ನಿತ್ಯ ಜೀವನದ ಟರ್ನ್ ಕೋಟ್ಗಳು

ಬೆಂಗಳೂರಿನ ಬಿಎಂಟಿಸಿ ಬಸ್ಗಳ ಪ್ರಯಾಣಕ್ಕಿಂತ ಗ್ರಾಮೀಣ ಪ್ರದೇಶದಲ್ಲಿನ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಆಗುವ ಅನುಭವ ಅವರ್ಣನೀಯ. ಬೇಕೆಂದೇ ಸದ್ದು ಮಾಡುತ್ತಿದೆಯೇನೋ ಅನ್ನಿಸುವಷ್ಟು ಗ್ರೀಸ್ ಇಲ್ಲದ ಬಿಡಿ ಭಾಗಗಳು, ಗಾಳಿ ಸುಳಿಯಲೂ ಜಾಗವಿಲ್ಲದಷ್ಟು ಜನಸಂದಣಿ, ಗಾಡಿಗೆ ಬ್ರೇಕ್ ಬಿದ್ದ ತಕ್ಷಣ ಒಬ್ಬರ ಮೇಲೆ ಒಬ್ಬರು ಬೀಳುವ ದೃಶ್ಯ, ಮಕ್ಕಳ ಕಿರುಚಾಟ, ಕಂಡಕ್ಟರ್ನ ಜೋರು ದನಿ. ಸಮಾಧಾನ ಅಂದರೆ ಬಸ್ ಹತ್ತಲು ಇರುವಷ್ಟು ನೂಕು ನುಗ್ಗಲು ಇಳಿಯುವಲ್ಲಿ ಇರುವುದಿಲ್ಲ.
ಇಂಥದ್ದೇ ಬಸ್ನಲ್ಲಿ ಪ್ರಯಾಣಿಸುವಾಗ ಇದ್ದಕ್ಕಿದ್ದಂತೆ ಕೂಗಾಟ ಪ್ರಾರಂಭವಾಯಿತು. ವಿದ್ಯಾವಂತೆಯಂತಿದ್ದ ದಢೂತಿ ಹೆಂಗಸೊಬ್ಬಳು, 'ಅಲ್ಲಪ್ಪ ನೋಡೋದಕ್ಕೆ ಓದಿರೋರ್ ಥರಾ ಇದ್ದೀಯಾ, ಇಲ್ಲಿ ಬರ್ದಿರೋದು ಕಾಣಲ್ವ? ಮೊದಲು ಮರ್ಯಾದೆಯಾಗಿ ಇವರಿಗೆ ಸೀಟ್ ಬಿಡು, ಇಲ್ಲಾಂದ್ರೆ ನಾನೇ ಎಳ್ದು ಆಚೆ ಬಿಡ್ಲಾ?' ಬಸ್ಸಿನಲ್ಲಿರುವ ಎಲ್ಲರ ಗಮನ ಆಕೆಯ ಮೇಲೆ. ಆಕೆ ಸೀಟ್ ಕೇಳಿದ್ದು ಪೋಲಿಯೊ ಪೀಡಿತ ಮಧ್ಯವಯಸ್ಸಿನ ಹೆಂಗಸಿಗೆ. ಮತ್ತೊಂದು ಹೆಣ್ಣಿನ ಸಹಾಯಕ್ಕೆ ನಿಂತ ಆಕೆಯನ್ನು ನೋಡಿ ಹೆಮ್ಮೆಯೆನಿಸಿತು.
ಘಟನೆ ನಡೆದು ಬಹುಶಃ ವಾರವೂ ಕಳೆದಿರಲಿಲ್ಲ. ಅದೇ ಬಸ್ನಲ್ಲಿ ವರ್ಷದ ಮಗುವನ್ನು ಎತ್ತಿಕೊಂಡ ತಾಯಿಯೊಬ್ಬಳು ನಿಲ್ಲಲೂ ಜಾಗವಿಲ್ಲದೆ ಕಷ್ಟಪಡುತ್ತಿದ್ದಳು. ಪಕ್ಕದಲ್ಲೇ ಇದ್ದ ಹೆಂಗಸನ್ನು ನೋಡಿ 'ಅಕ್ಕ ಸ್ವಲ್ಪ ಜಾಗ ಬಿಡ್ತೀರಾ? ನಿಲ್ಲೋಕೆ ಆಗ್ತಿಲ್ಲ, ಮಗೂನೂ ಹಠ ಮಾಡ್ತಿದೆ' ಎಂದಾಗ ಸಿಡಿಮಿಡಿಗೊಂಡ ಹೆಂಗಸು, 'ನೋಡಮ್ಮ ಈ ರಶ್ನಲ್ಲಿ ನನಗೆ ನಿಲ್ಲೋಕಾಗುತ್ತಾ..? ಬೇಕಾದ್ರೆ ಮಗೂನ ಕೊಡು, ಇಲ್ಲಾ ಬೇರೆ ಯಾರನ್ನಾದ್ರೂ ಕೇಳು. ನಾನೇ ಸಿಕ್ಕಿದ್ನಾ ನಿಂಗೆ?' ಎಂದಳು ಅಸಹನೆಯಿಂದ. ತಿರುಗಿ ನೋಡಿದರೆ, ಅದೇ ವಿದ್ಯಾವಂತೆ ದಢೂತಿ ಹೆಂಗಸು! ಮೂರು ದಿನಗಳ ಹಿಂದೆ ಮತ್ತೊಬ್ಬರ ಸೀಟಿಗಾಗಿ ಹೋರಾಡಿ ಜಾಗ ಕೊಡಿಸಿ ಬೀಗಿದ್ದು ಇವಳಾ ಎಂದು ಆಶ್ಚರ್ಯವಾಯಿತು!
ಬಸ್ಸೊಂದು ಕೆರೆಗೆ ಬಿದ್ದ ಸುದ್ದಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದುದು ಅದೇ ಬಸ್ನಲ್ಲಿ. 'ಅಲ್ಲಾ, ಅಷ್ಟೊಂದು ಜನ ಇರೋ ಬಸ್ ಹೆಂಗೆ ನೀರಿಗೆ ಬಿತ್ತು? ಡ್ರೈವರ್ ಅಕ್ಕಪಕ್ಕದವ್ರ ಜತೆ ಮಾತಾಡ್ತಿದ್ನಂತೆ. ಅಷ್ಟು ಜನರ ಪ್ರಾಣ ನನ್ನ ಕೈಲಿದೆ ಅನ್ನೋ ಜ್ಞಾನ ಬೇಡ್ವ ಅವನಿಗೆ?' ಎಂದು ಗೊಣಗಿದ ಹೂ ಮಾರುವ ಹೆಂಗಸು, 'ಅಣ್ಣಾ, ನಿಮ್ಮನೇವ್ರು ಹೇಗಿದ್ದಾರೆ.. ಮಕ್ಕಳು ಚೆನ್ನಾಗಿ ಓದ್ತಿದ್ದಾರಾ, ಮಗಳು ಮದುವೆಗೆ ಬಂದಿದ್ದಾಳಂತೆ, ಹುಡುಗನ್ನ ಹುಡುಕ್ತಿದ್ದೀರಾ.. ಬೇಕಿದ್ರೆ ಹೇಳಿ ನಿಮ್ಮ ಜಾತಿಯವರು ನಮ್ಮೂರಲ್ಲೂ ಇದ್ದಾರೆ' ಎಂದಳು. ಅಷ್ಟಕ್ಕೂ ಆಕೆ ಮಾತುಕತೆ ನಡೆಸಿದ್ದು ಬಸ್ ಚಾಲಕನ ಬಳಿ!
ಇನ್ನು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರನ್ನು ತುಂಬಾ ಜನ ತಮ್ಮ ಸಂಬಂಧಿಯೋ, ಸ್ನೇಹಿತರೋ ಎನ್ನುವಂತೆ ಮಾತಾಡಿಸುತ್ತಾರೆ. ಹೀಗೇ ಒಮ್ಮೆ ಬ್ಯಾಂಕಿನಲ್ಲಿ ಹಣ ತೆಗೆಯಲು ಸಾಲಿನಲ್ಲಿ ನಿಂತಿದ್ದೆ. ಕ್ಯೂ ದೊಡ್ಡದೇ ಇತ್ತು. ಇರುವ ಸಮಸ್ಯೆ ಜತೆಗೆ ನನ್ನದೂ ಒಂದಿರಲಿ ಎಂದು ಬ್ಯಾಂಕ್ನ ಸರ್ವರ್ ಕೂಡ ಕೈ ಕೊಡುತ್ತಿತ್ತು. ಅಷ್ಟರಲ್ಲಿ ಎಲ್ಲಿಂದಲೋ ತೂರಿ ಕ್ಯಾಷಿಯರ್ ಬಳಿ ಬಂದ ವ್ಯಕ್ತಿ, 'ಏನ್ ಮೇಡಮ್ ಮತ್ತೇ ಅದೇ ಸಮಸ್ಯೆ, ನಿಮ್ಮ ಮ್ಯಾನೇಜರ್ಗೆ ಸ್ವಲ್ಪ ಹೇಳಿ ನೀವು, ಪ್ರತೀ ಬಾರಿ ಹೀಗೆ ಆದ್ರೆ ನಿಮಗೂ ತಲೆಬಿಸಿ. ಎಟಿಎಂನಲ್ಲಿ ದುಡ್ಡು ಇಟ್ಟಿಲ್ವ' ಎನ್ನುತ್ತಲೇ ಕ್ಯೂನಲ್ಲಿ ಮೊದಲಿಗನಾಗಿಬಿಟ್ಟ!
ಇವು ಒಂದೆರಡು ಉದಾಹರಣೆಗಳಷ್ಟೆ. ದಿನನಿತ್ಯದ ವ್ಯವಹಾರಗಳಲ್ಲಿ ಇಂತಹ ಸನ್ನಿವೇಶಗಳನ್ನು ನೋಡಿಯೇ ಇರುತ್ತೇವೆ. ಮಹಿಳಾ ಪರ ಹೋರಾಟಗಾರರು, ಸಮಾಜದ ಸ್ವಾಸ್ಥ್ಯದ ಬಗ್ಗೆ ಗಂಟೆಗಟ್ಟಲೆ ಮಾತಾಡುವವರು, ಸಮಸ್ಯೆಗಳ ವಿರುದ್ದ ಧ್ವನಿ ಎತ್ತುವವರು. ಇಲ್ಲೆಲ್ಲ ಸ್ವಾರ್ಥವೇ ಎದ್ದು ಕಾಣುತ್ತಿರುತ್ತದೆ ಅಲ್ಲವೆ?
- ಕೋಕಿಲಾ ಎಂ. ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


