ಮಹಿಳೆ-ಮನೆ-ಬದುಕು

ಯಾಕೀ ತಿರಸ್ಕಾರ?

ಹೌದು, ತಾಯಿ ಮತ್ತು ಮಗುವಿನ ಆರೋಗ್ಯ ಹೇಗಿದೆ ಎಂಬುದಕ್ಕಿಂತ ಜನಿಸಿದ ಮಗುವಿನ ಲಿಂಗದೆಡೆಗೆ ನಮ್ಮ ಕುತೂಹಲ ...

ಯಾಕೀ ತಿರಸ್ಕಾರ?
Published On :

ಹೌದು, ತಾಯಿ ಮತ್ತು ಮಗುವಿನ ಆರೋಗ್ಯ ಹೇಗಿದೆ ಎಂಬುದಕ್ಕಿಂತ ಜನಿಸಿದ ಮಗುವಿನ ಲಿಂಗದೆಡೆಗೆ ನಮ್ಮ ಕುತೂಹಲ ಕೇಂದ್ರೀಕೃತವಾಗಿರುತ್ತದೆ. ಒಂದು ವೇಳೆ ಹೆಣ್ಣಾದರೆ 'ಹೋಗ್ಲಿ ಬಿಡಿ ಏನ್ಮಾಡೋಕಾಗುತ್ತೆ ಎಲ್ಲ ಹಣೆಬರಹ' ಎಂಬ ಮಾತು ಸಹಜವಾಗಿ ಕೇಳಿ ಬರುತ್ತದೆ. ಒಂದಿಷ್ಟು ಪ್ರಜ್ಞಾವಂತಿಕೆಯನ್ನು ನಮ್ಮ ಮೇಲೆ ಹೇರಿಕೊಂಡಿದ್ದರೆ 'ಯಾವುದಾದರೇನು' ಎಂದು ಸೂಕ್ಷ್ಮವಾಗಿ ಸಾಂತ್ವನ ಹೇಳುತ್ತೇವೆ.
ಇದು ಇಂದು ನಿನ್ನೆಯ ವಿದ್ಯಮಾನವಲ್ಲ. ಹಾಗಂತ ಸುಮ್ಮನೆ ಯಾರನ್ನೋ ದೂಷಿಸುತ್ತ ಸುಮ್ಮನಿದ್ದರೆ ಮುಂಬರುವ ದಿನಗಳು ಆಶಾದಾಯಕವಾಗಿರದು. ಮಕ್ಕಳನ್ನು ಪಡೆಯಬೇಕೆಂಬುದು ಎಲ್ಲರೊಳಗೂ ಅಮೂರ್ತವಾಗಿರುವ ಆಕಾಂಕ್ಷೆ. ವಿಜ್ಞಾನ ಬೆಳೆದಂತೆ ಈ ಪ್ರಕ್ರಿಯೆಯಲ್ಲೂ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಆದರೂ ಹಿಂದಿನಿಂದ ಬೆಳೆದು ಬಂದಿರುವ ಹೆಣ್ಣು ಮಗುವಿನ ಬಗೆಗಿನ ತಿರಸ್ಕಾರದ ಮನೋಭಾವ ಇಂದಿಗೂ ಕಡಿಮೆಯಾಗದಿರುವುದು ದುರದೃಷ್ಟಕರ. ಇದರ ಹಿನ್ನೆಲೆಯಲ್ಲಿ ಜರುಗುವ ಭ್ರೂಣ ಹತ್ಯೆಗೆ ವಿಜ್ಞಾನದ ಬೆಳವಣಿಗೆ ಪೂರಕವಾಗಿರುವುದು ವಿಪರ್ಯಾಸ. ಅಂಕಿ-ಅಂಶಗಳ ಮೂಲಕ ಆಗಾಗ ಎಚ್ಚರಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದರೂ ಅದರಿಂದ ಹೆಚ್ಚಿನ  ಪ್ರಯೋಜನವಾಗುತ್ತಿಲ್ಲ. ಹೆಣ್ಣು ಮಗು ಜನಿಸಿದರೆ ಅದನ್ನು ನೋಡಲೂ ನಿರಾಕರಿಸುವಷ್ಟು ವ್ಯಗ್ರವಾಗುವ ತಂದೆ, ಅಜ್ಜಿ- ತಾತಂದಿರು ನಮ್ಮಲ್ಲಿದ್ದಾರೆ.
ವೇದಿಕೆಗಳ ಮೇಲೆ ಆವೇಶಭರಿತ ಮಾತನಾಡುವವರೂ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಇಂದು ಹೆಣ್ಣು ಬದಲಾಗಿದ್ದಾಳೆ. ಎಲ್ಲ ರಂಗದಲ್ಲೂ ಪ್ರಾಬಲ್ಯ ಮೆರೆಯುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನಿರಿಸುತ್ತಿದ್ದಾಳೆ. ತನ್ನ ಸುತ್ತ ಸಮಾಜ ನೇಯ್ದಿದ್ದ ಬಲೆ ಹರಿದು ಸ್ವತಂತ್ರಳಾಗಿ ಮುನ್ನುಗ್ಗುತ್ತಿದ್ದಾಳೆ. ಆದರೂ ಅವಳಿಗೆ ಸಿಗಬೇಕಾದ ಮನ್ನಣೆ, ಗೌರವ ಮಾತ್ರ ಸಂಪೂರ್ಣವಾಗಿ ಸಿಗುತ್ತಿಲ್ಲ. ಹೆಣ್ಣಿನ ನಿಲುವುಗಳನ್ನು ಗೌರವಿಸುವ, ಕನಸುಗಳನ್ನು ಪೊರೆಯುವ ಸಮಾಜ ನಿರ್ಮಾಣ ಈ ಕ್ಷಣದ ಅಗತ್ಯ.

- ಎಚ್.ಕೆ. ಶರತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.