ಮಹಿಳೆ-ಮನೆ-ಬದುಕು

ನಾಟ್ಯ ನಿವೇದಿತಾ

ನಾಟ್ಯ ನಿವೇದಿತಾ
Published On :

ಹುಟ್ಟಿನಿಂದಲೇ ವಾಕ್ ಹಾಗೂ ಶ್ರವಣ ಶಕ್ತಿ ಕಳೆದುಕೊಂಡ ನಿವೇದಿತಾಗೆ ಯಾವುದೇ ಗುರುವಿನ ಮಾರ್ಗದರ್ಶನವಿಲ್ಲ. ಸ್ವಸಾಮರ್ಥ್ಯದಿಂದ ಭರತನಾಟ್ಯದಲ್ಲಿ ಪ್ರಾವೀಣ್ಯಳಾದಳು. ಏಕತಾನತೆ ಹಾಗೂ ಪರಿಶ್ರಮವಿದ್ದಲ್ಲಿ ಯಾವ ವಿದ್ಯೆಯಾದರೂ ಒಲಿಯದೇ ಇರದು ಎನ್ನುವುದಕ್ಕೆ ನಿವೇದಿತಾ ಸಾಕ್ಷಿ.  ಈ ಹುಡುಗಿ ನೃತ್ಯ ಕಲಾ ಮಂದಿರದಲ್ಲಿ ತನ್ನ ವಯಸ್ಸಿನ ಮಕ್ಕಳು ಭರತನಾಟ್ಯ ಮಾಡುವುದನ್ನು ನೋಡು ನೋಡುತ್ತಲೇ ಕೇಳಿಸದ ಸುಶ್ರಾವ್ಯದ ಹಾಡಿಗೆ, ತಾಳಕ್ಕೆ ತಕ್ಕಂತೆ ಹೆಜ್ಜೆಗಳನ್ನು ಹಾಕಿ ಸೋಜಿಗ ಸೃಷ್ಟಿಸಿದವಳು. 8ನೇ ವಯಸ್ಸಿನಲ್ಲೇ ಆರಂಭಿಸಿದ ನೃತ್ಯವು, ಈ 25ರ ವಯೋವಾನದಲ್ಲೂ ನಿರಂತರ ಸಾಗಿದೆ. ಈ ನೃತ್ಯಕಲೆಗೆ ಬೇಕಾದ ತಾಳಜ್ಞಾನವನ್ನು ನಿವೇದಿತಾ ತನ್ನ ತಾಯಿಯಿಂದ ಪಡೆದಿದ್ದಾಳೆ. ತಾಯಿ ರಮಾ ಜಗನ್ನಾಥ್ ಭರತನಾಟ್ಯ, ಕೂಚಿಪುಡಿ ಹಾಗೂ ಆಂಧ್ರನಾಟ್ಯಂಗಳನ್ನು ಕಲಿತಿದ್ದಲ್ಲದೆ ಈ ನಾಟ್ಯಗಳಿಗೆ ಬೇಕಾದ ಹಾಡುಗಾರಿಕೆಯಲ್ಲೂ ಪಳಗಿದವರು. ಈ ಎಲ್ಲ ಗುಣಗಳು ಮಗಳಿಗೆ ಹುಟ್ಟಿನಿಂದಲೇ ಬಂದು, ಅವಳಲ್ಲಿ ಮನೆಮಾಡಿದ್ದ ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದವು. ತಮ್ಮದೇ ಕಲಾಶಾಲೆಯಲ್ಲಿ ಮಕ್ಕಳು ಮಾಡುವ ನಾಟ್ಯವನ್ನು ನೋಡಿ ಬಂದು ಅಮ್ಮನ ಮುಂದೆ ಮಾಡಿ ತೋರಿಸಿದಾಗಲೇ ಅಮ್ಮನಿಗೆ ಗೊತ್ತಾಗಿದ್ದು ಈಕೆಯೊಳಗಿನ ನೃತ್ಯ ತುಡಿತ. ಮುಂದೆ ಸೋದರ ಅತ್ತೆ ಸುಭದ್ರಾ ಪ್ರಭು ನಡೆಸುತ್ತಿದ್ದ ನಟರಾಜ ನೃತ್ಯ ಕಲಾ ಮಂದಿರದಲ್ಲೇ ಇವರ ತಾಯಿಯ ಜತೆ ಸೇರಿ ಈಕೆಯ ಕಲೆಗೆ ಸ್ಪಂದಿಸಿ ಬೆಳೆಸಿದ್ದಾರೆ. ಅಂದಿನಿಂದ ಆರಂಭಗೊಂಡಿದ್ದು ಭಾರತ ಸರ್ಕಾರದಿಂದ ರಾಷ್ಟ್ರಪ್ರಶಸ್ತಿ ಪಡೆಯುವವರೆಗೆ ಕೊಂಡೊಯ್ದಿದೆ. ಈಕೆಗೆ ಪ್ರೇಕ್ಷಕರ ಕರತಾಡನದ ಸದ್ದು ಕೇಳಿಸದು. ಆದರೆ ಅವರ ಪ್ರಶಂಸೆಯ ಮುಖಭಾವ ಅರ್ಥವಾಗುತ್ತದೆ.  ಅಷ್ಟೇ ಸಾಕಾಗಿತ್ತು ಈಕೆ ರಾಷ್ಟ್ರಮಟ್ಟಕ್ಕೇರಲು. ಆದರೆ ಯಾವುದೇ ಹಮ್ಮುಬಿಮ್ಮುಗಳ, ಪ್ರಚಾರಗಳ ಸೋಗಿಲ್ಲದೆ ಕಲಾದೇವಿಯ ಆರಾಧನೆಯನ್ನು ತಪಸ್ಸಿನಂತೆ ಮಾಡಿಕೊಂಡೇ ಬರುತ್ತಿದ್ದಾರೆ. ಈ ಎಲ್ಲ ಸಾಧನೆಗೆ ತಂದೆ ಟಿ.ಎಸ್. ಜಗನ್ನಾಥ್ ರಾವ್ ನಿರಂತರ ಪ್ರೋತ್ಸಾಹ ನೀಡಿದ್ದಾರೆ.  ಈಕೆ ಜೆಎಸ್ಸೆಸ್ 'ಸಹನಾ' ವಿಶೇಷ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು 4ನೇ ತರಗತಿಯವರೆಗೆ ಓದಿದ್ದಾಳೆ. ನವದೆಹಲಿಯಲ್ಲಿ 2000ದಲ್ಲಿ ನಡೆದ ಅಖಿಲ ಭಾರತ 'ಎಬಿಲಿಟಿ ಉತ್ಸವ'ದಲ್ಲಿ ಭರತನಾಟ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರಲ್ಲದೆ 2007ರಲ್ಲಿ ರಾಜ್ಯ ಅಂಗವಿಕಲರ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆಯಿಂದ ವೈಯಕ್ತಿಕ ಪ್ರಶಸ್ತಿ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಇಲಾಖೆಯಿಂದ ರಾಷ್ಟ್ರಪ್ರಶಸ್ತಿ ಗಳಿಸಿದ್ದಾರೆ. 1999, 2000ದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಪ್ರದರ್ಶನ ನೀಡಿದ್ದಾರೆ. 'ಕೀರ್ತಿಶ್ರೀ', 'ಅಪೂರ್ವ ಕಲಾರತ್ನ' ಹಾಗೂ 'ಸೃಷ್ಟಿ' ಬಿರುದುಗಳಿಗೂ ಭಾಜನರು. ಇಲ್ಲಿಯವರೆಗೆ 80ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವುದಲ್ಲದೇ, ಶಿರಸಿಯ ಮಾರಿಕಾಂಬಾ ದೇಗುಲದಲ್ಲಿ ಸೋಲೋ ನೃತ್ಯ ಪ್ರದರ್ಶನ ನೀಡಿ, ಮೆಚ್ಚುಗೆಗೆ ಪಾತ್ರರಾದರು.

= ಸಂಕೇತ್ ಗುರುದತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.