಕುರ್ದಿಶ್ ಮಹಿಳೆ ತಲೆಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಐಎಸ್ಐಎಸ್
2014ರಲ್ಲಿ ಉನ್ನತ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಸಿರಿಯಾ ಮತ್ತು ಇರಾಖ್ ನಲ್ಲಿ ಉಗ್ರ ಸಂಘಟನೆಗಳ ವಿರುದ್ಧ ಹೋರಾಡುತ್ತಿರುವ ಕುರ್ದಿಶ್-ಡ್ಯಾನಿಶ್...

Published On :
ಲಂಡನ್: 2014ರಲ್ಲಿ ಉನ್ನತ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಸಿರಿಯಾ ಮತ್ತು ಇರಾಖ್ ನಲ್ಲಿ ಉಗ್ರ ಸಂಘಟನೆಗಳ ವಿರುದ್ಧ ಹೋರಾಡುತ್ತಿರುವ ಕುರ್ದಿಶ್-ಡ್ಯಾನಿಶ್ ಮಹಿಳೆಯ ತಲೆಗೆ ಐಎಸ್ಐಎಸ್ ಒಂದು ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.
23 ವರ್ಷದ ಡ್ಯಾನಿಶ್ ಮಹಿಳೆ ಜೋಅನ್ನಾ ಪಲನಿ ಸದ್ಯ ಜೈಲಿನಲ್ಲಿದ್ದು, 12 ತಿಂಗಳ ಪ್ರಯಾಣ ನಿಷೇಧ ಉಲ್ಲಂಘಿಸಿ((ಡೆನ್ಮಾರ್ಕ್ನಿಂದ ಮಧ್ಯಪ್ರಾಚ್ಯಕ್ಕೆ ಪಲಾಯನ ಮಾಡಿದ)) ದೇಶವನ್ನು ತೊರೆದ ಆರೋಪ ಎದುರಿಸುತ್ತಿದ್ದಾರೆ. ನಾಳೆ ಆಕೆಯ ವಿಚಾರಣೆ ನಡೆಯಲಿದ್ದು, ಆಕೆ ತಪ್ಪಿತಸ್ಥಳು ಎಂದು ಸಾಬೀತಾದರೆ ಹೊಸ ಕಾನೂನಿನ ಅಡಿ ಮತ್ತೆ ಎರಡು ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.
ಇದೀಗ ಈಕೆಯ ಜೀವಕ್ಕೆ ಅಪಾಯ ಎದುರಾಗಿದ್ದು, ಪಲನಿಯನ್ನು ಕೊಂದವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ವಿಶ್ವದ ಅತ್ಯಂತ ಭಯಾನಕ ಉಗ್ರಗಾಮಿ ಸಂಘಟನೆ ಐಎಸ್ಐಎಸ್ ಘೋಷಿಸಿದೆ.
ಕುರ್ದಿರ್ಶ ಮೂಲದ ಡೆನ್ಮಾಕ್ ಯುವತಿ ಜೋಅನ್ನಾ ಪಲಾನಿ(23) 2014ರಲ್ಲಿ ವಿಶ್ವವಿದ್ಯಾಲಯ ತೊರೆದು ಸಿರಿಯಾ ಮತ್ತು ಇರಾಕ್ನಲ್ಲಿ ಎಸ್ಐ ವಿರುದ್ಧ ಹೋರಾಡಿ ಭಯೋತ್ಪಾದಕರನ್ನು ಬೆಚ್ಚಿ ಬೀಳಿಸಿದ್ದಳು.
ಐಎಸ್ ಉಗ್ರರ ವಿರುದ್ಧ ಹೋರಾಡಿ ಡೆನ್ಮಾರ್ಕ್ಗೆ ಹಿಂದಿರುಗಿದ್ದ ಪಲನಿಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಪ್ರಾಣಬೆದರಿಕೆಗಳು ಬಂದಿದ್ದವು. ಕಳೆದ ವರ್ಷ ಡೆನ್ಮಾರ್ಕ್ ಪೊಲೀಸರು ಈಕೆಯ ಪಾಸ್ಪೋರ್ಟ್ನನ್ನು ವಶಕ್ಕೆ ತೆಗೆದುಕೊಂಡಿದ್ದರು. ನಾನು ಡೆನ್ಮಾರ್ಕ್ನ ವೀರ ಮಹಿಳೆ. ನಾನು ಯಾವುದೇ ದೇಶಕ್ಕೆ ಆತಂಕ ಉಂಟು ಮಾಡುವುದಿಲ್ಲ. ಐಎಸ್ಐಎಸ್ ಉಗ್ರರ ವಿರುದ್ಧ ಹೋರಾಟಕ್ಕೆ ನೇರ ಬೆಂಬಲ ನೀಡಿದೆ ಅಷ್ಟೇ ಎಂದು ಆಕೆ ಬಂಧನಕ್ಕೆ ಒಳಗಾಗುವ ಮುನ್ನ ಫೇಸ್ಬುಕ್ನಲ್ಲಿ ಈ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಳು.
ಪಲಾನಿಯ ಕುಟುಂಬದವರು ಇರಾನ್ನ ಕುರ್ದಿಶ್ ಮೂಲದವರು. ಮೊದಲನೇ ಕೊಲ್ಲಿ ಯುದ್ಧ (ಗಲ್ಫ್ ವಾರ್) ಸಂದರ್ಭದಲ್ಲಿ ಈಕೆ ಇರಾಕ್ನ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ್ದಳು. ಆಕೆಯ ಕುಟುಂಬ ಯುದ್ಧದಿಂದ ಸಂತಸ್ತ್ರಗೊಂಡು ಡೆನ್ಮಾಕ್ನಲ್ಲಿ ಆಶ್ರಯ ಪಡೆದಿತ್ತು. ರಾಜಕೀಯ ಪದವಿ ವ್ಯಾಸಂಗ ಮಾಡುತ್ತಿದ್ದ ಈಕೆ ಶಿಕ್ಷಣ ತೊರೆದು 2014ರಲ್ಲಿ ಐಎಸ್ಐಎಸ್ ವಿರುದ್ಧ ಹೋರಾಡಲು ಕುರ್ದಿಶ್ ಕ್ರಾಂತಿಕಾರಿ ಪಡೆಗೆ ಸೇರಿದಳು. ಅಲ್ಲದೇ ಅನೇಕ ಐಎಸ್ ಉಗ್ರರನ್ನು ಕೊಂದು ಹಾಕಿದ್ದಳು. ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ನಾನು ಕುರ್ದಿಶ್ ಪಡೆ ಜೊತೆ ಹೋರಾಟ ನಡೆಸಿದ್ದಾಗಿ ಹೇಳಿಕೊಂಡಿದ್ದಳು.
ಈಕೆಯ ಆಕ್ರಮಣ ಮತ್ತು ಯುದ್ಧ ಕೌಶಲ್ಯದಿಂದ ಬೆಚ್ಚಿಬಿದ್ದ ಐಎಸ್ ಉಗ್ರರು ಈಕೆ ಜೈಲಿನಿಂದ ಹೊರಬರುವುದನ್ನೇ ಕಾಯುತ್ತಿದ್ದಾರೆ. ಪಲಾನಿಯನ್ನು ಕೊಂದರೆ 10 ಲಕ್ಷ ಡಾಲರ್ಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಕಳೆದ ಒಂದು ವಾರದಿಂದ ಈ ಬಹುಮಾನ ಪ್ರಸ್ತಾವನೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


