ದೋಣಿ ಚಾವಣಿ
ಕೇರಳ ನಿಸರ್ಗ ಸೌಂದರ್ಯ ಮೈವೆತ್ತ ನಾಡು. ಹಸಿರಿನ ಭತ್ತದ ಗದ್ದೆಗಳು, ನೀಲಾಕಾಶ...

ಕೇರಳ ನಿಸರ್ಗ ಸೌಂದರ್ಯ ಮೈವೆತ್ತ ನಾಡು. ಹಸಿರಿನ ಭತ್ತದ ಗದ್ದೆಗಳು, ನೀಲಾಕಾಶ, ದಟ್ಟ ಕಾಡುಗಳು, ತೆಂಗಿನ ತೋಟಗಳನ್ನು ನೋಡುತ್ತ ದೋಣಿ ಮನೆಯೊಳಗೆ ತೇಲುವ ವಿಹಾರ ನಿಜಕ್ಕೂ ಆಪ್ಯಾಯಮಾನ. ಬಹುಹಿಂದೆ ಕೇರಳದಲ್ಲಿ ಅಕ್ಕಿ, ಉಪ್ಪು ಇತ್ಯಾದಿಗಳನ್ನು ಮಳೆಗಾಲದಲ್ಲಿ ಬೇರೆಡೆಗೆ ಸಾಗಿಸಲು ದೋಣಿಗಳಿಗೆ ಕೂತ್ತು ಅಂದರೆ ಹಗ್ಗವನ್ನು ಬಳಸಿ ಚಾವಣಿ ಮಾಡುತ್ತಿದ್ದರು. ಚಾವಣಿಯಿರುವ ದೋಣಿಗಳಿಗೆ 'ಕೂತ್ತುವೆಲ್ಲಮ್' ಎಂದು ಕರೆಯುತ್ತಿದ್ದರು. ಈಗ ವಿಹಾರಕ್ಕೆ ಬಳಸುವ ದೋಣಿಗಳಿಗೂ ಅದೇ ಹೆಸರಿದೆ. ಆದರೆ ಅತ್ಯಾಧುನಿಕ ಮಹಲುಗಳನ್ನೂ ನಾಚಿಸುವಂತೆ ಈ ದೋಣಿಗಳನ್ನು ಸುಂದರವಾದ ಮನೆಯನ್ನಾಗಿ ಪರಿವರ್ತಿಸಲಾಗುತ್ತದೆ. ಮರದ ಹಲಗೆ, ಹಗ್ಗ ಇತ್ಯಾದಿಗಳನ್ನು ಬಳಸಿ ನಿರ್ಮಾಣವಾಗುವ ದೋಣಿ ಮನೆಗಳು ವರ್ಣರಂಜಿತವಾಗಿದ್ದು ಚಿತ್ತಾಕರ್ಷಕವಾಗಿವೆ. ಹತ್ತು ಅಡಿಯಿಂದ ಎಂಬತ್ತು ಅಡಿವರೆಗೆ ಉದ್ದವಿರುತ್ತವೆ.
ಕೇರಳದ ಕೊಟ್ಟಾಯಂ, ಕೊಲ್ಲಂಗಳ ಗ್ರಾಮೀಣ ಭಾಗಗಳ ವೆಂಬನಾಡ್ ಸರೋವರ, ಅಲೆಪ್ಪಿ, ಕುಮರಕೋವಲ್, ತೊಟ್ಟಪ್ಪಲ್ಲಿಗಳ ಹಿನ್ನೀರು ಮತ್ತು ಪತಿರಮನ್ನಲ್ ಸಮುದ್ರದಲ್ಲಿ ದೋಣಿ ಮನೆಗಳ ವಿಹಾರದ ಸುಖ ಅನುಭವಿಸಬಹುದು. ಸಣ್ಣ ಮನೆಗಳು ಕೇವಲ ಗಂಡ ಹೆಂಡತಿಯ ಹನಿಮೂನ್ ಯಾತ್ರೆಗೆ ಸಿಗುತ್ತದೆ. ಮಕ್ಕಳು ಮತ್ತು ಇನ್ನಿತರರಿದ್ದರೆ ಮಹಡಿಯೂ ಇರುವ ದೊಡ್ಡ ಮನೆಗಳ ದೋಣಿಗಳೂ ಇಲ್ಲಿವೆ. 3 ಕೊಠಡಿಗಳು, ಸಭಾಂಗಣ, ಡೈನಿಂಗ್ ಹಾಲ್, ಅಡುಗೆ ಕೋಣೆ, ಬೆಡ್ರೂಮ್, ಸ್ನಾನ ಮತ್ತು ಶೌಚಗೃಹ ಎಲ್ಲವೂ ಇದರೊಳಗೆ ಆಧುನಿಕ ಮನೆಗಳನ್ನು ನಾಚಿಸುವಂತೆ ನಿರ್ಮಾಣವಾಗಿವೆ. ಹವಾನಿಯಂತ್ರಿತ ಸೌಲಭ್ಯವೂ ಉಂಟು. ಇಷ್ಟವಿರುವ ಆಹಾರವನ್ನು ನಾವೇ ಒಯ್ಯಬಹುದು.
ದೋಣಿ ಮನೆಗಳಲ್ಲಿ ಆಧುನಿಕ ಸೌಕರ್ಯಗಳಿಗೆ ಕೊರತೆಯಿಲ್ಲ. ಟಿವಿ ಅಂತಾರ್ಜಾಲ, ಗ್ರಂಥಾಲಯ, ಮನರಂಜನೆಯ ವ್ಯವಸ್ಥೆಯಿದೆ. ಮಲಗುವ ಮನೆ ರೋಮ್ಯಾಂಟಿಕ್ ಆಗಿದ್ದು ಗೋಡೆಗಳಲ್ಲಿ ವರ್ಣಚಿತ್ರಗಳಿವೆ. ಭದ್ರವಾದ ಗೋಡೆ, ಬಾಗಿಲುಗಳಿವೆ. ಯಾಂತ್ರೀಕೃತವಾಗಿ ಚಲಿಸುವ ಈ ತೇಲುವ ಕುಟೀರಗಳು ದಿನದಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಸೇರಿದಂತೆ ಐದು ಗಂಟೆ ಮಾತ್ರ ಸಂಚರಿಸಿ ರಾತ್ರಿ ದಡದಲ್ಲಿ ತಂಗುತ್ತವೆ. ಬಾಡಿಗೆಗೆ ಪಡೆದವರು ಅದರೊಳಗಡೆ ಮಲಗಬಹುದು. ಅಂತರಾಷ್ಟ್ರೀಯ ಪ್ರವಾಸಿಗರನ್ನೂ ಆಕರ್ಷಿಸುವ ಈ ಮೋಜಿನ ಆರಾಮದಾಯಕ ದೋಣಿಮನೆ ನವದಂಪತಿಗೆ ಪುನರ್ಯೌವನ ನೀಡುವ ಹನಿಮೂನ್ ವಿಹಾರಕ್ಕೆ ಹೆಚ್ಚು ಜನಪ್ರಿಯವಾಗಿದೆ. ಆರು ದಿನಗಳಿಗೆ ಬಾಡಿಗೆ ಎಂಟರಿಂದ ಹತ್ತು ಸಾವಿರ ರುಪಾಯಿ ತನಕ ಅತಿಥಿಯ ಆದ್ಯತೆಗೆ ತಕ್ಕ ಹಾಗಿದ್ದು ಕಡಿಮೆ ಸೌಲಭ್ಯದ ಸುಲಭ ಮನೆಗಳು ಕೂಡ ಇವೆ.
-ಪ.ರಾಮಕೃಷ್ಣ ಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


