ಅಲ್ಟರ್ ಮರಳು
ರಾಜ್ಯದಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಬ್ರೇಕ್ ಹಾಕಲು ಸರ್ಕಾರ 'ಮರಳು ನೀತಿ' ಜಾರಿಗೆ ತಂದಿರುವುದರಿಂದ ಇನ್ನು ಮುಂದೆ ...

ರಾಜ್ಯದಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಬ್ರೇಕ್ ಹಾಕಲು ಸರ್ಕಾರ 'ಮರಳು ನೀತಿ' ಜಾರಿಗೆ ತಂದಿರುವುದರಿಂದ ಇನ್ನು ಮುಂದೆ ಮರಳಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಬೇಡಿಕೆ ಹೆಚ್ಚಾದಂತೆ ಬೆಲೆ ಕೂಡ ಹೆಚ್ಚುತ್ತೆ.
ಹೆಚ್ಚಿನ ಬೆಲೆ ನೀಡಿದ ಮಾತ್ರಕ್ಕೆ ನಿಮಗೆ ಗುಣಮಟ್ಟದ ಮರಳು ಸಿಗುತ್ತದೆ ಎಂದು ನೀವು ನಂಬುವುದಾದರೆ ಅದು ನಿಮ್ಮ ತಪ್ಪು ಕಲ್ಪನೆ ಅಷ್ಟೇ. ಶುದ್ಧ ಮರಳು ಸಿಗದಿರುವುದರಿಂದ ಕಟ್ಟಡ ನಿರ್ಮಿಸುವವರು ಅನಿವಾರ್ಯವಾಗಿ ಫಿಲ್ಟರ್ ಮರಳಿನ ಮೊರೆ ಹೋಗಬೇಕಾಗುತ್ತದೆ. ಈ ಫಿಲ್ಟರ್ ಮರಳಿನಿಂದ ನಿರ್ಮಿಸಿದ ಕಟ್ಟಡ ಹೆಚ್ಚಿನ ದಿನ ಬಾಳಿಕೆ ಇರುವುದಿಲ್ಲ ಎಂಬುವುದನ್ನು ನೀವು ಮರೆಯಬಾರದು.
ಹಾಗಾದರೆ ಮರಳು ಹೊರತುಪಡಿಸಿದರೆ ಪರ್ಯಾಯ ಮಾರ್ಗವೇ ಇಲ್ಲವೇ? ಇದಕ್ಕಾಗಿ ನೀವು ತಲೆ ಮೇಲೆ ಕೈ ಇಟ್ಟುಕೊಳ್ಳಬೇಕಿಲ್ಲ. ಮುಂದೊಂದು ದಿನ ಈ ಸಮಸ್ಯೆ ಎದುರಾಗುತ್ತದೆ ಎಂಬ ದೃಷ್ಟಿಯಿಂದಲೇ ಈ ಹಿಂದೆಯೇ ಸಾಕಷ್ಟು ಸಂಶೋಧಕರು ಮರಳಿಗೆ ಪರ್ಯಾಯ ವಸ್ತುವನ್ನು ಸಂಶೋಧನೆ ನಡೆಸಿ ಉತ್ಪಾದಿಸಿದ್ದಾರೆ.
ಆದರೆ, ಈ ಪರ್ಯಾಯ ಮರಳಿನ ಬಗೆಗಿನ ಅರಿವು ಹಾಗೂ ಬಳಕೆ ಮಾತ್ರ ಬಹಳಷ್ಟು ಕಡಿಮೆ ಇದೆ. ನೀವು ಬಿಸಾಡುವ ಕಟ್ಟಡ ತ್ಯಾಜ್ಯ, ಜೆಲ್ಲಿಕಲ್ಲು, ಕಬ್ಬಿಣದ ಅದಿರು, ಸಿಮೆಂಟ್ ಧೂಳಿನ ಕಣ, ಗ್ರಾನೈಟ್ ಪಾಲಿಷ್ನಿಂದ ಬರುವ ಧೂಳನ್ನು ಬಳಸಿಕೊಂಡು ಮನೆ ಕಟ್ಟಬಹುದು. ಅಂದ ಮಾತ್ರಕ್ಕೆ ನೀವು ನೇರವಾಗಿ ಗ್ರಾನೈಟ್ ಪಾಲಿಷ್ನಿಂದ ಬರುವ ಧೂಳನ್ನು ಸಿಮೆಂಟ್ನಲ್ಲಿ ಮಿಕ್ಸ್ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿಯೇ ಸಾಕಷ್ಟು ಕಂಪನಿಗಳು ವೈಜ್ಞಾನಿಕ ರೀತಿಯಲ್ಲಿ ಪರ್ಯಾಯ ಮರಳನ್ನು ಉತ್ಪಾದಿಸುತ್ತಿವೆ. ಅವುಗಳಿಂದ ನೀವು ಪರ್ಯಾಯ ಮರಳು ಖರೀದಿಸಿ ನಂತರ ಮನೆ ಕಟ್ಟುವುದು ಉತ್ತಮ.
ನಿಮಗೆ ಗೊತ್ತಿರಲಿ
ಈ ಹಿಂದೆ ನಾರ್ವೆ ಮತ್ತು ಸ್ವೀಡನ್ನಲ್ಲಿ ಮರಳಿಗೆ ಹೆಚ್ಚು ಬೇಡಿಕೆ ಇತ್ತು. ಆದರೆ, ದಿನದಿಂದ ದಿನಕ್ಕೆ ಮರಳಿನ ಪ್ರಮಾಣ ಕುಸಿಯುತ್ತಾ ಬಂತು. ಇದರಿಂದ ಕಂಗಾಲಾದ ಅಲ್ಲಿನ ಜನರು, ಮನೆಗಳನ್ನು, ಕಟ್ಟಡಗಳನ್ನು ಕಟ್ಟಲು ಕೃತಕ ಅಥವಾ ಪರ್ಯಾಯ ಮರಳನ್ನೇ ಬಳಕೆ ಮಾಡಲು ಶುರು ಮಾಡಿದರು. ಅಷ್ಟೇ ಅಲ್ಲ, ಅಲ್ಲಿನ ಸರ್ಕಾರವೂ ಕೂಡ ಮರಳು ಬಳಸುವಿಕೆಯನ್ನು ನಿಷೇಧಿಸಿ ಕೃತಕ ಮರಳು ಮಾತ್ರವೇ ಬಳಕೆ ಮಾಡುವಂತೆ ಆದೇಶ ನೀಡಿದೆ.
ಅಡ್ಡ ಪರಿಣಾಮ ಇಲ್ಲ
ಈಗಾಗಲೇ ಸಾಕಷ್ಟು ಕಂಪನಿಗಳು ಕೃತಕ ಮರಳು ಉತ್ಪಾದನೆಯಲ್ಲಿ ತೊಡಗಿವೆ. ನೈಸರ್ಗಿಕ ಮರಳಿನಲ್ಲಿ ಸಲ್ಫೆಟ್ ಮತ್ತು ಕ್ಲೋರೈಡ್ ಅಂಶಗಳಿರುತ್ತವೆ. ಇದರಿಂದ ವರ್ಷಗಳ ನಂತರ ಕಟ್ಟಡ ಗೋಡೆಗಳು ಬಿರುಕು ಬಿಡುವ ಸಾಧ್ಯತೆ ಇರುತ್ತದೆ. ಆದರೆ, ಕೃತಕ ಮರಳಿನಲ್ಲಿ ಈ ಅಂಶಗಳಿರುವುದಿಲ್ಲ. ಹೀಗಾಗಿ ಕಟ್ಟಡದ ಮೇಲೆ ಯಾವುದೇ ಹಾನಿ ಉಂಟಾಗುವುದಿಲ್ಲ ಎನ್ನುತ್ತಾರೆ ಸಿವಿಎಲ್-ಏಡ್ ಟೆಕ್ನಾಲಜಿಸ್ ಸಂಸ್ಥೆ ಅಧ್ಯಕ್ಷ ಸಿ.ಎಸ್. ವಿಶ್ವನಾಥ್.
ಕಟ್ಟಡ ಹಾಗೂ ಧ್ವಂಸದ ಪ್ರಮಾಣ
ಕಟ್ಟಡ ನಿರ್ಮಾಣ ಮಾಡುವುದು, 15-20 ವರ್ಷಗಳ ನಂತರ ಧ್ವಂಸ ಮಾಡಿ ಮತ್ತೆ ನೂತನ ವಿನ್ಯಾಸದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಇದೀಗ ಫ್ಯಾಷನ್ ಆಗಿಬಿಟ್ಟಿದೆ. ಆದರೆ, ಈ ಕಟ್ಟಡ ಧ್ವಂಸದಿಂದ ದೊರೆಯುವ ತ್ಯಾಜ್ಯವನ್ನು ಮರು ಬಳಕೆ ಮಾಡಿಕೊಳ್ಳಬಹುದು. ಇದರಿಂದ ನೂರಾರು ಟನ್ ಮರಳು ಉತ್ಪಾದನೆ ಸಾಧ್ಯವಿದೆ.
ಕಟ್ಟಡ ತ್ಯಾಜ್ಯದಿಂದ ಎಲ್ಲಿ ಎಷ್ಟು ಉತ್ಪಾದನೆ?
ದೇಶ ಪ್ರಮಾಣ
(ಟನ್ಗಳಲ್ಲಿ)
ಅಮೆರಿಕ 90
ಜರ್ಮನಿ 233
ಜಪಾನ್ 85
ಹಾಂಗ್ಕಾಂಗ್ 20
ಚೀನಾ 300
ಭಾರತ 14.70
ಪರ್ಯಾಯ ಮರಳು ಉತ್ಪಾದಿಸುತ್ತಿರುವ ಕಂಪನಿಗಳು
- PUZZOLAN MACHINERY FEBRICATORS
- JSW STEEL LIMITED
- PROMAN INFRASTUCTURE SERVICE PVT LTD
- RMC READYMIX
- ROBO SILICON PVT LTD
- ORIENTAL AGGREGATES
ಹಾರೂಬೂದಿ ಮಾಯೆ
ರಾಯಚೂರಿನ 1470 ಮೆಗಾವ್ಯಾಟ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಮತ್ತು ಉಡುಪಿಯ ಎಲ್ಲೂರಿನಲ್ಲಿನ ಕಲ್ಲಿದಲ್ಲು ಆಧಾರಿತ ಶಾಖೋತ್ಪನ್ನ ಸ್ಥಾವರಗಳ ಹಾರುಬೂದಿಯನ್ನು ಸಿಮೆಂಟ್ ಕಾರ್ಖಾನೆಗಳು ಬಳಸುತ್ತಿವೆ.
-ದೇವರಾಜ್ ಎಲ್.
djtrupti@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


