ಫಟಾಫಟ್ ಪುಟ್ಟ ಮನೆ
ಸಕಾಲದಲ್ಲಿ ಇಟ್ಟಿಗೆ, ಕಲ್ಲು, ಮರಳು ಸಿಗುತ್ತಿಲ್ಲ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ. ಎಲ್ಲವೂ ರೆಡಿಮೇಡ್. ಕೇವಲ ನಾಲ್ಕೇ ದಿನಗಳಲ್ಲಿ

ಸಕಾಲದಲ್ಲಿ ಇಟ್ಟಿಗೆ, ಕಲ್ಲು, ಮರಳು ಸಿಗುತ್ತಿಲ್ಲ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ. ಎಲ್ಲವೂ ರೆಡಿಮೇಡ್. ಕೇವಲ ನಾಲ್ಕೇ ದಿನಗಳಲ್ಲಿ ಮೂರು ಚದರಡಿ ವಿಸ್ತೀರ್ಣದ ಮನೆ ಸಿದ್ಧ.
ಇದು ನಿಜ. ಮೈಸೂರಿನ ನಿರ್ಮಿತಿ ಕೇಂದ್ರವು ಪ್ರಿಕ್ಯಾಸ್ಟ್ ಕಾಂಕ್ರಿಟ್ ತಂತ್ರಜ್ಞಾನ ಬಳಸಿಕೊಂಡು ಕಡಿಮೆ ವೆಚ್ಚದ, ಆದರೆ ಉತ್ತಮ ಗುಣಮಟ್ಟದ ಈ ಮನೆಗಳ ನಿರ್ಮಾಣ ಕಾರ್ಯದ ಬಗ್ಗೆ ಕೇಂದ್ರದ ಆವರಣದಲ್ಲಿಯೇ ಪ್ರಾತ್ಯಕ್ಷಿಕೆ ನಡೆಸುತ್ತಿದೆ. ಮೆ.ಪಿ.ಜಿ. ಶೆಟ್ಟಿ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಸಂಸ್ಥೆಯು ನಿರ್ಮಾಣ ಕಾರ್ಯ ಕೈಗೊಂಡಿದೆ.
ಈಗಾಗಲೇ ನೆಲ ಅಂತಸ್ತು ಹಾಗೂ ಮೊದಲ ಮಹಡಿಯಲ್ಲಿರುವ ಎಂಟು ಮನೆಗಳನ್ನು ನಿರ್ಮಿಸಿದೆ. ಪ್ರತಿ ಮನೆಯಲ್ಲಿ ಒಂದು ಹಾಲ್, ಅಡುಗೆ ಮನೆ, ಸ್ನಾನದ ಮನೆ ಹಾಗೂ ಒಂದು ಕೊಠಡಿ ಇರುತ್ತದೆ. ಈ ಪುಟ್ಟ ಮನೆ ನಿರ್ಮಾಣಕ್ಕೆ ಆಗುವ ವೆಚ್ಚ 2.50 ಲಕ್ಷ ಮಾತ್ರ.
ಸಾಮಾನ್ಯವಾಗಿ ಮನೆ ನಿರ್ಮಾಣ ಕಾರ್ಯದಲ್ಲಿ ನಿವೇಶನದ ಬಳಿ ಕಬ್ಬಿಣ, ಸಿಮೆಂಟ್, ಇಟ್ಟಿಗೆ, ಮರಳು ಸೇರಿದಂತೆ ಎಲ್ಲಾ ಅಗತ್ಯ ಸಾಮಗ್ರಿಗಳನ್ನು ತಂದು, ಕಾಮಗಾರಿ ಆರಂಭಿಸಲಾಗುತ್ತದೆ. ಆದರೆ ಪ್ರಿಕ್ಯಾಸ್ಟ್ ಕಾಂಕ್ರಿಟ್ ತಂತ್ರಜ್ಞಾನದಲ್ಲಿ ಸಿಮೆಂಟ್ ಹಾಗೂ ಕಬ್ಬಿಣ ಬಳಸಿ, ಕಾಲಂಗಳು, ಬೀಮ್‌ಗಳು, ಸ್ಲ್ಯಾಬ್‌ಗಳು, ಮೆಟ್ಟಿಲುಗಳನ್ನು ಮುಂಚಿತವಾಗಿಯೇ ತಯಾರಿಸಲಾಗಿರುತ್ತದೆ. ಅವುಗಳನ್ನು ತಂದು, ಹೈಡ್ರಾಲಿಕ್ ಕ್ರೇನ್ ಬಳಸಿ, ಅಳವಡಿಸಲಾಗುತ್ತದೆ. ವಿದ್ಯುತ್ ವೈರಿಂಗ್, ಸ್ವಿಚ್‌ಗಳಿಂದ ಹಿಡಿದು ಎಲ್ಲಕ್ಕೂ ಮೊದಲೇ ಸ್ಥಳಾವಕಾಶ ಮಾಡಲಾಗಿರುತ್ತದೆ. ಗೋಡೆ, ನೆಲ, ತಾರಸಿ ಬೀಮ್‌ಗಳು, ಕಾಲಂಗಳು ಹಾಗೂ ಸ್ಲ್ಯಾಬ್‌ಗಳನ್ನು ಅಳವಡಿಸಿದ ನಂತರ, ಖಾಲಿ ಇರುವ ಸ್ಥಳದಲ್ಲಿ ಸಿಮೆಂಟ್ ಹಾಕಿ, ಬಿಗಿಗೊಳಿಸಲಾಗುತ್ತದೆ.
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಟ್ಯೂಬ್ ತಂತ್ರಜ್ಞಾನ ಅಳವಡಿಸಿ ಮನೆಗಳನ್ನು ನಿರ್ಮಿಸಿದೆ. ಆದರೆ ಪ್ರಿ ಕ್ಯಾಸ್ಟ್ ಕಾಂಕ್ರಿಟ್ ತಂತ್ರಜ್ಞಾನ ಬಳಸಿ ಇಡೀ ರಾಜ್ಯದಲ್ಲಿಯೇ ಮನೆ ನಿರ್ಮಾಣ ಮಾಡಿರುವುದರಲ್ಲಿ ಮೈಸೂರು ನಿರ್ಮಿತಿ ಕೇಂದ್ರವೇ ಪ್ರಥಮ. ಆಸ್ಟ್ರೇಲಿಯಾ ತಂತ್ರಜ್ಞಾನ ಬಳಸಿ, ಗೋಡೆ, ಕಿಟಕಿ, ಬಾಗಿಲು, ತೊಲೆಗಳು, ಕಂಬಗಳು, ಮೆಟ್ಟಿಲುಗಳನ್ನು ವಿನ್ಯಾಸ ಮಾಡಲಾಗಿದ್ದು, ತಮಿಳುನಾಡಿನ ತಿರುಪೂರ್ ಬಳಿ ಇವುಗಳನ್ನು ಸಿದ್ದಪಡಿಸಲಾಗುತ್ತದೆ. ಮೆಟ್ರೋ, ಫ್ಲೈ ಓವರ್ ನಿರ್ಮಾಣ ಕಾಮಗಾರಿಗಳಲ್ಲೂ ಇದೇ ತಂತ್ರಜ್ಞಾನ ಬಳಕೆಯಾಗುತ್ತಿದೆ.
-ಅಂಶಿ ಪ್ರಸನ್ನಕುಮಾರ್
ಚಿತ್ರ- ಎಸ್. ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


