ಲವ್ಕಿಕ ಚಿಂತೆ

ಕಳೆದ ವಾರದವರೆಗೂ ಎಲ್ಲ ಚೆನ್ನಾಗಿತ್ತು. ಅಮ್ಮನಿಗೆ ಅವಳಿಲ್ಲದೆ ಬೆಳಗಾಗುತ್ತಿರಲಿಲ್ಲ. ಎಲ್ಲ ಕೆಲಸದಲ್ಲೂ ಮಗಳು ಬೇಕು. ಅಪ್ಪನಿಗೆ ಅವಳು ಕಾಫಿ ಕೊಟ್ಟು ಪೇಪರ್ ಕೈಗಿಟ್ಟಾಗ ಒಂದು ರೌಂಡ್ ನಿನ್ನೆಯ ಆಗುಹೋಗುಗಳ ಬಗ್ಗೆ ಚರ್ಚೆ. ತಮ್ಮನಿಗೆ ಅವಳ ಸುಪ್ರಭಾತ ಇಲ್ಲದೆ ಏಳಲಾಗುತ್ತಿರಲಿಲ್ಲ. ಅಣ್ಣ ಪುಟ್ಟಿ ಹೊರಡೇ ಆಫೀಸಿಗೆ ಟೈಮ್ ಆಯ್ತು, ತಂಗಿಗೆ ನಾನೇ ಜಡೆ ಹಾಕಬೇಕು. ನೆಂಟರಿಗೆ ಅವಳು ಮುದ್ದು ಬಂಗಾರಿ. ಹುಟ್ಟಿದರೆ ಇಂಥ ಮಗಳು ಹುಟ್ಟಬೇಕು ಎಂಬ ಪ್ರಶಂಸೆ. ಆದರೆ ಈಗ ಅವಳೆಂದರೆ ಅಮ್ಮ ಮುಖ ಸಿಂಡರಿಸುತ್ತಾಳೆ. ಅಪ್ಪ ಅವಳ ಇರುವಿಕೆ ಕಂಡಾಕ್ಷಣ ಮೌನಿಯಾಗುತ್ತಾನೆ. ಅಣ್ಣನ ಮುಖಭಾವ 'ನಾಚಿಕೆಗೆಟ್ಟವಳೆ' ಎನ್ನುತ್ತದೆ. ತಮ್ಮನ ಕಣ್ಣುಗಳಲ್ಲಿ ತಿರಸ್ಕಾರದ ನೋಟ.
ನಾನು ಕೇಳಿದ್ದು, ಕೇಳದೆ ಇದ್ದದ್ದು ಎಲ್ಲ ಕೊಡಿಸಿದ್ದೀರಿ. ಇದೊಂದು ನನ್ನ ಜೀವನದ ಕೊನೆಯ ಕೋರಿಕೆ. ದಯವಿಟ್ಟು ಕಂಡ ಕನಸುಗಳು ನನಸಾಗಲು ಕೈಜೋಡಿಸಿ ಅಪ್ಪಾ... ಎಂದು ಹೇಳಿದ್ದೇ ಇಷ್ಟಕ್ಕೆಲ್ಲ ಕಾರಣ. ನೀನು ಹೀಗೆ ಅಂತ ಅಂದುಕೊಂಡಿರಲಿಲ್ಲ, ನಮ್ಮ ಮಾನ ಮರ್ಯಾದೆ ಎಲ್ಲ ಹರಾಜು ಹಾಕಿಬಿಟ್ಟೆಯಲ್ಲೇ. ಮಗಳು ಓದಿ ತನ್ನ ಕಾಲ ಮೇಲೆ ನಿಂತುಕೊಳ್ಳಲಿ ಎಂದು ಓದಿಸಿ ಕೆಲಸಕ್ಕೆ ಕಳುಹಿಸಿದ್ದು ನಮ್ಮದೇ ತಪ್ಪು. ಯಾವ ಜಾತಿಯವನೋ ಏನೋ? ಹೀಗೆ ಮಾಡುತ್ತಾಳೆ ಎಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಹೀಗೆ ಸಾಗಿತ್ತು ಮನೆಯವರೆಲ್ಲರ ಒಕ್ಕೊರಲಿನ ಬೈಗುಳ, ತಿರಸ್ಕಾರಗಳು.
ಮಕ್ಕಳ ಪ್ರೀತಿಯ ಪ್ರಸ್ತಾಪದ ನಂತರ ಹೆಚ್ಚು ಕಡಿಮೆ ಇದೇ ರೀತಿ ಇರುತ್ತದೆಯಲ್ಲವೇ ಎಲ್ಲರ ಮನೆಯಲ್ಲೂ? ಅದರ ಬದಲು ನೀವು ಹೀಗೆ ಯೋಚಿಸಿದರೆ ಹೇಗೆ?
ಸ್ಕೂಲು ಕಾಲೇಜಿಗೆ ಸರಿಯಾಗಿ ಹೋಗದೆ ಫೇಲ್ ಆಗಿದ್ದಾಳಾ? ಯಾರಂದರೆ ಅವರ ಜತೆಯಲ್ಲಿ ಕದ್ದು ಮುಚ್ಚಿ ಓಡಾಡಿದ್ದಾಳಾ? ಸ್ಪೆಷಲ್ ಕ್ಲಾಸು, ಸ್ಟಡಿ ಟೂರು ಅಂತ ಸುಳ್ಳು ಹೇಳಿ ಮತ್ತೆಲ್ಲಿಗೋ ಹೋಗಿ ಬಂದಿದ್ದಾಳಾ? ಹದಿಹರೆಯದಲ್ಲಿ ಇಂಥ ಹುಡುಗಾಟ ಆಡಿದ್ದರೆ ನಿಮ್ಮ ಮಗಳನ್ನ ತಿದ್ದಿ ಬುದ್ಧಿ ಹೇಳುವುದರಲ್ಲಿ, ಕಿವಿ ಹಿಂಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಓದಿನ ಸಮಯದಲ್ಲಿ ಓದಿ, ನಿಮ್ಮ ಪ್ರೀತಿಗೆ ಯಾವುದೇ ಕಳಂಕ ತರದೆ ಕೀರ್ತಿ ತಂದ ಮಗಳು ತನ್ನ ನಿರ್ಧಾರ ತಾನು ತೆಗೆದುಕೊಳ್ಳುವ ಸಾಮರ್ಥ್ಯ ಬಂದ ಮೇಲೂ ಅವಳ ನಿರ್ಧಾರಗಳನ್ನು ಕೇವಲ ನಿಮ್ಮ ಪ್ರತಿಷ್ಠೆ, ಮಾನ, ನಾಲ್ಕು ಜನ ಏನಂದಾರು ಎನ್ನುವ ಮನೋಭಾವದಿಂದ ವಿರೋಧಿಸಬೇಡಿ.
ಮೊನ್ನೆ ಮೊನ್ನೆಯವರೆಗೂ ನಾನಿಲ್ಲದೆ ಏನೂ ಇಲ್ಲ ಎನ್ನುತ್ತಲಿದ್ದವರು ಈಗ ನೀನು ಇರುವುದೇ ನಮ್ಮನ್ನು ಅವಮಾನಿಸಲಿಕ್ಕೆ, ಹುಟ್ಟುತ್ತಾ ಸತ್ತಿದ್ದರೆ ಚೆನ್ನಾಗಿತ್ತು ಎಂಬ ನಿಮ್ಮ ಮಾತುಗಳಿಂದ ಎಷ್ಟು ಘಾಸಿಯಾಗಿರಬೇಡ ನಿಮ್ಮ ಮುದ್ದು ಮಗಳ ಹೃದಯ. ಕೆಲವೊಮ್ಮೆ ಯಾರಿಂದಲೋ ಅವಳ ಪ್ರೀತಿಯ ವಿಷಯ ನಿಮಗೆ ತಿಳಿಯುತ್ತದೆ. ಆ ವೇಳೆ ಅವಳಿಗೆ ಬೇಕಿರುವುದು, ನಾವು ನಿನ್ನೊಟ್ಟಿಗೆ ಇದ್ದೇವೆ ಎನ್ನುವ ನಿಮ್ಮ ಹೆಗಲು. ಆದರೆ ಬಹುತೇಕ ಪ್ರಕರಣಗಳಲ್ಲಿ ಹುಡುಗಿ ಒಬ್ಬಂಟಿ. ಹುಡುಗರಾದರೆ ಹೇಗೋ ಮನೆಯಲ್ಲಿ ಒಪ್ಪಿಸಿಬಿಡುತ್ತಾರೆ! ಮಗನಿಲ್ಲದೆ ನಮಗೇನಿದೆ ಎಂದು ಅಪ್ಪ ಅಮ್ಮ ತಲೆಬಾಗುತ್ತಾರೆ. ಆದರೆ ಹುಡುಗಿಗೆ ಮನೆಯಲ್ಲಿ ಮಾತನಾಡಿಸುವವರಿಲ್ಲದೆ ಶೂನ್ಯತೆ ಕಾಡುತ್ತದೆ. ಎಲ್ಲರ ಸಿಡುಕಿನ ನಡುವೆ ಅವಳನ್ನು ಕಾಡುವ ಪ್ರಶ್ನೆ, ನಿಜಕ್ಕೂ ನಾನು ಪ್ರೀತಿಸಿದ್ದು ಅಪರಾಧವೇ? ಹಾಗಾದರೆ ನನ್ನ ಕಣ್ಣೆದುರಿಗೇ ದಿನಾ ಕಾಣುವ ಅಪ್ಪ ಅಮ್ಮನ ಪ್ರೀತಿಯ ಅರ್ಥವೇನು? ದಾಂಪತ್ಯಕ್ಕೆ ಕಾಲಿಟ್ಟ ಮೇಲೆಯೇ ಪ್ರೀತಿಸಬೇಕು ಏಕೆ? ಪ್ರೀತಿ ಮಾಡಿ ಮದುವೆಯಾಗುವುದನ್ನು ಪ್ರಪಂಚವೇಕೆ ಸ್ವೀಕರಿಸುತ್ತಿಲ್ಲ? ಇದೆಲ್ಲದಕ್ಕೂ ಉತ್ತರಿಸುವ ಗೋಜಿಗೆ ಯಾರೂ ಹೋಗುವುದಿಲ್ಲ.
ಒಮ್ಮೆ ಯೋಚಿಸಿ ನೋಡಿ, ಚಿಕ್ಕಂದಿನಿಂದ ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ನೊಂದಿಗೆ ನಾವಿದ್ದೇವೆ... ಮುಂದೆ ಸಾಗು, ಯಾವುದೇ ಪರಿಸ್ಥಿತಿಯಲ್ಲೂ ನಿನ್ನನ್ನು ಒಬ್ಬಂಟಿಯಾಗಿಸೆವು ಎಂದು ಭರವಸೆ ನೀಡಿ ಬೆಳೆಸಿರುತ್ತೀರಿ. ಅಂಥ ಅಪ್ಪ ಅಮ್ಮ ನೀವಾಗಿದ್ದರೆ ನಿಮ್ಮ ಮಕ್ಕಳ ಯಾವುದೇ ನಿರ್ಧಾರಗಳು ನಿಜಕ್ಕೂ ತಪ್ಪಾಗಿರಲಾರವು. ಅವು ನಿಮ್ಮ ನಿರ್ಧಾರಗಳಷ್ಟೆ ಪಕ್ವವಾಗಿರುತ್ತವೆ. ಮುಂದೆ ಸಾಗಲು ನಿಮ್ಮ ರುಜುವಿನ ಅವಶ್ಯ ಮಾತ್ರ ಇರುತ್ತದೆ. ಅಲ್ಲವೇ?
= ಜಮುನಾ ರಾಣಿ ಎಚ್.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


