ಸೂರಾಲು ಸಿರಿ
ನಿರ್ದೇಶಕ ದಿ.ಜಿ.ವಿ. ಅಯ್ಯರ್ 1987ರಲ್ಲಿ ನಿರ್ದೇಶಿಸಿದ 'ಮಧ್ವಾಚಾರ್ಯ' ಚಿತ್ರದಲ್ಲಿ ಕಂಡ ಹಳೇ ಮನೆಯೊಂದರ ...

ನಿರ್ದೇಶಕ ದಿ.ಜಿ.ವಿ. ಅಯ್ಯರ್ 1987ರಲ್ಲಿ ನಿರ್ದೇಶಿಸಿದ 'ಮಧ್ವಾಚಾರ್ಯ' ಚಿತ್ರದಲ್ಲಿ ಕಂಡ ಹಳೇ ಮನೆಯೊಂದರ ದೃಶ್ಯ ಇನ್ನೂ ಮನಸ್ಸಿನಲ್ಲಿ ಮಾಸದೆ ಉಳಿದಿದೆ. ಸೂರಾಲು ಅರಮನೆಯ ಸೊಬಗೇ ಈ ಹಸಿರು ನೆನಪಿಗೆ ಕಾರಣ.
ಉಡುಪಿಯಿಂದ 25 ಕಿ.ಮೀ. ದೂರ. ಬ್ರಹ್ಮಾವರಕ್ಕೆ ಹೋಗಿ ಕೊಕ್ಕಣರೈ ಹಾದಿಯಲ್ಲಿ ಸಿಗುವ ಕ್ರಿ.ಶ.1511ರಲ್ಲಿ ನಿರ್ಮಾಣವಾದ ಅರಮನೆ. ತುಳುನಾಡಿನ ಇತಿಹಾಸವನ್ನು ಕಾಪಿಡುವ ಸಾಕ್ಷ್ಯವೂ ಹೌದು. ಜೈನ ವಂಶದ ಅರಸರ ನಿರ್ಮಾಣವಿದು. ಒಂದು ಎಕರೆ ವಿಸ್ತಾರದ ಜಾಗದಲ್ಲಿದೆ. ಆ ಸಮಯ ನಾಡಿನ ಅಲ್ಲಲ್ಲಿ ಆಳುತ್ತಿದ್ದ ಅರಸರು ನಿರ್ಮಿಸಿದ 12 ಅರಮನೆಗಳಲ್ಲಿ ಒಂದೆನಿಸಿದರೂ ಇನ್ನೂ ಕುಸಿಯದೆ ಜೀವ ಹಿಡಿದಿಟ್ಟುಕೊಂಡಿರುವುದು ಇದೊಂದೇ. ರಾಜ್ಯದ ಏಕೈಕ ಮಣ್ಣಿನ ಅರಮನೆಯಾಗಿ ಬದುಕಿರುವುದು ಇದು ಮಾತ್ರ ಎಂಬ ಹೆಗ್ಗಳಿಕೆಯೂ ಇದೆ. ಹಸಿರು ಹೊಲಗಳ ನಡುವೆ ತಲೆಯೆತ್ತಿ ನಿಂತ ಈ ವಿಶಾಲವಾದ ಅರಮನೆಯ ಗೋಡೆಗಳನ್ನು ಪೂರ್ಣವಾಗಿ ಸುಟ್ಟ ಜೇಡಿಮಣ್ಣಿನಿಂದಲೇ ಕಟ್ಟಲಾಗಿದೆ. ಹುಲ್ಲುಮಿಶ್ರಿತವಾದ ಗಾರೆಗೆ ಸಗಣಿ ನೀರಿನ ದಟ್ಟವಾದ ಲೇಪನವಿದೆ. ಮಾಡಿಗೆ ನಾಡಹೆಂಚಿನ ಹೊದಿಕೆಯಿದೆ. ಎರಡು ಉಪ್ಪರಿಗೆಗಳಿವೆ. ಜೈನ ಮತ್ತು ಹಿಂದೂ ವಾಸ್ತುಶಿಲ್ಪದ ಕೌಶಲಕ್ಕೆ ಅಪ್ರತಿಮ ಸಾಕ್ಷಿಯಂತಿರುವ ಇದರಲ್ಲಿ ಭಾರಿ ಗಾತ್ರದ ಮರದ ತೊಲೆಗಳನ್ನೇ ಬಳಸಿದ್ದಾರೆ. ಕಿಟಕಿ, ಬಾಗಿಲು ಮತ್ತು ಮೇಲ್ಮುಚ್ಚಿಗೆಯಲ್ಲಿ ಸೂಕ್ಷ್ಮವಾದ ಕೆತ್ತನೆಗಳಿವೆ.
ಕುಸಿದು ಬೀಳುವ ಹಂತದಲ್ಲಿರುವ ಈ ಅರಮನೆಯಲ್ಲಿ 1983ರಿಂದ ಯಾರೂ ವಾಸವಾಗಿಲ್ಲ. ಸೂರಾಲನ್ನು ರಾಜಧಾನಿಯಾಗಿ ಮಾಡಿಕೊಂಡು ಈ ಅರಮನೆಯಲ್ಲಿ ಮೆರೆದಿದ್ದ ರಾಜವಂಶಕ್ಕೆ ಬೈಂದೂರಿನವರೆಗೆ ಅಧಿಪತ್ಯವಿತ್ತು. ವಿಜಯನಗರ, ಪೋರ್ಚುಗೀಸ್, ಮೈಸೂರು ರಾಜರು, ಬ್ರಿಟಿಷರು ಮೊಕ್ಕಾಂ ಹೂಡಿದ ಅರಮನೆಯಲ್ಲಿ ಡಿಸಿಲ್ವಾ ಎಂಬ ಪೋರ್ಚುಗೀಸ್ ಸೇನಾನಿ ಬಹುಕಾಲ ತಂಗಿದ್ದನಂತೆ. ಅನೇಕ ದೇಗುಲಗಳಿಗೆ ಒಡವೆಗಳು ಮತ್ತು ಅನೇಕ ಕೊಡುಗೆಗಳನ್ನು ನೀಡಿ ಉತ್ತಮ ಆಡಳಿತಕ್ಕೆ ಹೆಸರಾದ ಅವರ ರಾಜ್ಯಾಡಳಿತ ಹೈದರಾಲಿಯ ಕಾಲದಲ್ಲಿ ಅಂತ್ಯಗೊಂಡಿತಂತೆ. ಅರಮನೆಯೊಳಗೆ ಅನೇಕ ಕೊಠಡಿಗಳಿದ್ದು ಆ ಕಾಲದ ಮರದ ಬಾಗಿಲುಗಳು ಈಗಲೂ ಸುಭದ್ರ. ಅಂದಿನ ರಾಜರ ಆಡಳಿತದ ಸಭೆ ನಡೆಯುತ್ತಿದ್ದ ಪಟ್ಟದ ಚಾವಡಿ ಬರಿದಾಗಿದೆ. ಪದ್ಮಾವತಿ ಕುಮಾರರಾಯರ ಮಂಚಗಳಿದ್ದು ಇವರು ಅರಸರ ಆರಾಧ್ಯ ದೇವತೆಗಳಾಗಿದ್ದರು. ಕುಸಿಯುತ್ತಿರುವ ಅರಮನೆಯನ್ನು ತುಳುನಾಡಿನ ಇತಿಹಾಸದ ದ್ಯೋತಕವಾಗಿ ಸಂರಕ್ಷಿಸಬೇಕೆಂಬ ಜನತೆಯ ಕೂಗಿಗೆ ಸರ್ಕಾರವೂ ಸ್ಪಂದಿಸಿ ಅನುದಾನ ಪೂರೈಸಿದೆ. ಆದರೆ ಕೈಗೊಂಡ ಕೆಲಸಗಳು ತೃಪ್ತಿಕರವಾಗಿಲ್ಲ ಎನ್ನುತ್ತಾರೆ ಜನ.
- ಪ. ರಾಮಕೃಷ್ಣ ಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


