ಕ್ರೌರ್ಯಕ್ಕೆ ಕೊನೆ ಎಂದು?

ತಮ್ಮ ಗೆಳತಿ ವಾಸಂತಿಯ ಪತಿ ಇನ್ನಿಲ್ಲವೆಂದು ಸುಮನಾ ಹಾಗೂ ಅವಳ ಆತ್ಮೀಯ ಗೆಳತಿಯರಿಗೆ ತಿಳಿಯುವ ವೇಳೆಗಾಗಲೇ ನಾಲ್ಕು ದಿನ ಕಳೆದಿತ್ತು. ಸರಿ, ಹೋಗಿ ಮಾತನಾಡಿಸಿ ಗೆಳತಿಗೆ ಧೈರ್ಯ ಹೇಳಿ ಬರೋಣವೆಂದು ನಾಲ್ವರೂ ಹೊರಟರು. ಅವರಲ್ಲಿ ಸುಮನಾಳಿಗೆ ಹೇಳಿಕೊಟ್ಟರೂ.. ಬಾಯಿಪಾಠ ಮಾಡಿಸಿದರೂ ಕೆಲವು ಮಾತು ಬಾರವು. ಅವಳು ತುಂಬಾ ಪ್ರಾಕ್ಟಿಕಲ್ ಎಂದೇ ಪ್ರಸಿದ್ಧಿ ಪಡೆದವಳು. ಎಲ್ಲರೂ ಸೇರಿ ಅವಳನ್ನು ತಯಾರು ಮಾಡಿ ಕರೆ ತಂದಿದ್ದರು. ಅಂತೂ ಸ್ನೇಹಿತೆಯ ಮನೆ ತಲುಪಿದ್ದಾಯ್ತು.
ಅಲ್ಲಿ ನೋಡಿದರೆ ಯಾರ್ಯಾರೂ ಇಲ್ಲ. ವಾಸಂತಿ ಹಾಗೂ ಅವಳ ಇಬ್ಬರು ಮಕ್ಕಳು. ಸದ್ಯ ಒಳ್ಳೆಯದೇ ಆಯಿತು, ಅಭಿನಯಿಸುವುದು ತಪ್ಪಿತಲ್ಲಾ ಅನ್ನುವ ಸಮಾಧಾನ ಸುಮನಾಳಿಗೆ. ನಾವು ಹೋಗುವಾಗ ಬೆಳಿಗ್ಗೆ 9.15. ಅವಳೇ ಬಾಗಿಲು ತೆರೆದು ನಗುನಗುತ್ತಾ ಸ್ವಾಗತಿಸಿದಾಗ ಗೆಳತಿಯರೆಲ್ಲಾ ಕಕ್ಕಾಬಿಕ್ಕಿ...! ಏನು ಮಾತನಾಡಬೇಕು..? ಹೇಗೆ ಆರಂಭಿಸಬೇಕೆಂದು ತಿಳಿಯದೇ ಪರದಾಡುತ್ತಿರುವಾಗ ವಾಸಂತಿಯೇ ಎಲ್ಲರ ಯೋಗಕ್ಷೇವು ವಿಚಾರಿಸಿದಳು. ಗೆಳತಿಯರು ನಾಲ್ಕು ಸಾಂತ್ವನದ ಮಾತುಗಳನ್ನಾಡಿದರು. ಯಜಮಾನರ ಸಾವಿಗೆ ಕಾರಣ ಕೇಳಿ ತಮಗೆ ತೋಚಿದ್ದನ್ನು ತೊದಲಿದರು.
ಅವಳು ಮಧ್ಯದಲ್ಲೇ ಅವರ ಮಾತುಗಳನ್ನು ತುಂಡರಿಸುತ್ತಾ... ಈಗ ಯಾರ್ಯಾರ್ ಮಸಾಲೆದೋಸೆ ತಿಂತೀರಾ ಹೇಳಿ ಎಂದು ಕೇಳಿದಾಗ.. ಎಲ್ಲ ಗೆಳತಿಯರು ಹಸಿವಾಗಿದ್ದರೂ ಬೇಡವೆಂದು ತಲೆಯಾಡಿಸಿದರು. ಹಾಗೇ ಇವಳಿಗೇನಾದ್ರೂ ತಲೆ ಕೆಟ್ಟಿದೆಯಾ? ಪಾಪ ಗಂಡನನ್ನು ಕಳೆದುಕೊಂಡ ಶಾಕ್‌ಗೆ ಹೀಗಾಗಿದ್ದಾಳೆಂದು ತಮ್ಮಲ್ಲೇ ಗುನುಗಿದರು. ವಾಸಂತಿ ಮಗನನ್ನು ಕರೆದು 3 ಮಸಾಲೆದೋಸೆ, 3 ಕಪ್ ಜಾಮೂನ್ ತರಲು ಹಣ ಕೊಟ್ಟಾಗಲಂತೂ ಗೆಳತಿಯರ ಚಡಪಡಿಕೆ ಹೇಳತೀರದು. ಯಾರೂ ಇಲ್ವಾ ಜೊತೆಗೆ? ಮುಂದೇನು? ನೀ ನೌಕರಿಗೆ ಸೇರಿಕೊಳ್ಳುವೆಯಾ? ಎಲ್ಲ ಪ್ರಶ್ನೆಗೂ ಅವಳ ಮೌನವೇ ಉತ್ತರವಾಗಿತ್ತು. ಅಷ್ಟರಲ್ಲಿ ತಿಂಡಿ ಬಂತು. ಮಕ್ಕಳಿಗೂ ಕೊಟ್ಟು ಸರಿ ಹಾಗಾದ್ರೆ ನಿಮಗ್ಯಾರಿಗೂ ಬೇಡ್ವಾ ಎನ್ನುತ್ತಲೇ ತಿನ್ನಲು ಶುರು ಮಾಡಿದಳು. ಜಾಮೂನು ತಿನ್ನುವಾಗ ಅದೇಕೋ ಅವಳ ಕಣ್ಣಲ್ಲಿ ನೀರು ಜಿನುಗಿತು. ಪಾಪ ಗಂಡನ ನೆನಪಾಗಿರಬೇಕೆಂದು ನಮ್ಮ ಅನಿಸಿಕೆ. ಮಕ್ಕಳನ್ನು ಶಾಲೆಗೆ ಕಳುಹಿಸಿದಳು. ಈಗ ತುಂಬಾ ಉತ್ಸಾಹದಿಂದ ನನ್ನ ತಲೆ ಸರಿಯಾಗಿದೆ ಕಣ್ರೇ ... ಎನ್ನುತ್ತಾ ತನ್ನ ಗತವೈಭವದ ಪುಟಗಳನ್ನು ನಮ್ಮ ಮುಂದೆ ತೆರೆದಳು...
15 ವರ್ಷದ ಸೆರೆವಾಸ, ಶಿಕ್ಷೆಗೆ ಅಂತೂ ಮೊನ್ನೆ ತೆರೆ ಬಿತ್ತು. ಈಗ ನಾನು ಪಂಜರದಿಂದ ಬಿಡುಗಡೆಯಾದ ಪಕ್ಷಿ ಎಂದಳು ಜೋರಾಗಿ ನಗುತ್ತಾ... ಮಾಲಿನಿ ಸುಮ್ಮನಿರದೆ 'ಯಾಕಮ್ಮಾ... ಇಷ್ಟ್ ದಿನ ಚೆನ್ನಾಗೇ ಸುಖವಾಗೇ ಇದ್ದೆ ಅಲ್ವೇನೇ? ಒಳ್ಳೇ ಗಂಡ, ಮುದ್ದಾದ ಮಕ್ಕಳು, ದೊಡ್ಡ ಮನೆ, ಬೆಳ್ಳಿ ಬಂಗಾರ, ಬಟ್ಟೆಬರೆ, ಓಡಾಡೋಕೆ ಕಾರು, ಇನ್ನೇನ್ ಬೇಕೇ ಒಂದು ಹೆಣ್ಣಿಗೆ?' ಎಂದಳು. ಚಿನ್ನಕ್ಕಾಗಿ ಹಾತೊರೆಯುತ್ತಾ ಗಿಲೀಟು ಒಡವೆಗಳನ್ನ ಹಾಕಿಕೊಂಡು ತನ್ನಾಸೆ ತೀರಿಸಿಕೊಳ್ಳುತ್ತಿದ್ದ ಮಾಲಿನಿ. 'ಹೌದು ಮಾಲಿ ನನ್ಹತ್ರ ಇರೋ ಒಡವೆಗಳು ತುಂಬಾ ಅಮೂಲ್ಯವಾದದ್ದು... ನೀ ಯಾವ ಆಚಾರಿಯ ಹತ್ತಿರ ಹೇಳಿದರೂ ಈ ರೀತಿ ಮಾಡಿಕೊಡಲು ಸಾಧ್ಯವೇ ಇಲ್ಲ' ಎಂದು ವಾಸಂತಿ ಹೇಳಿದಾಗ ಕೋಮಲಾ 'ಹೌದೇನೇ..? ಅಷ್ಟೊಂದ್ ನ್ಯೂ ಪ್ಯಾಟ್ರನ್ನಾ?' ಅಂತ ರಾಗ ಎಳೆದಳು.
ಆಗ ವಾಸಂತಿ ಬಾಗಿಲ ಚಿಲಕ ಹಾಕಿದ್ದನ್ನು ದೃಢಪಡಿಸಿಕೊಂಡು ಬಂದು ತನ್ನ ಹೊದ್ದಿದ್ದ ಸೆರಗನ್ನು ಸರಿಸುತ್ತಾ ಹೋದಳು. ಕುತ್ತಿಗೆಯಲ್ಲಿ ಒಂದು ದಾರವೂ ಇರಲಿಲ್ಲ. ಬದಲಿಗೆ ಕುತ್ತಿಗೆ, ಭುಜ, ಬೆನ್ನು, ಹೊಟ್ಟೆ ಎಲ್ಲೆಡೆಯೂ ಚಿತ್ರ ವಿಚಿತ್ರವಾದ ಸಿಗರೇಟಿನಿಂದ ಸುಟ್ಟ ಗಾಯದ ಗುರುತುಗಳು! (ಯಾರೊಬ್ಬರಿಗೂ ಮಾತು ಹೊರಡಲಿಲ್ಲ. ಎಲ್ಲರೂ ಮೂಕ ವಿಸ್ಮಿತರಾಗಿದ್ದೆವು. 'ನನ್ನ ಮಕ್ಕಳಿಗೂ ಈ ಉಡುಗೊರೆ ನಾಲ್ಕಾರು ಬಾರಿ ದೊರೆತಿದೆ' ಎನ್ನುತ್ತಾ ತನ್ನ ಕಾಲು ತೋರಿಸಿದಳು. ಕಾಲಿನ ತುಂಬಾ ದೊಡ್ಡ ರಂಗವಲ್ಲಿ ಇಡಬಹುದಾದಷ್ಟು ಬಿಳಿ ಚುಕ್ಕೆಗಳು. ನಮ್ಮ ಕಣ್ಣಲ್ಲಿ ನೀರು ಬರುತ್ತಿದ್ದರೆ ಅವಳ ಕಂಗಳು ಬತ್ತಿಹೋಗಿತ್ತು. ಛೇ, ಮೇಲ್ನೋಟಕ್ಕೆ, ಸುಂದರ, ಸುಸಂಸ್ಕೃತ, ವಿದ್ಯಾವಂತ, ಸರ್ಕಾರಿ ನೌಕರ, ಸ್ನೇಹಪರ, ಹತ್ತಾರು ಸಂಘ ಸಂಸ್ಥೆಗಳಲ್ಲಿ ಜನರೊಡನೆ ಬೆರೆತು ಸಮಾಜಮುಖಿ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ವ್ಯಕ್ತಿಯಲ್ಲಿ ಇಂಥಾ ಪಿಶಾಚಿಯ ಪ್ರವೃತ್ತಿ ಇತ್ತೇ??
ಯಾರೊಬ್ಬರೂ ಮಾತನಾಡಲಿಲ್ಲ. ಹೊರಬರುವಾಗ ಅವಳಿಗೆ ಬೇಸರವಾಗದಿರಲೆಂದು ಕಾಫಿ ಕುಡಿದು ಅವಳ ಭುಜದ ಮೇಲೆ ಕೈ ಇಟ್ಟಿದ್ದೇ ತಡ, ಅದುವರೆಗೂ ತಡೆ ಹಿಡಿದಿದ್ದ ಕಂಬನಿಯ ಅಣೆಕಟ್ಟು ಒಡೆಯಿತು. ಮನಪೂರ್ತಿ ಅತ್ತಳು. ವಾಸಂತಿ ನಿನಗೆ ಇಷ್ಟೊಂದು ಸಹನೆ ಇತ್ತೇನೇ ಎಂದಾಗ... ಮೊದಲೇ ನಮ್ಮದು ಪ್ರೇಮವಿವಾಹ. ಯಾರ ಬೆಂಬಲ ಪ್ರೋತ್ಸಾಹವೂ ಇರಲಿಲ್ಲ. ಇವರನ್ನು ಬಿಟ್ಟರೆ ಬೇರೆ ಗತಿಯಿರಲಿಲ್ಲ. 10 ವರುಷಗಳ ನಂತರ ಅಮ್ಮ ತನ್ನ ಕೋಪ ಮರೆತು ನನ್ನನ್ನು ಮಾತನಾಡಿಸುವಂತಾಗಿ ವರ್ಷಕ್ಕೇ ಕಣ್ಣು ಮುಚ್ಚಿದಳು. ಸಮಾಜದಲ್ಲಿ ಎಲ್ಲರ ದೃಷ್ಟಿಯಲ್ಲಿ ನಾನು ಕೀಳಾಗಬಾರದೆಂದು, ನನ್ನ ಸುಖಕ್ಕಾಗಿ ಮಕ್ಕಳ ಭವಿಷ್ಯ ಹಾಳಾಗಬಾರದೆಂದು ಎಲ್ಲವನ್ನೂ ಹಲ್ಲು ಕಚ್ಚಿ ಸಹಿಸಿದೆ ಬೇರೆ ವಿಧಿಯಿರಲಿಲ್ಲ ಎಂದಳು.
ಈ ಕಾಲದಲ್ಲೂ ಇಂಥಾ ಮಾಯೆಯ ಮುಸುಕಿನಲ್ಲಿ ಇನ್ನೂ ಎಷ್ಟು ಹೆಂಗೆಳೆಯರು ಸಿಲುಕಿದ್ದಾರೋ ಎಂದು ಯೋಚಿಸುತ್ತಲೇ ಮನೆಸೇರಿದರು. ಸದ್ಯ ಗೆಳತಿಗೆ ಬಿಡುಗಡೆ ದೊರಕಿತಲ್ಲಾ ಎಂಬ ಸಮಾಧಾನ ಅವರದಾಗಿತ್ತು.
= ನಾಗಲಕ್ಷ್ಮೀ ಕಡೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


