ಮಹಿಳೆ-ಮನೆ-ಬದುಕು

ಟೆಕ್ನೋ ನಂಟು

ಟೆಕ್ನೋ ನಂಟು
Published On :

ಇದು ಟೆಕ್ನಾಲಜಿ ಪರ್ವ. ದಿನಕ್ಕೊಂದು ಆ್ಯಪ್‌ಗಳು ಅವತರಿಸುತ್ತಲೇ ಇರುತ್ತವೆ. ಮುಂಚೆ ಫೋನ್ ಬಂತೆಂದರೆ ಮನೆ ಮಂದಿಗೆಲ್ಲ ಸುಗ್ಗಿ. ಈಗ ಹಾಗಲ್ಲ. ಯಾರ ಪೋನ್, ಏನು ಮಾತಾಡ್ತಿದ್ದಾರೆ? ಅಂತ ತಿಳಿಯುವ ಕುತೂಹಲ ಪಕ್ಕದವರಿಗಿಲ್ಲ. ಏಕೆಂದರೆ ಮೆಸೇಜ್‌ಗಳಲ್ಲಿ ಭಾವನೆಗಳ ವಿನಿಮಯ ಆಗುತ್ತೆ. ಮನದಾಳದ ಮಾತುಗಳು ಸ್ಕ್ರೀನ್‌ನಲ್ಲಿ ರೂಪತಾಳುತ್ತೆ. ಮಾತುಗಳು ಬಾಯಿಂದ ಬರದೆ, ಕೈ ಬೆರಳುಗಳಿಂದ ಟೈಪ್ ಆಗಿ ಸೆಂಡ್ ಆಗುತ್ತವೆ. ನಮ್ಮ ಮನಸ್ಸು, ಅದರೊಳಗಿನ ಭಾವ ತಲುಪುವವರಿಗೆ ತಲುಪಿ ಸಾರ್ಥಕತೆ ಪಡೆಯುತ್ತೆ. ಜತೆಗೆ ಫ್ರೀ! ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ನಾವು ವಾಟ್ಸ್ ಆ್ಯಪ್ ಮೂಲಕ ಮಾತಾಡಿಕೊಳ್ಳಬಹುದು!
ಎಷ್ಟೋ ದಿನಗಳಿಂದ ಅಣ್ಣ ತಂಗಿಯ ಮಧ್ಯ ಮಾತುಕತೆ ಪೂರ್ಣವಿರಾಮ ಪಡೆದಿತ್ತು. ಅದೊಂದು ಶುಭದಿನ, ಬೆಳಗಿನ ವಾಕಿಂಗ್ ಮುಗಿಸಿಬಂದ ತಂಗಿ ಮೊಬೈಲ್ ಆನ್ ಮಾಡಿದ್ದೇ ತಡ, ಖುಷಿಯಿಂದ ಹಿಗ್ಗಿದಳು. ಕಾರಣ ಅಣ್ಣ ವಾಟ್ಸ್ ಆ್ಯಪ್‌ನಲ್ಲಿ ಗುಡ್‌ಮಾರ್ನಿಂಗ್ ವಿಡಿಯೋದ ತುಣುಕನ್ನು ಕಳುಹಿಸಿದ್ದ. ಈಗ ಮನೇಲಿ ಏನು ಮಾಡ್ತಿದ್ರೂ ಅದರ ಪೋಟೋ ಸೆಂಡ್ ಆಗುತ್ತೆ. ಆ ಸಂದೇಶಗಳಲ್ಲಿ ಪ್ರೀತಿ, ಕೇರಿಂಗ್, ಅಕ್ಕರೆ ಎಲ್ಲವೂ ಇರುತ್ತೆ.
ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರೀತಿಸುವ ಒಂದೇ ಒಂದು ಜೀವ ತಾಯಿ. ಮಕ್ಕಳು ದೂರ ದೂರದೂರುಗಳಿಗೆ ಕೆಲಸ ನಿಮಿತ್ತ ಜೀವನ ಸಾಗಿಸಲು ಸಾಗಿದರು. ಮಕ್ಕಳಿಲ್ಲದ ಆ ಮನೆಯಲ್ಲಿ ಇರಲು ಇಷ್ಟ ಪಡದೆ ದಂಪತಿ ಫಾರ್ಮ್‌ಹೌಸ್ ವಾಸಿಗಳಾದರು. ಆದರೆ ತಾಯಿ ಮಗನ ಬಾಂಧವ್ಯ? ಮಗನನ್ನು ಕಳುಹಿಸಲು ತಾಯಿಯ ಮನ ಒಪ್ಪುತ್ತಿಲ್ಲ. ತಾಯಿಯನ್ನು ಬಿಟ್ಟು ತೆರಳಲು ಮಗನಿಂದಾಗುತ್ತಿಲ್ಲ. ಅನಿವಾರ್ಯವಾಗಿ ತಾಯಿ ಮಗ ದೂರಾಗಲೇಬೇಕಾಯಿತು. ಆಗೆಲ್ಲ ಇವರ ಭಾವನೆಗಳು, ಒತ್ತಡಗಳು, ದುಗುಡ ದುಮ್ಮಾನಗಳು ವ್ಯಕ್ತವಾಗುತ್ತಿದ್ದುದು ಈ ವಾಟ್ಸ್ ಆ್ಯಪ್ ಮೂಲಕ. ಈ ತಾಯಿಮಗನ ಪ್ರೀತಿ ಸ್ವಲ್ಪದಿನದಲ್ಲೇ ಹೆಂಡತಿಗೂ ತಿಳಿದು ಅವಳೂ ಅತ್ತೆಯನ್ನು ಪ್ರೀತಿಯಿಂದ ನೋಡಲಾರಂಭಿಸಿದಳು. ಕಾಲೇಜು ದಿನಗಳು ನಿಜವಾಗಿಯೂ ಸುವರ್ಣ ಯುಗ. ಒಬ್ಬರಿಗೊಬ್ಬರು ಕೀಟಲೆ ಮಾಡೋದು, ಲೆಕ್ಚರರ್ಸ್‌ನ ಆಟ ಆಡಿಸೋದು, ಅವರಿಂದ ಬೈಸಿಕೊಳ್ಳೋದು- ಹೀಗೆ ಎಲ್ಲವೂ ಕಲರ್‌ಫುಲ್. ಅದೊಂಥರ ಎಡಬಿಡಂಗಿ ವಯಸ್ಸು. ಪ್ರೀತಿ ಪ್ರೇಮ ಅಂತ ಕೋಡಂಗಿ ಥರ ಆಡೋ ಮನಸ್ಸು ಬೇರೆ. ಅಂಥ ದಿನಗಳಲ್ಲಿ ಪ್ರೀತಿಸಿ, ನೀನೇ ನನ್ನ ಬಾಳ ಗೆಳತಿ/ ಗೆಳೆಯ, ನಿನ್ನನ್ನು ಮರೆತು ಬದುಕಿರಲಾರೆ ಎಂದೆಲ್ಲ ಹೇಳುತ್ತ ಪ್ರೀತಿ ಪ್ರೇಮ ಪ್ರಣಯ ಎನ್ನುತ್ತಾರೆ. ಆದರೆ ಈ ಪ್ರೇಮಿಗಳು ಮನನೊಂದು ದೂರಾಗಿದ್ದರು. ಸದ್ಯ ಇಬ್ಬರ ಸೆಲ್ ನಂಬರ್ಸ್ ಅದೇ ಇತ್ತು. ಕೆಲ ವರ್ಷಗಳ ಬಳಿಕ ಇಬ್ಬರೂ ವಾಟ್ಸ್ ಆ್ಯಪ್‌ನಲ್ಲಿ ಒಂದಾದರು. ಭಾವನೆಗಳು, ಕನಸುಗಳು ಮತ್ತೆ ಗರಿಬಿಚ್ಚಿದವು. ಹಿರಿಯರ ಅನುಮತಿಯಿಂದ ಒಂದಾದರು ಈ ನಿಜವಾದ ಪ್ರೇಮಿಗಳು.
ಹಿರಿಯರ ಅನುಮತಿ ಇಲ್ಲದೆ ಮದುವೆಯಾಗಿ ಹೊರದೇಶದಲ್ಲಿದ್ದ ಮಗ ಸೊಸೆ, ಬೇಸರಗೊಂಡಿದ್ದ ತಂದೆತಾಯಿಗಳ ಬಾಳಿಗೊಂದು ಆಶಾಕಿರಣವಾಗಿ ಜನ್ಮತಾಳಿಬಂದಿತು ಸ್ಮಾರ್ಟ್‌ಫೋನ್. ಒಮ್ಮೆ ಮೊಬೈಲ್ ರಿಂಗಣಿಸಿತು. ನೋಡಿದರೆ ಪುಟ್ಟ ಮಗುವಿನ ತೊದಲ ಮಾತುಗಳು ಆಡಿಯೋ ರೂಪದಲ್ಲಿ ಬಂದಿತ್ತು. ಎರಡು ಮೂರು ಸಂದೇಶಗಳಲ್ಲಿ ತಮ್ಮ ಸಂದೇಹಗಳಿಗೆ ಉತ್ತರ ಸಿಕ್ಕಿತ್ತು. ಅದು ನಮ್ಮ ಮೊಮ್ಮಗನ ಮುದ್ದಾದ ತೊದಲು ನುಡಿಗಳು ಎಂದು. ಮೊಮ್ಮಗ ಹುಟ್ಟಿದ್ದೇ ತಿಳಿದಿರಲಿಲ್ಲ. ಮೊಮ್ಮಗನ ಪ್ರೆಂಡ್ಸ್ ರಿಕ್ವೆಸ್ಟ್‌ಗೆ ಅಜ್ಜಿತಾತ ಸೋತು ರಿಪ್ಲೈ ಕಳುಹಿಸಿ ಮೊಮ್ಮಗನೊಂದಿಗೆ ಸ್ನೇಹ ಬೆಳೆಸಿದರು. ಕ್ರಮೇಣ ಮಗ ಸೊಸೆ ತಂದೆ ತಾಯಿ ಎಲ್ಲರೂ ಒಂದಾಗಿದ್ದರು. ಹೀಗೆ ವಾಟ್ಸ್ ಆ್ಯಪ್‌ನ ಸಂಬಂಧ ಬೆಸೆಯುವ ಪ್ರಕ್ರಿಯೆ ಅಷ್ಟಿಷ್ಟಲ್ಲ.

= ಸವಿತಾ ನಾಗೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.