ತಂತ್ರಜ್ಞಾನದ ತವರಲ್ಲಿ ಮೋದಿ ಮಂತ್ರ
ವಿಶ್ವಸಂಸ್ಥೆಯ ಮುಂದೆ ಭಾರತದ ಸಾಮರ್ಥ್ಯದ ಆಳ, ಅಗಲ ಬಿಚ್ಚಿಟ್ಟಿದ್ದ ಪ್ರಧಾನಿ ಮೋದಿ ಭಾನುವಾರ ತಂತ್ರಜ್ಞಾನದ...

ಸ್ಯಾನ್ ಜೋಸ್: ವಿಶ್ವಸಂಸ್ಥೆಯ ಮುಂದೆ ಭಾರತದ ಸಾಮರ್ಥ್ಯದ ಆಳ, ಅಗಲ ಬಿಚ್ಚಿಟ್ಟಿದ್ದ ಪ್ರಧಾನಿ ಮೋದಿ ಭಾನುವಾರ ತಂತ್ರಜ್ಞಾನದ ಹೆಬ್ಬಾಗಿಲಾದ ಸಿಲಿಕಾನ್ ವ್ಯಾಲಿಯಲ್ಲಿ ಮೋಡಿ ಮಾಡಿದರು. ವಿಶ್ವದ ಪ್ರಮುಖ ತಂತ್ರಜ್ಞಾನ ದಿಗ್ಗಜರ ಜತೆ ಆತ್ಮೀಯ ಮಾತುಕತೆ ನಡೆಸಿದ ಅವರು ನಂತರ, ಫೇಸ್‍ಬುಕ್ ಮತ್ತು ಗೂಗಲ್ ಪ್ರಧಾನ ಕಚೇರಿಗಳಿಗೂ ಭೇಟಿ ನೀಡಿ ಭವಿಷ್ಯದ ಭಾರತದ ಕನಸನ್ನು ಬಿಚ್ಚಿಟ್ಟರು. ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದ ಕನಸು ಬಿತ್ತಿದರು.
ಭಾರತವನ್ನು ಹೂಡಿಕೆದಾರರ ಸ್ವರ್ಗ ಎಂದು ಬಣ್ಣಿಸಿದ ಅವರು, 8 ಲಕ್ಷಕೋಟಿ ಡಾಲರ್‍ನ ಆರ್ಥಿಕತೆಯನ್ನು 20 ಲಕ್ಷಕೋಟಿ ಡಾಲರ್ ಗೆ ಏರಿಸುವ ತನ್ನ ಇಚ್ಛೆಯನ್ನೂ ಪ್ರಕಟಿಸಿದರು. ಡಿಜಿಟಲ್ ಇಂಡಿಯಾದ ಕನಸಿಗೆ ತಂತ್ರಜ್ಞಾನ ದೈತ್ಯರ ಭರಪೂರ ಬೆಂಬಲ ಪಡೆಯುವಲ್ಲೂ ಯಶಸ್ವಿಯಾದರು.
ಅಮೆರಿಕ ಪ್ರವಾಸದ ಐದು ದಿನಗಳ ಪೈಕಿ ಭಾನುವಾರ ಪ್ರಧಾನಿ ಮೋದಿ ಅವರಿಗೆ ಮಹತ್ವದ ದಿನವಾಗಿತ್ತು. ಬೆಳಗ್ಗೆ ಅಮೆರಿಕದ ಐಟಿ ದೈತ್ಯ ಕಂಪನಿಗಳ ಸಿಇಒಗಳನ್ನು ಭೇಟಿಯಾದ ಅವರು ಭಾರತದಲ್ಲಿ ಹೂಡಿಕೆಗಿರುವ ಅವಕಾಶಗಳನ್ನು ತೆರೆದಿಟ್ಟರು. ನಂತರ, ಜನಪ್ರಿಯ
ಜಾಲತಾಣಗಳಲ್ಲಿ ಒಂದಾದ ಫೇಸ್‍ಬುಕ್‍ನ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಫೇಸ್‍ಬುಕ್ ಸಿಇಒ ಮಾರ್ಕ್ ಝುಕರ್‍ಬರ್ಗ್ ಅವರ ಪಕ್ಕದಲ್ಲೇ ಕುಳಿತು, ಪ್ರಶ್ನೋತ್ತರ ಸೆಷನ್‍ನಲ್ಲಿ ಪಾಲ್ಗೊಂಡರು. ಅಲ್ಲಿಂದ ಗೂಗಲ್ ಪ್ರಧಾನ ಕಚೇರಿಗೆ ಭೇಟಿ ನೀಡಿ, ಸಿಇಒ ಸುಂದರ್ ಪಿಚೈ ಜತೆ ಸಂವಾದ ನಡೆಸಿದರು.
ಫೇಸ್‍ಬುಕ್ ಕಚೇರಿಯಲ್ಲಿ ಮಾತನಾಡುತ್ತಾ, ದೇಶದಲ್ಲಿ ಸುಧಾರಣೆಯ ವೇಗ ಹೆಚ್ಚಾಗಿದೆ. ಯುಪಿಎ ಅವಧಿಯಲ್ಲಿ ಕಳೆದುಕೊಂಡಿದ್ದ ವಿಶ್ವಾಸವನ್ನು ಮರಳಿಗಳಿಸುವಲ್ಲಿ ನಮ್ಮ ಸರ್ಕಾರ
ಹೆಜ್ಜೆಯಿಟ್ಟಿದೆ ಎನ್ನುವ ಮೂಲಕ ಬಂಡವಾಳ ಹೂಡಿಕೆಗೆ ಇದು ಸಕಾಲ ಎನ್ನುವ ಸಂದೇಶ ಸಾರಿದರು.
ಸಾಮಾಜಿಕ ಮಾಧ್ಯಮ ತಮ್ಮ ಆಲೋಚನಾ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆ ತಂದಿತು. ಮೊದಲು ಇಂಟರ್ನೆಟ್‍ಗೆ ಲಾಗಿನ್ ಆದಾಗ ಮುಖ್ಯಮಂತ್ರಿಯಾಗುವ ಕನಸನ್ನೂ ಕಂಡಿರಲಿಲ್ಲ. ನನ್ನ ಅನೇಕ ಕೊರತೆಯನ್ನು ಜಾಲತಾಣಗಳು ನೀಗಿಸಿವೆ ಎಂದು ಮೋದಿ
ಬಣ್ಣಿಸಿದರು.
ನಂತರ ಗೂಗಲ್ ಕಂಪನಿಗೆ ಭೇಟಿ ನೀಡಿದ ಮೋದಿ, ಕಂಪ್ಯೂಟರ್ ನ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀವಿಲ್ಲಿ ನಿರಂತರ ಶ್ರಮ ವಹಿಸುತ್ತಿದ್ದೀರಿ. ನಿಮ್ಮ ಕೆಲಸ ಭಾರತದಲ್ಲಿರುವ ಅನೇಕ ಬಡವರಿಗೆ ನೆರವಾಗುತ್ತಿದೆ ಎಂದು ಮೋದಿ ಗೂಗಲ್ ಸಿಬ್ಬಂದಿಯ ಬೆನ್ನುತಟ್ಟಿದರು. ಬಳಿಕ ಅವರು, ಸಿಲಿಕಾನ್‍ವ್ಯಾಲಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಸೋಮವಾರ ಅವರು ಅಮೆರಿಕ ಅಧ್ಯಕ್ಷ ಒಬಾಮ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಮೋದಿ ಮಂತ್ರ ಮೋದಿಗೆ ಕೇಳಿದ ಐದು ಪ್ರಶ್ನೆಗಳು
1 ಆಡಳಿತ, ನಾಗರಿಕರ ಒಳಗೊಳ್ಳುವಿಕೆ ಮತ್ತು ರಾಜತಾಂತ್ರಿಕತೆಯಲ್ಲಿ ಸಾಮಾಜಿಕ ತಾಣಗಳು ಪ್ರಮುಖ ಪಾತ್ರ ವಹಿಸುತ್ತದೆಂದು ನಿಮಗನಿಸುತ್ತಿದೆಯೇ? - ಮಾರ್ಕ್ ಝುಕರ್‍ಬರ್ಗ್
2 ಮುಂದಿನ ತಲೆಮಾರಿಗೆ ನಿಮ್ಮ ಸರ್ಕಾರ ಎಂತಹ ಹೂಡಿಕೆ ಮಾಡುತ್ತಿದೆ? - ವೀರ್ ಕಶ್ಯಪ್ ಬೆಂಗಳೂರು
3 15 ತಿಂಗಳಲ್ಲಿ ಭಾರತದಲ್ಲಿ ಉದ್ದಿಮೆಯ ಅವಕಾಶ ಸರಳವಾಗಿದೆ ಎಂದು ನೀವು ಭಾವಿಸುತ್ತೀರಾ? ಮೇಕ್ ಇನ್ ಇಂಡಿಯಾ ಯಶಸ್ವಿಯಾಗುತ್ತದಾ?
-ಟಿಎಸ್ ಖುರಾನಾ
4 ಮಹಿಳೆ ಮತ್ತು ಹೆಣ್ಣು ಮಗುವಿನ ಸಬಲೀಕರಣದ ಬಗ್ಗೆ ನೀವೇನು ಹೇಳುತ್ತೀರಿ?- ರಂಜನಾ ಕುಮಾರಿ, ದೆಹಲಿಯ ಸೆಂಟರ್ ಆಫ್ ಸೋಷಿಯಲ್ ರಿಸರ್ಚ್‍ನ ನಿರ್ದೇಶಕಿ
5 ಇದು ನಾನು ಕೇಳುತ್ತಿರುವ ವೈಯಕ್ತಿಕ ಪ್ರಶ್ನೆ. ನಿಮ್ಮ ಅಮ್ಮನ ಬಗ್ಗೆ ಏನಾದರೂ ಹೇಳಿ. - ಝುಕರ್‍ಬರ್ಗ್
ಮೋದಿ, ಝಕರ್‍ಬರ್ಗ್ ಫೋಟೋ ಟ್ರೆಂಡ್
ಪ್ರಧಾನಿ ಮೋದಿ ಫೇಸ್‍ಬುಕ್ ಕಚೇರಿಗೆ ಭೇಟಿ ನೀಡುವ ಕೆಲ ಕ್ಷಣಗಳ ಮೊದಲು ಫೇಸ್‍ಬುಕ್ ತಾಣದಲ್ಲಿ ಅಚ್ಚರಿಯ ಘಟನೆ ಜರುಗಿತು. ಇದು ಜುಕರ್‍ಬರ್ಗ್ ನೀಡಿದ ಸಪ್ರ್ರೈಸ್. ಜುಕರ್‍ಬರ್ಗ್ ತನ್ನ ಭಾವಚಿತ್ರದೊಂದಿಗೆ ಭಾರತದ ತ್ರಿವರ್ಣ ಧ್ವಜವನ್ನು ಒಂದುಗೂಡಿಸಿ ಅದನ್ನು ತನ್ನ ಪ್ರೊಫೈಲ್ ಚಿತ್ರವನ್ನಾಗಿ ಮಾಡಿಕೊಂಡಿದ್ದರು.ಮೋದಿ ಕನಸಿನ ಡಿಜಿಟಲ್ ಇಂಡಿಯಾಗೆ ಪೂರಕವಾಗಿ ಈ ಚಿತ್ರ ಎಂದು ಅವರು ಹೇಳಿಕೊಂಡಿದ್ದರು. ಈ ಚಿತ್ರ ಕಾಣಿಸಿಕೊಂಡ ಕೇವಲ 3 ಗಂಟೆಯೊಳಗೆ 3.5 ಲಕ್ಷ ಲೈಕ್‍ಗಳು ಬಂದದ್ದಲ್ಲದೆ 60 ಸಾವಿರ ಶೇರ್ ಆಗಿದೆ. ಇದಕ್ಕೆ ಕೃತಜ್ಞತೆಯೆಂಬಂತೆ ಮೋದಿ ಕೂಡ ತಮ್ಮ ಫೇಸ್‍ಬುಕ್ ಪ್ರೊಫೈಲ್ ನ ಚಿತ್ರ ಬದಲಿಸಿ ಕೊಂಡರು. ಅದು 5.75 ಲಕ್ಷ ಲೈಕ್, 19 ಸಾವಿರ ಶೇರ್ ಕಂಡಿದೆ. ಈ ಫೋಟೋಗಳು ಫೇಸ್ ಬುಕ್ ನಲ್ಲಿ ಟ್ರೆಂಡಿಂಗ್ ಆಗಿವೆ. ಭಾರತೀಯ ಫೇಸ್ ಬುಕ್ಕಿಗರಿಗೂ ಮೋದಿ ತಮ್ಮ ಪ್ರೊಫೈಲ್ ಚಿತ್ರ ಬದಲಿಸಲು ಕರೆ ಮನವಿ ಮಾಡಿದ್ದಾರೆ.
ಕನ್ನಡಿಗ ಕಶ್ಯಪ್ ಪ್ರಶ್ನೆ
ಫೇಸ್‍ಬುಕ್ ಕಚೇರಿಯಲ್ಲಿನ ಸಂವಾದದ ವೇಳೆ, ``ಮುಂದಿನ ತಲೆಮಾರಿಗೆ ನಿಮ್ಮ ಸರ್ಕಾರ ಏನನ್ನು ಹೂಡಿಕೆ ಮಾಡಲು ಮುಂದಾಗಿದೆ'' ಎಂದು ಬೆಂಗಳೂರಿನ ವೀರ್ ಕಶ್ಯಪ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ``ಎಲ್ಲ ಯುವಜನತೆಯೂ ವೀರ್ ಅವರಿಂದ ಸ್ಪೂರ್ತಿ ಪಡೆದು ಭಾರತಕ್ಕೆ ವಾಪಸಾಗಲಿ'' ಎಂದರು. ನಂತರ, ನಾವು ದೈಹಿಕ ಮೂಲಸೌಕರ್ಯವನ್ನು ನಿರ್ಲಕ್ಷಿಸುವಂತಿಲ್ಲ. ಏಕಕಾಲಕ್ಕೆ ಡಿಜಿಟಲ್ ಮತ್ತು ಫಿಸಿಕಲ್ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು. ಮುಂದಿನ 5 ವರ್ಷಗಳಲ್ಲಿ ಆಪ್ಟಿಕಲ್ ಫೈಬರ್ ಮೂಲಕ ಎಲ್ಲ ಗ್ರಾಮಗಳಿಗೂ ಸಂಪರ್ಕ ಕಲ್ಪಿಸುವ ಇರಾದೆಯಿದೆ. ಭಾರತದಲ್ಲಿ ಹಣಕ್ಕೇನೂ ಕೊರತೆಯಿಲ್ಲ ಎಂದು ನಾನು ನಂಬಿದ್ದೇನೆ ಎಂದು ಹೇಳಿದರು.
ಭಾವುಕರಾದ ಪ್ರಧಾನಿ
ಫೇಸ್‍ಬುಕ್ ಕಚೇರಿಯಲ್ಲಿ ಪ್ರತಿ ಪ್ರಶ್ನೆಗೂ ಸರಾಗವಾಗಿ ಉತ್ತರಿಸುತ್ತಿದ್ದ ಪ್ರಧಾನಿ ಮೋದಿ, ಒಂದು ಹಂತದಲ್ಲಿ ಭಾವುಕರಾದರು. `ನಿಮ್ಮ ಅಮ್ಮನ ಬಗ್ಗೆ ತಿಳಿಸಿ' ಎಂಬ ಝುಕರ್‍ಬರ್ಗ್ ಪ್ರಶ್ನೆಗೆ ಉತ್ತರಿಸುವ ವೇಳೆ ಮೋದಿ ಕಣ್ಣೀರಾಗಿದ್ದು ಕಂಡುಬಂತು. ``ನಾನು ಅತ್ಯಂತ ಬಡ
ಕುಟುಂಬದಿಂದ ಬಂದವನು. ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದೆ. ನಮ್ಮನ್ನು ಬೆಳೆಸಲು ಅಮ್ಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನೆರೆಹೊರೆಯ ಮನೆಯಲ್ಲಿ ಪಾತ್ರೆ ತೊಳೆಯುತ್ತಾ ನಮ್ಮನ್ನು ಸಾಕಿ
ದರು'' ಎನ್ನುತ್ತಿದ್ದಂತೆ ಪ್ರಧಾನಿ ಭಾವುಕರಾದರು. ನಂತರ ಸಾವರಿಸಿಕೊಂಡ ಅವರು, ಜಗತ್ತಿನ ಎಲ್ಲ ತಾಯಂದಿರಿಗೂ ನಾನು ಸೆಲ್ಯೂಟ್ ಮಾಡುತ್ತೇನೆ. ಪ್ರತಿಯೊಬ್ಬರ ಬದುಕಿನಲ್ಲೂ ಅಮ್ಮನ ಕೊಡುಗೆ ಅಪಾರವಾದದ್ದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


