ನಾನು ನನ್ನ ಕೂಸು!

ಮೊನ್ನೆ ಗೆಳತಿಯನ್ನು ನೋಡಲು ನರ್ಸಿಂಗ್‌ಹೋಂಗೆ ಹೋಗಿದ್ದೆ. 'ಕಂಗ್ರಾಟ್ಸ್. ನಿನ್ನ ಇಚ್ಛೆಯಂತೆ ಹೆಣ್ಣುಮಗೂನೇ ಆಯ್ತಲ್ಲ...' ಎಂದಿದ್ದಕ್ಕೆ ಆಕೆಯ ಮುಖವೇನೂ ಅರಳಲಿಲ್ಲ. 'ನನ್ ಬೇಬಿ ದೊಡ್ಡವಳಾದ್ಮೇಲೆ ಕಪ್ಪಗಾಗ್ತಾಳೆ ಅಲ್ವಾ?' ಅಂದಳು ದುಃಖದಿಂದ. 'ಅಯ್ಯೋ, ಬಣ್ಣದಲ್ಲೇನಿದೆ? ನಿನ್ನ-ಮಗುವಿನ ಆರೋಗ್ಯದತ್ತ ಹೆಚ್ಚು ಗಮನ ಕೊಡು.' ಅಂತ ಸಮಾಧಾನಿಸಿ ಹೊರಬಂದಿದ್ದೆ.
ಅದೆಷ್ಟೋ ಅಮ್ಮಂದಿರು ಹೀಗೂ ಇರ್ತಾರೆ. ತನ್ನ ಮಗಳು ಶ್ವೇತಸುಂದರಿ ಅಲ್ಲ, ಪ್ರತಿಭಾನ್ವಿತೆಯೂ ಅಲ್ಲ, ಕ್ಲಾಸಲ್ಲಿ ಡಿಸ್ಟಿಂಕ್ಷನ್ ಪಡೆಯೋವಷ್ಟು ಬುದ್ಧಿವಂತೆಯೂ ಅಲ್ಲ ಅಂತ ಕೊರಗುತ್ತ ಕೂರುವವರು ಇನ್ನೆಷ್ಟೋ ಮಂದಿ. ಇನ್ನು, ಮಕ್ಕಳಿಗೆ ದೀರ್ಘಕಾಲದ ಕಾಯಿಲೆ ಅಥವಾ ಅಂಗನ್ಯೂನತೆ ಕಾಡಿದರೆ ತಾಯಂದಿರೇ ಎದೆಗುಂದಿ ಕೀಳರಿಮೆಯಿಂದ ಬಳಲುವುದೂ ಉಂಟು.
ನಿಜ, ನಿರೀಕ್ಷಿಸಿದಂತೆ ಬದುಕು ಸಾಗಲು ಸಾಧ್ಯವಿಲ್ಲ. ಇಂದಿನ ಬೆಳಗು ಒಂದು ಬಗೆಯದು. ನಾಳಿನ ಬೆಳಗು ಇನ್ನೊಂದು ಬಗೆಯದು. ಪ್ರಕೃತಿ ನಿಯಮವೇ ಹಾಗೆ! ಕೆಲವೊಮ್ಮೆ ನಮ್ಮ ನಿರೀಕ್ಷೆ, ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುತ್ತದೆ. ಹಾಗಂತ ಕೊರಗುತ್ತ ಕೂತರೆ ಬದುಕು ಬರ್ಬರವಾದೀತು!
ಮಕ್ಕಳ ಸ್ಫೂರ್ತಿಯ ಸೆಲೆಯೇ ತಾಯಿ. ಅವರ ಆಂತರ್ಯದ ಶಕ್ತಿಯೂ ಆಕೆಯೇ. ಪುಟ್ಟ ಮಕ್ಕಳಿಗಂತೂ ತಾಯಿಯೇ ಸರ್ವಸ್ವ. ಇಂಥ ಸಂದರ್ಭದಲ್ಲಿ ತಾಯಿಯೇ ಧೃತಿಗೆಟ್ಟಳೆಂದರೆ ಮಕ್ಕಳ ಮನಸ್ಸು ಗೊಂದಲದ ಗೂಡಾಗಿಬಿಡುತ್ತದೆ. ಕೀಳರಿಮೆ ಅವರನ್ನು ಆವರಿಸಿಕೊಳ್ಳದಂತೆ ನೋಡಿಕೊಳ್ಳುವುದು ಹೆತ್ತವರ ಜವಾಬ್ದಾರಿ.
'ಏನೇ ಆಗಲಿ, ಬಂದದ್ದನ್ನು ಸಮರ್ಥವಾಗಿ ಎದುರಿಸ್ತೀನಿ. ನನ್ನ ಮಗುವಿಗೆ ಏನೇ ಕಾಯಿಲೆ ಇರಲಿ, ಯಾವುದೇ ನ್ಯೂನತೆ ಇರಲಿ, ಪರಿಹಾರ ಸಿಗೋವರೆಗೂ ಹೋರಾಟ ನಡೆಸ್ತಲೇ ಇರ್ತೀನಿ.'
'ನನ್ ಮಗ್ಳು ಕೃಷ್ಣಸುಂದರಿ ನಿಜ. ಯಾರ್ಯಾರೋ ಏನೇನೋ ಅಂತಾರೆ ಅಂತ ಬೇಡದ ವಿಷಯಕ್ಕೆ ನಾನೇಕೆ ಕೊರಗಬೇಕು? ಆಕೇನ ಬಹುದೊಡ್ಡ ಸಾಧಕಿಯಾಗಿ ರೂಪುಗೊಳಿಸ್ತೀನಿ.'
ಇಂಥ ಭಾವನೆಗಳು ತಾಯಿಯ ಮನದಲ್ಲಿ ಗಟ್ಟಿಯಾದಾಗ, ಆಕೆಯಲ್ಲಿನ ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ. ಮಕ್ಕಳಲ್ಲೂ ಆತ್ಮವಿಶ್ವಾಸ ಹೊರಹೊಮ್ಮುತ್ತದೆ. ತಾಯಿ ಪರಿಪೂರ್ಣ ಪ್ರೀತಿ, ಆತ್ಮವಿಶ್ವಾಸ ತೋರಿದಾಗ, ಮಕ್ಕಳಲ್ಲಿ ಎಂಥ ನ್ಯೂನತೆಯೇ ಇರಲಿ, ಬದುಕನ್ನು ಗೆದ್ದುಬಿಡಬಲ್ಲೆ ಎನ್ನುವ ಭರವಸೆ ಮೂಡುತ್ತದೆ.
ಮಗು ಆರೋಗ್ಯದಿಂದಿರಬೇಕು ಎಂದು ಅಮ್ಮಂದಿರು ನಿರೀಕ್ಷಿಸುವುದು ಸಹಜ. ಆದರೆ, ಕೆಲವೊಮ್ಮೆ ನಿರೀಕ್ಷೆ ಈಡೇರದು. ಪಾಲಿಗೆ ಬಂದದ್ದನ್ನು ಪಂಚಾಮೃತದಂತೆ ಸ್ವೀಕರಿಸಿ, ಮುಂದೇನು ಮಾಡ್ಬೇಕು ಎಂಬುದನ್ನು ಯೋಚಿಸ್ಬೇಕು. ಮಗುವಿನೆದುರು ಹತಾಶೆ, ತಳಮಳವನ್ನು ತೋರಿಸದೆ, ಧೈರ್ಯದಿಂದ ಇರಬೇಕು.
ಅಂಗನ್ಯೂನತೆ ಇರುವ ಕಂದಮ್ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಯಶಸ್ವಿ ಬದುಕಿನತ್ತ ಕೊಂಡೊಯ್ದ ಅದೆಷ್ಟೋ ಅಮ್ಮಂದಿರು ಕಣ್ಮುಂದೆ ಇದ್ದಾರೆ. ನಿಮ್ಮಲ್ಲೂ ಅಪಾರ ಮನೋಬಲ ಇದೆ; ಅದಮ್ಯ ಹುಮ್ಮಸ್ಸಿದೆ; ತಾಳ್ಮೆ ಇದೆ. ಹಾಗಾಗಿ ಸಣ್ಣಪುಟ್ಟ ವಿಚಾರಗಳನ್ನು ತಲೆಯಿಂದ ಬಿಟ್ಹಾಕಿ. ತಾಯಿಹೃದಯ ಸದಾ ಮಕ್ಕಳಿಗಾಗಿಯೇ ಮಿಡಿಯುತ್ತಿರುತ್ತದೆ. ಎಂದೂ ಬತ್ತದ ಪ್ರೀತಿ ಅದು. ನನ್ನ ಮಗುವಿಗೆ 'ಹೀಗಾಯ್ತಲ್ಲಾ...' ಎಂಬ ತಳಮಳವನ್ನು ಒತ್ತಟ್ಟಿಗಿರಿಸಿ, ಧೈರ್ಯ, ಭರವಸೆಗಳೊಂದಿಗೆ ಮಗುವನ್ನು ಬೆಳೆಸಿ; ಅದರ ಬಾಳನ್ನು ಹಸನುಗೊಳಿಸಿ.
= ರಾಜೇಶ್ವರಿ ಜಯಕೃಷ್ಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


