ಮಹಿಳೆ-ಮನೆ-ಬದುಕು

ಪ್ರೀತಿಗೆ ಇವತ್ತೇ ತಿಥಿ!

ಪ್ರೀತಿಗೆ ಇವತ್ತೇ ತಿಥಿ!
Published On :

ಕೇಳೋ ಗೆಳೆಯ, ಒಳಗಿನ ದನಿಯ,
ನೀನೆ ನನ್ನ ಒಲವಿನ ಇನಿಯ
ಬಂದು ನಿಂತೆ ನೀ ಹೃದಯದ ಬಾಗಿಲಲಿ
ತೆರೆಯುವ ಮೊದಲೇ ಹೋದೆ ನೀನೆಲ್ಲಿ?
ನಿನ್ನ ಮೇಲಿನ ನನ್ನ ಪ್ರೀತಿಗೆ ಈ ನಾಲ್ಕು ಸಾಲುಗಳೇ ಸಾಕ್ಷಿ. ನಿನಗಾಗಿ ಹಂಬಲಿಸುತ್ತಿರುವ ಈ ನನ್ನಾಳದ ಮಾತುಗಳನ್ನು ಹೇಳಲು ಈ ಸಾಲುಗಳು ಸಾಕೆಂದು ನಂಬಿದ್ದೇನೆ. ಇದಕ್ಕಿಂತ ಸುಂದರ ಸಾಲುಗಳನ್ನು ಬರೆಯುವ ಕಾವ್ಯ ಸಿರಿವಂತಿಕೆ ಆ ಭಗವಂತ ನನಗೆ ಕರುಣಿಸಿಲ್ಲ. ನನ್ನ ದೌರ್ಭಾಗ್ಯಕ್ಕೆ ಮತ್ತೆ ಗುರಿಯಿಡಲು ಹಾತೊರೆದವನು ನೀನು. ಏಕೆಂದರೆ ನಿನ್ನದೇ ನೆನಪಲ್ಲಿ ನಾನು ನಿತ್ಯ, ಕ್ಷಣ ಕ್ಷಣ ಸತ್ತು ಸತ್ತು ಬದುಕುತ್ತಿರುವೆ. ಹೌದು ನಾ ಮಾಡಿದ್ದು ತಪ್ಪಾಯಿತು. ನೀನೆಂದರೆ ನನಗಿಷ್ಟವೆಂದು ಎಂದಿಗೂ ಬಾಯಿ ಬಿಟ್ಟು ಹೇಳಲಿಲ್ಲ. ಆದರೆ, ಆಟ, ಪಾಠ, ವಿನಯ, ವಿನಮ್ರತೆ, ಭಕ್ತಿ, ಶ್ರದ್ಧೆ- ಎಲ್ಲದರಲ್ಲೂ ಮೊದಲಿಗನೆನಿಸಿಕೊಂಡಿದ್ದ ನೀನು, ಪ್ರೀತಿಸುವ ವಿಷಯದಲ್ಲಿ ಹಿಂದೆ ಬಿದ್ದದ್ದೇಕೆ? ಬಿಂಕ, ಬಿಗುಮಾನಗಳಲ್ಲೂ ಮೊದಲಿಗನೆನಿಸಿಕೊಳ್ಳುವ ಅತಿಯಾಸೆ  ನಿನ್ನದಾಯಿತು, ಅದೇ ನನ್ನ ಪಾಲಿಗೆ ಮುಳುವಾಯಿತು.
ಪ್ರೀತಿಗೆ ಸ್ನೇಹವೇ ಅಡಿಪಾಯವೆಂದು ಬಲ್ಲವರು ಹೇಳುತ್ತಾರೆ. ಆದರೆ, ನನ್ನ ಪ್ರೀತಿಗೆ ನಾಂದಿ ಹಾಡಿದ್ದು ಮಾತ್ರ  ದ್ವೇಷ! ಯೆಸ್, ನಾನು ನಿನ್ನ ಪ್ರತಿ ಚಲನವಲನವನ್ನೂ ದ್ವೇಷಿಸುತ್ತಿದ್ದೆ, ಆ ನಿನ್ನ ಮಾತು, ನಗು, ಡ್ರೆಸ್ಸಿಂಗ್ ಸೆನ್ಸ್ - ಕಂಡಾಗ ಉರಿದುಬೀಳುತ್ತಿದೆ. ನಿನ್ನೊಂದಿಗಾದ ಮೊದಲ ಭೇಟಿಯಲ್ಲೇ ನೀ ನನಗೆ ತೋರಿದ್ದು ಒಬ್ಬ ದುರಹಂಕಾರಿಯಾಗಿ. ಆ ನಿನ್ನ ಗತ್ತು, ನಾನೇ ರಾಜನೆಂದು ಬೀಗುವ ಪರಿ, just irritated me. ಇಂಥ ಮನುಷ್ಯ ಜೀವನದಲ್ಲಿ ಉದ್ಧಾರವಾಗೋದಿಲ್ಲ ಎಂದು ಸಿಕ್ಕಸಿಕ್ಕವರಲ್ಲಿ ಹೇಳಿಕೊಂಡು ನಿನ್ನ ಮೇಲಿನ ಕೋಪ ತೀರಿಸಿಕೊಳ್ಳುತ್ತಿದ್ದೆ. ಆದರೆ, ಹೀಗಿದ್ದ ನಾನು 'ನಾನೇನಾ?' ಎನ್ನುವಷ್ಟರ ಮಟ್ಟಿಗೆ ನನ್ನಲ್ಲಿ ಬದಲಾವಣೆ ತಂದವ ನೀನೇ. ಯಾಕೆ, ಏನು, ಎತ್ತ ಏನೂ ಕೇಳಬೇಡ. ನಿನ್ನ ಮೇಲಿನ ನನ್ನ ಸಿಟ್ಟು, ದ್ವೇಷ ಎಲ್ಲವನ್ನೂ ಚೆನ್ನಾಗಿ ತಿಂದುಂಡ ನನ್ನ ಮನಸ್ಸು ಪ್ರೀತಿಯೆಂಬ ಮೊಗ್ಗನ್ನು ಬಿಟ್ಟು ನನಗೇ ಮೋಸ ಮಾಡಿಬಿಟ್ಟಿತು. ಆದರೆ, ಅದು ಹೂವಾಗಿ ಅರಳುವ ಮೊದಲೇ ಚಿವುಟಿದ್ದು, ಮತ್ತೆ ಅದೇ ನಿನ್ನಿಂದ! ಯಾವ ಜನ್ಮದಲ್ಲಿ ನಿನಗೆ ಏನು ಅನ್ಯಾಯ ಮಾಡಿದ್ದೆನೋ ಕಾಣೆ, ಈ ಜನ್ಮದಲ್ಲಿ ನಿನ್ನನ್ನು ಭೇಟಿಯಾದಾಗಿನಿಂದ, ನನ್ನಲ್ಲಿ ನಾನಿಲ್ಲ. ನೀನು ನನ್ನೊಂದಿಗಿದ್ದಷ್ಟು ದಿನ ದ್ವೇಷವೆಂಬ ಬೆಂಕಿಯಲ್ಲಿ ನನ್ನನ್ನು ನಾನೇ ಸುಟ್ಟುಕೊಂಡಿದ್ದೆ. ಅದು ನನ್ನನ್ನು ಸುಡುವಾಗ, ಅದನ್ನಾರಿಸಲು, ನನಗರಿಯದೆ ಪ್ರೀತಿಯೆಂಬ ಸಮುದ್ರಕ್ಕೆ ಬಿದ್ದೆ. ಆದರೆ, ಈಜಿನಲ್ಲಿ ಚಾಂಪಿಯನ್ ಆದ ನನಗೆ, ಈ ಸಮುದ್ರದಿಂದ ಹೊರಬರಲು ಸಾಧ್ಯವೇ ಆಗುತ್ತಿಲ್ಲ. ನಿನ್ನ ನೆನಪೆಂಬ ನದಿ ಮತ್ತೆ ಮತ್ತೆ ಈ ಸಮುದ್ರವನ್ನು ಸೇರುತ್ತಿರುವ ರಭಸಕ್ಕೆ ಇನ್ನೇನಾಗಬೇಡ ನನ್ನ ಗತಿ? ನನ್ನ ಕಣ್ಣೀರೂ ನನ್ನನ್ನು ಮುಳುಗಿಸುವಲ್ಲಿ ನಿನಗೆ ಸಾಥ್ ನೀಡುತ್ತಿದೆ.

ಎಲ್ಲ ಬಾಲಿವುಡ್ ಚಿತ್ರಗಳಂತೆ ನಾವೂ ಮತ್ತೆ ಒಂದಾಗಬಹುದೆಂಬ ಕನಸು ಕಾಣಲು ನನ್ನಲ್ಲಿ ಕಾರಣಗಳೇ ಉಳಿದಿಲ್ಲ. ಏಕೆಂದರೆ, ನೀನು ಇದೇ ಲೋಕದಲ್ಲಿದ್ದರೆ ಎಲ್ಲಿ ನಿನ್ನನ್ನು ಸೇರಿಬಿಡುತ್ತೇನೋ ಎಂಬ ಅಸೂಯೆ ಆ ವಿಧಿಗೆ. ಅದಕ್ಕೇ ನಿನ್ನನ್ನು ಬಾರದ ಲೋಕಕ್ಕೆ ಕರೆದೊಯ್ದು, ನನಗೆ ಅನ್ಯಾಯ ಮಾಡಿಬಿಟ್ಟಿತು. ಎಲ್ಲ ಹುಡುಗಿಯರೂ ತಮ್ಮ ಇನಿಯನ ಬರುವಿಕೆಗಾಗಿ ಕಾದರೆ, ನಾನು ನನ್ನ ಸಾವಿಗಾಗಿ ಕಾಯುತ್ತಿದ್ದೇನೆ. ಏಕೆಂದರೆ, ನಿನ್ನನ್ನು ಸೇರಲು ನನಗದೊಂದೇ ದಾರಿ, ಪ್ಲೀಸ್ ವೇಟ್ ಮಾಡು...
-ಕೃತಿ ಜಿ.
kruthig28@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.