ಮೈಲಿಗೆ ಮನಸ್ಸು

ಮಾಗಿಯ ಚಳಿಯಲಿ ಮೈತುಂಬಾ ಹೊದೆಯಲು ಸರಿಯಾಗಿ ಹೊದಿಕೆಯೂ ಇಲ್ಲ. ಹರಿದು ತ್ಯಾಪೆ ಹಾಕಿದ ಅಮ್ಮನ ಸೀರೆ ಹೊದ್ದು ಹನುಮಂತ ದೇಗುಲಕ್ಕೆ ಹೋದ. ಧನುರ್ಮಾಸಕ್ಕೆಂದು ಕೊಡುವ ಹಿಡಿ ಹುಗ್ಗಿ ಅನ್ನದ ಪ್ರಸಾದಕ್ಕೆಂದು ಬೆಳ್ಳಂಬೆಳಗ್ಗೆ ಗಡಗಡ ಚಳಿಯಲ್ಲಿ ಯಾವಾಗ ಪೂಜೆ ಮುಗಿಯುತ್ತದೆ ಎಂದು ಕಾದು ಕುಳಿತಿದ್ದ. ಅವನನ್ನು ಕಂಡ ಪೂಜಾರಿಗೆ ತಪ್ಪದೆ ದಿನಾ ಬರುವ ಅತಿಥಿಯಿಂದ ಹಿಡಿ ಅನ್ನ ಕಡಿಮೆಯಾಗುತ್ತಿದೆ ಎನ್ನುವ ಅಸಹನೆ. ಅದೆಷ್ಟೋ ದಿನಗಳಿಂದ ಸ್ನಾನ ಮಾಡದೆ ಬಟ್ಟೆ ಒಗೆಯದೆ ಇದ್ದ ಹುಡುಗ ಕುರಿತು ಅಸಡ್ಡೆ. ಹುಡುಗನ ಮೈಯಿಂದ ಬರುತ್ತಿದ್ದ ವಾಸನೆಗೆ ಮುಖ ಸಿಂಡರಿಸಿಕೊಂಡು ಚಾಚಿದ ಎರಡೂ ಕೈಗೆ ಹಿಡಿ ಅನ್ನ ಹಾಕಿದ. 'ದೂರ ನಿಲ್ಲೋ.. ದಿನಾ ಹೇಳಿ ಹೇಳಿ ನನಗೂ ಸಾಕಾಗಿ ಹೋಗಿದೆ. ನನ್ನ ಮೈಲಿಗೆ ಮಾಡಬೇಕೆಂದು ಹೊಂಚು ಹಾಕುತ್ತಲೇ ಇದ್ದೀಯ? ಮುಂಡೇದೆ, ನಾಳೆಯಿಂದ ನನ್ನಿಂದ ಮಾರು ದೂರ ನಿಲ್ಲದೆ ಹೋದರೆ ಮಾರಿ ಮೇಲೆ ಬಿಸಿಬಿಸಿ ಹುಗ್ಗಿ ಸುರಿದು ಬಿಡುತ್ತೀನೆ!' ಎಂದು ಗದರಿಕೆಯ ಜೊತೆಗೆ. ತನಗೆ ಸಿಕ್ಕ ಹಿಡಿ ಅನ್ನದಲಿ ರೋಗಗ್ರಸ್ತ ನಾಯಿಗೆ ಪಾಲು ನೀಡಲು ಮರೆಯಲಿಲ್ಲ. ನಾಯಿಯ ಮೈದಡವುತ್ತಾ 'ನನಗಾಗಿಯೇ ಕಾದಿದ್ದಾ? ಏನೂ ತಿನ್ನಲು ಸಿಕ್ಕಿಲ್ಲವಾ? ಮೈಮೇಲಿನ ಗಾಯಗಳು ನೋಯುತ್ತಿವೆಯಾ?' ಎಂದು ಮಾತು ಬಾರದ ನಾಯಿಯ ಹತ್ತಿರವೂ ತನ್ನ ಕಾಳಜಿ ವ್ಯಕ್ತ ಪಡಿಸುತ್ತಿದ್ದ.
ಹೆಂಡತಿಯಿಂದ ಬೇಕಾದಷ್ಟು ಸುಖ ಸಿಗುತ್ತಿಲ್ಲ ಎಂದು ವೇಶ್ಯೆಯರ ಚಟಕ್ಕೆ ಬಿದ್ದಿದ್ದ ಗಂಡ. ವಾಸಿಯಾಗದ ಕಾಯಿಲೆಗೆ ತುತ್ತಾದ. ಕೂಡಿಟ್ಟ ಆಸ್ತಿ ಮಾರಿದರೂ ಚಿಕಿತ್ಸೆಗೆ ಹಣ ಸಾಕಾಗಲಿಲ್ಲ. ಗಂಡನಿಗೆ ಚಿಕಿತ್ಸೆಕೊಡಿಸಿ ಉಳಿಸಿಕೊಳ್ಳುವ ಇಂಗಿತಕ್ಕೆ ಬಿದ್ದ ಹೆಂಡತಿ ವೇಶ್ಯೆಯಾದಳು. ನಿತ್ಯವೂ ಹತ್ತಾರು ಜನರು ಅವಳಲ್ಲಿ ಸುಖಿಸುತ್ತಿದ್ದರೂ ಅದನ್ನು ಕಾಯಕದ ಕರ್ತವ್ಯವೆಂದು ಆಕೆ ಭಾವಿಸುತ್ತಿದ್ದಳು.
ಇಪ್ಪತೈದರ ಹುಡುಗ, ಹದಿನಾಲ್ಕು ವರ್ಷದ ತಂಗಿಯ ಸ್ನೇಹಿತೆಯರನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಗಲ್ಲ, ಬೆನ್ನು, ತೋಳು, ತೊಡೆಗಳನ್ನೇ ಮುಟ್ಟಿ ದೇಹದ ಬಯಕೆ ತೀರಿಸಿಕೊಳ್ಳುತ್ತಿದ್ದ. ಬುದ್ಧಿ ಹೇಳಿದ ಅಮ್ಮನಿಗೆ ಅವರೆಲ್ಲ ನನ್ನ ಮಕ್ಕಳ ಸಮಾನ, ತನ್ನ ತಂಗಿಗೂ ಅವರಿಗೂ ಯಾವುದೇ ಅಂತರ ಇಲ್ಲ ಎಂದು ಮಾರುದ್ದ ಭಾಷಣ ಬಿಗಿದಿದ್ದ.
ಮೈಲಿಗೆ ನಿಜಕ್ಕೂ ಮನಸ್ಸಿಗಾ? ಅಥವಾ ಮೈಗಾ? ಮೈಗಾದ ಮೈಲಿಗೆ ವ್ಯಕ್ತಿ ಇರುವ ಸಂದರ್ಭ ಸೃಷ್ಟಿಸುತ್ತದೆ. ಮನಸ್ಸಿಗಾದ ಮೈಲಿಗೆ ವ್ಯಕ್ತಿಯೇ ನೀಚ ಯೋಚನೆ ಮತ್ತು ಕೃತ್ಯಗಳಿಂದ ಸೃಷ್ಟಿಸಿಕೊಂಡದ್ದಾಗಿರುತ್ತದೆ. ಕಷ್ಟ ಕಾಣದ ಹೊಟ್ಟೆ, ನೋವ ಕಾಣದ ಮೈ, ಮುಂದಾಲೋಚನೆ ಇಲ್ಲದ ಬದುಕು, ಎದುರಿಗಿರುವವರ ಪರಿಸ್ಥಿತಿ ಮತ್ತು ಮನಸ್ಥಿತಿ ಅರಿಯದಷ್ಟು ಹುಂಬತನ ವ್ಯಕ್ತಿಯ ಅಂತರಂಗವನ್ನು ಮೈಲಿಗೆ ಮಾಡುತ್ತದೆ. ತೊಳೆಯಲು ಸಾಧ್ಯವಾಗದೆ ಉಳಿಯುವ ಮನಸ್ಸಿನ ಮೈಲಿಗೆ ವ್ಯಕ್ತಿಯನ್ನು ತನ್ನೊಳಗೇ ತಾನು ಮೌಲ್ಯ ಕಳೆದುಕೊಂಡು ಕುಸಿಯುವಂತೆ ಮಾಡುತ್ತದೆ.
ಮನಸ್ಸು- ಮೈ ಎರಡೂ ಒಂದು ನಾಣ್ಯದ ಎರಡು ಮುಖಗಳು. ಇಲ್ಲಿ ಯಾವುದು ತಳ ಸೇರಿದರೂ ನಾಣ್ಯಕ್ಕೇ ಅಪಮಾನ. ನಾಳೆಗಳೂ ಅಪಮೌಲ್ಯ. ಬೇರೆಯವರ ದೃಷ್ಟಿಯಲ್ಲಿ ನಾವು ಹೇಗಿರಬೇಕು? ಅಥವಾ ಅವರಿಗೆ ಕೆಟ್ಟದಾಗಿ ಕಂಡರೆ ನನಗೇನು? ಎಂದು ಯೋಚಿಸುವ ಬದಲು ಬದುಕಿನಲ್ಲಿ ಎಷ್ಟರ ಮಟ್ಟಿಗೆ ಮಾನಸಿಕವಾಗಿ ಉನ್ನತಿ ಅನುಭವಿಸಿದ್ದೇನೆ ಎನ್ನುವುದು ಮುಖ್ಯ. ಒಳಮನಸ್ಸನ್ನು ಇಣುಕಿದರೆ ಅಲ್ಲೆಲ್ಲ ತಲೆ ಎತ್ತಿ ನಡೆಯುತ್ತಿರುವುದೇ ಕಾಣಬೇಕು ಎನ್ನುವ ಆಶಯ ಬಹುಮುಖ್ಯ. ಮನಸ್ಸನ್ನು ಶುದ್ಧಿಯಾಗಿಟ್ಟುಕೊಳ್ಳುವುದು ಜೀವನದ ಅತಿ ಮುಖ್ಯ ಸಾಧನೆಗಳಲ್ಲೊಂದು. ಸೋಪು ಹಾಕಿ ತೊಳೆದರೆ ಹೋಗುವ ಕೊಳೆ ಮೈಗಂಟಿದರೂ ಮನಸ್ಸನು ಗಟ್ಟಿ ಮಾಡಿಕೊಂಡು ಆ ರಾಡಿಯಿಂದ ಹೊರಬರುವ ಪ್ರಯತ್ನ ನಮ್ಮದಾಗಬೇಕು. ಆಗಲೇ ಬದುಕು ಸುಂದರ ಕಾಮನಬಿಲ್ಲು.
-ಜಮುನಾ ರಾಣಿ ಎಚ್.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


