ಚಾವಣಿ ಚಂದ
ಮನೆಯ ಚಾವಣಿಯನ್ನು ಆಕರ್ಷಕ ಮತ್ತು ಸುಂದರವಾಗಿಸುವಲ್ಲಿ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ...

ಮನೆಯ ಚಾವಣಿಯನ್ನು ಆಕರ್ಷಕ ಮತ್ತು ಸುಂದರವಾಗಿಸುವಲ್ಲಿ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಕೋಣೆಯ ಸೀಲಿಂಗ್ ಅನ್ನು ಉಳಿದ ನಾಲ್ಕು ಗೋಡೆಗಳಿಗಿಂತ ವಿಭಿನ್ನ ಮತ್ತು ಆಕರ್ಷಕವಾಗಿರಿಸಿದರೆ ಮನೆ ಮತ್ತಷ್ಟು ಸುಂದರವಾಗಿ ಕಾಣುತ್ತದೆ.
ನಾವು ಮನೆಯ ಪ್ಲೋರಿಂಗ್, ಇಂಟೀರಿಯರ್, ಎಕ್ಸ್ಟೀರಿಯರ್, ಬೆಳಕಿಗಾಗಿ ದೀಪದ ವ್ಯವಸ್ಥೆ, ಪೀಠೋಪಕರಣಗಳು ಮುಂತಾದ ಸಂಗತಿಗಳ ಬಗ್ಗೆ ಹೆಚ್ಚು ಗಮನ ಹರಿಸಿ ಚಾವಣಿಯನ್ನೇ ಮರೆತು ಬಿಡುತ್ತೇವೆ. ಇದರಿಂದ ಮನೆಯೇನೋ ಸುಂದರವಾಗುತ್ತದೆ. ಆದರೆ ಚಾವಣಿ ಬೋಳಾಗಿ ಕಾಣುತ್ತದೆ. ನಿಜ ಹೇಳಬೇಕೆಂದರೆ ಮನೆಗೆ ಬಂದ ಹೆಚ್ಚು ಮಂದಿ ನೋಡುವುದು ಚಾವಣಿಯನ್ನೇ. ಹಿಂದಿನ ಗಾದೆಯನ್ನೇ ಕೇಳಿಲ್ಲವೇ, 'ಬಂದ ಮಂದಿ ತಿಂದುಂಡು ಜಂತೆಯನ್ನೇ ಎಣಿಸುವುದು' ಎಂದು. ಮನೆ ಕಟ್ಟಿದ ಮೇಲೆ ಸೀಲಿಂಗ್ ನೋಡಿದಾಗ ನಮಗೂ ಅನ್ನಿಸುವುದು ನಮ್ಮ ಶ್ರಮಕ್ಕೆ ಇದೇಕೆ ಕಣ್ಣಿಗೆ ಬೀಳಲಿಲ್ಲ ಎಂದು. ಅದಕ್ಕಾಗಿಯೇ ಚಾವಣಿಯ ಅಂದವ ಮೆರುಗುಗೊಳಿಸಲು ಪಿಒಪಿ ತುಂಬಾ ಸಹಾಯಕವಾಗಿದೆ.
ಪಿಒಪಿ ಅಂದರೇನು?
ಇದು ಒಂದು ರೀತಿಯ ಡ್ರೈ ಜಿಪ್ಸಮ್. ಶುದ್ಧ ಜಿಪ್ಸಮ್ ಅನ್ನು 150 ಡಿಗ್ರಿ ಸೆಲ್ಶಿಯಸ್ನಷ್ಟು ಬಿಸಿ ಮಾಡಿ, ಅದರಲ್ಲಿನ ನೀರಿನಂಶವನ್ನು ಮುಕ್ಕಾಲು ಭಾಗ ಇಂಗುವಂತೆ ಮಾಡಿ ಬಳಸಲು ಯೋಗ್ಯವಾಗುವಂತೆ ಮಾಡುತ್ತಾರೆ. ಇದು ಬಿಳಿ ಪುಡಿಯ ರೂಪದಲ್ಲಿ ದೊರೆಯುತ್ತದೆ. ಪಿಒಪಿ ಎಷ್ಟು ಬೇಗ ನೀರನ್ನು ಹೀರಿಕೊಳ್ಳುತ್ತದೋ, ಅಷ್ಟೇ ಬೇಗ ಗಟ್ಟಿಯಾಗುತ್ತದೆ. ಅದಕ್ಕಾಗಿಯೇ ಇದರಲ್ಲಿ ಚಾಕ್ ಪೌಡರನ್ನು ಮಿಶ್ರಣ ಮಾಡಲಾಗುತ್ತದೆ. ಇದರಿಂದ ಬೇಗನೇ ಹೀರುವ ಸಾಮರ್ಥ್ಯ ಕಡಿಮೆಯಾಗುತ್ತದೆ.
ಸುಣ್ಣದ ಹಾಗೂ ಸಿಮೆಂಟ್ ಪ್ಲಾಸ್ಟರ್ಗೆ ಹೋಲಿಸಿದರೆ ಪಿಒಪಿ ತುಸು ದುಬಾರಿ ಕೂಡ. ಆದರೆ ಇದರಿಂದ ಮೂಡಿಬರುವ ಕಲಾತ್ಮಕತೆಗೆ ಜನ ಮಾರು ಹೋಗಿ ಮನೆಯ ಇತರ ಭಾಗಗಳಿಗೂ ಆಕರ್ಷಕ ಮೆರುಗು ನೀಡಲು ಬಯಸುತ್ತಿದ್ದಾರೆ. ಮನೆಯ ಮುಖ್ಯ ದ್ವಾರ, ಹಾಲ್, ಡ್ರಾಯಿಂಗ್ ರೂಮ್, ಅಡುಗೆಮನೆಯ ಬಾಗಿಲುಗಳ ಆಸುಪಾಸಿನ ಗೋಡೆಗಳಿಗೂ ವಿಶೇಷ ಹಾಗೂ ವಿಭಿನ್ನ ಲುಕ್ ನೀಡಲು ಮುಂದಾಗುತ್ತಿದ್ದಾರೆ. ಕೋಣೆಯ ಗಾತ್ರ ದೊಡ್ಡದಾಗಿ ಕಾಣಲೆಂದು ಪಿಒಪಿ ಚಾವಣಿಯ ಮೂಲೆ ಭಾಗದಲ್ಲಿ ಗಾಜಿನ ಚಿಕ್ಕ ಹಾಗೂ ಬಣ್ಣ ಬಣ್ಣದ ತುಂಡುಗಳನ್ನು ಅಳವಡಿಸುವ ಪದ್ಧತಿ ಕೂಡ ಜಾರಿಯಲ್ಲಿದೆ.
ರಾಯಲ್ ಪ್ಲೇ, ವೆಲ್ವೆಟ್ ಟಚ್, ಟೆಕ್ಸ್ಚರ್ ಮತ್ತು ಪ್ಲಾಸ್ಟಿಕ್ ಹೊರತಾಗಿ ಸ್ಪೆಷಲ್ ಎಫೆಕ್ಟ್ಬಣ್ಣಗಳನ್ನು ಪಿಒಪಿಯ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಬಾಳಿಕೆ ಹೆಚ್ಚಿಸಲು ಬಳಸಲಾಗುತ್ತದೆ.
ಉಪಯೋಗ
- ಯಾವುದೇ ಬಿರುಕುಂಟಾಗದಂತೆ ಇದನ್ನು ಸುಲಭವಾಗಿ ಜೋಡಿಸಬಹುದು ಮತ್ತು ಇದು ಅತ್ತಿತ್ತ ಕೂಡ ಪಸರಿಸದು.
- ಇದರ ಮೇಲೆ ಪೇಂಟ್ ಅಥವಾ ಯಾವುದೇ ರಸಾಯನದ ದುಷ್ಪರಿಣಾಮ ಆಗದು. ತುಕ್ಕು ಸಹ ಹಿಡಿಯದು.
- ಪಿಒಪಿಯ ಟೈಲ್ಸ್ ಮತ್ತು ಬಾಕ್ಸ್ ಹಗುರವಾಗಿರುತ್ತದೆ ಮತ್ತು ಇದರ ಮೇಲೆ ಬೆಂಕಿಯ ಪ್ರಭಾವ ಉಂಟಾಗದು.
ಗಮನದಲ್ಲಿರಬೇಕಾದ ಸಂಗತಿ
- ಪಿಒಪಿಯೊಂದಿಗೆ ಸಿಮೆಂಟ್ ಅನ್ನು ಮಿಶ್ರಣ ಮಾಡಬಾರದು.
- ತೇವಾಂಶವಿರುವ ಜಾಗದ ಮೇಲೆ ಪಿಒಪಿ ಹಾಕಬಾರದು.
- ಜಮುನಾರಾಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


