ಹಾರಿ ಬಂದ 'ರಿಯಲ್' ಹೀರೋ
ಹೂಡಿಕೆಗೆ ಯಾವುದು ಸೂಕ್ತ ಮಾರ್ಗ? ಈ ಪ್ರಶ್ನೆಗೆ ಉತ್ತರ ಇಲ್ಲ. ಮ್ಯೂಚುವಲ್ ...

ಹೂಡಿಕೆಗೆ ಯಾವುದು ಸೂಕ್ತ ಮಾರ್ಗ? ಈ ಪ್ರಶ್ನೆಗೆ ಉತ್ತರ ಇಲ್ಲ. ಮ್ಯೂಚುವಲ್ ಫಂಡ್‌ಗಳು, ಎಲ್‌ಐಸಿಗಳು, ರಿಯಲ್ ಎಸ್ಟೇಟ್, ಬ್ಯಾಂಕ್, ಕೈಗಾರಿಕೆ, ಎಸ್‌ಐಪಿ-ಹೀಗೆ ನಾನಾ ರೀತಿಯ ಅವಕಾಶಗಳು ಹೂಡಿಕೆಗೆ ವೇದಿಕೆಗಳಿವೆ. ಆದರೆ ಸೂಕ್ತವಾಗಿರುವ, ಅತಿ ನಂಬಿಕೆಗೆ ಅರ್ಹವಾಗಿರುವುದು ಯಾವುದು ಎಂಬುದನ್ನು ಹೇಳುವುದೇ ಕಷ್ಟ.
ಬಂಡವಾಳ ಹೂಡಿಕೆಗೆ ಖಾಸಗಿ, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು ಹಲವು ದಾರಿ ಮಾಡಿಕೊಡುತ್ತಿವೆ. ಕಾರಣ ಸಂಸ್ಥೆಯ ಬೆಳವಣಿಗೆ. ಹೀಗಾಗಿ ವಿದೇಶದವರು, ಭಾರತೀಯರು, ಅನಿವಾಸಿ ಭಾರತೀಯರ ಹೂಡಿಕೆ ದೇಶದಲ್ಲಿ ಹೆಚ್ಚುತ್ತಿದೆ. ಹಣ ಮಾಡುವ ಉದ್ದೇಶಕ್ಕಿಂತ ಹೂಡಿರುವ ಹಣಕ್ಕೆ ಲಾಭ ಬಂದರೆ ಸಾಕು ಎನ್ನುವ ಧೋರಣೆಯಿಂದ ಹೂಡಿಕೆಗೆ ಹಲವರು ಮುಂದಾಗಿದ್ದಾರೆ. ಹೀಗಾಗಿ ಎಲ್ಲರೂ ಇತ್ತೀಚಿಗೆ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಗೆ ಮುಂದಾಗುತ್ತಿದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಹೌದು. ರಿಯಲ್ ಎಸ್ಟೇಟ್ ಉದ್ಯಮ ಈಗ ಬೆಂಗಳೂರು, ದೆಹಲಿ, ಚೆನ್ನೈ, ಕೋಲ್ಕತಾ, ಮುಂಬೈ ಸೇರಿದಂತೆ ದೇಶದ ಮಹಾನಗರಳಲ್ಲಿ ಜನಸಂಖ್ಯೆಯಷ್ಟೇ ಅತೀ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಹೀಗಾಗಿ ಹೂಡಿಕೆದಾರರೂ ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ. ಅಷ್ಟೇ ಅಲ್ಲ ರಿಯಲ್ ಎಸ್ಟೇಟ್ ವ್ಯಾಪ್ತಿಯೂ ಈಗ ಬರಿ ಮಹಾನಗರಗಳಲ್ಲಿ ಮಾತ್ರವಲ್ಲದೆ, ಎರಡನೇ ದರ್ಜೆ ಹಾಗೂ ತೃತೀಯ ದರ್ಜೆಯ ನಗರಗಳಲ್ಲಿ ಮತ್ತು ಪುರಸಭೆಯಂಥ ಪ್ರದೇಶಗಳಲ್ಲೂ ಹರಡಿಕೊಂಡಿದೆ.
ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅನಿವಾಸಿ ಭಾರತೀಯರು ಹೂಡಿಕೆ ಪ್ರಮಾಣ ಈ ವರ್ಷ ಶೇ.35ರಷ್ಟು ಹೆಚ್ಚಾಗಲಿದೆ ಎಂದು ಅಸ್ಸೋಚಾಮ್ ಸಮೀಕ್ಷೆಯೊಂದು ಹೇಳಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಈಗಾಗಲೇ ಚೇತರಿಸಿಕೊಂಡಿರುವ ದೇಶದಲ್ಲಿ, ಇನ್ನು ಮುಂದೆಯೂ ಮತ್ತಷ್ಟು ಬೆಳವಣಿಗೆ ಕಾಣುವ ಮುನ್ನೂಚನೆ ಈಗಾಗಲೇ ಎದ್ದು ಕಾಣುತ್ತಿದೆ. ಜೊತೆಗೆ ಡೆವೆಲೆಪರ್ಸ್ ಕೂಡ ಪ್ರಾಪರ್ಟಿ ಶೋ, ವಸ್ತು ಪ್ರದರ್ಶನ ಸೇರಿದಂತೆ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿ, ಭಾರತದಲ್ಲಿರುವ ಅವಕಾಶಗಳ ಕುರಿತು ಸಾರಿ ಹೇಳಿವೆ. ಇದೂ ಎನ್‌ಆರ್‌ಐಗಳು ದೇಶದ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಒಂದು ಕಾರಣ.
ಡೆವಲೆಪರ್ಸ್‌ಗಳು ಕೂಡ ಈಗಿರುವ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಹೀಗಾಗಿ ಅವರೂ ಅನಿವಾಸಿ ಭಾರತೀಯರ ಹೂಡಿಕೆಯನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಅಸ್ಸೋಚಾಮ್ ಸಮೀಕ್ಷೆ ಹೇಳಿದೆ. ಅಸ್ಸೋಚಾಮ್ ದೆಹಲಿ, ನೋಯ್ಡಾ, ಬೆಂಗಳೂರು, ಚೆನ್ನೈ, ಪುಣೆ, ಚಂಡೀಗಢ, ಮುಂಬೈ, ಕೋಲ್ಕತಾ, ಹೈದರಾಬಾದ್, ಅಹ್ಮದಾಬಾದ್, ಡೆಹ್ರಾಡೂನ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿರುವ ಒಟ್ಟು 850 ರಿಯಲ್ ಎಸ್ಟೇಟ್‌ಗಳ ಉದ್ಯಮಿಗಳನ್ನು ಭೇಟಿ ಮಾಡಿ ಸಮೀಕ್ಷೆ ಮಾಡಿದ್ದಾರೆ. ಆದರೆ, ಬೆಂಗಳೂರು ಎಲ್ಲರಿಗೂ ನ0.1 ರಿಯಲ್ ಎಷ್ಟೇಟ್ ಹೂಡಿಕೆಯ ತಾಣವಾಗಿದೆ ಎಂಬುದು ಸಮೀಕ್ಷೆಯಿಂದ ಸಾಬೀತಾಗಿದೆ. ಬೆಂಗಳೂರು ನಂತರದಲ್ಲಿ ಅಹ್ಮದಾಬಾದ್, ಪುಣೆ, ಗೋವಾ, ದೆಹಲಿ, ಡೆಹ್ರಾಡೂನ್ ನಂತರದ ಸ್ಥಾನದಲ್ಲಿವೆ.
ಅಮೆರಿಕ, ಸಿಂಗಾಪುರ, ಆಸ್ಟ್ರೇಲಿಯಾ, ಇಂಗ್ಲೆಂಡ್, ಕೆನಡಾ ಮತ್ತು ದಕ್ಷಿಣ ಆಫ್ರಿಕದಲ್ಲಿರುವ ಅನಿವಾಸಿ ಭಾರತೀಯರು ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಜೊತೆಗೆ ಉತ್ಕೃಷ್ಟ ದರ್ಜೆಯ ಪ್ರಾಪರ್ಟಿ ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ಎನ್‌ಆರ್‌ಐಗಳು ಹೂಡಿಕೆ ಮಾಡಲು ಆಸಕ್ತರಾಗಿದ್ದಾರೆ ಎಂಬ ಅಂಶ ಸಮೀಕ್ಷೆಯಿಂದ ಬಹಿರಂಗವಾಗಿದೆ. ಅಮೆರಿಕ, ಯುರೋಪ್‌ನಂಥ ಪ್ರದೇಶಗಳಲ್ಲಿ ಜಾಗತಿಕ ಆರ್ಥಿಕತೆ ಬದಲಾಗುತ್ತಿರುವುದರಿಂದ ಅಲ್ಲಿರುವ ಭಾರತೀಯರು ಹೂಡಿಕೆಗೆ ಸೂಕ್ತ ತಾಣವಾಗಿರುವ ಭಾರತದತ್ತ ಮುಖ ಮಾಡಿದ್ದಾರೆ. ಒಟ್ಟಾರೆ ಭಾರತದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.35ರಷ್ಟು ಹೂಡಿಕೆ ಪ್ರಮಾಣ ಎನ್‌ಆರ್‌ಐಗಳಿಂದಲೇ ಹರಿದು ಬರಲಿದೆ. ಈ ಶೇ.35ರಲ್ಲಿ ಶೇ.32 ಭಾಗ ಅಹಮದಾಬಾದ್‌ನಲ್ಲಿ ಹೂಡಿಕೆ ಮಾಡಲು ಎನ್‌ಆರ್‌ಐಗಳು ಆಸ್ಥೆ ವಹಿಸಿದ್ದಾರೆ. ಕಾರಣ ಅಲ್ಲಿರುವ ಕಾನೂನುಗಳು. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಹೂಡಿಕೆದಾರರಿಗೆ ಸರ್ಕಾರ ನೀಡಿರುವ ಸೌಲಭ್ಯಗಳೂ ತನ್ನತ್ತ ಸೆಳೆಯಲು ಕಾರಣ.
-ಬ್ರಹ್ಮಾನಂದ ಎನ್.ಹಡಗಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


