'ನಮ್ಮ ಮೆಟ್ರೋ'ದಲ್ಲಿ ಏಕೈಕ ಮಹಿಳಾ ಎಂಜಿನಿಯರ್..!
ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಪುರುಷ ಕಾರ್ಮಿಕರು ಕೆಲಸ ಮಾಡುವ ಜಾಗದಲ್ಲಿ ಏಕೈಕ ಮಹಿಳಾ ಉದ್ಯೋಗಿ...

ಬೆಂಗಳೂರು: ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಪುರುಷ ಕಾರ್ಮಿಕರು ಕೆಲಸ ಮಾಡುವ ಜಾಗದಲ್ಲಿ ಏಕೈಕ ಮಹಿಳಾ ಉದ್ಯೋಗಿ ಇದ್ದಾರೆ ಎಂದರೆ ಕೊಂಚ ಅಚ್ಚರಿಯಾದರೂ ಇದು ನಿಜ.
ಇದು ಬೆರೆಲ್ಲೂ ಅಲ್ಲ ನಮ್ಮ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ..! ಈಕೆಯ ಹೆಸರು ವಿ ಜೆ ಮಂಜುಶ್ರೀ. ಓದಿದ್ದು ಇಂಜಿನಿಯರಿಂಗ್. ಪ್ರಸ್ತುತ ನಮ್ಮ ಮೆಟ್ರೋದ ಮೆಜೆಸ್ಟಿಕ್ ವಿಭಾಗದ ಜೂನಿಯರ್ ಸಿವಿಲ್ ಎಂಜಿನಿಯರ್. ಪ್ರಮುಖ ಅಂಶವೆಂದರೆ ಮೆಜೆಸ್ಟಿಕ್ ವಿಭಾಗದಲ್ಲಿ ಸುಮಾರು 1, 550ಕ್ಕೂ ಅಧಿಕ ಪುರುಷ ಕಾರ್ಮಿಕರಿದ್ದು, ಏಕೈಕ ಮಹಿಳಾ ಉದ್ಯೋಗಿಯಾಗಿ ಮಂಜುಶ್ರೀ ಅವರು ಕೆಲಸ ಮಾಡುತ್ತಿದ್ದಾರೆ. ಜೂನಿಯರ್ ಸಿವಿಲ್ ಎಂಜಿನಿಯರ್ ಆಗಿರುವ ಮಂಜುಶ್ರೀ ಇಲ್ಲಿ ಯೋಜನೆ ಮತ್ತು ಬಿಲ್ಲಿಂಗ್ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಮಂಜುಶ್ರೀ ಸುಮಾರು 6 ತಿಂಗಳಿನಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ನಮ್ಮ ಮೆಟ್ರೋದಲ್ಲಿ ಮಂಜುಶ್ರೀ ಜವಾಬ್ದಾರಿಯುತ ಪಾತ್ರ ನಿರ್ವಹಿಸುತ್ತಿದ್ದಾರೆ. ಪ್ರತಿ ನಿತ್ಯ ತಮ್ಮ ತಂಡದ ಕಾರ್ಯವನ್ನು ಪರಿಶೀಲಿಸುವುದಷ್ಟೇ ಅಲ್ಲದೇ ಕಾರ್ಮಿಕರ ಕೆಲಸವನ್ನು ಕೂಡ ಪರಿಶೀಲಿಸಬೇಕಿರುತ್ತದೆ. ಧೂಳು, ಸಿಮೆಂಟ್, ಬೃಹತ್ ಯಂತ್ರಗಳ ಕರ್ಕಶ ಶಬ್ಧದಂತಹ ಹಲವು ಸಮಸ್ಯೆಗಳ ನಡುವೆಯೇ ಮಂಜುಶ್ರೀ ಅವರು ನಿತ್ಯ ದುಡಿಯಬೇಕಿದೆ. ಹೀಗಿದ್ದರೂ ಮಂಜುಶ್ರೀ ಅವರಿಗೆ ತಮ್ಮ ಕೆಲಸದಲ್ಲಿ ಖುಷಿ ಇದೆಯಂತೆ.
ಪುರುಷ ಕಾರ್ಮಿಕರ ಮಧ್ಯೆ ಕೆಲಸ ಮಾಡುವಾಗ ಹೆದರಿಕೆಯಾಗುತ್ತದೆಯೇ ಎಂದು ಕೇಳಿದರೆ ಮಂಜುಶ್ರೀ, ಖಂಡಿತಾ ಇಲ್ಲ ಎಂದು ಉತ್ತರಿಸುತ್ತಾರೆ. 'ನಮ್ಮ ತಂಡದಲ್ಲಿ ಅಥವಾ ನಾನು ಕೆಲಸ ಮಾಡುವ ಜಾಗದಲ್ಲಿ ಯಾವುದೇ ರೀತಿಯ ಲಿಂಗಬೇಧವಿಲ್ಲ. ನಮ್ಮ ಸಹೋದ್ಯೋಗಿಗಳು ನನಗೆ ತುಂಬಾ ಬೆಂಬಲ ನೀಡುತ್ತಾರೆ. ಕಾರ್ಮಿಕರಾಗಲೀ ಅಥವಾ ಇತರೆ ವಿಭಾಗದ ಎಂಜಿನಿಯರ್‌ಗಳಾಗಲಿ ಎಂದೂ ಲಿಂಗತಾರಮ್ಯ ಮಾಡಿಲ್ಲ'.
'ನಮ್ಮ ಮೆಟ್ರೋದಂತಹ ಬೃಹತ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸುವುದು ನನಗೆ ವಿಭಿನ್ನ ಮಾನ್ಯತೆಯನ್ನು ನೀಡಿದೆ. ಇಲ್ಲಿ ಸಾಕಷ್ಟು ಕಲಿತಿದ್ದೇನೆ ಮತ್ತು ಇನ್ನೂ ಕಲಿಯುತ್ತಿದ್ದೇನೆ. ಮಹಿಳಾ ಉದ್ಯೋಗಿ ಎಂಬ ಕಾರಣದಿಂದಾಗಿ ಅರಾಮದಾಯಕವಾಗಿ ಕೆಲಸ ಮಾಡಲು ಇಲ್ಲಿ ನನಗೆ ಕೆಲ ರಿಯಾಯಿತಿಗಳನ್ನು ನೀಡಲಾಗಿದೆ. ಬೆಳಗ್ಗೆ 9.30ಕ್ಕೆ ನನ್ನ ಶಿಫ್ಟ್ ಆರಂಭವಾದರೆ ಸಂಜೆ 6ಕ್ಕೆಲ್ಲಾ ಮುಕ್ತಾಯವಾಗುತ್ತದೆ. ಆದರೆ ನನ್ನ ಇತರೆ ಸಹೋದ್ಯೋಗಿಗಳು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕೆಲಸ ಮಾಡುತ್ತಾರೆ. ಇನ್ನು ಉಪಾಧ್ಯಕ್ಷರು ಮಾತ್ರ ಬಳಸುವ ಕೊಠಡಿ ಮತ್ತು ಶೌಚಾಲಯವನ್ನು ನಾನು ಬಳಕೆ ಮಾಡಲು ಅವಕಾಶ ನೀಡಲಾಗಿದೆ' ಎಂದು ಮಂಜುಶ್ರೀ ಹೇಳಿದ್ದಾರೆ.
'ನನ್ನ ವೃತ್ತಿ ಜೀವನ ಕುರಿತಂತೆ ನನ್ನ ತಂದೆ ತಾಯಿ ಸಾಕಷ್ಟು ಸಲಹೆಗಳನ್ನು ನೀಡುತ್ತಾರೆ. ನೀನು ಏಕೈಕ ಮಹಿಳಾ ಉದ್ಯೋಗಿ ಎಂಬ ಭಯವಿಟ್ಟುಕೊಳ್ಳದೇ ಎಲ್ಲರೊಂದಿಗೂ ಒಗ್ಗೂಡಿ ಕೆಲಸ ಮಾಡು ಎಂದು ಹುರಿದುಂಬಿಸುತ್ತಾರೆ' ಎಂದು ತಮ್ಮ ಪೋಷಕರ ಬಗ್ಗೆ ಮಂಜುಶ್ರೀ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಒಟ್ಟಾರೆ ಎಂತಹುದೇ ಸವಲತ್ತುಗಳಿದ್ದರೂ ಸಾವಿರಾರು ಪುರುಷ ಕಾರ್ಮಿಕರು ಕೆಲಸ ನಿರ್ವಹಿಸುವ ಜಾಗದಲ್ಲಿ ಏಕಾಂಗಿಯಾಗಿ ಕೆಲಸ ಮಾಡಲು ಯಾವುದೇ ಮಹಿಳೆಗಾದರೂ ಗಟ್ಟಿಗುಂಡಿಗೆ ಬೇಕು. 24 ವರ್ಷದ ಮಂಜುಶ್ರೀ ಅವರು ಯಲಹಂಕದಲ್ಲಿರುವ ಶ್ರೀ ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜ್ ನಲ್ಲಿ 2011ರಲ್ಲಿ ಪದವಿ ಪಡೆದಿದ್ದು, ಪ್ರಸ್ತುತ ಹೆಸರುಘಟ್ಟದಲ್ಲಿ ತಮ್ಮ ಪೋಷಕರೊಂದಿಗೆ ನೆಲೆಸಿದ್ದಾರೆ. ಹೆಸರುಘಟ್ಟದಿಂದ ಮೆಜಸ್ಟಿಕ್‌ಗೆ ಸುಮಾರು 20 ಕಿ.ಮೀ ದೂರವಿದ್ದು, ಪ್ರತಿ ನಿತ್ಯ ಮಂಜುಶ್ರೀ ಬಿಎಂಟಿಸಿ ಬಸ್‌ನಲ್ಲಿಯೇ ಪ್ರಯಾಣಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


