ಮಹಿಳೆ-ಮನೆ-ಬದುಕು

ಸಂಗಾತಿಗೆ ಸಾಥ್

ಸಂಗಾತಿಗೆ ಸಾಥ್
Published On :

ದಾಮಿನಿ- ಧನಂಜಯ ಪ್ರೀತಿಸಿ ಮದುವೆ ಆದವರು. ಹುಡುಗನ ಮನೆಯವರೂ ಸಂತೋಷದಿಂದಲೇ ಒಪ್ಪಿ ಮದುವೆ ಮಾಡಿದ್ದರು. ಆಗಾಗ ಅತ್ತೆ ಓರಗಿತ್ತಿಯರ ಉಪಟಳವಿದ್ದರೂ, ಗಂಡನ ಪ್ರೀತಿಯಲ್ಲಿ ಅದನ್ನೆಲ್ಲ ಮರೆಯುತ್ತಿದ್ದಳು ದಾಮಿನಿ. ಚಿಕ್ಕಂದಿನಿಂದಲೂ ಶಾಸ್ತ್ರೀಯ ನೃತ್ಯದಲ್ಲಿ ಆಕೆಗೆ ಎಲ್ಲಿಲ್ಲದ ಆಸಕ್ತಿ. ಮದುವೆಗೆ ಮುಂಚೆ ಅನೇಕ ಪ್ರದರ್ಶನಗಳನ್ನೂ ನೀಡಿದ್ದಳು. ಧನಂಜಯನೂ ತನ್ನನ್ನು ವೇದಿಕೆಯ ಮೇಲೆ ನೋಡಿಯೇ ಮೆಚ್ಚಿ ಮದುವೆಯಾದದ್ದು ಎಂದು ಸದಾ ಹೇಳುತ್ತಿರುತ್ತಾಳೆ. ಆದರೆ, ತನ್ನ ಆಸಕ್ತಿ ಮದುವೆಯ ನಂತರ ಕಳೆದುಹೋಗಬಹುದೆಂದು ಆಕೆ ಕನಸು ಮನಸಿನಲ್ಲೂ ಎಣಿಸಿರಲಿಲ್ಲ.
ಮದುವೆಯ ನಂತರ ತನ್ನ ಹೆಂಡತಿ ಪ್ರದರ್ಶನದ ವಸ್ತುವಾಗಬಾರದೆಂಬುದು ಧನಂಜಯನ ಧೋರಣೆ. ಆದರೆ ದಾಮಿನಿಯ ಗೊಂದಲವೇನೆಂದರೆ, ತನ್ನ ಗಂಡನಿಗೆ ತನ್ನ ಮೇಲಿರುವುದು ಅತಿಯಾದ ಪ್ರೀತಿಯೋ, ಹೆಂಡತಿಯ ಸೌಂದರ್ಯ ತನಗೆ ಮಾತ್ರ ಸೀಮಿತವೆಂಬ ಸ್ವಾರ್ಥವೋ ಅಥವಾ ಆಕೆ ತನ್ನ ಪ್ರತಿಭೆ, ಸಾಮರ್ಥ್ಯಗಳಿಂದ ತನಗಿಂತ ಹೆಚ್ಚು ಹಣ, ಕೀರ್ತಿ ಗಳಿಸಿಬಿಡುತ್ತಾಳೆಂದೋ. ಪ್ರೀತಿಸುವಾಗ ಅವಳಿಗೆ ಗಂಡನ ಈ ಬುದ್ಧಿಯ ಅರಿವಿತ್ತೋ ಇಲ್ಲವೋ ಅಥವಾ ಅರಿವಿಗೆ ಬಂದಿದ್ದರೂ ತನ್ನ ಆಸಕ್ತಿ, ಪ್ರತಿಭೆಗಳನ್ನು ಆತನ ಪ್ರೀತಿಗಾಗಿ ಬಲಿಕೊಟ್ಟಳೋ ಅವಳಿಗೇ ಖಚಿತವಾಗುತ್ತಿಲ್ಲ.
ಹರಿ ಮತ್ತು ಲಕ್ಷ್ಮಿಯದ್ದು. ಅರೇಂಜ್ಡ್ ಮದುವೆಯಾಗಿದ್ದರೂ ಇವರದು ಜನುಮದ ಜೋಡಿ. ಲಕ್ಷ್ಮಿಯ ಆಸಕ್ತಿಗಳ ಬಗ್ಗೆ ಹರಿಗೆ ಎಲ್ಲಿಲ್ಲದ ಆಸ್ಥೆ. ಆಕೆಯ ಓದುವ ಹವ್ಯಾಸಕ್ಕೆ ಮನೆಯಲ್ಲಿ ಸಣ್ಣ ಗ್ರಂಥಾಲಯವನ್ನೇ ಸ್ಥಾಪಿಸಿದ್ದ. ದೂರದೂರುಗಳನ್ನು ಸುತ್ತುವುದು, ದೇಗುಲಗಳಿಗೆ ಭೇಟಿ ನೀಡಿ ಸ್ಥಳಮಹಾತ್ಮೆ ಅರಿಯುವುದು ಲಕ್ಷ್ಮಿಯ ಮತ್ತೊಂದು ಹವ್ಯಾಸ. ಹರಿಗೆ ಅದರಲ್ಲಿ ಆಸಕ್ತಿ ಇಲ್ಲದಿದ್ದರೂ ಆಕೆಯನ್ನು ಕರೆದೊಯ್ಯುತ್ತಾನೆ. ಲಕ್ಷ್ಮಿಯೂ ಗಂಡನ ಆಸಕ್ತಿಗಳನ್ನು ಪ್ರೋತ್ಸಾಹಿಸುತ್ತಾಳೆ. ಪರಸ್ಪರ ಆಸಕ್ತಿ, ಪ್ರತಿಭೆ ಹವ್ಯಾಸಗಳನ್ನು ಉತ್ತೇಜಿಸಿ ಗೌರವಿಸುತ್ತಾರೆ.
ಮೋತೆಕ್‌ಪಲ್ಲಿಯ ಮರಾಠಿ ಕುಟುಂಬದ ಸದಸ್ಯರಿಗೆ ಹಾಡುವವರನ್ನು ಕಂಡರೆ ತುಂಬಾ ಪ್ರೀತಿ, ಗೌರವ.  ಮಗನಿಗಾಗಿ ಹಾಡಲು ಬರುವ ಯುವತಿಯನ್ನೇ ಆ ತಾಯಿ ಹುಡುಕಿ ಮನೆ ತುಂಬಿಸಿಕೊಂಡರು. ಮದುವೆಯ ನಂತರವೂ ಆಕೆಯ ದಿನಚರಿಯಲ್ಲಿ ಹಾಡಿನ ಅಭ್ಯಾಸಕ್ಕೆ ಅವಕಾಶವಷ್ಟೇ ಅಲ್ಲ, ಸಮಯವನ್ನೂ ದೊರಕಿಸುತ್ತಾರೆ ಮನೆಯ ಸದಸ್ಯರು. ಈಗಲೂ ಆಕೆಯ ಹಾಡುಗಳನ್ನು ಕುಟುಂಬದ ಸದಸ್ಯರು ತನ್ಮಯರಾಗಿ ಕೇಳುವುದಷ್ಟೇ ಅಲ್ಲ, ಆರ್ಕೆಸ್ಟ್ರಾ, ಗಣಪತಿ ಉತ್ಸವ, ವಿವಿಧ ಕಾರ್ಯಕ್ರಮಗಳಲ್ಲಿ ಆಕೆಗೆ ಹಾಡಲು ಪ್ರೋತ್ಸಾಹಿಸುತ್ತಾರೆ.
ಬಿಂದು ಮತ್ತು ಸಾಗರ್ ನಿಶ್ಚಿತಾರ್ಥದ ದಿನದಿಂದಲೇ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಮದುವೆಯ ನಂತರ ಬಿಂದುವಿನ ಅರಿವಿಗೆ ಬಂದ ವಿಷಯ ಅವಳನ್ನು ತಲ್ಲಣಗೊಳಿಸಿತು. ಅದೇನೆಂದರೆ ತನ್ನ ಗಂಡ ಯಾವ ಕೆಲಸವನ್ನೂ ಆರು ತಿಂಗಳಿಗಿಂತ ಹೆಚ್ಚು ದಿನ ಮುಂದುವರಿಸಲಾರ ಎಂಬುದು. ಹೊರಗೆ ಹೋಗಿ ದುಡಿಯುವುದೇ ಆತನಿಗೊಂದು ಸವಾಲು. ಅವಳಿಗೆ ಆತನ ನಳಪಾಕ ಅಚ್ಚರಿ ಮೂಡಿಸಿತ್ತು. ಹೊರಗೆ ಹೋಗಿ ದುಡಿಯಲು ಸಾಮರ್ಥ್ಯವಿಲ್ಲದ ತನ್ನ ಗಂಡನಿಗೆ ಪಾಕಶಾಸ್ತ್ರ ಸಿದ್ಧಿಸಿತ್ತು. ಆದರೆ, ಜನರ ಮಾತುಗಳಿಗೆ ಹೆದರಿ ಸುಮ್ಮನಿದ್ದಳು. ಮನೆಯಲ್ಲಿ ಸಾಗರ್‌ನ ಅಮ್ಮ ಹಾಗೂ ತಮ್ಮ ಆತನ ದೌರ್ಬಲ್ಯವನ್ನು ಯಾವಾಗಲೂ ಹೀಗಳೆಯುತ್ತಿದ್ದರು. ಆತನ ಪಾಕವನ್ನು ಎಲ್ಲರೂ ಮೆಚ್ಚಿ, ತಿಂದರೂ ಆತನ ಈ ಪ್ರಾವೀಣ್ಯವನ್ನು ಬಿಂದುವಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಕಡೆಗೊಮ್ಮೆ ಸ್ನೇಹಿತೆಯ ಸಲಹೆಯಂತೆ ಗಂಡನಿಗೊಂದು ನೈಟ್ ಕ್ಯಾಂಟೀನ್ ಮಾಡಿಕೊಟ್ಟಳು. ಈಗ ಇಬ್ಬರೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಸಂಗಾತಿಗಳಷ್ಟೇ ಈ ರೀತಿಯ ತಪ್ಪುಗಳೆಸಗುತ್ತಾರೆ ಎಂದಲ್ಲ. ಕೆಲವೊಮ್ಮೆ ತಾಯಿಯೇ ತನ್ನ ಮಕ್ಕಳ ಸಾಮರ್ಥ್ಯವನ್ನು ಗುರುತಿಸುವಲ್ಲಿ ಎಡವುತ್ತಾಳೆ. ಕೆಲವೊಮ್ಮೆ ಹೆಂಡತಿಯೂ ಗಂಡನ ಪ್ರತಿಭೆಯನ್ನು ಗುರುತಿಸದೆ ಇರಬಹುದು. ಇದರಿಂದ ಇಬ್ಬರೂ, ಕೆಲವೊಮ್ಮೆ ಕುಟುಂಬವೂ ಕಷ್ಟಕ್ಕೆ ಗುರಿಯಾಗಬಹುದು.


-ಶ್ವೇತಾ ಎಂ.ಪಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.