ಭಾವನೆ ಇಲ್ಲದ ಊರು
'ಹೊಸ ನೀರು ಬಂದೊಡನೆ, ಹಳೇ ನೀರು ಕೊಚ್ಚಿ ಹೋಗುತ್ತೆ' ಎಂಬ ಮಾತು ಇಂದಿಗೆ ಹೆಚ್ಚು ಮ್ಯಾಚ್ ಆಗುತ್ತದೆ. ಮನೆಯವರ ಆಸೆಗೆ...

'ಹೊಸ ನೀರು ಬಂದೊಡನೆ, ಹಳೇ ನೀರು ಕೊಚ್ಚಿ ಹೋಗುತ್ತೆ' ಎಂಬ ಮಾತು ಇಂದಿಗೆ ಹೆಚ್ಚು ಮ್ಯಾಚ್ ಆಗುತ್ತದೆ. ಮನೆಯವರ ಆಸೆಗೆ ಮನೆಯೊಳಗಿನ ವಸ್ತುಗಳು ಮಾಯವಾಗುತ್ತಿರುವುದನ್ನು ಕಂಡಾಗ ಬಹುಶಃ ಅವುಗಳೊಂದಿಗಿನ ಅದುವರೆಗಿನ ಗಾಢ ಸಂಬಂಧ, ಸವಿ ಭಾವನೆಗಳೇ ಮರೆಯಾಗುತ್ತಿವೆ ಎಂಬ ವಿವೇಚನಾ ಶಕ್ತಿಯನ್ನೂ ಹಣ ಮಂಕಾಗಿಸುತ್ತಿದೆ. 'ಹಳೇ ಪಾತ್ರೆ, ಕಬ್ಬಿಣ, ಪ್ಲಾಸ್ಟಿಕ್ಕು' ಎಂದು ಕೂಗುತ್ತಾ ಬರುವ ಗುಜರಿ ವ್ಯಾಪಾರಿಯ ಕೂಗಿಗೆ ಮರುಳಾಗೋ ಮಂದಿ ಮನೆಯ ಮೃದು ಮನಸ್ಸುಗಳ ಜೀವನದ ಒಂದು ಭಾಗವೇ ಆಗಿದ್ದ ಹಳೇ ವಸ್ತುಗಳನ್ನು ಮಾರುವ ಮೂಲಕ ಭಾವನೆಗಳನ್ನೇ ಬೀದಿಗೆ ತಂದು ನಿಲ್ಲಿಸಿದ್ದಾರೆ.
ಸಣ್ಣಪುಟ್ಟ ವಸ್ತುಗಳು ಗುಜರಿಯವರ ಪಾಲಾದರೆ, ಅದರಲ್ಲೇ ದೊಡ್ಡದಾಗಿರುವುಗಳನ್ನು ಸೆಕೆಂಡ್ಹ್ಯಾಂಡ್ ಹೆಸರಿನಲ್ಲಿ ಮಾರಿ ಹೊಸ ವಸ್ತುಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಜಗತ್ತೀಗ ಫ್ಯಾಶನ್ಮಯವಾಗುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಆಧುನಿಕತೆಯ ಲೇಪನವನ್ನು ಸಾಮಾಜಿಕ ಜಾಲತಾಣಗಳೂ ಸೃಷ್ಟಿಸಿಕೊಳ್ಳುತ್ತಿರುವುದರಿಂದ ಹಳೇ ವಸ್ತುಗಳ ಕಣ್ಣೀರನ್ನು ಯಾರೂ ನೋಡುತ್ತಲೇ ಇಲ್ಲ.
ತಾತನ ಕೋಟು, ಅಪ್ಪನ ಲುಂಗಿ ಹರಿದರೂ ಪೆಟ್ಟಿಗೆಯಲ್ಲಿ ತುಂಬಿ ನಿನ್ನೆ ಮೊನ್ನೆಯ ನೆನಪುಗಳೆಲ್ಲ ಅಟ್ಟದ ಮೇಲಿದೆ ಅಂತಲೇ ನಂಬಿ ಜೀವನ ಸಾಗಿಸುತ್ತಿದ್ದ ಬದುಕಿನ ಪರಿವೇ ಇಂದು ಇಲ್ಲವಾಗಿದೆ. ಜೀವನದ ಒಂದು ಘಟ್ಟದಲ್ಲಿ ಅವಶ್ಯಕ, ಅನಿವಾರ್ಯ ಮತ್ತು ಉಪಯುಕ್ತವಾಗಿದ್ದ ವಸ್ತುಗಳು ಇದೀಗ ಹಳೆಯದಾಗಿವೆ. ಆದರೆ ಅದೇ ವಸ್ತುಗಳು ಮನುಷ್ಯನ ಜೀವನದಲ್ಲಿನ ಸಿಹಿಕಹಿ ನೆನಪುಗಳಿಗೆ ಸಾಕ್ಷಿಯಾಗುತ್ತವೆ. ಭಾವನಾತ್ಮಕ ಪರಿಕಲ್ಪನೆಯನ್ನು ಹೊಂದಿರುವ ಯಾವುದೇ ವ್ಯಕ್ತಿ ಅಂಥ ವಸ್ತುಗಳನ್ನು ಕಳೆದುಕೊಳ್ಳಲು ಇಚ್ಛಿಸಲಾರ. ಅಂಥವ ಅವುಗಳೊಡನೆಯೇ ತನ್ನಂತರಾಳದ ಭಾವಗಳನ್ನು ಅಡಗಿಸಿಟ್ಟು ಬದುಕಿನ ಸಾರ್ಥಕತೆಗೆ ಶ್ರಮಿಸುತ್ತಾನೆ.
ಚಿಕ್ಕ ಮಗುವೊಂದು ತಾನು ಆಡಿ, ಸುಸ್ಸು ಮಾಡಿಕೊಂಡ ತೊಟ್ಟಿಲು, ಉಟ್ಟುಬಿಟ್ಟ ಬಟ್ಟೆಯನ್ನು ಇನ್ನೊಬ್ಬರಿಗೆ ಕೊಡಲು ನಿರಾಕರಿಸುತ್ತದೆ ಎಂದರೆ ಆ ವಸ್ತುವೊಂದಿಗೆ ಮಗು ಬೆಳೆಸಿಕೊಂಡ ನಂಟು, ಅವುಗಳ ಮೇಲಿನ ಪ್ರೀತಿ, ಅದನ್ನು ಕಾಪಾಡಿಕೊಳ್ಳಬೇಕೆಂಬ ಕಾಳಜಿಯ ಅರಿವಾಗುತ್ತದೆ. ಆದರೆ ತೊಟ್ಟಿಲು ತಂದು ಎರಡು- ಮೂರು ವರ್ಷ ಕಳೆದರೆ ಸಾಕು, ಛೇ! ಅದು ಹಳೆಯದಾಯ್ತು, ಅದನ್ನು ಮಾರುವುದೇ ಸರಿ, ಬೇಕಾದರೆ ಹೊಸದೊಂದನ್ನು ತಂದುಕೊಡುವ ಆಮಿಷಗಳನ್ನು ಮಕ್ಕಳಿಗೆ ಒಡ್ಡುವ ತಂದೆ-ತಾಯಿಗಳಿಗೇನೂ ಕಮ್ಮಿಯಿಲ್ಲ.
ಆಧುನಿಕತೆಯ ಭರಾಟೆಯಲ್ಲಿ ಮಾರುಕಟ್ಟೆಗೆ ಬಂದ ಹೊಸ ವಸ್ತುಗಳ ಆಕರ್ಷಣೆಗೆ ಮಾರುಹೋಗಿ, ಮನೆಯೊಳಗಿನ ಹಳೇ ವಸ್ತುಗಳೆಲ್ಲ ಮಾಯವಾಗುತ್ತಿವೆ. ಹೊಸ ವಸ್ತುಗಳ ಬಳಕೆಯಿಂದ ಹೊಸದೊಂದು ಜೀವನಶೈಲಿಯನ್ನು ತಮ್ಮದಾಗಿಸಿಕೊಳ್ಳುವ ಆತುರದಲ್ಲಿರುವ ಜನಸಮುದಾಯ, ಹಳೇ ವಸ್ತುಗಳ ಮೌಲ್ಯವನ್ನು ಮರೆತುಬಿಟ್ಟಿದೆ. ಜೀವನ ಶೈಲಿ ಬದಲಾದೊಡನೆ ಜೀವನವೇ ಬದಲಾಗುತ್ತದೆ ಎಂಬುದು ಮೂರ್ಖತನ. ದುಡ್ಡಿನ ದುರಾಸೆಗೆ ಬೀಳುತ್ತಿರುವ ಯುವ ಸಮುದಾಯ ವಸ್ತುಗಳೊಂದಿಗೆ ಭಾವನೆಗಳನ್ನು ಕಟ್ಟಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ. ಬದಲಿಗೆ ವಸ್ತುಗಳ ಮೇಲೆ ಗಮನಹರಿಸುತ್ತಾ ವಸ್ತುಗಳ ಜತೆಗೆ ಭಾವನೆಗಳಿಗೆ ಬೆಲೆಕಟ್ಟಿ ಮಾರಾಟಕ್ಕಿಡುತ್ತಿದೆ.
ಹೊಸ ವಸ್ತುಗಳು ಮನಸ್ಸಿಗೆ ಆ ಕ್ಷಣಕ್ಕೆ ಸಂತೋಷ ನೀಡಬಹುದೇ ವಿನಾ ಭಾವನೆಗಳನ್ನು ಕಟ್ಟಿಕೊಡುವುದಿಲ್ಲ. ಪ್ರತಿಯೊಂದನ್ನೂ ಹಣದಿಂದಲೇ ಅಳೆಯುವ ಮನುಷ್ಯ ಸಂಬಂಧಗಳನ್ನು ಹೇಗೆ ತಾನೇ ಉಳಿಸಿಕೊಂಡಾನು? ಭಾವನೆಗಳೇ ಇಲ್ಲದವರಿಗೆ ಬಂಧಗಳೆಲ್ಲಿಂದ ಬರಬೇಕು? ಅಲ್ಲದೇ ವಯಸ್ಸಾದರೆ ಹೆತ್ತವರನ್ನೇ ಹೊರಗಟ್ಟುವವರಿಗೆ ವಸ್ತುಗಳ್ಯಾವ ಲೆಕ್ಕ ಹೇಳಿ?
-ರಾಜಶೇಖರ ಮ್ಯಾಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


