ಮಹಿಳೆ-ಮನೆ-ಬದುಕು

ಹೊಣೆ ಬರಹ

ಹುಟ್ಟಿ ಕಣ್ತೆರೆದಂದಿನಿಂದಲೇ ಈ ಮಕ್ಕಳು ಕಾರಿನಲ್ಲಿ ಓಡಾಡುತ್ತಿದ್ದಾರೆ. ಸ್ವಿಚ್ ಆನ್ ಮಾಡಿದರೆ ಮನೆತುಂಬಾ ಬೆಳಕು, ತಂಪುತಂಪು ಗಾಳಿ...

ಹೊಣೆ ಬರಹ
Published On :

ಹುಟ್ಟಿ ಕಣ್ತೆರೆದಂದಿನಿಂದಲೇ ಈ ಮಕ್ಕಳು ಕಾರಿನಲ್ಲಿ ಓಡಾಡುತ್ತಿದ್ದಾರೆ. ಸ್ವಿಚ್ ಆನ್ ಮಾಡಿದರೆ ಮನೆತುಂಬಾ ಬೆಳಕು, ತಂಪುತಂಪು ಗಾಳಿ, ಸ್ನಾನಕ್ಕೆ ಬಿಸಿನೀರು. ಮೆತ್ತಗಿನ ಹಾಸಿಗೆ, ತರಹೇವಾರಿ ಡ್ರೆಸ್ಸು, ಒಳ್ಳೆಯ ಚಪ್ಪಲಿ, ಕೈತುಂಬಾ ಚಾಕೊಲೇಟು. ಅಷ್ಟಗಲದ ಟಿವಿಯಲ್ಲಿ ಸದಾ ಕಾರ್ಟೂನು, ಆಟಕ್ಕೆ ಕಂಪ್ಯೂಟರ್. ಸ್ಕೂಲ್ ವ್ಯಾನು ಮನೆಯೆದುರಿಗೇ ಬಂದು ಹಾರ್ನ್ ಮಾಡುತ್ತದೆ. ಇವನ್ನೆಲ್ಲ ನೋಡುತ್ತಿದ್ದರೆ ಕೆಲವೊಮ್ಮೆ ದಿಗಿಲೆನಿಸುವುದಿದೆ.
ಮಕ್ಕಳೇ ಮನೆಯ ಬೆಳಕು. ಅವು ಚಿಲಿಪಿಲಿ ಅನ್ನುತ್ತಾ ಮನೆತುಂಬಾ ಓಡಾಡಿಕೊಂಡಿದ್ದರೆ, ಅದೇ ಮನೆಯ ಸಂಪತ್ತು, ಸಮಾಧಾನ. ಆದರೆ ನನ್ನ ಆತಂಕ ಅವರ ಸಂತೋಷದ ಕುರಿತಾದದ್ದಲ್ಲ. ಈ ಸಂತೋಷದ ನಿಜವಾದ ಬೆಲೆ ಏನು ಎಂಬುದನ್ನು ಅವರಿಗೆ ಅರ್ಥ ಮಾಡಿಸುವ ಬಗೆಗಿನದ್ದು.
ಬೇಕೆಂದಾಗೆಲ್ಲ ಹಾರ್ಲಿಕ್ಸ್, ಬೂಸ್ಟು, ಹಣ್ಣುಹಂಪಲು, ಸವಿಯಾದ ತಿಂಡಿಗಳೆಲ್ಲ ಲಭ್ಯವಿರುವ ಈ ಮಕ್ಕಳಿಗೆ ಬೇಯಿಸಿದ ಗೋಧಿಯೆಂಬ ಫೈವ್‌ಸ್ಟಾರ್ ತಿಂಡಿ, ಪಾತ್ರೆ ತಳದಲ್ಲಿರುವ ಮುನ್ನಾದಿನದ ಸಪ್ಪೆ ಗಂಜಿ, ಕಣ್ಣುಮೂಗಲ್ಲೆಲ್ಲ ಸೊರಸೊರ ಸುರಿಸುವ ಹುಣಸೆ ಹಣ್ಣು-ಉಪ್ಪು-ಮೆಣಸಿನಕಾಯಿ ಗೊಜ್ಜನ್ನು ಅರ್ಥ ಮಾಡಿಸುವುದು ಹೇಗೆ?
ಮನೆಬಾಗಿಲಿನಿಂದ ಸ್ಕೂಲಿಗೆ ವ್ಯಾನಿನಲ್ಲಿ ಓಡಾಡುವ ಈ ಮಕ್ಕಳಿಗೆ ನಿತ್ಯ ಬರಿಗಾಲಿನಲ್ಲಿ ನಾಲ್ಕೈದು ಮೈಲಿ ಕಾಡುಹಾದಿ ಕ್ರಮಿಸಿ ಊರಿನ ಏಕೈಕ ಸರ್ಕಾರಿ ಶಾಲೆಗೆ ಹೋಗುವುದನ್ನು, ಒಪ್ಪೊತ್ತಿನೂಟ ಉಂಡು ವಾರಪೂರ್ತಿ ಸರ್ಕಾರ ದಯಪಾಲಿಸಿದ ಏಕೈಕ ಉಡುಪನ್ನೇ ಏರಿಸಿಕೊಂಡು ಬಂದು ಅಕ್ಕಪಕ್ಕದಲ್ಲಿ ಕೂರುತ್ತಿದ್ದ ಕೃಶದೇಹಿ ಸಹಪಾಠಿಗಳ ಬದುಕನ್ನು, ನೆಲದ ಮೇಲೆ ಕುಕ್ಕರುಗಾಲಿನಲ್ಲಿ ಕುಳಿತು ಸೀಮೆಎಣ್ಣೆ ಬುಡ್ಡಿಯ ಮಿಣಿಮಿಣಿ ಬೆಳಕಿನಲ್ಲಿ ಸರಿರಾತ್ರಿವರೆಗೂ ಓದುತ್ತಿದ್ದುದನ್ನು ಅರ್ಥ ಮಾಡಿಸುವುದು ಹೇಗೆ?
ಬೇಕು ಅನಿಸಿದ್ದನ್ನೆಲ್ಲ ಕೊಡಿಸು ಎಂದು ನಡುಪೇಟೆಯಲ್ಲಿ ಮುಷ್ಕರ ಹೂಡುವ ಈ ಮಕ್ಕಳಿಗೆ ಐದು ಪೈಸೆಯ ಆರೆಂಜ್ ಮಿಠಾಯಿಗೆ ಕಷ್ಟವಿದ್ದ, ಒಂದು ಚಂದಮಾಮಕ್ಕಾಗಿ ತಿಂಗಳುಗಟ್ಟಲೆ ಗೋಗರೆಯಬೇಕಿದ್ದ, ಐದು ರುಪಾಯಿಯ ಪಾಕೆಟ್ ಡಿಕ್ಷನರಿಗಾಗಿ ಇಡೀ ವರ್ಷ ಅಪ್ಪನಿಗೆ ದುಂಬಾಲುಬಿದ್ದ ದಿನಗಳನ್ನು ಅರ್ಥ ಮಾಡಿಸುವುದು ಹೇಗೆ?
ನೀವೀಗ ಕೇಳಬಹುದು- ನಾವು ಅನುಭವಿಸಿದ ಕಷ್ಟಕೋಟಲೆಗಳನ್ನೆಲ್ಲ ನಮ್ಮ ಮಕ್ಕಳೂ ಅನುಭವಿಸಬೇಕೇ? ಅಯ್ಯೋ ಹಾಗಾಗುವುದು ಬೇಡ. ಅಂಥ ದಿನಗಳನ್ನೆಲ್ಲ ಮಕ್ಕಳು ಎಂದೂ ಅನುಭವಿಸದಿರಲಿ. ನನ್ನ ಆತಂಕವಿರುವುದು ಅವರು ಸಂತೋಷವಾಗಿರುವುದರ ಬಗ್ಗೆ ಅಲ್ಲ; ಬದುಕಿನ ನಿಜವಾದ ಸ್ವಾರಸ್ಯದಿಂದ ಅವರನ್ನು ದೂರವಿಟ್ಟಿರುವ ಬಗ್ಗೆ.
ಎಲ್ಲ ಸೌಕರ್ಯಗಳ ನಡುವೆ ಬದುಕುತ್ತಿರುವ ನಮ್ಮ ಮಕ್ಕಳು ಜೋಪಡಿಯೊಳಗಿನ ಬದುಕನ್ನು, ಕಾಲ್ನಡಿಗೆಯ ಆಯಾಸವನ್ನು, ಬಡತನದ ಅವಮಾನಗಳನ್ನು, ನಿತ್ಯದ ಸಂಕಷ್ಟಗಳನ್ನು ಅರಗಿಸಿಕೊಳ್ಳುವುದು ಬಲು ದುಸ್ತರ.
ಇದನ್ನೆಲ್ಲ ಅರ್ಥ ಮಾಡಿಕೊಳ್ಳದ ಬದುಕು ಟೊಳ್ಳೇ ಅಲ್ಲವೇ? ಜೀವನ ನೂರಕ್ಕೆ ನೂರು ಸುಖದ ಸುಪ್ಪತ್ತಿಗೆಯಾಗಿರುವುದು ಸಾಧ್ಯವೇ ಇಲ್ಲ. ಒಂದಲ್ಲ ಒಂದು ಹಂತದಲ್ಲಿ ಕಷ್ಟಗಳಿಗೆ, ದುಃಖ ಅವಮಾನ, ಅಸಹಾಯಕತೆಗಳಿಗೆ ಎದೆಯೊಡ್ಡಲೇಬೇಕು. ಮುಂದೆ ಅಂತಹ ಸನ್ನಿವೇಶಕ್ಕೆ ಮುಖಾಮುಖಿಯಾಗುವ ಸಂದರ್ಭ ಬಂದರೆ ಅದನ್ನು ನಿಭಾಯಿಸುವ ಸ್ಥಿತಪ್ರಜ್ಞತೆ, ಮಾನಸಿಕ ದೃಢತೆ ಅವರಲ್ಲಿದ್ದೀತೇ? 'ಕ್ರಿಟಿಕಲ್‌' ಎನಿಸುವ ಬದುಕಿನ ಕ್ಷಣಗಳಲ್ಲಿ ಅವರು ಕೈಚೆಲ್ಲಿ ಕುಳಿತರೆ, ಸುಲಭವಾಗಿ ನಿಭಾಯಿಸಬಲ್ಲ ಸನ್ನಿವೇಶಗಳಲ್ಲೂ ಅವರು ಸೋತುಬಿಟ್ಟರೆ ಅದಕ್ಕೆ ನಾವೇ ಜವಾಬ್ದಾರರಲ್ಲವೇ?
ನಮ್ಮ ಬೇರುಗಳನ್ನು ಮರೆಯದಿರುವ ಎಚ್ಚರಿಕೆಯ ಜತೆಗೆ ನಮ್ಮ ಜತೆಗಿನ ಬಿಳಲುಗಳನ್ನೂ ಗಟ್ಟಿಯಾಗಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಅಲ್ಲವೇ?

- ಸಿಬಂತಿ ಪದ್ಮನಾಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.