ಆಲ್ರೌಂಡರ್ ಅಜ್ಜಿ

ಅಜ್ಜಿಯರೆಂದರೆ ಕಿಂಚಿತ್ತೂ ಕೆಲಸ ಮಾಡುವವರಲ್ಲ. ಒಂದೊತ್ತು ಊಟ ಹಾಕಿದರೆ ಸಾಕು ಮೂಲೆಯಲ್ಲಿ ಬಿದ್ದಿರುತ್ತಾರೆ ಎಂಬ ಭಾವನೆ ಹೊಂದಿದವರೇ ಜಾಸ್ತಿ. ಅದರಲ್ಲೂ ನಗರ ಪ್ರದೇಶಗಳಲ್ಲಿ ಅಜ್ಜಿಯರು ಎಂದರೆ ವೃದ್ಧಾಶ್ರಮಗಳಲ್ಲಿ ವಾಸಿಸುತ್ತಾರೆ ಎಂದೇ ಮಕ್ಕಳ ಅಭಿಪ್ರಾಯ. ಆದರೆ ಈ ಅಜ್ಜಿ ತನ್ನ ಹವ್ಯಾಸವನ್ನೇ ಕಲೆಯನ್ನಾಗಿಸಿಕೊಂಡು, ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾಳೆ.
ಹಾಸಿಗೆ ಹೊಲಿಯುವ ಕಲೆ
ಇಂದಿನ ಮಹಿಳೆಯರು ಕೌದಿ (ಹಾಸಿಗೆ) ಹೊಲೆಯುವುದೇ ಅಪರೂಪ. ಯಾಕೆ ಸುಮ್ಮನೆ ಕೈ, ಕಾಲು ನೋವು ಮಾಡಿಕೊಂಡು ಹೊಲಿಯಬೇಕು. 50 ರು. ಕೊಟ್ಟರೆ ದರ್ಜಿ ಹೊಲೀತಾನೆ ಅನ್ನೋರೇ ಜಾಸ್ತಿ. ಆದರೆ ಈ ಅಜ್ಜಿ ಮಾತ್ರ ಇಂಥ ಆಲೋಚನೆಗಳಿಗೆ ತದ್ವಿರುದ್ಧ. ಇವರು ಇದುವರೆಗೆ 50-70 ಕೌದಿಗಳನ್ನು ಹೊಲಿದಿದ್ದು, ಅದರಲ್ಲಿ ವಿಶಿಷ್ಟ ವಿನ್ಯಾಸದೊಂದಿಗೆ ಸಾಕು ಪ್ರಾಣಿ-ಪಕ್ಷಿಗಳ, ಬಸವಣ್ಣ, ಗಣಪತಿ, ಪರಮಾತ್ಮ, ಲಿಂಗ, ಪಾರ್ವತಿ, ಹನುಮಾನರ ಚಿತ್ರಗಳನ್ನು ಕೌದಿಯಲ್ಲಿ ವಿಭಿನ್ನವಾಗಿ ಹೆಣೆದಿದ್ದಾರೆ. ಅಷ್ಟೇ ಅಲ್ಲ ಬಿಸ್ಕತ್ತು, ಹಣಗಿಮೂಲಿ, ಸಾಧ, ಪಗಡಿಹಚ್ಚಿ, ಚತುರ್ಭುಜ ನಾನಾ ವಿನ್ಯಾಸದ ಕೌದಿ ನೇಯ್ದಿದ್ದಾರೆ.
ಶಾಲು ತಯಾರಿಕೆ
ಲಕ್ಷ್ಮೀಬಾಯಿ ಬೆಚ್ಚನೆಯ ಹೊದಿಕೆಯ ಶಾಲುಗಳ ನೇಯ್ಗೆಯನ್ನು ಕರಗತವಾಗಿಸಿಕೊಂಡಿದ್ದಾರೆ. ಇವರು ಒಂದೇ ಶಾಲಿನಲ್ಲಿ ಒಂಟೆ, ಸಾರಂಗ, ಗಿಳಿ, ಕುದುರೆ, ಲಿಂಗ, ಬಾತುಕೋಳಿ, ಹನುಮಾನ್, ನವಿಲು, ಆಕಳು, ಸಿಂಹ, ದೇವಸ್ಥಾನದ ಚಿತ್ರಗಳನ್ನು ನೇಯ್ದಿದ್ದಾರೆ. ಈ ಶಾಲುಗಳನ್ನು ಶ್ರೀ ಸತ್ಯನಾರಾಯಣ ಕಥೆ, ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಹೊದಿಕೆಯಾಗಿಯೂ ಬಳಸುತ್ತಾರೆ.
ಬನಿಯಾನ್ ನೇಯ್ಗೆ
ಪುರುಷರ ಬನಿಯನ್ನುಗಳನ್ನೂ ಕೌದಿಯ ದಾರದಿಂದಲೇ ಹೆಣೆಯುತ್ತಾರೆ. ಇಲ್ಲಿಯವರೆಗೂ ಆರು ಜೋಡಿ ಬನಿಯನ್ನುಗಳನ್ನು ಹೆಣೆದಿದ್ದಾರೆ. 'ಹೊರಗಡೆ ಎರಡು ಬನಿಯನ್ ಖರೀದಿಸಬೇಕಾದರೆ 100 ರಿಂದ 120 ರು. ಆಗುತ್ತದೆ. ಆದರೆ ದಾರದಿಂದ ನೇಯುವುದರಿಂದ 80 ರು.ಗಳಲ್ಲಿ 2 ಬನಿಯನ್ ತಯಾರಿಸಬಹುದು. ಇದರಿಂದ 40 ರು.ಗಳನ್ನು ಉಳಿಸಬಹುದು. ಅಷ್ಟೇ ಅಲ್ಲ, ಇವು 2 ವರ್ಷ ಬಾಳಿಕೆ ಬರುತ್ತವೆ. ನನ್ನ ಮೊಮ್ಮಗನಿಗೂ ಇದೇ ಬನಿಯನ್ ಹಾಕಿದ್ದೇನೆ' ಅಂತಾರೆ ಲಕ್ಷ್ಮಿಯಜ್ಜಿ.
ಅದ್ಭುತ ಹಾಡುಗಾತಿ
ಸುಮಾರು 200ಕ್ಕಿಂತಲೂ ಹೆಚ್ಚು ಹಾಡುಗಳು ಇವರ ನಾಲಗೆ ಮೇಲಿವೆ. ಸೋಬಾನೆ ಪದ, ಮಂಗಳಾರತಿ, ಭಜನೆ ಪದ, ಭಾವಗೀತೆಗಳು, ಜನಪದ ಹಾಡುಗಳನ್ನು ತನ್ನದೇ ಧಾಟಿಯಲ್ಲಿ ಹಾಡಿ ರಂಜಿಸುತ್ತಾರೆ. ರಾಮ- ಲಕ್ಷ್ಮಣ, ರಾಮಾಯಣ, ಮಹಾಭಾರತ, ದ್ರೌಪದಿ, ಲವಕುಶ, ಹೇಮರೆಡ್ಡಿ ಮಲ್ಲಮ್ಮ, ಸಿದ್ರಾಮೇಶ್ವರ, ಪಾಂಡುರಂಗ, ಶ್ರೀಶೈಲ ಮಲ್ಲಿಕಾರ್ಜುನನ ಜೀವನ ಚರಿತ್ರೆಯನ್ನೂ ಹಾಡುಗಳಲ್ಲಿ ಹಿಡಿದಿಟ್ಟಿದ್ದಾರೆ. ಸಂದರ್ಭ ಬಂದರೆ ಕುಳಿತಲ್ಲೇ ಕಥೆಯನ್ನು ಹಾಡನ್ನಾಗಿ ಪರಿವರ್ತಿಸುವ ಚಾಣಾಕ್ಷತೆ ಇವರಲ್ಲಿದೆ.ಟಿ
-ಅವಿನಾಶ್ ಎಸ್. ಬೋರಂಚಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


