ಮಹಿಳೆ-ಮನೆ-ಬದುಕು

ಅತ್ತೆ ಅಮ್ಮ ಆದರೆ..!

Published On :

ಮನೆ ಪಕ್ಕದಲ್ಲಿ ದಿನವೂ ಕಿರುಚಾಟ! ಗೊಣಗಾಡಿಕೊಂಡೇ ಅಡುಗೆ ಮಾಡುವ, ಬಟ್ಟೆ ಒಗೆಯುವ ಮಹಿಳೆ. 'ಇವರದ್ದು ಇದ್ದದ್ದೆ ಯಾವಾಗಲೂ ರಾಮಾಯಣ' ಎಂದು ಹೊರಹೋಗುವ ಮಗ, ಈಕೆ ಬೈದುಕೊಳ್ಳುತ್ತಿರುವುದು ಬೇರೆ ಯಾರನ್ನೋ ಅಲ್ಲ, ತನ್ನ ಸೊಸೆಯನ್ನೆ. ವಿಷಯ ಇಷ್ಟೆ, ಸೊಸೆ ನನ್ನನ್ನು ಕೇಳಿ ಅಡುಗೆ ಮಾಡುವುದಿಲ್ಲ ಎಂಬುದು. ಆದರೆ ಸೊಸೆ ಏನು ಅಡುಗೆ ಮಾಡಲಿ ಎಂದು ಕೇಳಿದರೆ 'ಪ್ರತಿಯೊಂದು ನಾನೇ ಹೇಳಬೇಕಾ' ಎಂಬದರ್ಪ.
ಇಲ್ಲಿ ಅತ್ತೆಯ ಮನಸ್ಥಿತಿ ಹೇಗೆಂದರೆ, ಮಗ ದುಡಿಯಲಿ, ಇಲ್ಲ ಜೂಜಾಡಿ ಸಂಜೆ ಕುಡಿದು ಬರಲಿ, ಅದು ತಪ್ಪೇ ಅಲ್ಲ. ಸೊಸೆ ಮಾತ್ರ ದುಡಿಯಬೇಕು. ಗಂಡು ಹೆಂಗಾನಾ ಇರ್ಲಿ, ಹೆಣ್ಣಿಗಿರಬೇಕು ಜವಾಬ್ದಾರಿ ಅಂತಾರೆ! ಹಾಗಾದರೆ ಸೊಸೆ ಜೀತದಾಳೆ? ಎರಡನೆ ಮಗನಿಗೆ ಹೆಣ್ಣು ನೋಡಬೇಕೆನ್ನುತ್ತಾರೆ. ಮೊದಲ ಮಗನಿಗೆ ಬಣ್ಣ ನೋಡಿ ಮರುಳಾಗಿ ಕೆಲಸಕ್ಕೆ ಬಾರದವಳನ್ನು ತಂದೆವು. ಇನ್ನೊಬ್ಬಳನ್ನಾದರೂ ದುಡಿವವಳನ್ನ ತರ್ತೀವಿ ಅಂತಾರೆ.
ಇನ್ನು ಹೆಣ್ಣು ನೋಡುವ ಸರದಿ ಬಂದರೆ ಒಬ್ಬಳೇ ಮಗಳಿದ್ದರೆ ಆಸ್ತಿ ಎಲ್ಲ ಮಗನಿಗೆ ಬರುತ್ತೆ, ಹೊಲ ಮನೆ ಇರಬೇಕು, ದೂರದ ಊರಿನ ಹೆಣ್ಣು ಬೇಕು. ಹತ್ತಿರದ ಊರಾದರೆ ಜಗಳವಾಗಲಿ, ಕೆಲಸ ಹೆಚ್ಚಾಗಲಿ, ಸಣ್ಣ ಪುಟ್ಟ ಹಬ್ಬಕ್ಕೂ ತವರಿಗೆ ಓಡಿ ಹೊಗುತ್ತಾಳೆ. ವರ್ಷಕ್ಕೆ ಒಮ್ಮೆ ಶುಭ ಕಾರ್ಯ, ಸಾವು ನೋವಿಗೆ ಒಮ್ಮೆ ಹೊಗಿಬರುವಂತಿರಬೇಕು ಅಂತಾರೆ. ಹೆಂಡತಿ ಊರು ಹತ್ತಿರವಿದ್ದರೆ ಮಗನೂ ಸೆರಗಿಡಿದು ಹೊಗುತ್ತಾನೆ ಎಂಬ ಅನುಮಾನ.
ಕುಲಗಳ ವಿಷಯಕ್ಕೆ ಬಂದರೆ ಜಾತಿಯಲ್ಲಿ ಉಪಜಾತಿ ಇದ್ದು, ಒಂದೇ ಉಪಜಾತಿ ಮದುವೆ ಮಾಡಬಾರದು ಎಂಬ ರೂಢಿಗತ ನಂಬಿಕೆ ಒಂದಿದೆ. ಆದರೆ ಹುಡುಗಿ ಒಬ್ಬಳೇ ಮಗಳು, ಆಸ್ತಿವಂತರೂ ಆಗಿದ್ದರೆ ಆಗ ಮಾತ್ರ ಕುಲದ ಚಕಾರ ಎತ್ತದೆ ಹುಡುಗಿಯನ್ನು ಒಪ್ಪಿಕೊಂಡು ಬರುತ್ತಾರೆ.
ಹುಡುಗಿ ನೋಡಲು ಸುಂದರವಾಗಿ ಇರಲೇಬೇಕು, ಹುಡುಗಿಯನ್ನ ನಾವು ಓದಿಸ್ತೀವಿ ಅಂತ ಮದುವೆ ಆದರೆ ಮುಗಿಯಿತು. ಓದಿಸಿದರೂ ಸೊಸೆ ದುಡಿದು ತರುತ್ತಾಳೆಂಬ ಸ್ವಾರ್ಥ. ಯಾವ ಸ್ವಾರ್ಥವೂ ಇಲ್ಲದೆ ಓದಿಸಿ ಪ್ರೀತಿಯಿಂದ ನೋಡಿಕೊಳ್ಳುವ ಮಾತಾಮಯಿಯರು ತೀರಾ ವಿರಳ.
ಮದುವೆ ನಿಶ್ಚಯವಾದ ಗೆಳತಿ, ನೀವೂ ಬೇಗ ಮದುವೆ ಆಗಿಬಿಡಿ ಎಂದಳು. ಆದರೆ ಆಕೆ ಈಗ ತನ್ನ ವರಸೆಯನ್ನೇ ಬದಲಾಯಿಸಿದ್ದಾಳೆ. ಮದುವೆ ಆಗಬಾರದು ಕಣೆ ಸ್ವಾತಂತ್ರ್ಯಾನೇ ಇರಲ್ಲ. ಅಪ್ಪ ಅಮ್ಮ ಎಲ್ಲಾ ಓದಿಸಿದ್ದರು ಈಗ ವಿದ್ಯಾಭ್ಯಾಸದ ಕೊನೆ ಹಂತಕ್ಕೆ ಬಂದಾಗ ಗಂಡ ಅತ್ತೆ ಓದಿಸಿ ಮಾತು ಮಾತಿಗೂ ಹಂಗಿಸುತ್ತಾರೆ. ಬೆಳೆದ ಮರಕ್ಕೆ 2 ಲೋಟ ನೀರು ಹಾಕಿ ನಾವು ಬೆಳೆಸಿದೆವು ಎನ್ನುವ ಹಾಗೆ.
ತವರಲ್ಲಿ ಹೆತ್ತವರ ಮುಂದೆ ಮಾತಾಡಿದಾಗ ನನ್ನ ಮಗಳು ಎಷ್ಟು ತಿಳಿದುಕೊಂಡಿದ್ದಾಳೆ ಎಂದು ಹೆಮ್ಮೆ ಪಡುತ್ತಿದ್ದರು. ಅದೇ ಅತ್ತೆ ಮನೆಯಲ್ಲಿ, ನಿನ್ನ ನಾವು ಓದಿಸಿದ್ದು, ನಮಗೇ ಬುದ್ಧಿ ಹೇಳುತೀಯಾ ಅಂತಾರೆ. ಅಂದರೆ ಇವರು ಓದಿಸಿದ್ದು ಕೇವಲ ಕೆಲಸಕ್ಕೆ ಹೋಗಲಿ ಎಂದು ಅಷ್ಟೇನಾ? ಈ ಕೆಲಸ ಇಷ್ಟವಿಲ್ಲ ಬೇರೆ ಕೆಲಸ ಮಾಡುವ ಆಸೆ ಇದ್ದರೂ ಅತ್ತೆ ಗಂಡನ ಅನುಮತಿ ಇಲ್ಲದೆ ಏನೂ ಮಾಡುವಂತಿಲ್ಲ, ಓದುವಂತಿಲ್ಲ. ಪ್ರಮೋಶನ್ ಆದರೂ ಅದನ್ನು ತಿರಸ್ಕರಿಸಬೇಕು, ಮಗನಿಗಿಂತ ಸೊಸೆ ಉನ್ನತ ಸ್ಥಾನಕ್ಕೆ ಹೋಗಬಾರದು. ಪ್ರತಿ ತಿಂಗಳು ಒಂದಿಷ್ಟು ಸಂಬಳ ತಂದರೆ ಸಾಕೆಂಬ ಭಾವನೆ ಅವರದು ಅಂತಾಳೆ ಗೆಳತಿ. ವಿವಾಹದ ನಂತರ ಏತಕ್ಕಾಗಿ ಓದಿಸುತ್ತಾರೆ, ಇಲ್ಲ ಬಿಡಿಸುತ್ತಾರೆ ಎಂದು ಪ್ರಶ್ನೆ ಹಾಕಿಕೊಂಡರೆ, ಶ್ರೀಮಂತರ ಮನೆಗೆ ಮನೆಗೆಲಸಕ್ಕೆ ಹೆಣ್ಣು ಬೇಕು, ಬಡವರಿಗೆ ದುಡಿವ ಹೆಣ್ಣು ಬೇಕು.
ಎಲ್ಲ ಅತ್ತೆಯಂದಿರೂ ಹೀಗೇ ಇರಲ್ಲ, ಒಳ್ಳೆಯ ಮನಸ್ಸಿನ ಅತ್ತೆಯಂದಿರು ಎಲ್ಲರಿಗೂ ಸಿಕ್ಕರೆ ಬೇರೆ ಭಾಗ್ಯವೇ ಇಲ್ಲ. ನಗುಮೊಗದಿ ಹೆಣ್ಣು ನೋಡಲು ಬರುತ್ತಾರೆ, ಅದರ ಹಿಂದೆ ಇರುವ ನಿಗೂಢ ಉದ್ದೇಶಗಳು ಅರಿವುದಾದರೂ ಹೇಗೆಂಬುದೇ ಮದುವೆ ವಯಸ್ಸಿಗೆ ಬಂದು ನಿಂತ ತರುಣಿಯರ ಯಕ್ಷ ಪ್ರಶ್ನೆ. ಅಮ್ಮನಂಥ ಅತ್ತೆ ಸಿಕ್ಕರೆ ಅದೆಷ್ಟು ಚೆನ್ನ!


- ಶಿಲ್ಪಾ ತಾವರೇಕೆರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.