ಒಂದು ನೈತಿಕತೆ

ಮೇಲೆ ಹೇಳಿರುವ ಸಂಗತಿಗಳಿಗೆ ನೀವು ದೃಶ್ಯ, ಚಿತ್ರಣ, ಸಂಗತಿ... ಹೀಗೆ ಏನಾದರೂ ನಾಮಕರಣ ಮಾಡಬಹುದು, ನಿಮ್ಮ ಭಾವಕ್ಕನುಗುಣವಾಗಿ. ಆದರೆ, ನಾನು ಅದಕ್ಕೆ ವಾಸ್ತವವೆಂದು ಹೆಸರಿಡುತ್ತೇನೆ ಮತ್ತು ಅದೇ ಹೆಚ್ಚು ಸೂಕ್ತ.
ನಮ್ಮ ಸಾಮಾನ್ಯ ಬದುಕಿನ ರಿಯಲ್ ಹೀರೊಗಳಂತೆ ನಾವು ನಮ್ಮಲ್ಲಿ ಕಂಡುಕೊಳ್ಳುವ, ಕಣ್ಣೆದುರಿನ ಅಪ್ಪ, ಹೆತ್ತ ಅಮ್ಮ, ಸಲಹುವ ಶಿಕ್ಷಕ, ಪಕ್ಕದ್ಮನೆ ಅಂಕಲ್, ಆಚೆಮನೆ ಅಣ್ಣಯ್ಯ, ಹಿಂದಿನ ಮನೆ ಅಜ್ಜಿ... ಹೀಗೇ ಸಾಲು ಸಾಲಾಗಿ ನಮ್ಮ ಮುಂದೆ ತಪ್ಪು ಉದಾಹರಣೆಗಳನ್ನು ಪೋಣಿಸುತ್ತಾ ಸಾಗುತ್ತಾರೆ. ಅವರ ನಡೆಯು ತಪ್ಪೆಂದು ಅವರಿಗೆ ತಿಳಿದಿದ್ದರೂ ಅದಕ್ಕೊಂದು ಸಿದ್ಧ ಕಾರಣ ಕೊಟ್ಟು ವಾಸ್ತವದ ಅವಶ್ಯಕತೆ ಹಾಗೂ ಅನಿವಾರ್ಯತೆ ಎಂದು ಅವಸರದ ನೆಪವೊಡ್ಡಿ ಮೌನವಹಿಸುತ್ತಾರೆ.
ಹೀಗೆ, ಜನ್ಮದ ಆ ಹೊತ್ತಿನಿಂದಲೇ ಹಾಸಿ ಹೊದ್ದಿರುವ ಭ್ರಷ್ಟತೆಗೆ ಮತ್ತು ಅದರ ಅನಿಷ್ಟಕ್ಕೆ ಸಾಕ್ಷಿಯಾಗುತ್ತಾ ಬೆಳೆವ ನಾವು ನಮಗರಿವಿಲ್ಲದೇ ಭ್ರಷ್ಟರಾಗುತ್ತಾ ಬೆಳೆಯುತ್ತೇವೆ ಮತ್ತು ಹಾಗೆ ಭ್ರಷ್ಟರಾಗದೇ ಬದುಕುತ್ತೇವೆಂದು ನಡೆದವರಿಗೆ ಬದುಕುವುದು ಕಷ್ಟವಿನಿಸುತ್ತದೆ.
ಇಪ್ಪತ್ತು ವರ್ಷದಿಂದ ನಿತ್ಯ ಕುಡಿದು ತಡರಾತ್ರಿಯಲ್ಲಿ ಮನೆಗೆ ಬರುವ ತಂದೆ ಅದೊಂದು ದಿನ ತಡರಾತ್ರಿಯಲ್ಲಿ ಮಗ ಕುಡಿದು ಬಂದಾಗ ಗದರಿಸುವ ನೈತಿಕತೆಯ ಹಕ್ಕನ್ನು ಕಳೆದುಕೊಂಡಂತೆ, ಭ್ರಷ್ಟರಾಗಿ ಬದುಕುವ ಶೈಲಿಗೆ ಅಡಿಕ್ಟ್ ಆಗಿ ಬದುಕುತ್ತಿರುವ ನಮ್ಮಲ್ಲಿ ನಮ್ಮ ಕಿರಿಯರ ತಪ್ಪನ್ನು ಗದರಿಸುವ ನೈತಿಕತೆ ಉಳಿದುಕೊಂಡಿರುತ್ತದಾ? ನಾವು ಭ್ರಷ್ಟರೆಂದು, ಮಾಡಿದ್ದು ಮಾಡುತ್ತಿರುವುದು ತಪ್ಪೆಂದು ಅದನ್ನ ಪಾಲಿಸಬೇಡವೆಂದು ಎದೆಸೆಟೆಸಿ ಕಿರಿಯರಿಗೆ ಹೇಳುವಷ್ಟು ಸಾತ್ವಿಕತೆ ನಮ್ಮಲ್ಲಿ ಉಳಿದುಕೊಂಡಿದೆಯಾ? ದಿನದಿಂದ ದಿನಕ್ಕೆ ಯಾಂತ್ರಿಕವಾಗುತ್ತಾ ಸಾಗುತ್ತಿರುವ ಈ ಜೀವನ ಶೈಲಿಯಲ್ಲಿ ಇಷ್ಟೊಂದು ಆಲೋಚನೆಗಳಿಗೆ ಅವಕಾಶ ಉಳಿಯುತ್ತಿಲ್ಲ. ಮೇಲಾಗಿ ನಾವು ಮನಸ್ಸು ಮಾಡುತ್ತಿಲ್ಲ. ಆದರೂ ನಾವೊಂದು ಭ್ರಷ್ಟಮುಕ್ತ ರಾಷ್ಟ್ರದ ಕನಸು ಕಟ್ಟಿ ಕೈಕಟ್ಟಿ ಕುಳಿತಿದ್ದೇವೆ, ಪಾಯವ ಹಾಕುವುದ ಮರೆತು.
ನನ್ನ ಆಲೋಚನೆಗಳಲ್ಲಿ ಬಹುದಿನಗಳಿಂದ ನಲುಗುತ್ತಿದ್ದ ಹೀಗೊಂದು ಯೋಚನೆಯನ್ನು ನಿಮ್ಮ ಪಟಲದಲ್ಲಿ ಮೂಡಿಸುವ (ಕ್ಷಣದ ಮಟ್ಟಿಗಾದರೂ) ಈ ಪ್ರಯತ್ನದ ಸಂದರ್ಭದಲ್ಲಿ ನನ್ನನ್ನು ಕಾಡುವ ಮೌನವೊಂದೇ... ನನ್ನ ಕಿರಿಯರಿಗೆ ನಾನು ಎಂಥ ಮಾದರಿಯಾಗಿ ರೂಪಿತನಾಗುತ್ತಿದ್ದೇನೆ?
ಅದಕ್ಕುತ್ತರ ನನ್ನ ಕಿರಿಯರು ಹೇಳಬೇಕು ಮತ್ತು ಹೀಗೊಂದು ಮೌನ ನಿಮ್ಮನ್ನೂ ಕಾಡಬೇಕು... ನನ್ನೊಬ್ಬನಿಂದ ಏನಾದೀತೆಂಬ ಮನದ ಪ್ರಶ್ನೆಗೂ ಇದು ಪರಿಹಾರವಾದೀತಲ್ಲವೇ?
1.ಬುದ್ಧಿ ಬಲಿಯುತ್ತಿರುವ ಹುಡುಗ ವಾಹನ ಚಾಲನೆಯ ಬಗ್ಗೆ ಕುತೂಹಲಿಗನಾಗಿ ರಸ್ತೆಯ ನಿಯಮಗಳನ್ನು ಓದಿಕೊಂಡ ದಿನವೇ ಅವನ ತಂದೆಯೇ, ಈ ದಿಕ್ಕಿನಲ್ಲಿ ಚಲಿಸಬಾರದು ಎಂದು ಬೋರ್ಡಿರುವ ದಿಕ್ಕಿಗೆ ಚಲಿಸಿರುತ್ತಾರೆ ಮತ್ತು ನಿಲ್ಲಿಸಬಾರದೆಂಬ ಬೋರ್ಡಿನ ಎದುರೇ ನಿಲ್ಲಿಸಿರುತ್ತಾರೆ.
2 ಅಮ್ಮನೊಂದಿಗೆ ಹಟ ಮಾಡಿ, ಅಪ್ಪನೊಂದಿಗೆ ಕಚೇರಿಗೆ ಹೋದ ಪುಟ್ಟನ ಎದುರೇ ಲಜ್ಜೆಗೆಟ್ಟು ಈ ಕೆಲಸಕ್ಕೆ ಇಷ್ಟೆಂದು ರೇಟು ಮಾತಾಡುವಾಗ ಪುಟ್ಟನಿಗೆ ಶಾಲೆಯಲ್ಲಿ ಕೇಳಿಸಿಕೊಂಡ ಕರ್ತವ್ಯನಿಷ್ಠೆ, ಶ್ರದ್ಧೆ ಎಂಬ ಪದಗಳು ಅರ್ಥ ಕಳೆದುಕೊಳ್ಳುತ್ತವೆ.
3.ತರಲೆ ವಿಷಯಕ್ಕಾಗಿ ಸ್ನೇಹಿತನೊಂದಿಗೆ ಜಗಳವಾಡಿ ಮುನಿಸಿಕೊಂಡಿರುವಾಗ ಅಮ್ಮ ನಿತ್ಯ ಹೋಂವರ್ಕ್ ಮಾಡಿಸುತ್ತಾ ನೋಡುವ ಧಾರಾವಾಹಿಗಳ ನೆರಳಲ್ಲಿ ಅಮ್ಮ ಹೇಳುವ ಪ್ರೀತಿ, ಅನ್ಯೋನ್ಯತೆ ಸ್ನೇಹ ಸಂಬಂಧ ಯಾವುದೂ ಚೆಂದವಾಗಿ ಕಾಣುವುದಿಲ್ಲ.
-ಕೆ. ವಿಶಾಂತ್ ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


