ಹೂ ಮುಟ್ಟದ ಹೆಣ್ಣು
'ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ, ನಾಸಿಕವು ಸಂಪಿಗೆಯಂತೆ ನೀ ನಗಲು ಹೂಬಿರಿದಂತೆ' ಎಂಬ ...

'ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ,
ನಾಸಿಕವು ಸಂಪಿಗೆಯಂತೆ ನೀ ನಗಲು ಹೂಬಿರಿದಂತೆ'
ಎಂಬ ಚಿ. ಉದಯಶಂಕರ್ ಅವರ ಸಾಲುಗಳಲ್ಲಿ ಬಿಂಬಿತವಾಗಿರುವಂತೆ ಹೂವೆಂದರೆ ಹೆಣ್ಣು. ಕವಿ ಕಾಳಿದಾಸನ ಕಾಲದಿಂದ ಕಳೆದ ದಶಕಗಳವರೆಗೆ ಮಲ್ಲಿಗೆ ಮೈಯವಳು ಎನಿಸಿಕೊಳ್ಳುತ್ತಿದ್ದವಳು. ಆದರೆ ಈಗೀಗ ಅಂಥ ಹೋಲಿಕೆಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸ.
ಹುಡುಗಿಯರ ಮುಡಿಗೆ ಹೂಗಳು ಏರಿದರೆ ತಾನೆ? ಈಗಿನ ಹುಡುಗಿಯರೇನು ನೀಲವೇಣಿಯರೇ? ಕೇಶದ ಬಣ್ಣವನ್ನೇ ಬದಲಿಸಿ ಹರವಿ ಬಿಡುವ ಬಿನ್ನಾಣಗಿತ್ತಿಯರು. ಅಂದಿನ ಹೈಕಳೆಲ್ಲ ಹೆಣ್ಮಕ್ಕಳ ಜಾಡನ್ನು ಅವರ ಮನೆಯಲ್ಲಿ ಬೆಳೆಸಿರುವ ಹೂಗಿಡಗಳ ಆಧಾರದಲ್ಲಿ ಕಂಡುಕೊಳ್ಳುತ್ತಿದ್ದರು. ಫ್ಯಾಶನ್ನು, ಡಿಸೈನು ಅಂತ ಶುರುವಾದ ಮೇಲೆ ಹೂಗಳು ಮನ್ನಣೆ ಕಳೆದುಕೊಂಡುಬಿಟ್ಟವು.
'ಯಾವ ನಟಿಗೇನು ಕಮ್ಮಿ? ತುಂಬಾ ಹಾಟ್ ಇದ್ದೀಯ! ಸಖತ್ ಸೆಕ್ಸಿ!' ಎಂದೆಲ್ಲ ಹೊಗಳಿದ ಪಡ್ಡೆ ಹುಡುಗರ ತೆಕ್ಕೆ ಸೇರುವ ಮಾನಿನಿಯರೇ ಹೆಚ್ಚು. ಕವಿಹೃದಯದ ಹುಡುಗರ ಕಿವಿಗೆ ದಾಸವಾಳದ ಎಸಳೆ ಕಾಯಂ. ಹೂವಿಗೂ ಹೆಣ್ಣಿಗೂ ಅನಾದಿ ಕಾಲದಿಂದಲೂ ನಂಟಿದೆ. ಹೂಗಳು ಹೆಣ್ಣಿನ ರೂಪ ವೃದ್ಧಿಸುತ್ತವಂತೆ. ಮನಸ್ಸು ಮನಸ್ಸಿನ ನಡುವಣ ಮಾತು ಬಿತ್ತುವ ಕಲೆ ಹೂವಿಗಿದೆ ಎನ್ನುತ್ತಾರೆ. ಪುಷ್ಪಮೇಳವಾದಾಗೆಲ್ಲ ಹೆಣ್ಮಕ್ಕಳ ಹಿಂಡೇ ನೆರೆದಿರುತ್ತದೆ. ಮುಡಿಗೇರಿಸದೆ ದೂರದಿಂದಲೇ ಹೂಗಳ ಅಂದವನ್ನು ಸವಿಯುವ ವಾಡಿಕೆಗೆ ಪುಷ್ಪ ಮೇಳಗಳು ಸಾಕ್ಷೀಕರಿಸುತ್ತಿವೆ. ವಿಶ್ವವಿಖ್ಯಾತ ಲಾಲ್‌ಬಾಗ್ ಫ್ಲವರ್ ಶೋ ಇದಕ್ಕೆ ಸ್ಪಷ್ಟ ಉದಾಹರಣೆ. ದೇಶ ವಿದೇಶಗಳಿಂದ ಬರುವ ಹೂಗಳಿಂದ ಸಿಂಗಾರಗೊಳ್ಳುವ ಲಾಲ್‌ಬಾಗ್ ಹುಡುಗಿಯರ ನೆಚ್ಚಿನ ಫ್ಲವರ್ ಸ್ಪಾಟ್. ಹುಡುಗರ ಮೆಚ್ಚಿನ ಲವ್ಲಿ ಸ್ಪಾಟ್.
ಸಂಗಾತಿಗೆ ಒಂದು ಮೊಳ ಮಲ್ಲಿಗೆ ಮುಡಿಸುವುದು ಒಂದು ರೀತಿಯಲ್ಲಿ ಸಂಪ್ರದಾಯವೇ ಆಗಿತ್ತು. ಹೂ ಮುಡಿಸುವಾಗ ನಾಚಿ ನೀರಾಗುವ ನೀರೆಯ ಸೌಂದರ್ಯ ಆಕಾಶದೆತ್ತರ. ಸಂಪ್ರದಾಯಬದ್ಧ ಸೀರೆಗಳಿಗೆ ಹೂಗಳಿದ್ದರೇನೆ ಮೆರಗು. ಉದ್ದ ಜಡೆಯ ಹುಡುಗೀರು ಮಲ್ಲಿಗೆ, ಕನಕಾಂಬರ ಮುಡಿದರೆ ಸೊಗಸು.
ಮದುವೆ ಸಮಾರಂಭ, ಕಾಲೇಜಿನಲ್ಲಿ ಆಚರಿಸುವ ಟ್ರಡಿಷನಲ್ ಡೇ ನಲ್ಲಿ ಮಾತ್ರ ಹುಡ್ಗೀರು ಹೂಗಳನ್ನು ಮುಡಿಗೇರಿಸಿಕೊಂಡು ಮಿಂಚುವುದು ಎಂಬುದು ಬೇಸರದ ವಿಚಾರ. 'ಸೇವಂತಿ ಸೇವಂತಿ...', 'ಯಾರೇ ನೀನು ರೋಜಾ ಹೂವೇ...', 'ಜಾಜಿ ಮಲ್ಲಿಗೆ ನೋಡು...' ಹೀಗೆ ಹಲವು ಹಾಡುಗಳನ್ನು ಕೇಳಿದಾಗೆಲ್ಲ ಪುಷ್ಪಗಳ ಮೇಲೆ ಅಕ್ಕರೆ ಉಕ್ಕುತ್ತದೆ. ಇಂದಿನ ದಿನಗಳಲ್ಲಿ ಯುವತಿಯರಿಂದ ಕಡೆಗಣನೆಗೆ ಗುರಿಯಾಗಿರುವ ಹೂಗಳು ಮುನಿಸಿಕೊಂಡಿರುವುದಂತೂ ದಿಟ.
-ಶ್ವೇತಾ ಪ್ರಭು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


