ನಮ್ ಪ್ಲಾಟಿನಂ ಆಭರಣ

ಭೂಮಿಯ ಮೇಲೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಿಗುವ ಲೋಹಗಳಲ್ಲಿ ಪ್ಲಾಟಿನಂ ಕೂಡ ಒಂದು. ಈ ಕಾರಣದಿಂದ ಈ ಲೋಹ ಬಲು ದುಬಾರಿ. ಇದು ಚಿನ್ನದಂತೆ ಫಳಫಳ ಹೊಳೆಯುವುದಿಲ್ಲ, ವಜ್ರದಂತೆ ಕಣ್ಣು ಕೋರೈಸುವ ಸೌಂದರ್ಯವೂ ಇದಕ್ಕಿಲ್ಲ. ಬರೀ ಬೂದು ಮತ್ತು ಬಿಳಿ ಬಣ್ಣದಲ್ಲಿ ದೊರೆಯುವ ಪ್ಲಾಟಿನಂ ಆಭರಣಗಳು ಈಗ ಮತ್ತೆ ಎಲ್ಲ ಮಾನಿನಿಯರನ್ನು ತಮ್ಮತ್ತ ಆಕರ್ಷಿಸುತ್ತಿರುವುದಂತೂ ಸುಳ್ಳಲ್ಲ. ಬಣ್ಣವಿಲ್ಲ, ಹೊಳಪಿಲ್ಲ ಎಂಬ ಕಾರಣದಿಂದ ಸಾಕಷ್ಟು ದಿನ ಜನರ ಮನಸ್ಸಿನಿಂದ ದೂರವಾಗಿದ್ದ ಈ ಪ್ಲಾಟಿನಂ ಆಭರಣಗಳು ಈಗ ಮತ್ತೆ ಹೊಸ ರೂಪ, ಹೊಸ ವಿನ್ಯಾಸದೊಂದಿಗೆ ಗಂಡು, ಹೆಣ್ಣು ಎಂಬ ಭೇಧವಿಲ್ಲದೇ ಎಲ್ಲರೂ ಧರಿಸುವ ಮಾದರಿಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಚಿನ್ನಕ್ಕಿಂತಲೂ ಹೆಚ್ಚು ದುಬಾರಿಯಾದ ಈ ಪ್ಲಾಟಿನಂ ಆಭರಣಗಳು ಸಿಂಪಲ್ ಲುಕ್ ನೀಡುವುದರಿಂದ ಇದು ಉದ್ಯೋಗಸ್ಥ ಮಹಿಳೆಯರು ಕೂಡಾ ತಮ್ಮ ಕ್ಯಾಶುವಲ್ ಉಡುಪಿನ ಜೊತೆಗೂ ಮ್ಯಾಚ್ ಮಾಡಿ ಧರಿಸಬಹುದು. ಚಿನ್ನಕ್ಕಿಂತ ಹೆಚ್ಚು ತೂಕವಿರುವ ಈ ಪ್ಲಾಟಿನಂ ದೀರ್ಘಕಾಲ ಬಾಳಿಕೆ ಬರುವಂತಹ ಲೋಹ. ಎಷ್ಟೇ ವರುಷ ಕಳೆದರೂ ಇದರ ಬಣ್ಣ ಮಾಸುವುದಿಲ್ಲ. ಯಾವುದೇ ರಾಸಾಯನಿಕಗಳನ್ನು ಸಿಂಪಡಿಸಿದರೂ ಹಾನಿಗೊಳಗಾಗುವುದಿಲ್ಲ, ಅದೂ ಅಲ್ಲದೇ ಪ್ಲಾಟಿನಂ ಆಭರಣಗಳಿಗೆ ಹೆಚ್ಚು ಮುತುವರ್ಜಿ ವಹಿಸುವ ಅವಶ್ಯಕತೆಯೂ ಇಲ್ಲ. ಈ ಎಲ್ಲ ಕಾರಣಗಳಿಂದ ಇದೀಗ ಸಾಕಷ್ಟು ಮಾನಿನಿಯರ ಕೈ, ಕತ್ತು, ಕಿವಿಯನ್ನು ಅಲಂಕರಿಸಿರುವ ಈ ಪ್ಲಾಟಿನಂ ಆಭರಣಗಳು ಗಂಡಸರಿಗೂ ಪ್ರಿಯವಾಗುತ್ತಿವೆ. ಅವರೂ ಕತ್ತಲ್ಲಿ ಸಣ್ಣದಾದ ಚೈನು, ಕೈಯಲ್ಲಿ ಬ್ರೇಸ್ಲೆಟ್ ಮತ್ತು ಬೆರಳಲ್ಲಿ ವಿವಿಧ ವಿನ್ಯಾಸದ ಪ್ಲಾಟಿನಂ ಉಂಗುರಗಳನ್ನು ಧರಿಸಲು ಶುರು ಮಾಡಿದ್ದಾರೆ.
ಆಭರಣ ವಿನ್ಯಾಸಕಾರರಿಗೆ ಅತ್ಯಂತ ಪ್ರೀತಿಪಾತ್ರವಾದ ಈ ಪ್ಲಾಟಿನಂ ಲೋಹ ಎಳೆದಷ್ಟು ಉದ್ದವಾಗಿ ಬರುತ್ತದೆ ಮತ್ತು ತುಂಡಾಗುವುದಿಲ್ಲ. ಆದ್ದರಿಂದ ಇದರಲ್ಲಿ ಅತ್ಯಂತ ಸೂಕ್ಷ್ಮವಾದ ಕುಸುರಿ ಕೆತ್ತನೆಗಳನ್ನು ಮಾಡಲು ಸಾಧ್ಯ. ಇನ್ನು ಈ ಪ್ಲಾಟಿನಂನಲ್ಲಿ ಅದಕ್ಕೊಪ್ಪುವ ವಜ್ರಗಳನ್ನು ಜೋಡಿಸಿ ಆಭರಣಗಳನ್ನು ತಯಾರಿಸಿದರಂತೂ ಅದರ ಅಂದಕ್ಕೆ ಸಾಟಿಯೇ ಇಲ್ಲ.
ಚಿನ್ನಕ್ಕಿಂತ ಪ್ಲಾಟಿನಂ ದುಬಾರಿಯಿದ್ದರೂ ಕೂಡ ಜನ ಹೂಡಿಕೆಗೆ ಇದನ್ನು ಬಳಸುವುದಿಲ್ಲ. ಇದು ಬರೀ ಸ್ಟೈಲ್ ಸ್ಟೇಟ್ಮೆಂಟ್ಗೆ ಮಾತ್ರ ಮೀಸಲು. ಇನ್ನು ಚಿನ್ನ ಮತ್ತು ಬೆಳ್ಳಿ ಆಭರಣಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಿಶ್ರಲೋಹಗಳಾದ ತಾಮ್ರ, ಹಿತ್ತಾಳೆಯನ್ನು ಬಳಸಲಾಗುತ್ತದೆ. ಇದರಿಂದ ಸಾಕಷ್ಟು ಜನರಿಗೆ ಸ್ಕಿನ್ ಅಲರ್ಜಿ ಉಂಟಾಗುತ್ತದೆ. ಆದರೆ ಪ್ಲಾಟಿನಂನಲ್ಲಿ ತಯಾರಿಸುವ ಆಭರಣಗಳು ಅತ್ಯಂತ ಶುದ್ಧರೂಪದಲ್ಲಿರುವ ಕಾರಣ ಚರ್ಮದ ಸೋಂಕು ಉಂಟಾಗುವುದಿಲ್ಲ.
ಪ್ಲಾಟಿನಮ್ ಆಭರಣಗಳು ಬಹಳ ದುಬಾರಿ. ಆದ್ದರಿಂದ ಅವುಗಳನ್ನು ಖರೀದಿಸುವ ಮುಂಚೆ ಮತ್ತು ಖರೀದಿಸಿದ ಮೇಲೆ ಕೆಲವೊಂದು ವಿಷಯಗಳನ್ನುಗಮನಿಸುವುದು ಒಳ್ಳೆಯದು.
ಏನು ಗಮನಿಸಬೇಕು?
- ಪ್ಲಾಟಿನಂ ಆಭರಣಗಳನ್ನು ಆದಷ್ಟು ಬೇರೆ ಆಭರಣಗಳಿಂದ ದೂರವಿಡಬೇಕು.
- ಚಿನ್ನ, ಬೆಳ್ಳಿಯ ಆಭರಣಗಳನ್ನು ಸ್ವಚ್ಛಗೊಳಿಸುವ ರೀತಿಯಲ್ಲೇ ಪ್ಲಾಟಿನಂ ಆಭರಣಗಳನ್ನು ಸ್ವಚ್ಛಗೊಳಿಸಿ. ಸೋಪ್ನೀರು ಇಲ್ಲವೇ ಬೆಚ್ಚಗಿನ ನೀರಿನಲ್ಲಿ ಕಾಟನ್ಬಟ್ಟೆ ಅದ್ದಿ ಅದರಿಂದಲೇ ಈ ಆಭರಣಗಳನ್ನು ಒರೆಸಿ ಬೇಗನೆ ಸ್ವಚ್ಛ ಮಾಡಿಬಿಡಬೇಕು.
- ಮನೆಗೆಲಸ ಮಾಡುವ ಸಮಯದಲ್ಲಿ ಪ್ಲಾಟಿನಂ ಆಭರಣಗಳನ್ನು ಧರಿಸಬಾರದು. ಪ್ಲಾಟಿನಂ ಆಭರಣಕ್ಕೆ ಯಾವುದೇ ತೊಂದರೆ ಇಲ್ಲವಾದರೂ ಅದರ ವಿನ್ಯಾಸದಲ್ಲಿ ಅಳವಡಿಸಿರುವ ವಜ್ರದ ಹರಳುಗಳಿಗೆ ಹಾನಿಯಾಗುವ ಸಂಭವ ಹೆಚ್ಚು.
- ಪ್ಲಾಟಿನಂ ಆಭರಣಗಳು ತುಂಬಾ ದುಬಾರಿಯಾಗಿರುವ ಕಾರಣ ಆದಷ್ಟು ಜೋಪಾನವಾಗಿ ಎತ್ತಿಡಬೇಕು ಮತ್ತು ವರ್ಷಕ್ಕೊಮ್ಮೆ ನುರಿತ ವಿನ್ಯಾಸಕಾರರಿಂದ ಈ ಆಭರಣಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಅಂದರೆ ಮಾತ್ರ ಇದು ದೀರ್ಘಕಾಲ ಬಾಳಿಕೆ ಬರುತ್ತವೆ.
- ಚಿನ್ನ ಖರೀದಿಸುವಾಗ ಅದರ ಪ್ಯೂರಿಟಿ ಬಗ್ಗೆ ಮಾಹಿತಿ ಪಡೆಯುತ್ತೇವೆ. ಅದೇ ರೀತಿ ಪ್ಲಾಟಿನಂ ಆಭರಣಗಳನ್ನು ಖರೀದಿಸುವಾಗಲೂ ಅದರ ಮೇಲೆ 'ಹಾಲ್ಮಾರ್ಕ್' ಚಿಹ್ನೆ ಇದೆಯಾ ಎಂದು ಪರೀಕ್ಷಿಸಿ ಅದರ ಪ್ಯೂರಿಟಿ ಚೆಕ್ ಮಾಡಿಯೇ ಖರೀದಿಸುವುದು ಜಾಣತನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


