ಸಿಡ್ನಿ ರಸ್ತೆಗೆ ಪ್ರಭಾ ಅರುಣ್ ಕುಮಾರ್ ಹೆಸರು
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹತ್ಯೆಗೀಡಾಗಿದ್ದ ಭಾರತೀಯ ಮೂಲದ ಟೆಕಿ ಪ್ರಭಾ ಅರುಣ್ ಕುಮಾರ್ ಅವರ ಸ್ಮರಣಾರ್ಥ ಗೌರವ ಸಲ್ಲಿಕೆ ಮಾಡಿರುವ ಆಸ್ಟ್ರೇಲಿಯಾ ಸರ್ಕಾರ, ಪರಮಟ್ಟಾ ರಸ್ತೆಗೆ ಪ್ರಭಾ ಅವರ..

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹತ್ಯೆಗೀಡಾಗಿದ್ದ ಭಾರತೀಯ ಮೂಲದ ಟೆಕಿ ಪ್ರಭಾ ಅರುಣ್ ಕುಮಾರ್ ಅವರ ಸ್ಮರಣಾರ್ಥ ಗೌರವ ಸಲ್ಲಿಕೆ ಮಾಡಿರುವ ಆಸ್ಟ್ರೇಲಿಯಾ ಸರ್ಕಾರ, ಪರಮಟ್ಟಾ ರಸ್ತೆಗೆ ಪ್ರಭಾ ಅವರ ಹೆಸರನ್ನೇ ಮರುನಾಮಕರಣ ಮಾಡಿದೆ.
ಪಶ್ಚಿಮ ಸಿಡ್ನಿಯಲ್ಲಿರುವ ಪರಮಟ್ಟಾ ಪಾರ್ಕ್ ರಸ್ತೆಗೆ ಪ್ರಭಾಸ್ ವಾಕ್ ಎಂದು ಮರುನಾಮಕರಣ ಮಾಡಲಾಗಿದೆ. ಕಳೆದ ಮಾರ್ಚ್ 7ರಂದು ಸಿಡ್ನಿಯಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ಬಳಿಯಲ್ಲಿಯೇ ಮಂಗಳೂರು ಮೂಲದ ಟೆಕಿ ಪ್ರಭಾ ಅರುಣ್ ಕುಮಾರ್ ಅವರ ಹತ್ಯೆಯಾಗಿತ್ತು. ಹತ್ಯೆಗೂ ಮುನ್ನ ಪ್ರಭಾ ಅವರು ಪರಮಟ್ಟಾಪಾರ್ಕ್ ನಲ್ಲಿ ಸುತ್ತಾಡಿದ್ದು, ಇದೀಗ ಅದೇ ರಸ್ತೆಗೆ ಅವರ ಸ್ಮರಣಾರ್ಥ ಪ್ರಭಾಸ್ ವಾಕ್ ಎಂದು ಮರು ನಾಮಕರಣ ಮಾಡಲಾಗಿದೆ.
ಪ್ರಭಾ ಅರುಣ್ ಕುಮಾರ್ ಅವರ 42ನೇ ಜನ್ಮ ದಿನಾಚರಣೆಯ ಹಿನ್ನಲೆಯಲ್ಲಿ ಸಿಡ್ನಿಯ ಪರಮಟ್ಟಾ ಪಾರ್ಕ್ ಬಳಿ ನಡೆದ ಕಾರ್ಯಕ್ರಮದಲ್ಲಿ ಪ್ರಭಾ ಅವರು ನೆಲೆಸಿದ್ದ ಅಪಾರ್ಟ್ ಮೆಂಟ್ ಹಿಂಭಾಗದಲ್ಲಿರುವ ಪಾರ್ಕ್ ರಸ್ತೆಗೆ ಪ್ರಭಾಸ್ ವಾಕ್ ಎಂದು ನಾಮಕರಣ ಮಾಡಲಾಗಿದೆ. ಹತ್ಯೆಗೀಡಾಗುವ ಮುನ್ನ ಪ್ರಭಾ ಅವರು ಕೊನೆಯ ಬಾರಿಗೆ ಇದೇ ರಸ್ತೆಯಲ್ಲಿ ನಡೆದಾಡಿದ್ದರು. ಇದೇ ಕಾರಣಕ್ಕಾಗಿ ಅವರ ಸ್ಮರಣಾರ್ಥ ರಸ್ತೆಗೆ ಅವರ ಹೆಸರನ್ನು ಮರು ನಾಮಕರಣ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಭಾ ಅವರ ಪತಿ ಅರುಣ್ ಕುಮಾರ್, ಪ್ರಭಾ ಅವರ ತಾಯಿ ಮತ್ತು ಮಗಳು ಮತ್ತು ಭಾರತದ ಅವರ ಸ್ನೇಹಿತರು ಉಪಸ್ಥಿತರಿದ್ದರು.
ಕಳೆದ ಮಾರ್ಚ್ 7ರ ರಾತ್ರಿ ವಾಕ್ ಮುಗಿಸಿ ಪರಮಟ್ಟಾ ಪಾರ್ಕ್ ಬಳಿ ಇರುವ ತಮ್ಮ ಅಪಾರ್ಟ್ ಮೆಂಟ್ ಗೆ ತೆರಳಿದ್ದ ಪ್ರಭಾ ಅರುಣ್ ಕುಮಾರ್ ಅವರು, ಭೀಕರವಾಗಿ ಹತ್ಯೆಗೀಡಾಗಿದ್ದರು. ಹತ್ಯೆಗೂ ಮುನ್ನ ಪ್ರಭಾ ಅವರು ವಾಕ್ ಮಾಡಿದ್ದ ದೃಶ್ಯಾವಳಿಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಸಿಡ್ನಿ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ವರೆಗೂ ಕೊಲೆಗಾರರು ಯಾರು ಎಂದು ಪತ್ತೆಯಾಗಿಲ್ಲ. ಪ್ರಕರಣ ಸಂಬಂಧ ಈಗಾಗಲೇ ಸಿಡ್ನಿ ಪೊಲೀಸರು ಭಾರತದಲ್ಲಿಯೂ ವಿಚಾರಣೆ ನಡೆಸಿದ್ದರು. ಆದರೆ ಕೊಲೆಗಾರರ ಸುಳಿವು ಮಾತ್ರ ದೊರೆತಿಲ್ಲ.
ಪ್ರಭಾ ಅರುಣ್ ಕುಮಾರ್ ಅವರ ಹತ್ಯೆ ಆಸ್ಟ್ರೇಲಿಯಾ ಸೇರಿದಂತೆ ಭಾರತದಲ್ಲಿಯೂ ತೀವ್ರ ಸುದ್ದಿಗೆ ಗ್ರಾಸವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


