ಮಹಿಳೆ-ಮನೆ-ಬದುಕು

ಅವಳು ಅಳುವಿನ ಕೊಳ

ಎಷ್ಟು ಓಡುತ್ತಿದ್ದರೂ ಬಿಡದೆ ಹಿಂಬಾಲಿಸುವ ಕೈಗಳು. ಉಸಿರನು ಬಿಗಿಹಿಡಿದು ತಪ್ಪಿಸಿಕೊಳ್ಳಲೇ ಬೇಕೆಂದು ಅವಳ...

ಅವಳು ಅಳುವಿನ ಕೊಳ
Published On :

ಎಷ್ಟು ಓಡುತ್ತಿದ್ದರೂ ಬಿಡದೆ ಹಿಂಬಾಲಿಸುವ ಕೈಗಳು. ಉಸಿರನು ಬಿಗಿಹಿಡಿದು ತಪ್ಪಿಸಿಕೊಳ್ಳಲೇ ಬೇಕೆಂದು ಅವಳ ಪ್ರಯತ್ನ. ಓಡುತ್ತಾ ಓಡುತ್ತಾ ಸಹಾಯಕ್ಕಾಗಿ ಕೂಗಲು ಬಾಯ್ತೆರೆದರೂ ಮಾತುಗಳು ಗಂಟಲೊಳಗೇ ಉಡುಗಿ ಹೋಗುತ್ತಿವೆ. ಬೆವೆತ ಮೈ, ಭಾರದ ಉಸಿರು, ಮುಂದೆ ಸಾಗಲೂ ಆಗದ ನಿಸ್ಸಹಾಯಕತೆ, ಭೂಮಿ ಬಿರಿಯ ಬಾರದೆ ಅಡಗಿ ಕುಳಿತು ಬಿಡುವೆ ಎನ್ನುವ ಭಾವ, ಕಾಣದ ಕೈಯ ಸಹಾಯಕಾಗಿ ಚಾಚುತಿರುವ ಮನ, ಇನ್ನೇನು ಸಿಕ್ಕಿ ಬಿಟ್ಟೆ ನಾನು ಎನ್ನುವಷ್ಟರಲ್ಲಿ ಚೀರಿಕೊಂಡು ಎದ್ದು ಕುಳಿತಳು. ಕನಸಾದರೂ ವಾರಕ್ಕೊಮ್ಮೆಯಾದರೂ ಮತ್ತೆ ಮತ್ತೆ ಕಾಡುವ ಅದೇ ಸನ್ನಿವೇಶ ಅವಳ ಜೀವನವನ್ನು ಪ್ರತಿಕ್ಷಣ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ನೆನಪು ಮರುಕಳಿಸಿ ತನ್ನ ಮೇಲೆ ತನಗೇ ಅಸಹ್ಯ, ಕೋಪ, ಅಸಹನೆ ಸೃಷ್ಟಿಸುತ್ತಿದೆ.
ಯಾವತ್ತೋ ಘಟಿಸಿದ ಅತ್ಯಾಚಾರ ಮರೆಯಲೆತ್ನಿಸಿದರೂ ಮರೆಯಲಾಗುತ್ತಿಲ್ಲ. ಮರೆತೆನೆಂದರೂ ಮೈಲಿಗೆ ಮೈಯಿ, ನೆರೆಹೊರೆಯವರ ಮಾತು, ಅನುಕಂಪ ನೆನಪಾಗುತ್ತಲೇ ಇರುತ್ತದೆ. ಕೆಲವೊಮ್ಮೆ ತನ್ನದಲ್ಲದ ತಪ್ಪಿಗೆ ಆತ್ಮಹತ್ಯೆಯ ಯತ್ನವನ್ನೂ ಮಾಡಿದ್ದಾಳೆ. ಗಂಡಿನ ಧ್ವನಿ, ಸಣ್ಣದೊಂದು ಸ್ಪರ್ಶಕ್ಕೂ ಬೆದರುತ್ತಾಳೆ. ಕಾರಣವಲ್ಲದ ಕಾರಣಗಳಿಗೆ ಗಂಡು ಎನ್ನುವುದಕ್ಕೋಸ್ಕರವೇ ಉರಿದುಬೀಳುತ್ತಾಳೆ. ಇದು ನೋಡುಗರಿಗೆ ತಮಾಷೆಯಾದರೂ ಅವಳಿಗೆ ಮಾತ್ರ ಮಾನಸಿಕ ಹಿಂಸೆ. ಇದು ಅತ್ಯಾಚಾರಕ್ಕೆ ಗುರಿಯಾದ ಹೆಣ್ಣು ಮಗಳೊಬ್ಬಳ ಅಂತರಾಳದಲಿ ಏಳುವ ಅಲೆ.
ಅತ್ಯಾಚಾರ ಅವಳನ್ನು ಕೇವಲ ದೈಹಿಕವಾಗಿ ಕುಗ್ಗಿಸುವುದಿಲ್ಲ, ಮಾನಸಿಕವಾಗಿಯೂ ಪ್ರಪಾತಕ್ಕೆ ಬೀಳುವಂತೆ ಮಾಡಿಬಿಡುತ್ತದೆ. ತನ್ನನ್ನು ತಾನು ಶಿಕ್ಷಿಸಿಕೊಳ್ಳುವ, ಇತರರನ್ನು ನಂಬದ ಸ್ಥಿತಿಗೆ ತಳ್ಳಿಬಿಡುತ್ತದೆ. ಅವಳ ವೈಯಕ್ತಿಕ, ಸಾಂಸಾರಿಕ, ಔದ್ಯೋಗಿಕ, ಸಾಮಾಜಿಕ ಜೀವನದ ಮೇಲೆ ಬರೆ ಎಳೆದು ಬಿಡುತ್ತದೆ. ದೇಹದ ಮೇಲಾಗುವ ಗಾಯಗಳು ನಿಧಾನವಾಗಿ ಮಾಯಬಹುದು. ಆದರೆ ಮನಸ್ಸಿನ ಮೇಲಾಗುವ ಪರಿಣಾಮ ಚಿತ್ರಹಿಂಸೆಗೆ ದೂಡುತ್ತದೆ.
ಘಾಸಿಗೊಂಡ ಮನಸು
ಅತ್ಯಾಚಾರಕ್ಕೊಳದ ಹೆಣ್ಣು, ತಾನು ಮತ್ತೆ ಮತ್ತೆ ಅಂಥ ಘಟನೆಗೆ ಸಿಕ್ಕಿಬೀಳಬಹುದೆನ್ನುವ ಭಯ ಬೆಂಬಿಡದ ಭೂತವಾಗಿ ಮನಸ್ಸಿನೊಳಗೆ ಹೊಕ್ಕಿಬಿಡುತ್ತದೆ. ಸಾವು ಸಂಭವಿಸಬಹುದು ಅಥವಾ ಸಾವೇ ಇದಕ್ಕೆಲ್ಲ ಪರಿಹಾರ ಎಂಬ ಕೆಟ್ಟ ಯೋಚನೆಗಳು ಮನಸ್ಸಿನಲಿ ತುಂಬಿಕೊಳ್ಳುತ್ತವೆ. ಪ್ರತಿಯೊಂದಕ್ಕೂ ಕೋಪಗೊಳ್ಳುವುದು, ಜೀವನದ ಬಗ್ಗೆ ಜಿಗುಪ್ಸೆ, ಸೇಡು ತೀರಿಸಿಕೊಳ್ಳಲು ಹಾತೊರೆಯುವುದು, ತಾನೊಬ್ಬ ಅಪರಾಧಿ ಎನ್ನುವ ಮನೋಭಾವ ಹುಟ್ಟಿಸಿಬಿಡುತ್ತದೆ. ಪ್ರತಿಕ್ಷಣ ಆತಂಕದ ಜೀವನ, ಕಾಡುವ ಖಿನ್ನತೆ, ಎಷ್ಟು ಹೊರಹಾಕಿದರೂ ಮತ್ತೆ ಮುಖತೋರಿಸುವ ಆತ್ಮಹತ್ಯೆಯ ಯೋಚನೆಗಳು, ಅವಳ ಮನದಲಿ ಬದುಕಿನ ಬಗ್ಗೆ ನಿರಾಸಕ್ತಿಯನ್ನು ಸೃಷ್ಟಿಸುತ್ತವೆ. ಒಂಟಿಯಾಗಿರಲು ಆತಂಕಗೊಂಡರೆ, ಮನೆಯವರೊಟ್ಟಿಗೆ ಹೊಂದಿಕೊಳ್ಳಲು ಅದೇಕೋ ಸಿಡುಕು. ಹೊರ ಜಗತ್ತಿಗೆ ಮುಖ ತೋರಿಸಲು ಹಿಂಜರಿಕೆ, ಮದುವೆಯ ಮಾತೆತ್ತಿದರೆ ಭಯ, ಅಸಹ್ಯ.
ಇಂಥ ಸ್ಥಿತಿಯಲ್ಲಿ ಮನೆಯವರ ಸಾಂಗತ್ಯ ಅಗತ್ಯ. ಇಲ್ಲಿ ಸಹಾನುಭೂತಿಗಿಂತ ನಾವಿದ್ದೇವೆ ಎನ್ನುವ ಧೈರ್ಯವನ್ನು ಅವಳಲ್ಲಿ ತುಂಬವ ಅಗತ್ಯವಿದೆ. ಆಘಾತವನ್ನು ಮನಸಿನಿಂದ ಕಿತ್ತುಹಾಕುವ ಪ್ರಯತ್ನದಲ್ಲಿ ನೆರವಾಗಬೇಕಿದೆ. ಆ ಘಟನೆ ಮತ್ತೆ ಮತ್ತೆ ನೆನಪಾಗದಂತೆ ನೋಡಿಕೊಳ್ಳಬೇಕು. ಅಸಾಧ್ಯ ಎನ್ನುವ ಸ್ಥಿತಿಯಲ್ಲಿ ನಲುಗುತ್ತಿದ್ದರೆ ಮನೋವೈದ್ಯರ ಜತೆ ಆಪ್ತ ಸಮಾಲೋಚನೆಗೆ ಅನುವು ಮಾಡಿಕೊಡಬೇಕು. ಇದರಿಂದ ರಾಡಿಯಾದ ಮನಸ್ಸು ತಿಳಿನೀರಿನ ಸರೋವರವಾಗುವ ಸಾಧ್ಯತೆ ಹೆಚ್ಚು.

-  ಜಮುನಾ ರಾಣಿ ಎಚ್.ಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.