ಚಿಕ್ಕಾಡೆಯ ತವರಿನ ಸಿರಿ
ತವರು ಮನೆಯನ್ನು ಕೇಂದ್ರವಾಗಿಸಿಕೊಂಡ ಬಹುತೇಕ ಚಿತ್ರಗಳು ಯಶಸ್ಸು ಕಂಡಿವೆ. ತೀರಾ ಸೆಂಟಿಮೆಂಟು, ಅದೇನೋ...

ತವರು ಮನೆಯನ್ನು ಕೇಂದ್ರವಾಗಿಸಿಕೊಂಡ ಬಹುತೇಕ ಚಿತ್ರಗಳು ಯಶಸ್ಸು ಕಂಡಿವೆ. ತೀರಾ ಸೆಂಟಿಮೆಂಟು, ಅದೇನೋ ಅಟ್ಯಾಚ್‌ಮೆಂಟು... ಹೀಗಾಗಿ ಈ ಚಿತ್ರಗಳಲ್ಲಿ ಕಣ್ಣೀರು ಜಾಸ್ತಿ. ಇಂಥ ಚಿತ್ರಗಳಿಗೆ ಸೂಕ್ತ ನಾಯಕಿಯೆಂದರೆ ನಮ್ಮ ನೆಚ್ಚಿನ ನಟಿ ಶ್ರುತಿ.
'ಹೆತ್ತಕರುಳು', 'ತಾಯಿ ಇಲ್ಲದ ತವರು', 'ಕರ್ಪೂರದ ಗೊಂಬೆ' ಚಿತ್ರಗಳ ಸಾಲಿನಲ್ಲೇ ಮೂಡಿಬಂದ 'ತವರಿನ ತೊಟ್ಟಿಲು' ಅನ್ನು ಸಿನಿಪ್ರಿಯರು ಖಂಡಿತಾ ಮರೆಯಲಿಕ್ಕಿಲ್ಲ. ಎಸ್. ನಾರಾಯಣ್ ನಿರ್ದೇಶಿಸಿದ ಈ ಚಿತ್ರ ನಿರ್ಮಾಣಗೊಂಡಿದ್ದು ಎಲ್ಲಿ ಗೊತ್ತೆ? ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಾಡೆಯ ಮನೆಯೊಂದರಲ್ಲಿ.
1965ರಲ್ಲಿ ಕಟ್ಟಿದ, ಚಿಕ್ಕಪುಟ್ಟೇಗೌಡ ಅವರ ಒಡೆತನದಲ್ಲಿರುವ ಈ ಮನೆಯಲ್ಲಿ ಚಿತ್ರೀಕರಣ ನಡೆಯಿತು. ಅದೂ 15 ವರ್ಷಗಳ ಹಿಂದೆ. ಈ ಮನೆಯ ವಿಶೇಷ ಎಂದರೆ ಮುಂಭಾಗದಲ್ಲಿ ಎರಡು ಅಂತಸ್ತಿನ ಮಹಡಿ ಮನೆಯಿದ್ದು, ಹಿಂಭಾಗದಲ್ಲಿ ತೊಟ್ಟಿ ಇರುವುದು.
ಕಲಾತ್ಮಕ ಬೋದಿಗೆ ಕಲ್ಲಿನ ಕಂಬಗಳ ಹಜಾರವಿದೆ. ಕುಸುರಿ ಕೆಲಸದ ಎಲ್ಲ ದ್ವಾರಂಧ್ರಗಳೂ ನಾಲ್ಕು ಅಡಿಗಿಂತ ಎತ್ತರವಿಲ್ಲ. ಗೋಡೆಯ ಮೇಲೆ ಮರದ ಹಲಗೆ ಜೋಡಿಸಿ ಕೃಷಿ ಉತ್ಪನ್ನಗಳ ದಾಸ್ತಾನಿಗೆ ಅಟ್ಟಿಗೆ ನಿರ್ಮಿಸಲಾಗಿದೆ. ವಿಶಾಲವಾದ ದನದ ಕೊಟ್ಟಿಗೆ ಹಾಗೆಯೇ ಕೃಷಿ ಸಲಕರಣೆಗಳ ದಾಸ್ತಾನಿಗೂ ಸುತ್ತಲೂ ಉಪ ಕಟ್ಟಡಗಳಿವೆ.
ಅಲ್ಲದೆ ಈ ಮನೆಯಲ್ಲಿ ಶಶಿಕುಮಾರ್ ಅಭಿನಯನದ 'ಧರ್ಮಪೀಠ', ಎಸ್. ನಾರಾಯಣ್ ನಿರ್ದೇಶನದ ನಿವೃತ್ತ ಕೆಎಎಸ್ ಅಧಿಕಾರಿ ಶಿವರಾಂ ಮತ್ತು ನಟಿ ಸುಧಾರಾಣಿ ಜೋಡಿಯ 'ವಸಂತಮಾಸ' ಚಿತ್ರೀಕರಣ ನಡೆದಿದೆ.
ಇಲ್ಲೇ 'ಕಬಡ್ಡಿ' ಚಿತ್ರದ ಶೂಟಿಂಗ್ ಕೂಡ ಮಾಡಲಾಗಿದೆ. ಮನೆ ಮಾತ್ರವಲ್ಲದೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ಚಿತ್ರಗಳ ಸನ್ನಿವೇಶಗಳು ಹಾಗೂ ಹಾಡುಗಳ ಚಿತ್ರೀಕರಣ ನಡೆಸಲಾಗಿದೆ.
ಕರಾಟೆ ಕಿಂಗ್ ಶಂಕರ್‌ನಾಗ್, ಸಾಹಸಿಂಹ ವಿಷ್ಣುವರ್ಧನ್, ರೆಬೆಲ್‌ಸ್ಟಾರ್ ಅಂಬರೀಷ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಚರಣ್‌ರಾಜ್, ಟೈಗರ್ ಪ್ರಭಾಕರ್, ಶಶಿಕುಮಾರ್, ಉಮಾಶ್ರೀ, ಯಶ್ ಅಭಿನಯದ ಹಲವು ಚಿತ್ರಗಳ ತುಣುಕುಗಳು ಇಲ್ಲೇ ಶೂಟಿಂಗ್ ಕಂಡಿವೆ.
ದಾರಿ ಹೇಗೆ?
ಮಂಡ್ಯದಿಂದ ಪಾಂಡವಪುರಕ್ಕೆ ಹೋಗುವ ಮಾರ್ಗವಾಗಿ 23 ಕಿ.ಮೀ. ಕ್ರಮಿಸಿದರೆ ಚಿಕ್ಕಾಡೆ ಸಿಗುತ್ತದೆ. ಬೆಂಗಳೂರಿನಿಂದ 123 ಕಿ.ಮೀ. ಹಾಗೂ ಮೈಸೂರಿನಿಂದ 32 ಕಿ.ಮೀ. ದೂರದಲ್ಲಿದೆ.
- ಲೇಖನ - ಎಂ.ಅಫ್ರೋಜ್ ಖಾನ್
ಚಿತ್ರಗಳು- ಚನ್ನಮಾದೇಗೌಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


