ಮಹಿಳೆ-ಮನೆ-ಬದುಕು

ಇನ್ನೂ ಮದುವೆ ಆಗಿಲ್ವಾ?

ಅದು ದೊಡ್ಡಪ್ಪನ ಮಗಳ ಮದುವೆ. ಎಲ್ಲರದೂ ಒಂದೇ ಪ್ರಶ್ನೆ. ನಿನ್ನ ಸರದಿ ಯಾವಾಗ?

ಇನ್ನೂ ಮದುವೆ ಆಗಿಲ್ವಾ?
Published On :

ಅದು ದೊಡ್ಡಪ್ಪನ ಮಗಳ ಮದುವೆ. ಎಲ್ಲರದೂ ಒಂದೇ ಪ್ರಶ್ನೆ. ನಿನ್ನ ಸರದಿ ಯಾವಾಗ? ಯಾಕಿಷ್ಟು ನಿಧಾನ? ಎಷ್ಟು ದಿನ ಅಂತ ಒಂಟಿಯಾಗಿರಬೇಕೆಂದುಕೊಂಡಿದ್ದೀಯ?  ಬಿಸಿ ರಕ್ತ ಇರುವಾಗ ಇದ್ಯಾವುದೂ ಗಣನೆಗೆ ಬರಲ್ಲ. ಮುಂದೊಂದು ದಿನ ನಿನ್ನ ಮೇಲೆ ನಿನಗೇ ಅಸಹನೆ ಶುರುವಾಗುತ್ತೆ. ಹೀಗೆ ಸಾಗಿತ್ತು ಸಂಬಂಧಿಕರು, ಹಿತೈಷಿಗಳು ಎನಿಸಿಕೊಂಡವರ ಉಪದೇಶ. ಮೈಯಲ್ಲಾ ಉರಿದು ಹೋಗುವಷ್ಟು ಸಿಟ್ಟು. ಹೊರಹಾಕಿದರೆ ಸುಮ್ಮನೆ ಕಷ್ಟಕ್ಕೆ ನಾನೇ ಸಿಲುಕಬೇಕೆಂದುಕೊಂಡು ಸಾಧ್ಯವಾದಷ್ಟೂ ಮುಖದಲ್ಲಿ ತೋರಗೊಡದೆ ಅಡಗಿಸಿಕೊಂಡೆ.

ಇದು ಮೂವತ್ತೈದು ದಾಟಿದ ಮೇಲೂ ಮದುವೆಯಾಗದೆ ಉಳಿದ ಪ್ರತಿಯೊಂದು ಹೆಣ್ಣುಮಗಳ ಸಿಟ್ಟು, ಕೋಪ, ಹುಂಬತನ... ಆದರೆ ನಮಗೆ ಮಾತ್ರ ಗೊತ್ತು, ಇದು ಆತ್ಮಾಭಿಮಾನದ ಪ್ರಶ್ನೆ ಎಂದು. ಇದನ್ನು ಪದೇ ಪದೆ ಅರ್ಥ ಮಾಡಿಸುವುದಾಗಲಿ, ಸಮರ್ಥಿಸಿಕೊಳ್ಳುವುದಾಗಲಿ, ನಾನು ಮಾಡುತ್ತಿರುವುದು ಸರಿ ಎನ್ನುವುದನ್ನು ಸಾಬೀತು ಪಡಿಸುವುದು ವೃಥಾ ಕಾಲಹರಣದ ಸಂವಾದಗಳು. ದಿನಗಳೆಂದಂತೆ ಇಂಥ ಪ್ರಶ್ನೆಗಳಿಗೆ ನನಗೆ ನಾನೇ ಗೆಳತಿ, ಹಿತೈಷಿ ಎನ್ನುವ ಸ್ವಗತದ ಮುಗುಳ್ನಗೆ. ಮಾತನಾಡುವ ಜಗತ್ತಿನೆಡೆಗೆ ಕಂಡೂ ಕಾಣದ ನಿರ್ಲಕ್ಷ್ಯ ಸರಿಯೆಸುತ್ತಿದೆ.

ಕೆಲವೊಮ್ಮೆ ಇಂತಹ ಸಂದರ್ಭಗಲು ತಲೆ ಎತ್ತುವ ಜಾಗಗಳಿಗೆ ಹೋಗಲೇ ಬಾರದೆನಿಸುತ್ತದೆ. ಕಾರಣವಿಲ್ಲದೆ ಉತ್ಕಟ ಪರಿಸ್ಥಿತಿಗಳೇ ನನ್ನಲ್ಲಿ ವಿಚಿತ್ರ ಆತ್ಮವಿಶ್ವಾಸ ತುಂಬುತ್ತದೆ ಎನ್ನವುದೂ ನಾನೇ ಅರಿತ ಸತ್ಯ. ಏಕಾಂಗಿ ಬದುಕು ಹೊರ ಜಗತ್ತಿಗೆ ತಮಾಷೆಯ ವಸ್ತುವಾಗಬಹುದು. ಆದರೆ ಅದು ನನ್ನ ಆಯ್ಕೆ.

ಮದುವೆಯ ನಿರಾಕರಣೆಯ ಕಾರಣ ನೀಡುವ ಅಗತ್ಯ ಕೂಡ ನನಗಿಲ್ಲ. ಇತರರಿಗೆ ನಿಗೂಢ ಎನಿಸಿದರೂ ನನಗೆ ನಾನು ಸಮರ್ಥಿಸಿಕೊಂಡರೆ ಸಾಕು.

ಯಾರಗೋ ಒಪ್ಪಿಸುವ, ಅಂಗಲಾಚುವ, ನಂಬಿಸುವ ಅವಶ್ಯಕತೆ ಇಲ್ಲ. ಆದರೆ ಈ ಜಗತ್ತಿಗೆ ನಾನು ಕುತೂಹಲದ ಕೇಂದ್ರ ಬಿಂದುವಾಗಿದ್ದೇನೆ. ನನ್ನೊಳಗೆ ಏನು ನಡೆಯುತ್ತಿದೆ? ನನ್ನ ನಿರ್ಧಾರದ ಹಿಂದಿನ ಕಾರಣವೇನು? ಯಾರನ್ನಾದರೂ ಪ್ರೀತಿಸಿದ್ದಾಳಾ? ಯಾರಾದರೂ ಕೈಕೊಟ್ಟಿದ್ದಾರಾ? ಇವೆಲ್ಲ ಪ್ರಶ್ನೆಗಳಿಗೆ ಉನ್ನರ ಬೇಕು ಅವರಿಗೆ. ಆದರೆ ಉತ್ತರಿಸುವ ಅವಶ್ಯಕತೆ ನನಗಿಲ್ಲ.

ಇನ್ನೊಬ್ಬರ ಮೆಚ್ಚಿಸಬೇಕಿಲ್ಲ
ಕಾಲಘಟ್ಟ ಬದಲಾಗಿದೆ. ಮದುವೆ ಅನಿವಾರ್ಯ ಎನ್ನುವ ಪರಿಸ್ಥಿತಿ ಸರಿದು ಎಷ್ಟೋ ವರ್ಷಗಳೇ ಆಗಿವೆ. ಅದೊಂದು ವೈಯಕ್ತಿಕ ವಿಚಾರ. ಇಲ್ಲಿ ಕುಟುಂಬದವರ, ಹಿತೈಷಿಗಳ, ಗೆಳೆಯರ ಯಾರ ನಿರ್ಧಾರವೂ ಅಗತ್ಯ ಇಲ್ಲ. ಇದು ನನ್ನ ಬದುಕು, ಇಲ್ಲಿ ನನ್ನ ಆಯ್ಕೆಗಳೇ ನನಗೆ ಮುಖ್ಯ, ಇದರಿಂದಾಗುವ ಪರಿಣಾಮಕ್ಕೆ ಕೂಡ ನಾನೇ ಹೊಣೆ. ಯಾರ ಸಹಾಯ, ಹಂಗಿನ ಅವಶ್ಯಕತೆ ಇಲ್ಲದ ಸ್ವಚ್ಛಂದ ಬದುಕು ನನ್ನದು. ಇತರರು ಮೂಗು ತೂರಿಸದಿದ್ದರೆ ಅದೇ ಅವರು ನನಗೆ ಮಾಡುವ ಮಹದುಪಕಾರ.

ಯಶಸ್ವಿ ಗಂಡಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದು ಕೆಲವೊಂದು ಸಂದರ್ಭದಲ್ಲಿ ನಿಜ ಇರಬಹುದು. ಆದರೆ ಇಂದಿನ ಯಾವುದೇ ಹೆಂಡತಿಯರು ಕೆಲಸದಲ್ಲಿ ಮುಳಗೇಳುವ ಗಂಡನ ಸಹಿಸರು. ನಮಗಾಗಿ ಸ್ವಲ್ಪ ಸಮಯ ಕೊಡು ಮಾರಾಯ ಎಂದು ಕ್ಯಾತೆ ತೆಗೆಯುವವರೇ ಹೆಚ್ಚು. ಇದಕ್ಕೆ ಬದಲಾದ ಕಾಲ, ಭಾವನೆಗಳ ಮೇಳವೇ ಕಾರಣ. ಅದಕ್ಕಾಗಿಯೇ ಇಂದಿನ ಅನೇಕರು ಯಶಸ್ಸಿನ ಸನಿಹಕ್ಕೆ ತಲುಪಿ ಸೋಲುತ್ತಿದ್ದಾರೆ.

ಆದರೆ ಮಹಿಳೆಯ ಬದುಕಿನಲ್ಲಿ ಹಾಗಲ್ಲ, ಅವಳ ಯಶಸ್ಸಿಗೆ ಆಕೆಯ ಛಲ, ಪರಿಶ್ರಮ, ಏಕಾಗ್ರತೆ ಕಾರಣವಾಗಿರುತ್ತದೆ. ಇದಕ್ಕೆ ಉನ್ನತ ಮೆಟ್ಟಿಲೇರಿರುವ ಸಿಂಗಲ್ ವುಮನ್‌ಗಳಾದ ಕಿರಣ್ ಬೇಡಿ, ಮದರ್‌ತೆರೇಸಾ, ಮಮತಾ ಬ್ಯಾನರ್ಜಿ ಮುಂತಾದವರು ಉದಾಹರಣೆಯಾಗಿದ್ದಾರೆ.

ನನ್ನ ವಿವಾಹಿತ ಸಹೋದ್ಯೋಗಿಗಳಿಗೆ ಹೋಲಿಸಿದರೆ ವೃತ್ತಿ ಬದುಕು ಯಾವುದೇ ಇಳಿತಗಳ ಕಾಣದೆ ಏರುಗತಿಯಲ್ಲಿಯೇ ಸಾಗಿದೆ. ನನ್ನ ಸಹೋದ್ಯೋಗಿ ಗೀತಾಳಂತೆ ಮದುವೆಯಾದರೂ ಮಾನಸಿಕವಾಗಿ ಏಕಾಂಗಿಯಾಗಿರುವುದಕ್ಕಿಂತ, ಆಗದೆ ನಾನು ನಾನಾಗಿಯೇ ಇರುವುದು ನನಗೆ ಖುಷಿ ಕೊಟ್ಟಿದೆ. ನಾನು ಬುದ್ಧಿವಂತೆ, ಗುರಿಯತ್ತ ಮುನ್ನುಗ್ಗುತ್ತಿರುವ ಮತ್ತು ನನ್ನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುವಷ್ಟು ವಿವೇಚನೆ ಹೊಂದಿರುವ, ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದಿಟ್ಟ ಮಹಿಳೆ. ನಾಚಿಕೆ, ಮುಜುಗರ ಹತ್ತಿರಕ್ಕೂ ಸುಳಿಯವು. ಇದೇ ನನ್ನ ಯಶಸ್ಸಿನ ಗುಟ್ಟು ಕೂಡ. ಇಲ್ಲಿ ನಾನು ನಾನಾಗಿದ್ದೇನೆ. ಇದು ನನ್ನೊಳಗಿನ ಆತ್ಮಿವಿಶ್ವಾಸವನ್ನು ಹೆಚ್ಚಿಸಿದೆ. ನನ್ನನ್ನು ನಾನಿರುವ ಹಾಗೆ ಯಾರೂ ಸ್ವೀಕರಿಸುವ ಅಗತ್ಯ ಇಲ್ಲ. ಯಾರನ್ನೂ ಮೆಚ್ಚಿಸಬೇಕೆಂದು ಸುಳ್ಳು ಹೇಳುವ ಅಗತ್ಯ ಇಲ್ಲ. ಬೇಡದ ಹೊಂದಾಣಿಕೆಯ ಗೋಜಲು ಇಲ್ಲ. ನಾನು ಪರಮ ಸುಖಿ ಎಂದರೆ ನೀವು ನಂಬಲೇಬೇಕು.

ಜಮುನಾ ರಾಣಿ ಎಚ್.ಎಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.