ಸಂಜಯ ಉವಾಚ
ಭಾಗ -2
ಪ್ರಾಥಮಿಕ ಶಾಲೆಯ ನಂತರ, ನಮ್ಮ ಮನೆಯ ಪಕ್ಕದಲ್ಲಿಯೇ ಇದ್ದ ಮಿಡಲ್ ಸ್ಕೂಲಿಗೆ ಸೇರಿದೆ. ಅಲ್ಲಿ ಮೂರು ವರ್ಷ ಓದಿ, ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದೆ. ಬಳಿಕ ಹೈಸ್ಕೂಲಿಗೆ ಸೇರಿದೆ. ಚಿತ್ರದುರ್ಗ ಪ್ರೌಢಶಾಲೆಯಲ್ಲಿ ಮೂರು ವರ್ಷ ಓದಿದೆ. ರಾಜಾರಾವ್ ಎಂಬ ಮುಖ್ಯೋಪಾಧ್ಯಾಯರಿದ್ದರು. ಅವರು ಉತ್ತಮ ಶಿಕ್ಷಕರಾಗಿದ್ದರಲ್ಲದೆ, ಕವಿ ಸಹ ಆಗಿದ್ದರು. ಅಂಬಾದಾಸ ಎಂಬ ಹೆಸರಿನಲ್ಲಿ ಕವನಗಳನ್ನು ಬರೆಯುತ್ತಿದ್ದರು. ಎಷ್ಟೋ ಸಲ ಕ್ಲಾಸಿನಲ್ಲಿ ವಿದ್ಯಾರ್ಥಿಗಳ ಎದುರಿಗೆ ತಮ್ಮ ಕವನಗಳನ್ನು ಓದಿ ಮೆಚ್ಚುಗೆ ಪಡೆಯುತ್ತಿದ್ದರು.
ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಎಸ್. ನಿಜಲಿಂಗಪ್ಪನವರ ಪರಿಚಯವಾಯಿತು. ಅವರು ಆಗತಾನೆ ವಕೀಲಿ ವೃತ್ತಿಆರಂಭಿಸಿದ್ದರು. ನಮ್ಮ ದೊಡ್ಡಪ್ಪನ ಮನೆಗೆ ಆಗಾಗ್ಗೆ ಬರುತ್ತಿದ್ದರು. ವಾರದಲ್ಲಿ 3-4 ದಿನ ಊರಿನ ಅನೇಕ ವಕೀಲರು ಸೇರಿ, ನಮ್ಮ ಮನೆಯಲ್ಲಿ ಇಸ್ಪೀಟು ಆಡುತ್ತಿದ್ದರು. ಅವರಿಗೆ ಕಾಫಿ, ತಿಂಡಿ ಸರಬರಾಜು ಮಾಡುವುದು ನನ್ನ ಕೆಲಸ. ಇದರಿಂದ ಅನೇಕ ವಕೀಲರ ಪರಿಚಯವಾಯಿತು. ಆಗ ನಿಜಲಿಂಗಪ್ಪ ಸ್ಕಾಲರ್‌ಷಿಪ್ ಮತ್ತು ಪ್ರೀಷಿಪ್ ಕಮಿಟಿ ಸದಸ್ಯರಾಗಿದ್ದರು. ಹೈಸ್ಕೂಲಿನಲ್ಲಿ ಮೊದಲ ವರ್ಷ ನಾನು ಫೀಜು ಕೊಡಬೇಕಾಗಿರಲಿಲ್ಲ. ಆದರೆ ಎರಡನೆಯ ವರ್ಷ ಅರ್ಧ ಫೀಜು ಮಾತ್ರ ಮನ್ನಾ ಆಗಿತ್ತು. ಇದಕ್ಕೆ ನಿಜಲಿಂಗಪ್ಪನವರೇ ಕಾರಣರೆಂಬ ಸಿಟ್ಟಿನಿಂದ ಅವರ ಮನೆಗೆ ಹೋಗಿ ಜಗಳವಾಡಿದೆ. ನಿಜಲಿಂಗಪ್ಪನವರು ನನ್ನನ್ನು ಸಮಾಧಾನ ಪಡಿಸಿ, ಅರ್ಧ ಫೀಜನ್ನು ನನ್ನ ದೊಡ್ಡಪ್ಪನ ಕೈಯಿಂದ ಕೊಡಿಸಿದರು. ಆ ಸಮಯದಲ್ಲಿ ಅವರು 'ನೀನಿನ್ನೂ ಹುಡುಗ, ಇಷ್ಟಕ್ಕೆಲ್ಲ ಬೇಸರಪಟ್ಟುಕೊಳ್ಳಬಾರದು. ನಿನ್ನಲ್ಲಿ ಕಲ್ಲನ್ನು ಹಿಂಡಿ ನೀರು ತೆಗೆಯುವ ಶಕ್ತಿ ಇದೆ. ಇದನ್ನು ಸರಿಯಾಗಿ ಉಪಯೋಗಿಸಿಕೋ' ಎಂದು ಹೇಳಿದ ಮಾತುಗಳು ಇನ್ನೂ ನೆನಪಿನಲ್ಲಿದೆ.
ನಾವಿಬ್ಬರು, ದೊಡ್ಡಪ್ಪನ ಇಬ್ಬರು ಮಕ್ಕಳಲ್ಲದೆ ಇಬ್ಬರು 'ವಾರದ ಹುಡುಗರು' ಸಹ ಊಟಕ್ಕೆ ಬರುತ್ತಿದ್ದರು. ಇವರಲ್ಲದೆ ಕೋರ್ಟಿನ ಕೆಲಸಗಳಿಗಾಗಿ ಬಂದಿದ್ದ ಮೂರು ನಾಲ್ಕು ಜನ ಕಕ್ಷಿದಾರರೂ ಮನೆಯಲ್ಲಿ ಊಟಕ್ಕೆ ನಿಲ್ಲುತ್ತಿದ್ದರು. ಅಂತೂ ಪ್ರತಿದಿನ ಕನಿಷ್ಠ 8-10 ಜನಕ್ಕಾದರೂ ನಮ್ಮ ದೊಡ್ಡಮ್ಮ ಅಡಿಗೆ ಮಾಡಬೇಕಾಗುತ್ತಿತ್ತು. ಒಮ್ಮೊಮ್ಮೆ ಅವರ ಸಹನೆ ಮೀರುತ್ತಿತ್ತು. ಅದರ ಪರಿಣಾಮ ನಮ್ಮ ಮೇಲೆ ಆಗುತ್ತಿತ್ತೆಂದರೆ ಆಶ್ಚರ್ಯವಿಲ್ಲ.
ಚಿತ್ರದುರ್ಗ ಇತಿಹಾಸ ಪ್ರಸಿದ್ಧ ಸ್ಥಳ. ಈ ಊರಿನ ಸುತ್ತಲೂ ಏಳು ಸುತ್ತಿನ ಕೋಟೆ ಇದೆ. ಈ ಊರನ್ನು ಮದಕರಿ ನಾಯಕ ಎಂಬ ಪಾಳೆಯಗಾರ ಆಳುತ್ತಿದ್ದ. ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ, ಸರ್ಕಾರದ ಪ್ರಾಚ್ಯ ವಸ್ತು ಇಲಾಖೆಯವರು ಈ ಅವಶೇಷಗಳನ್ನು ಶೋಧಿಸುತ್ತಿದ್ದರು. ಅವರಿಗೆ ತುಂಬಾ ಸಹಾಯ ಮಾಡಿದವರು ಹುಲ್ಲೂರು ಶ್ರೀನಿವಾಸ ಜೋಯಿಸರು. ಅವರು ಸಹ ವಕೀಲರು, ದೊಡ್ಡಪ್ಪನ ಸ್ನೇಹಿತರು. ಎಷ್ಟೋ ಸಲ ಅವರ ಮನೆಗೆ ಹೋಗಿ, ಚಿತ್ರದುರ್ಗ ಆಳಿದ ಪಾಳೆಯಗಾರರ ಕತೆಗಳನ್ನು ಕೇಳುತ್ತಿದ್ದೆ. ಮಯೂರವರ್ಮ ಎಂಬ ರಾಜನ ಕತೆಯನ್ನು ಬಹಳ ಸ್ವಾರಸ್ಯವಾಗಿ ಹೇಳುತ್ತಿದ್ದರು. ಆ ಮಯೂರವರ್ಮನು ಕನ್ನಡಿಗರ ಪ್ರಥಮ ರಾಜನೆಂದು ಅವರ ಅಭಿಪ್ರಾಯ. ಈ ಬಗ್ಗೆ ಅವರು ಸಂಶೋಧನೆ ಮಾಡುತ್ತಿದ್ದರು.
ಚಿತ್ರದುರ್ಗ ಬೆಟ್ಟಗಳ ಊರು. ಬೆಟ್ಟಕ್ಕೆ ಹೋಗಿ ಬರುವುದೇ ಒಂದು ದೊಡ್ಡ ಸಾಹಸ. ನಾವು ನಾಲ್ಕಾರು ಹುಡುಗರು ಪ್ರತಿದಿನ ಬೆಳಿಗ್ಗೆ ಬೆಟ್ಟವನ್ನು ಹತ್ತಿ ಅಲ್ಲಿನ ಹೊಂಡದಲ್ಲಿ ಸ್ನಾನ ಮಾಡಿ ಬರುತ್ತಿದ್ದೆವು. ಬೆಟ್ಟವನ್ನು ಯಾರು ಬೇಗನೆ ಹತ್ತುವರೆಂಬ ಬಗ್ಗೆ ನಮ್ಮಲ್ಲಿ ಆಗಾಗ್ಗೆ ಪೈಪೋಟಿ ನಡೆಯುತ್ತಿದ್ದವು. ಒಮ್ಮೆ ಹೊಂಡದಲ್ಲಿ ಸ್ನಾನ ಮಾಡುತ್ತಿದ್ದಾಗ ನನ್ನ ಸ್ನೇಹಿತ ಶೇಷಾದ್ರಿ ಎಂಬ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಕಣ್ಮರೆಯಾದ. ಅಂದಿನಿಂದ ನಾವು ಬೆಟ್ಟ ಹತ್ತುವ ಸಾಹಸವನ್ನು ಕೈಬಿಟ್ಟೆವು.
ಸಾಹಿತ್ಯದಲ್ಲಿ ಆಸಕ್ತಿ
ಸಾಹಿತ್ಯದ ಬಗ್ಗೆ ನನಗೆ ಅಭಿರುಚಿ ಹುಟ್ಟಿದ್ದು ಇಲ್ಲಿಯೇ. ಹೈಸ್ಕೂಲಿನಲ್ಲಿ ಕೆ.ಟಿ. ರಾಮಸ್ವಾಮಿ ಆಯ್ಯಂಗಾರ್ ಎಂಬ ಗಣಿತದ ಉಪಾಧ್ಯಾಯರಿದ್ದರು. ಕನ್ನಡ ಸಾಹಿತ್ಯವನ್ನು ಬಹಳ ಚೆನ್ನಾಗಿ ಅಭ್ಯಾಸ ಮಾಡಿದ್ದರು. ಕುಮಾರವ್ಯಾಸ ಭಾರತ, ಪಂಪ ರಾಮಾಯಣ, ರನ್ನನ ಗದಾಯುದ್ಧ, ರಾಘವಾಂಕನ ಹರಿಶ್ಚಂದ್ರ ಕಾವ್ಯಗಳನ್ನು ರಸವತ್ತಾಗಿ ವಾಚನ ಮಾಡುತ್ತಿದ್ದರು. ವಾರಕ್ಕೊಮ್ಮೆ ತಮ್ಮ ಮನೆಯಲ್ಲಿ ಕೆಲವೇ ವಿದ್ಯಾರ್ಥಿಗಳಿಗೆ ಕನ್ನಡ ಕಾವ್ಯಗಳ ಪರಿಚಯ ಮಾಡಿಕೊಡುತ್ತಿದ್ದರು. ನಾನೂ ಸಹ ಆಗಾಗ್ಗೆ ಹೋಗುತ್ತಿದ್ದೆ. ಕುಮಾರವ್ಯಾಸ ಭಾರತ, ರನ್ನನ ಗದಾಯುದ್ಧಗಳನ್ನೂ ಸ್ವಲ್ಪ ಮಟ್ಟಿಗೆ ಕಂಠಪಾಠ ಮಾಡಿದ್ದೆ. ಆದರೆ ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದು ಕುಮಾರವ್ಯಾಸ ಭಾರತ.
ಮುಂದೆ ನಮ್ಮ ಊರಿನವರೇ ಆದ, ನಮ್ಮ ದೊಡ್ಡಪ್ಪನ ಮನೆಯ ಪಕ್ಕದಲ್ಲಿಯೇ ಇದ್ದ ಭಾರತ ಬಿಂದೂರಾಯರು ತಮ್ಮ ಮನೆಯಲ್ಲಿ, ದಾವಣಗೆರೆಯಲ್ಲಿ ಮತ್ತು ಹುಬ್ಬಳ್ಳಿಯಲ್ಲಿ ಕುಮಾರವ್ಯಾಸ ಭಾರತವನ್ನು ವಾಚನ ಮಾಡುತ್ತಿದ್ದಾಗ ನಾನು ತಪ್ಪದೆ ಹೋಗಿ ಗಂಟೆಗಟ್ಟಲೆ ಕೇಳುತ್ತಿದ್ದೆ. ಬಿಂದೂರಾಯರಂತೆ ಸುಶ್ರಾವ್ಯವಾಗಿ, ಇಂಪಾಗಿ, ಭಾವನಾಮಯವಾಗಿ ಭಾರತ ವಾಚನ ಮಾಡುವವರು ಬೇರೆ ಯಾರೂ ಇಲ್ಲವೆಂದು ನನ್ನ ಅಭಿಭ್ರಾಯ. ಬಿಂದೂರಾಯರ ವಾಚನಕ್ಕಿಂತ ವ್ಯಾಖ್ಯಾನವನ್ನು ಶ್ರೋತೃಗಳು ಹೆಚ್ಚು ಮೆಚ್ಚುತ್ತಿದ್ದರು, ಆಸಕ್ತಿಯಿಂದ ಕೇಳುತ್ತಿದ್ದರು.
ಗಳಗನಾಥರ ಕನ್ನಡಿಗರ ಕರ್ಮಕಥೆ, ಕುಮದಿನಿ, ಈಶ್ವರೀ ಸೂತ್ರ, ಕಮಲಕುಮಾರಿ, ಗೃಹಕಲಹ, ರಾಣಾ ರಾಜಸಿಂಹ, ರಾಣಿ ಮೃಣಾಲಿನಿ ಮುಂತಾದ ಕಾದಂಬರಿಗಳನ್ನೂ ನಾನು ಹೈಸ್ಕೂಲಿನಲ್ಲಿದ್ದಾಗಲೇ ಓದಿದ್ದೆ. ಇದರಿಂದ ಸಾಹಿತ್ಯದ ಬಗ್ಗೆ, ಅದರಲ್ಲಿಯೂ ಐತಿಹಾಸಿಕ ಹಾಗೂ ಪತ್ತೇದಾರಿ ಕಾದಂಬರಿಗಳ ಬಗ್ಗೆ ನನ್ನ ಆಸಕ್ತಿ ಬೆಳೆಯುತ್ತ ಹೋಯಿತು.
ಸಾಹಿತ್ಯಾಭ್ಯಾಸದ ಈ ಸಂಸ್ಕಾರದಿಂದ ನಾನೂ ಸಾಹಿತಿಯಾಗಲು ಸ್ವಲ್ಪ ದಿನ ಪ್ರಯತ್ನಿಸಿದೆ. ಹೈಸ್ಕೂಲಿನಲ್ಲಿದ್ದಾಗ ಕೆಲವು ಕಥೆ, ಕವನಗಳನ್ನೂ ಬರೆಯುತ್ತಿದ್ದೆ. ಆದರೆ ಸಾಹಿತಿ ಮಾತ್ರ ಆಗಲಿಲ್ಲ. ಮುಂದೆ ದೊಡ್ಡವನಾದಾಗ, ಚಿತ್ರದುರ್ಗದಲ್ಲಷ್ಟೇ ಅಲ್ಲ, ಮೈಸೂರು, ಧಾರವಾಡ ಮತ್ತು ಬೆಳಗಾವಿಗಳಲ್ಲಿ ಅನೇಕ ಸಾಹಿತಿಗಳ ಪರಿಚಯ ಆಯಿತು. ಸುಪ್ರಸಿದ್ಧ ಕಾದಂಬರಿಕಾರ ತರಾಸು ಚಿತ್ರದುರ್ಗದವರು. ನನಗೆ ತಮ್ಮನಂತಿದ್ದರು. ಅವರ ತಂದೆ ತಳಕಿನ ರಾಮಸ್ವಾಮಯ್ಯನವರ ಪರಿಚಯ ನನಗೆ ಚೆನ್ನಾಗಿ ಇತ್ತು. ಅವರು ವಕೀಲರು. ಅವರ ಅಣ್ಣ ಟಿ.ಎಸ್. ವೆಂಕಣ್ಣಯ್ಯ ಮತ್ತು ತಮ್ಮ ತ.ಸು. ಶಾಮರಾಯರು ಸಹ ಸುಪ್ರಸಿದ್ಧ ಸಾಹಿತಿಗಳು. ವೆಂಕಣ್ಣಯ್ಯ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು ಮತ್ತು ಅನೇಕ ಕಿರಿಯ ಸಾಹಿತಿಗಳಿಗೆ ಗುರುಗಳಾಗಿದ್ದರು.
ಚಿತ್ರದುರ್ಗದಲ್ಲಿ ಅವರ ಮನೆಗೆ ಅಗಡಿ ಆನಂದವನದ 'ಸದ್ಬೋಧ ಚಂದ್ರಿಕೆ' ಎಂಬ ಮಾಸ ಪತ್ರಿಕೆ ಬರುತ್ತಿತ್ತು. ಅದರಲ್ಲಿ ಅನೇಕ ಐತಿಹಾಸಿಕ ಕಾದಂಬರಿಗಳು ಧಾರವಾಹಿಯಾಗಿ ಪ್ರಕಟವಾಗುತ್ತಿದ್ದವು. ಇವುಗಳನ್ನು ಓದಿ ನಾನು ತುಂಬಾ ಪ್ರಭಾವಿತನಾದೆ. ಅದರಲ್ಲಿಯೂ, ವೆಂ.ತಿ. ಗಳಗನಾಥರ ಮರಾಟರ ಅಭ್ಯುದಯ, ಮಾಧವ ಕರುಣಾವಿಲಾಸ, ತಿಲೋತ್ತಮೆ ಕಾದಂಬರಿಗಳು ನನ್ನನ್ನು ತುಂಬಾ ಆಕರ್ಷಿಸಿದವು. ಸದ್ಭೋಧ ಚಂದ್ರಿಕೆಯ ಸಂಪಾದಕರಾಗಿದ್ದ ಭೀ.ಪ.ಕಾಳೆ ಅವರ ಪತ್ತೇದಾರಿ ಕಾದಂಬರಿಗಳು ಸಹ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದವು. ಈ ಇಬ್ಬರೂ ಕಾದಂಬರಿಕಾರರನ್ನು ನೋಡುವ ಆಸೆಯಿಂದ ನಾನು ಒಮ್ಮೆ ಆನಂದವನಕ್ಕೆ ಓಡಿಹೋಗಿದ್ದೆ. ಗಳಗನಾಥರು ಆನಂದವನದಲ್ಲಿ ಇರಲಿಲ್ಲ. ಹಾವೇರಿಯಲ್ಲಿ ವಾಸಿಸುತ್ತಿದ್ದರು. ಕಾಳೆಯವರ ಪತ್ತೇದಾರಿ ಕಾದಂಬರಿಗಳಿದ್ದ ಹಳೆಯ ಸಂಚಿಕೆಗಳನ್ನೆಲ್ಲ ಓದಿದ ನಂತರ, ಒಂದು ದಿನ ಅಲ್ಲಿಂದ ಯಾರಿಗೂ ಹೇಳದೆ ಹಾವೇರಿಗೆ ಬಂದೆ. ಅಲ್ಲಿ ಗಳಗನಾಥರನ್ನು ಅವರ ಮನೆಯಲ್ಲಿ ಕಂಡೆ. ಸ್ವಲ್ಪ ಹೊತ್ತು ಮಾತನಾಡಿದೆವು. ಅಂದು ವಿಜಯದಶಮಿ ಹಬ್ಬ. ಊಟ ಮಾಡಿಕೊಂಡು ಹೋಗು ಅಂದರು. ಅದರಂತೆ ಅಲ್ಲಿಯೇ ಅವರ ಮನೆಯ ಕಟ್ಟೆಯ ಮೇಲೆ ಕುಳಿತಿದ್ದೆ. ಅಷ್ಟರಲ್ಲಿ ಅವರ ಮನೆಯ ಜಪ್ತಿ ವಾರಂಟನ್ನು ತೆಗೆದುಕೊಂಡು ಕೋರ್ಟಿನ ಅಮೀನನೊಬ್ಬ ಅಲ್ಲಿಗೆ ಬಂದ. ಗಳಗನಾಥರು ಅವರೊಡನೆ ಸ್ವಲ್ಪ ಹೊತ್ತು ಮಾತನಾಡಿ, ಸಾಯಂಕಾಲ ಬಾ ಎಂದು ಹೇಳಿ ಕಳಿಸಿದರು. ಈ ಘಟನೆಯಿಂದ ನನ್ನ ಮನಸ್ಸು ಬಹಳ ಉದ್ವಿಗ್ನವಾಯಿತು. ಊಟ ಮಾಡಲು ಸಹ ಮನಸ್ಸಾಗದೆ ನೇರವಾಗಿ ರೈಲ್ವೇ ಸ್ಟೇಷನ್ನಿಗೆ ಬಂದು, ಚಿತ್ರದುರ್ಗಕ್ಕೆ ವಾಪಸ್ಸು ಬಂದೆ. ಬಂದ ಮೇಲೆ ನನ್ನ ದೊಡ್ಡಪ್ಪನಿಂದ ಚೆನ್ನಾಗಿ ಬೈಸಿಕೊಂಡೆ. ಇದು ನನ್ನ ಜೀವನದ ಮೊದಲನೆಯ ಸಾಹಸ.
ಕೆ.ಶಾಮರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

