ಮಣ್ಣಿನ ಮನೆ
ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಜನರು ವಾಸಿಸುವುದು ಮಣ್ಣಿನ ಮನೆಗಳಲ್ಲಿ. ಈ ಮನೆಗಳ ನಿರ್ಮಾಣ ...

ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಜನರು ವಾಸಿಸುವುದು ಮಣ್ಣಿನ ಮನೆಗಳಲ್ಲಿ. ಈ ಮನೆಗಳ ನಿರ್ಮಾಣ ಬಹಳ ಹಿಂದಿನಿಂದ ನಡೆದುಬಂದಿದೆ. ಸಹಜವಾಗಿ ಮತ್ತು ಹೆಚ್ಚಿನ ಖರ್ಚಿಲ್ಲದೆ ಮನೆ ನಿರ್ಮಿಸಬಹುದು ಎನ್ನುವ ಕಾರಣಕ್ಕಾಗಿ ಇಂದಿಗೂ ಈ ಮನೆಗಳು ಜೀವಂತ. ಆದರೆ, ಇಂಥ ಮನೆಗಳ ನಿರ್ವಹಣೆಯೂ ಅಷ್ಟೇ ಕಷ್ಟ.
ಜೂನ್‌ನಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಮಳೆಯಿಂದ ಮನೆಗಳನ್ನು ರಕ್ಷಿಸಿಕೊಳ್ಳುವುದು ಆ ಮೂಲಕ ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರ ಜೀವ ರಕ್ಷಿಸುವುದರ ಕುರಿತು ಎಲ್ಲರೂ ಗಮನ ನೀಡಬೇಕಿದೆ. ಈ ಮನೆಗಳು ಬೇಸಿಗೆಯಲ್ಲಿ ಹೆಚ್ಚು ಉಪಯುಕ್ತ. ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳಲು ಸಹಕಾರಿ. ಆದರೆ, ಮಳೆಗಾಲದಲ್ಲಿ ಇವುಗಳು ಇನ್ನುಳಿದ ಎಲ್ಲ ಮನೆಗಳಿಗಿಂತಲೂ ಹೆಚ್ಚಿನ ನಿರ್ವಹಣೆ ಬೇಡುತ್ತವೆ.
ಏನು ಮಾಡಬೇಕು?
ಮಳೆಗಾಲ ಆರಂಭವಾಗುವ ಪೂರ್ವದಲ್ಲೇ ಸಣ್ಣಪುಟ್ಟ ರಿಪೇರಿಗಳಿದ್ದರೆ ಅವುಗಳನ್ನು ಕೂಡಲೇ ಪೂರ್ಣಗೊಳಿಸಿ. ಬೇಸಿಗೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅತಿಯಾದ ಬಿಸಿಲು ಇರುವುದರಿಂದ ಮಣ್ಣಿನ ಮನೆ ಕಟ್ಟಲು ಬಳಸಿದ ಹೆಂಡೆಗಳು (ಇಟ್ಟಿಗೆ) ಸಡಿಲಗೊಳ್ಳುತ್ತವೆ. ಅವುಗಳ ತೇವಾಂಶ ಆವಿಯಾಗುವುದರಿಂದ ಸಹಜವಾಗಿ ಮನೆ ಗೋಡೆಗಳು ಸಡಿಲವಾಗಿರುತ್ತವೆ. ಮಳೆಗಾಲದ ಮುನ್ಸೂಚನೆ ದೊರೆಯುವ ಮೊದಲೇ ಅವುಗಳನ್ನು ಸರಿಪಡಿಸಿ. ಮನೆಯ ಚಾವಣಿಯಲ್ಲೂ ಮಣ್ಣನ್ನೇ ಹಾಕುವುದು ವಾಡಿಕೆ. ಅದಕ್ಕಾಗಿ ಮಾಳಿಗೆಯನ್ನು (ಚಾವಣಿ) ಸಕಾಲದಲ್ಲಿ ಸ್ವಚ್ಛಗೊಳಿಸಿ.
ಮನೆಗಳ ಪ್ರತಿ ಗೋಡೆಯನ್ನೂ ಕಾಲಕಾಲಕ್ಕೆ ಪರಿಶೀಲಿಸಿ, ಅವು ಶಿಥಿಲಗೊಂಡಿದ್ದಲ್ಲಿ ಕೂಡಲೇ ರಿಪೇರಿ ಮಾಡಿ. ಮನೆಗಳ ನಿರ್ಮಾಣದಲ್ಲಿ ಕಟ್ಟಿಗೆಗಳನ್ನು ಬಳಸುವುದರಿಂದ, ಯಾವುದಾದರೂ ಕಟ್ಟಿಗೆಗಳ (ತೊಲೆ) ಸ್ಥಿತಿಗತಿ ವೀಕ್ಷಿಸಲು ಬಡಿಗೆತನ ಮಾಡುವವರಿಗೆ ತಿಳಿಸಿ. ಅಗತ್ಯವಿದ್ದಲ್ಲಿ ಬದಲಾಯಿಸಿ. ಚಾವಣಿಯಲ್ಲಿ ಮಳೆ ನೀರು ಹರಿದು ಹೋಗಲು ಕಲ್ಪಿಸಿರುವ ಪೈಪ್‌ಗಳು (ಹರನಾಳಿಗೆ) ಸ್ವಚ್ಛಗೊಳಿಸಿ, ಅವುಗಳಲ್ಲಿ ಯಾವುದೇ ವಸ್ತುಗಳು ಸಿಕ್ಕಿಹಾಕಿಕೊಳ್ಳದಂತೆ ಗಮನ ನೀಡಿ. ಪ್ರತಿ ಕಡೆಯಿಂದಲೂ ನೀರು ಸರಾಗವಾಗಿ ಹರಿಯುವಂತೆ ಚಾವಣಿಯ ಮಣ್ಣನ್ನು ಸರಿಪಡಿಸಿ. ಮಣ್ಣಿನ ಗೋಡೆಗಳನ್ನು ಮೆತ್ತುವ (ಪ್ಲಾಸ್ಟರ್ ಮಾದರಿ ಕ್ರಮ) ಮೂಲಕ ಗಟ್ಟಿಗೊಳಿಸಿ, ಮೇಲೆ ಸಗಣಿ ಅಥವಾ ಕೆಂಪು ಮಿಶ್ರಿತ ಮಣ್ಣಿನಿಂದ ಸಾರಿಸಿ, ಗೋಡೆ ಮೇಲೆ ಬೀಳುವ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿ. ಇದರಿಂದ ಗೋಡೆ ರಕ್ಷಣೆಯಾಗುತ್ತದೆ.
ಹೆಚ್ಚಿನ ಗಮನ ನೀಡಿ...
ಬಹಳ ವರ್ಷಗಳಿಂದ ಮನೆ ರಿಪೇರಿ ಮಾಡದೆ ಹಾಗೆ ಬಿಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಹಳೇ ಮಡಗಿ (ಮರ) ಮನೆಯಾಗಿದ್ದಲ್ಲಿ ಚಾವಣಿ ಮೇಲಿರುವ ಮಣ್ಣನ್ನು ತೆಗೆದು ಹಾಕಿ. ಅತಿಯಾದ ಮಳೆ ಪ್ರಾರಂಭವಾದಲ್ಲಿ ಮಣ್ಣಿನ ಮನೆಗಳು ಸೋರುವುದು ಸಾಮಾನ್ಯ. ಇದರಿಂದ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳು ಹಾಳಾಗುವ ಸಾಧ್ಯತೆ ಹೆಚ್ಚು. ಮನೆ ಸೋರುವುದರಿಂದ ಚಾವಣಿ ಕುಸಿದು ಜೀವಕ್ಕೂ ಅಪಾಯ ಎದುರಾಗಬಹುದು. ಹೀಗಾಗಿ ಅದರಿಂದ ರಕ್ಷಣೆ ಪಡೆಯಲು ಮನೆಯ ಚಾವಣಿಗೆ ಪೂರ್ತಿಯಾಗಿ ಪ್ಲಾಸ್ಟಿಕ್ ಹೊದಿಸಿ. ಇದರಿಂದ ಸೋರಿಕೆ ತಡೆಗಟ್ಟಬಹುದು. ಮನೆಯ ಸುತ್ತಲೂ ಮಳೆ ಹಾಗೂ ಚರಂಡಿ ನೀರು ನಿಲ್ಲದಂತೆ ಗಮನ ನೀಡಿ. ರಾಜ್ಯದಲ್ಲಿ ಪ್ರತಿವರ್ಷ ಮನೆ ಕುಸಿತದಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಮಣ್ಣಿನ ಮನೆ ಕುಸಿತ ಪ್ರಕರಣಗಳೇ ಹೆಚ್ಚು. ಹೀಗಾಗಿ ಮಳೆಗಾಲ ಪೂರ್ವದಲ್ಲಿಯೇ ಅಗತ್ಯ ಸುರಕ್ಷಾ ಕ್ರಮ ಕೈಗೊಂಡರೆ, ಮಳೆಯನ್ನೂ ಬೆಚ್ಚಗೆ ಆಸ್ವಾದಿಸಬಹುದು. ಜೀವವನ್ನೂ ಉಳಿಸಿಕೊಳ್ಳಬಹುದು.
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


