ಮಹಿಳೆ-ಮನೆ-ಬದುಕು

ಅಮ್ಮನ ಸಾಕು ಪ್ರೀತಿ

ಅಮ್ಮನ ಸಾಕು ಪ್ರೀತಿ
Published On :

ಅಂದು ಟಿ.ವಿ. ಹಾಕ್ಕೊಂಡು ಏನೋ ಕೆಲಸ ಮಾಡುತ್ತಿದ್ದೆ. ರಾತ್ರಿ 9 ಗಂಟೆ, ಕೆಲಸಕ್ಕೆ ಹೋಗಿದ್ದ ಅಮ್ಮ ಬರುವ ಸಮಯ. ಹೊರಗೆ ಏನನ್ನೋ ನೆನಪಿಸಿಕೊಂಡು ಮತ್ತೆ ಮತ್ತೆ ಅಳುವ ಮಗುವಿನಂತೆ ಸುರಿಯುತ್ತಿದ್ದ ಮಳೆ. ಆಗ ಹತ್ತಿರದಲ್ಲೆಲ್ಲೋ ಬೆಕ್ಕಿನ ಮರಿ ಕೂಗಿದಂತಾಯಿತು. ಟಿ.ವಿ.ಯನ್ನು ಮ್ಯೂಟ್ ಮಾಡಿ, ಬಾಗಿಲು ತೆರೆದು ಎಲ್ಲಿಂದ ಶಬ್ದ ಬರುತ್ತಿದೆ ಅಂತ ನೋಡಿದೆ. ಕಾಣಿಸಲಿಲ್ಲ. ಮತ್ತೆ ಬಾಗಿಲು ಜಡಿದು ಅಮ್ಮನ ಬರವಿಗಾಗಿ ಕಾದೆ. ಅಮ್ಮ ಬಂದ ಕೂಡಲೇ 'ಬೆಕ್ಕಿನ ಮರಿ ಎಲ್ಲೋ ಕೂಗ್ತಾ ಇದೆ' ಅಂದೆ. ಅಷ್ಟರಲ್ಲಿ ಅಮ್ಮನಿಗೂ ಶಬ್ದ ಕೇಳಿಸಿತು. ಹುಡುಕ್ತಾ ಹೋದವರು ವಾಪಸ್ ಬಂದು 'ಅಲ್ಲಿ ಎರಡು ಬೆಕ್ಕಿನ ಮರಿ ಇದೆ. ಪಾಪ, ಕೈಗೇ ಸಿಗ್ತಿಲ್ಲ ಬಾ' ಅಂದರು. ಮೊದಲೇ ಬೆಕ್ಕು ಅಂದ್ರೆ ಪ್ರಾಣ ಅನ್ನೊ ನಾನು ಹೋಗಿ ಅಲ್ಲಿನ ಕಾಂಪೌಂಡ್ ಹಾರಿ ಆ ಎರಡೂ ಮರಿಗಳನ್ನು ತಂದು, ಬಟ್ಟೆಯಿಂದ ಒರೆಸಿ, ಹಾಲು ಹಾಕಿ, ಬೆಚ್ಚಗೆ ಒಂದು ಬಾಕ್ಸ್‌ನಲ್ಲಿ ಮಲಗಿಸಿದ್ದೆ. ಮತ್ತೆರಡು ದಿನದ ನಂತರ ಅಮ್ಮ ಕೆಲಸ ಮುಗಿಸಿ ಬಂದಾಗ ಅವರ ಕೈಲಿ ಮತ್ತೆರಡು ಮರಿಗಳಿದ್ದವು! ಕೇಳಿದ್ದಕ್ಕೆ 'ಯಾರೋ ರಸ್ತೇಲಿ ಬಿಟ್ಟು ಹೋಗಿದ್ರು' ಅಂದ್ರು. ಅಂದಿನಿಂದ ಮನೆಯಲ್ಲಿ ನಾಲ್ಕು ಬೆಕ್ಕಿನ ಮರಿಗಳು. 'ಬೆಕ್ಕುಗಳ ಅನಾಥಾಶ್ರಮ' ಅಂತ ಬೋರ್ಡ್ ಹಾಕು ಮನೆಗೆ ಅಂತ ಅಮ್ಮನ್ನ ರೇಗಿಸ್ತಿದ್ದೆ.
ಟೀ, ಕಾಫೀ ಕುಡಿಯದ ನಮ್ಮ ಮನೇಲಿ ಒಂದು ಲೀಟರ್ ಹಾಲು ಕೂಡ ಒಮ್ಮೊಮ್ಮೆ ಕಡಿಮೆ ಆಗ್ತಿದ್ದದ್ದು ಈ ಮರಿಗಳಿಂದಾಗಿ. ಪಕ್ಕದ ಮನೆಯವರು, ಅವರು- ಇವರು ಬಂದು ಒಂದೊಂದೇ ಮರಿಗಳನ್ನು ಕೇಳಿ ಸಾಕಲು ತಗೊಂಡು ಹೋಗಿ ಈಗ ಉಳಿದಿರೋದು ಒಂದೇ ಮರಿ. ಅದಕ್ಕೆ ಗುಂಡು ಅಂತ ಪ್ರೀತಿಯಿಂದ ಕರೀತೀವಿ. ಅಮ್ಮಂಗೆ ಹೇಳಿದೆ, 'ಇನ್ನು ಹೀಗೆ ಐದಾರು ಬೆಕ್ಕುಗಳನ್ನೆಲ್ಲ ತರಬೇಡ ಮನೆಗೆ' ಅಂತ. ಮೊನ್ನೆ ಬೆಳಗ್ಗೆ ಒಂದು ಬಟ್ಟಲಲ್ಲಿ ಹಾಲು, ಒಂದು ಗೋಣಿಚೀಲ ಹಿಡಿದು ಹೊರಟ ಅಮ್ಮನನ್ನು ಕೇಳಿದೆ, ಎಲ್ಲಿಗೆ ಅಂತ. 'ಇಲ್ಲೇ, ಬಸ್‌ಸ್ಟಾಪಿನಲ್ಲಿ ಐದು ನಾಯಿಮರಿಗಳಿವೆ. ಯಾರೋ ಬಿಟ್ಟು ಹೋಗಿದಾರೆ. ಪಾಪ, ಚಳಿಗೆ ನಡುಗ್ತಿದ್ದಾವೆ' ಅಂದರು ಕಣ್ಣಲ್ಲಿ ನೀರು ತುಂಬಿಕೊಂಡು. ಈಗ ನಮ್ಮ ಮನೇಲಿ ಮತ್ತೆ 1 ಲೀಟರ್ ಹಾಲು ಬರುತ್ತೆ. ಆ ನಾಯಿಮರಿಗಳಿಗೋಸ್ಕರ!
ದಿನಬೆಳಗಾದರೆ ಕೊಲೆ, ಮೋಸ, ವಂಚನೆ, ಅತ್ಯಾಚಾರ, ತನ್ನದೇ ಮಗುವನ್ನು ಕಸದ ತೊಟ್ಟಿಗೆ ಬಿಸಾಡುವ ವಿದ್ಯಾವಂತರು, ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಅಟ್ಟುವ ಅತೀ ಬುದ್ಧಿವಂತರನ್ನು ನೋಡಿದಾಗ, ಶಾಲೆಗೇ ಹೋಗದ ನನ್ನ ಅಮ್ಮ ಅತ್ಯಂತ ಉನ್ನತ ಸ್ಥಾನದಲ್ಲಿ ಕಾಣುತ್ತಾರೆ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ನನ್ನನ್ನು ತಂದೆಯ ಪ್ರೀತಿಯ ಕೊರತೆ ಕಾಡದಂತೆ ಬೆಳೆಸಿದ್ದಲ್ಲದೆ, ಇಂದಿಗೂ ಅನಾಥ ಬೆಕ್ಕು- ನಾಯಿಗಳಿಗೂ ಮರುಗುವ ಈ ಜೀವ ನಿಜಕ್ಕೂ ಗ್ರೇಟ್. ಅವಳು ನನ್ನ ಅಮ್ಮ ಅನ್ನೋದು ಇನ್ನೂ ಹೆಮ್ಮೆ ಅನಿಸುತ್ತದೆ.



-ನಂದಾ ಎನ್. ಹೆಬ್ಬಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.