ಮಹಿಳೆ-ಮನೆ-ಬದುಕು

ನಿನಗೆ ಬೇರೆ ಹೆಸರು ಬೇಕೆ?

ನಿನಗೆ ಬೇರೆ ಹೆಸರು ಬೇಕೆ?
Published On :

'ಜಾಣೆಯಾಗಿರು ನನ್ನ ಮಲ್ಲಿಗೆ; ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ'; 'ಈ ನಿಮ್ಮ ಪಾದದಾಣೆ; ನಿಮ್ಮ ಪೂಜೆ ಹೂವು ನಾನೇ'; 'ಗಂಡಾಗಿ ನೀನು ಹುಟ್ಟಿ ಬಂದ ಮೇಲೆ; ಮೀಸೆ ಮೇಲೆ ಕೈ, ಎಲ್ಲಾದಕ್ಕೂ ಸೈ'; 'ಬಾಳೆಂಬ ವನದಿ ನೀ ದೇವರಾದೆ; ಈ ದೇವರಿಗೆ ನಾ ಪೂಜಾರಿಯಾದೆ'; 'ಹೂವು ಎಂದಿಗೂ ಮುಡಿಪು ದೇವರಿಗೆ ಏಕೆ ಅವಸರ? ನಾನು ನಿನ್ನವಳು, ನೀನು ನನ್ನವನು ಏಕೆ ಕಾತರ?' ಈ ಸಾಲುಗಳ ಹಿಂದಿರುವ ಪುರುಷಪ್ರಧಾನ ಆಲೋಚನೆಗಳೇ ಹೆಣ್ಣನ್ನು ನೋಡುವ ಕ್ರಮವನ್ನು ಬೆರಳು ಮಾಡಿ ತೋರಿಸುತ್ತಿರುವಂತಿವೆ. ಹೆಂಗಸರೇ ಚಿತ್ರಸಾಹಿತಿಗಳಾಗಿದ್ದರೆ ಈ ಸಾಲುಗಳು ಹೇಗಿರುತ್ತಿದ್ದವೆಂಬುದರ ಬಗ್ಗೆ ನನಗೆ ಕುತೂಹಲವಿದೆ.

ನಮಗೆ ಎರಡನೆ ಮಗಳು ಹುಟ್ಟಿದಾಗ ನನಗಾದ ಅನುಭವಗಳು ಹೆಣ್ಣಿನ ಕುರಿತಾಗಿ ಲೋಕಕ್ಕೆ ಇರುವ ಗ್ರಹಿಕೆಗಳ ಕುರಿತು ಸಾಕಷ್ಟು ಭಿನ್ನ ಬಗೆಯ ತಿಳಿವಳಿಕೆಗಳನ್ನು ನೀಡಿದವು. ಆ ದೃಷ್ಟಿಯಿಂದ ಅವಳು ನನಗೆ 'ಪೊರೆಗಳ ಹರಿದು ಹೊಸಲೋಕ ಕಾಣಿಸಿದ ಕಣ್ಣಾಗಿ' ಗೋಚರಿಸಿದಳು. ಮುದ್ದಾದ ಮಗು, ಅದಕ್ಕಿಂತ ಮುದ್ದಾದ ಪ್ರಶಾಂತ ಭಂಗಿಯಲ್ಲಿ ನಿದ್ದೆ ಮಾಡುತ್ತಿದ್ದರೆ, ಪಕ್ಕದಲ್ಲಿ ಮಲಗಿದ ನನ್ನವಳು ಖಿನ್ನವದನಳಾಗಿದ್ದಳು. ಮೊತ್ತಮೊದಲ ಬಾರಿಗೆ ಅತ್ತೆ ನನ್ನ ಮುಂದೆ ಕಣ್ಣೀರು ಹಾಕಿದಳು. ಅಮ್ಮನಾದರೋ 'ಸತ್ತು ಹೋಗಿರೋ ನಿಮ್ಮಪ್ಪ ಮತ್ತೆ ಹುಟ್ಟಿ ಬರ್ತಾನ ಅಂದ್ಕೊಂಡಿದ್ನೆಪ. ಇರ್ಲಿ ಬುಡು. ಆ ಶಾಂಭವಿ ಸತ್ಯುಳ್ಳಕಿ ಆಗಿದ್ರೆ ಮುಂದಿನ ವರ್ಷ ಗಂಡೇ ಹುಟ್ತಾದ!' ಅಂದಳು- ಒತ್ತಿಕೊಂಡು ಬರುತ್ತಿದ್ದ ನಿರಾಶೆಯ ದುಃಖವನ್ನು ಕಣ್ಣಿಂದ ಕೆಳಗುರುಳದಂತೆ ಹತ್ತಿಕ್ಕಲು ವ್ಯರ್ಥ ಪ್ರಯತ್ನ ಪಡುತ್ತ. ಗಂಡು ಮಗುವಾಗಬೇಕೆಂಬ ನಮ್ಮ ಕೋರಿಕೆಯನ್ನು ಈಡೇರಿಸಲಿಕ್ಕೆ ಶಾಂಭವಿ ಎಂಬ ಹೆಣ್ಣು ದೇವರ ಸತ್ಯವನ್ನೇ ಅವಳು ಪಣಕ್ಕಿಟ್ಟದ್ದು ಮಾತ್ರ ನನಗೆ ಒಂದು ಸೋಜಿಗದ ಸಂಗತಿಯಾಗಿ ತೋರಿತು.
ಇದು ಎರಡನೇ ಸಿಸೇರಿಯನ್ ಹೆರಿಗೆಯಾದ್ದರಿಂದ ಕುಟುಂಬ ಯೋಜನೆಯ ಶಸ್ತ್ರಚಿಕಿತ್ಸೆಯನ್ನೂ ಈಗಲೇ ಮಾಡಿಬಿಡಿ ಎಂದು ಆಪರೇಷನ್ ಮಾಡಿದ ಪ್ರಸೂತಿ ತಜ್ಞೆ ಡಾಕ್ಟರರನ್ನು ಕೇಳಿದರೆ ಆಕೆಯ ಪ್ರತಿಕ್ರಿಯೆ ಇನ್ನೂ ಕುತೂಹಲಕರವಾಗಿತ್ತು. ಅವರೆಂದರು- 'ಮಾಡೋಣ. ಆದರೆ ಸದ್ಯಕ್ಕೆ ಬೇಡ. ಒಂದು ಆರು ತಿಂಗಳಾಗಲಿ. ಆಮೇಲೆ ನೋಡೋಣ'. ಈ ನೋಡೋಣ-ಮಾಡೋಣ ಎಂಬ ರಾಜಕಾರಣದ ಮಾದರಿಯ ಮಾತಿನ ಹಿಂದೆ ಏನೋ ತಥ್ಯ ಅಡಗಿರುವಂತೆ ಕಂಡು ದಾದಿಯೊಬ್ಬಳನ್ನು ಪುಸಲಾಯಿಸಿ ಕೇಳಿದೆ. ಆಕೆ ಹೇಳಿದಳು- 'ಏ.. ಅದಕ್ಯಾಕ್ರೀ ಅಷ್ಟೊಂದು ಅವಸರ ಮಾಡ್ತೀರಿ? ಆಪರೇಷನ್ ಆದ್ಮೇಲೆ ಮೂರನೇ ಮಗು ಬೇಕು ಅನಿಸಿದ್ರೆ ಆಗ ಏನೂ ಮಾಡಕಾಗಲ್ಲ. ಮೊದಲು ಮನೆಯೊಳಗೆ ಎಲ್ಲರ ಜೊತೆ ಡಿಸ್ಕಸ್ ಮಾಡ್ರಿ ಬ್ರದರ್. ಆಮೇಲೆ ಪೇಚಾಡಬಾರದು ಅಂತ್ಲೇ ಎರಡೂ ಹೆಣ್ಣಾದವರಿಗೆ ನಾವು ತಕ್ಷಣಕ್ಕೆ ಫ್ಯಾಮಿಲಿ ಪ್ಲಾನಿಂಗ್ ಮಾಡಲ್ಲ. ಅದಾಗಿ ಮೂರನೇ ಸಿಸೇರಿಯನ್ ಅನ್ನೋದೊಂದು ದೊಡ್ಡ ವಿಷ್ಯನೇ ಅಲ್ಲ. ಎಷ್ಟೋ ಕೇಸ್‌ಗಳಿಗೆ ನಾವೇ ಮಾಡಿದೀವಲ್ಲ. ಒಂದರ ಗಂಡು ಮಗು ಇಲ್ಲಾಂದ್ರ ಹೆಂಗ? ಈಗ ನಿಮ್ಮ ಮಾತು ಕೇಳಿ ಆಪರೇಷನ್ ಮಾಡಿ ಆಮೇಲೆ ನೀವು ನಮ್ಮನ್ನು ಬೈದುಕೊಳ್ಳೋದಕ್ಕಿಂತ, ಈಗ ಬೈಕೊಂಡ್ರೂ ಪರವಾಗಿಲ್ಲ ಆಮೇಲೆ ನೀವೇ ನಮ್ಮ ಮಾತು ಸರಿ ಅಂತೀರಿ. ಇಂಥವು ಎಷ್ಟೋ ಆಗ್ತಾವ'.
ಆಲೋಚಿಸಿ ನೋಡಿದರೆ ಹೆಣ್ಣು ಮಗು ಹುಟ್ಟಿದಾಗ ಲೊಚಗುಡುವವರೆಲ್ಲ ಬಹುತೇಕ ಹೆಂಗಸರೇ ಆಗಿದ್ದರು. ಗಂಡು ಮಗುವಾಗಲಿ ಅಂತ ಗಂಡಸರಿಗಿಂತ ಹೆಚ್ಚು ಅವರೇ ಆಸೆಪಡುತ್ತಾರೋ ಅಥವಾ ಗಂಡಸರ ಮನೋಕಾಮನೆಯನ್ನೇ ಯಥಾವತ್ತಾಗಿ ತಮ್ಮದಾಗಿಸಿಕೊಂಡು ಅವರನ್ನು ಸಂಪ್ರೀತಗೊಳಿಸಲಿಕ್ಕೆ ಹೆಂಗಸರು ಹೀಗೆ ಹೇಳುತ್ತಾರೋ ಖಚಿತವಾಗಿ ಗೊತ್ತಿಲ್ಲ. ಹೆಣ್ಣಾಗಿ ಹುಟ್ಟಿದ್ದಕ್ಕೆ ತಾವು ಅನುಭವಿಸಬೇಕಾಗಿ ಬಂದ ಎಲ್ಲ ಕಷ್ಟಕೋಟಲೆಗಳು ಅವರಿಂದ ಈ ಮಾತನ್ನು ಆಡಿಸಿರುವ ಸಾಧ್ಯತೆ ಕೂಡಾ ತಳ್ಳಿಹಾಕಲಾಗದು. ಜಾನಪದ ಮತ್ತು ಶಿಷ್ಟ ಎರಡೂ ಬಗೆಯ ಸಾಹಿತ್ಯದಲ್ಲೂ ಈವರೆಗೆ ನಮಗೆ ಸಿಕ್ಕಿರುವ, ದಕ್ಕಿರುವ ಸ್ತ್ರೀಚಿತ್ರಣ ಕೂಡ ಈ ಮಾತಿಗೆ ಪುಷ್ಟಿ ನೀಡುವಂತಿದೆ. ಒಂದೋ ಅವಳನ್ನು ದೈವತ್ವಕ್ಕೇರಿಸಿ ಶಕ್ತಿಸ್ವರೂಪಿಣಿಯಾಗಿ ವಿಜೃಂಭಿಸಲಾಗಿದೆ ಇಲ್ಲವೆ ಚರಣದಾಸಿಯನ್ನಾಗಿಸಿ ಪಾತಾಳಕ್ಕೆ ತುಳಿಯಲಾಗಿದೆ. ನಮ್ಮ ಸಹಚರಳಂತೆ, ಮನುಷ್ಯಳಂತೆ ಅವಳನ್ನು ಸರಿಸಮನಾಗಿ ಗ್ರಹಿಸಿ ಅವಳ ಮಿತಿ ಮತ್ತು ಮಹತ್ವಗಳನ್ನು ಅರಿಯುವ ಕೆಲಸ ಕಡಿಮೆ ಪ್ರಮಾಣದಲ್ಲಾಗಿದೆ. ಮನೆ-ಮನಗಳನ್ನು ವಯಸ್ಸು-ಲಿಂಗ-ಪ್ರದೇಶ-ಸಾಕ್ಷರತೆಗಳ ಭೇದವಿಲ್ಲದೆ ತಲುಪಿದ ಚಲನಚಿತ್ರಗೀತೆಗಳ ಸಾಹಿತ್ಯವಂತೂ ಹೆಣ್ಣನ್ನು ಅಲಂಕಾರಿಕ ಪದಗಳಲ್ಲಿ ಹೊಗಳಿ ಅಟ್ಟಕ್ಕೇರಿಸುತ್ತಲೇ ಒಂದಿಡೀ ತಲೆಮಾರಿನ ಗ್ರಹಿಕಾಸಾಮರ್ಥ್ಯದ ಮೇಲೆ ಸವಾರಿ ಮಾಡಿದೆ. ಚಿತ್ರಸಾಹಿತಿಗಳೆಲ್ಲರೂ ಪುರುಷರೇ ಆಗಿದ್ದುದು ಕೂಡ ಇದಕ್ಕೊಂದು ಕಾರಣವಾಗಿರುವ ಸಾಧ್ಯತೆಯಿದೆ ಎಂಬುದು ನನ್ನ ಊಹೆ. 'ಜಾಣೆಯಾಗಿರು ನನ್ನ ಮಲ್ಲಿಗೆ; ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ'; 'ಈ ನಿಮ್ಮ ಪಾದದಾಣೆ; ನಿಮ್ಮ ಪೂಜೆ ಹೂವು ನಾನೇ'; 'ಗಂಡಾಗಿ ನೀನು ಹುಟ್ಟಿ ಬಂದ ಮೇಲೆ; ಮೀಸೆ ಮೇಲೆ ಕೈ, ಎಲ್ಲಾದಕ್ಕೂ ಸೈ'; 'ಬಾಳೆಂಬ ವನದಿ ನೀ ದೇವರಾದೆ; ಈ ದೇವರಿಗೆ ನಾ ಪೂಜಾರಿಯಾದೆ'; 'ಹೂವು ಎಂದಿಗೂ ಮುಡಿಪು ದೇವರಿಗೆ ಏಕೆ ಅವಸರ?; ನಾನು ನಿನ್ನವಳು, ನೀನು ನನ್ನವನು ಏಕೆ ಕಾತರ?' ಈ ಸಾಲುಗಳ ಹಿಂದಿರುವ ಪುರುಷಪ್ರಧಾನ ಆಲೋಚನೆಗಳೇ ಹೆಣ್ಣನ್ನು ನೋಡುವ ಕ್ರಮವನ್ನು ಬೆರಳು ಮಾಡಿ ತೋರಿಸುತ್ತಿರುವಂತಿವೆ. ಹೆಂಗಸರೇ ಚಿತ್ರಸಾಹಿತಿಗಳಿದ್ದರೆ ಈ ಸಾಲುಗಳು ಹೇಗಿರುತ್ತಿದ್ದವೆಂಬುದರ ಬಗ್ಗೆ ನನಗೆ ಕುತೂಹಲವಿದೆ. ಇರಲಿ, ಇದಕ್ಕೆ ವ್ಯತಿರಿಕ್ತವಾಗಿ 'ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು.. ಗುಲಾಮಳಿವಳಲ್ಲ, ಸಲಾಮು ಹೊಡೆಯಲ್ಲ'ದಂಥ ಸಾಲುಗಳು ಮಿಣುಕುಹುಳದಂತೆ ಅಲ್ಲೊಂದು ಇಲ್ಲೊಂದು ಬಂದೂ ಹೋಗಿವೆಯೆನ್ನಿ. ಒಟ್ಟಾರೆಯಾಗಿ ಶಿಲ್ಪಿಗಳು, ಚಿತ್ರಕಾರರು, ನಿರ್ದೇಶಕರು ಪುರುಷರಾಗಿದ್ದರೆ ಅವರು ಚಿತ್ರಿಸುವ ಹೆಣ್ಣೇ ಬೇರೆ; ಸ್ವತಃ ಹೆಣ್ಣಾಗಿರುವವಳು ಅವಳನ್ನು ಪರಿಭಾವಿಸುವ, ಗ್ರಹಿಸುವ, ಚಿತ್ರಿಸುವ ರೀತಿಯೇ ಬೇರೆಯೆಂಬುದಂತೂ ಸೂರ್ಯಸ್ಪಷ್ಟ ಸಂಗತಿ. ರಾಜಾ ರವಿವರ್ಮ ಸೇರಿದಂತೆ ಬಹುತೇಕ ಕಲಾವಿದರು ಚಿತ್ರಿಸುವ ಹೆಂಗಸರು ಮತ್ತು ಯಾವುದೇ ಶಿಲ್ಪಿಯು ಕೆತ್ತಿರುವ ಯಾವುದೇ ಸ್ತ್ರೀ ದೇವತೆಯ ವಿಗ್ರಹಗಳೂ ಸುಪುಷ್ಟ ಅಂಗಸೌಷ್ಟವ ಹೊಂದಿರುವ ಸುಂದರ ಸ್ತ್ರೀಮೂರ್ತಿಗಳೇ ಆಗಿದ್ದು ಅವರೆಲ್ಲ ಒಂದೇ ಅಚ್ಚಿನ ಬೇರೆ ಬೇರೆ ರೂಪಗಳಂತೆ ಕಾಣಿಸುವುದಿಲ್ಲವೆ? ಕಾಳಿಯಂಥ ಉಗ್ರದೇವತೆಯ ಚಿತ್ರವನ್ನು ಅಥವಾ ಶಿಲ್ಪವನ್ನು ಮುಖ ಹೊರತುಪಡಿಸಿ ನೋಡಿದಾಗ ಅಲ್ಲೂ ನಮಗೆ ಒಂದು ಸುಂದರ ಸ್ತ್ರೀಯ ಆಕರ್ಷಕ ಮೈಮಾಟವೇ ಕಾಣಸಿಗುವುದು. ಇದಕ್ಕೆ ಕಾರಣ ಆ ಕಲಾಕಾರನ ಪುರುಷಕೇಂದ್ರಿತ ಸೌಂದರ್ಯಪ್ರಜ್ಞೆಯೇ ತಾನೆ? ಅಲ್ಲವೆಂದು ಹೇಗೆ ಹೇಳುವುದು?
ಹೆಣ್ಣು ಅಂದ ತಕ್ಷಣ ಒಂದು ಸೆಕ್ಸ್ ಸಿಂಬಲ್ ಆಗಿ ಅವಳು ನಮ್ಮೆದುರು ಬರುವಂಥ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ. ಅವಳನ್ನು ಒಲಿಸಿಕೊಳ್ಳುವುದರಿಂದ ಹಿಡಿದು, ಅವಳನ್ನು ತೃಪ್ತಿಪಡಿಸುವವರೆಗೆ ಗಂಡಸಿನ ಭಾವಕೋಶದ ಬಹುಭಾಗವನ್ನು ಅವಳು ಆವರಿಸಿಕೊಂಡಿದ್ದಾಳೆ. ಹೆಣ್ಣನ್ನು ಆದಿಶಕ್ತಿ, ಪರಾಶಕ್ತಿಗೆ ಹೋಲಿಸಿದ ಗಂಡಸಿನ ಮನಸಿನ ಆಳದಲ್ಲೆಲ್ಲೋ ಅವಳನ್ನು ಗೆಲ್ಲಲಾಗದ, ಮೀರಲಾಗದ ವಾಸ್ತವಪ್ರಜ್ಞೆಯು ಕೆಲಸ ಮಾಡಿರಬಹುದೆಂಬ ಅನುಮಾನ ನನಗೆ. ಸೌಂದರ್ಯ, ಶಕ್ತಿ, ಜ್ಞಾನ ಅಷ್ಟೇಕೆ ಅನ್ನದ ಅಧಿದೇವತೆಯೂ ಸ್ತ್ರೀಯೇ ಆಗಿದ್ದಾಳೆ. ಮಿಲನದ ವಿಚಾರಕ್ಕೆ ಬಂದರೆ ಹೆಣ್ಣು ಮತ್ತು ಗಂಡಿನ ಸಂಬಂಧವನ್ನು ಪಥ ಮತ್ತು ಪಥಿಕನ ಸಂಬಂಧದ ರೂಪಕದ ಮೂಲಕ ಹಿಡಿದಿಡಬಹುದೆನಿಸುತ್ತದೆ. ಧರ್ಮ, ಅರ್ಥಗಳಂತೆ ಕಾಮವೂ ಮೋಕ್ಷದ ಹಾದಿಯಾಗಿದೆ. ಪಥಿಕನು ಗುರಿ ತಲುಪಲು ಪಥವೊಂದು ಬೇಕು. ಗುರಿ ಒಂದೇ ಇದೆ. ಆದರೆ ದಾರಿಗಳು ಹಲವಿವೆ. ಒಂದು ದಾರಿಯ ಹಿಡಿದು ನಡೆಯುತ್ತ ಸಾಗುವ ಒಬ್ಬ ಪಥಿಕನಿಗೆ ದಣಿವಿಲ್ಲ. ದಾರಿ ಬದಲಿಸುತ್ತ ಇರುವವನಿಗೆ ಗುರಿಯ ದೂರ ಹೆಚ್ಚುತ್ತ ಸಾಗುವುದಲ್ಲದೆ ದಣಿವಾಗುವುದು. ಒಂದೇ ದಾರಿ ಹಿಡಿದು ನಡೆದು ಗುರಿ ತಲುಪಿದ ಹಲವರಿದ್ದಾರೆ. ಹಲವು ದಾರಿಗಳ ಹಿಡಿದು ನಡೆದು ಗುರಿ ತಲುಪಿದ ಒಬ್ಬನೂ ಇಲ್ಲ. ಏಕೆಂದರೆ ಇಲ್ಲಿ ದಾರಿಗೆ ದಣಿವಿಲ್ಲ, ದಾರಿಹೋಕನಿಗಿದೆ. ಅದೇ ರೀತಿಯಾಗಿ ದಾರಿಗೆ ಇಷ್ಟಾನಿಷ್ಟಗಳ ಹಂಗಿಲ್ಲ. ಇಷ್ಟವಿಲ್ಲದೆಯೂ ಅದು ಒಬ್ಬ ಪಥಿಕನಿಗೆ ತೆರೆದುಕೊಳ್ಳುವುದು. ಆದರೆ ದಾರಿಹೋಕನೊಬ್ಬ ಇಷ್ಟವಿಲ್ಲದ ಹಾದಿಯಲ್ಲಿ ಅಥವಾ ಇಷ್ಟವಿರುವ ಹಾದಿಯಲ್ಲಿಯೇ ಆದರೂ ಮನಸಿಗೆ ಇಷ್ಟವಿಲ್ಲದಿರುವಾಗ ನಡೆಯಲಾರ. ಇದು ಸೂಕ್ಷ್ಮವಾಗಿ ದಾರಿಯ ಶಕ್ತಿ ಮತ್ತು ದಾರಿಹೋಕನ ಮಿತಿಗಳನ್ನು ಸೂಚಿಸುತ್ತಿರುವಂತಿದೆ. ಶಕ್ತಿ ಮತ್ತು ಆಸಕ್ತಿಗಳ ವಿಷಯವಾಗಿ ಇವೆರಡರಲ್ಲಿ ಅಥವಾ ಈ ಇಬ್ಬರಲ್ಲಿ ಒಂದು ಮೂಲಭೂತ ವ್ಯತ್ಯಾಸವಿದೆ. ಅದೆಂದರೆ ದಾರಿಗೆ ಶಕ್ತಿ ಜಾಸ್ತಿ, ಆಸಕ್ತಿ ಕಡಿಮೆ. ದಾರಿಹೋಕನಿಗೆ ಆಸಕ್ತಿ ಜಾಸ್ತಿ, ಶಕ್ತಿ ಕಡಿಮೆ. ಈ ಮಾತನ್ನು ಹೇಳುತ್ತಿರುವಾಗ 'ಈ ಭೂಮಿಯು ತಿರುಗುತ್ತಿರುವುದು ಸೂರ್ಯನ ಸುತ್ತ ಅಲ್ಲ, ವಿಮೆನ್ ಸೆಕ್ಷುವಾಲಿಟಿಯ ಸುತ್ತ' ಎಂಬ ಯಾವುದೋ ಕವಿಯ ಸಾಲುಗಳು ನೆನಪಾಗ್ತಿವೆ. ಓಶೋ ಅಂತೂ ಸಂಭೋಗದ ಮೂಲಕವೇ ಧ್ಯಾನದ ಔತ್ತರೀಯ ಸ್ಥಿತಿಯಾದ ಸಮಾಧಿ ಸ್ಥಿತಿಯನ್ನು ತಲುಪಬಹುದೆಂದು ತಮ್ಮದೇ ಆದ ಒಂದು ವಿಶಿಷ್ಟ ಅಧ್ಯಾತ್ಮಿಕ ಪ್ರಮೇಯವನ್ನು ಮಂಡಿಸಿದ್ದಾರೆ. ಹೆಣ್ಣಿನ ದೈಹಿಕ ಮತ್ತು ಮಾನಸಿಕ ಸಾಂಗತ್ಯಗಳಿಂದ ತಮಗೆ ಬೇಕಾದ ಪ್ರಾಣಚೈತನ್ಯವನ್ನು ವಿವಿಧ ಸ್ತರಗಳಲ್ಲಿ ಅವರವರ ಶಕ್ತ್ಯಾನುಸಾರ ಅವರವರು ಪಡೆದಿದ್ದರೆ ಓಶೋ ಸಮಾಧಿಯನ್ನೇ ಪಡೆದಿದ್ದಾರೆ.
ಸಾಹಿತಿಗಳಂತೂ ಹೆಣ್ಣಿನ ಬಗ್ಗೆ ಲೋಡುಗಟ್ಟಲೆ ಬರೆದಿದ್ದಾರೆ, ಬರೆಯುತ್ತಿದ್ದಾರೆ, ಬರೆಯಲಿದ್ದಾರೆ. ಜಿ.ಎಸ್. ಶಿವರುದ್ರಪ್ಪನವರು 'ನಿನಗೆ ಬೇರೆ ಹೆಸರು ಬೇಕೆ?; ಸ್ತ್ರೀ ಎಂದರೆ ಅಷ್ಟೇ ಸಾಕೆ?' ಎಂದಿದ್ದರೆ, ಲಂಕೇಶ್ 'ನನ್ನವ್ವ ಫಲವತ್ತಾದ ಕಪ್ಪು ನೆಲ' ಎಂದಿದ್ದಾರೆ. ತೆಲುಗಿನ ಕೆ. ಶಿವಾರೆಡ್ಡಿಯವರು 'ಬೀಜವಲ್ಲ ಬರಿಯ ಬೆರಳಿಟ್ಟರೂ ಮೊಳಕೆಯೊಡೆಯುವ ಫಲದಾಯಿನಿ' ಎಂದು ಹೆಣ್ಣನ್ನು ಚಿತ್ರಿಸಿದ್ದಾರೆ. ಅವರು ಹೆಣ್ಣಿನ ಬಗ್ಗೆ ಬರೆದಿರುವ ಕವಿತೆಗಳು ಎಷ್ಟಿವೆಯೆಂದರೆ ವಿವಿಧ ಸಂಕಲನದಿಂದ ಅಂಥವನ್ನೆಲ್ಲ ಆಯ್ದು 'ಆಮೆ ಎವರೈತೆ ಮಾತ್ರಂ (ಆಕೆ ಯಾರಾದರೆ ಮಾತ್ರ)' ಎಂಬ ಪ್ರತ್ಯೇಕ ಸಂಕಲನವನ್ನೇ ಪ್ರಕಟಿಸಿದ್ದಾರೆ. ಎಷ್ಟು ಬಗೆಗಳಲ್ಲಿ ಕಂಡರಿಸಿದರೂ ನಮ್ಮ ದೃಷ್ಟಿಕೋನಕ್ಕೊಂದು ಮಿತಿ ಇರುವಂತಿರುವುದು ಲಲಿತಾ ಸಿದ್ಧಬಸವಯ್ಯ ಅವರ 'ಧನ್ಯವಾದಗಳು' ಪದ್ಯ ಓದಿದಾಗ ನನಗನ್ನಿಸಿತು. ಅದರಲ್ಲಿ ಅವರು ಈ ಜಗವನ್ನು ಅನುವಾದಿಸುವ ಅವಕಾಶವನ್ನು ತಮಗೆ ಮಾತ್ರ ನೀಡಿದ್ದಕ್ಕೆ ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ವಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಮಾತಾಡುತ್ತ ವೀಣಾ ಬನ್ನಂಜೆಯವರು 'ಗಂಡಸು ಅಪೂರ್ಣನಾಗಿರುವುದರಿಂದ ತನಗೆ ತನ್ನ ಸಂತಾನವನ್ನುಮುಂದುವರಿಸುವ ಮಗನೇ ಬೇಕೆಂದು ಬಯಸುತ್ತಾನೆ. ಅವನು ಹುಟ್ಟಿದ ಮೇಲೆ ತಾನು ಪೂರ್ಣಗೊಂಡಂತೆ ಭಾವಿಸುತ್ತಾನೆ. ಆದರೆ ಹೆಣ್ಣು ತನ್ನಷ್ಟಕ್ಕೇ ತಾನು ಸ್ವಯಂಪರಿಪೂರ್ಣಳಿದ್ದಾಳೆ. ಹಾಗಾಗಿ ಅವಳಿಗೆ ಎಲ್ಲ ಮಕ್ಕಳೂ ಒಂದೇ' ಎಂದಿದ್ದು ತಲೆಯಲ್ಲಿ ಗುಂಗಿಹುಳದಂತೆ ಕೊರೆಯುತ್ತಿದೆ. ಖುಷ್ವಂತ್‌ಸಿಂಗ್ ಇದೇ ಮಾತನ್ನೇ ಮದುವೆಗೆ ಅನ್ವಯಿಸಿ 'ಎ ಮ್ಯಾನ್ ಇಸ್ ಎ ಸೆಮಿಸರ್ಕಲ್ ಬಿಫೋರ್ ಮ್ಯಾರೇಜ್; ಅ್ಯಂಡ್ ಹಿ ಇಸ್ ಫಿನಿಶ್ಡ್ ಆಫ್ಟರ್ ಇಟ್‌' ಎಂದು ತಮಾಷೆಯಾಗಿ ಹೇಳಿದ್ದನ್ನು ನಾನು ಎಲ್ಲೆಂದರಲ್ಲಿ ಉಲ್ಲೇಖಿಸುತ್ತ ಹೆಂಗಸರನ್ನು ಕಾಡಿಸುತ್ತಿದ್ದೆ. ಫಿನಿಶ್ಡ್ ಎಂಬ ಪದವನ್ನು ಖುಷ್ವಂತ್‌ರು 'ಅವನ ಕಥೆ ಅಲ್ಲಿಗೆ ಮುಗಿದಂತೆ' ಎಂಬರ್ಥದಲ್ಲಿ ಪಂಚ್ ಮಾಡಲು ಬಳಸಿದ್ದರು. ವೀಣಾ ಬನ್ನಂಜೆಯವರ ಮಾತು ಕೇಳಿದ ಮೇಲೆ ನನಗೆ ಇದೇ ಮಾತು 'ಮದುವೆಗೆ ಮುಂಚೆ ಅರ್ಧವೃತ್ತ ಮಾತ್ರವಾಗಿದ್ದ ಗಂಡಸು, ನಂತರ ಪೂರ್ಣವೃತ್ತನಾಗುತ್ತಾನೆ ಯಾನೆ ಪರಿಪೂರ್ಣನಾಗುತ್ತಾನೆ' ಎಂಬ ಅರ್ಥ ಹೊತ್ತು ನನ್ನೊಳಗೆ ಹೊಳೆದು ಬೆಳೆಯತೊಡಗಿತು. ಸಂಚಿಯ ಹೊನ್ನಮ್ಮನಂತೂ ಹೆಣ್ಣನ್ನು ಕೀಳಾಗಿ ಕಾಣುವವರಿಗೆ ಎಂದೋ ಹೇಳಿಯಾಗಿದೆ 'ಹೆಣ್ಣು ಹೆಣ್ಣೆಂದೇಕೆ ಬೀಳು ಗಳೆವಿರಿ, ಹೆಣ್ಣಲ್ಲವೆ ನಿಮ್ಮ ಹೆತ್ತ ತಾಯಿ?' ಎಂದು.
'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ' ಎಂದ ಮನುವಿನ ಕಾಲದಿಂದಲೂ ಹೆಣ್ಣನ್ನು ಅಬಲೆಯಾಗಿ, ಆಶ್ರಿತಳಾಗಿಯೇ ನೋಡುತ್ತ ಬರಲಾಗಿದೆ. ಈಗ ಕಾಲ ಬದಲಾಗಿ ಆಕೆ ಪುರುಷನಿಗಿಂತ ಹೆಚ್ಚು ದುಡಿಯುತ್ತಿದ್ದಾಳೆ. ಸಂಸಾರದಲ್ಲಿ, ಉದ್ಯೋಗದಲ್ಲಿ, ವ್ಯವಹಾರದಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ಆದಾಗ್ಯೂ ಆಕೆಯ ಕುರಿತ ಧೋರಣೆ ಬದಲಾಗಿಲ್ಲ. ಆಕೆ ಎಷ್ಟಿದ್ದರೂ ಹೆಣ್ಣೇ. ಬಾಲ್ಯದಲ್ಲಿ ತಂದೆಯ, ಯೌವನದಲ್ಲಿ ಗಂಡನ, ಮುಪ್ಪಿನಲ್ಲಿ ಮಗನ ಆಸರೆ ಬೇಕೇ ಬೇಕು ಎಂಬ ಮಾತು ನಮ್ಮ ಸುತ್ತ ಕೇಳುತ್ತಲೇ ಇರುತ್ತದೆ. ಆಲೋಚಿಸಿ ನೋಡಿದರೆ ಗಂಡಿನ ಸ್ಥಿತಿಯೇನೂ ಇದಕ್ಕಿಂತ ಭಿನ್ನವಾಗಿಲ್ಲ ಎನಿಸುತ್ತದೆ. ಬಾಲ್ಯದಲ್ಲಿ ತಾಯಿಯ, ಯೌವನದಲ್ಲಿ ಹೆಂಡತಿಯ, ಮುಪ್ಪಿನಲ್ಲಿ ಸೊಸೆ ಅಥವಾ ಮಗಳ ಆಸರೆಯಿಲ್ಲದೆ ಅವನಾದರೂ ಹೇಗೆ ತಾನೇ ಇರಬಲ್ಲ? ಪರಸ್ಪರರಿಗೆ ಪೂರಕರೂ ಪ್ರೇರಕರೂ ಆಗಿರುವ ಸೃಷ್ಟಿಯ ಈ ಎರಡು ಕಣ್ಣುಗಳಲ್ಲಿ ಒಂದು ಶ್ರೇಷ್ಠ ಮತ್ತೊಂದು ಕನಿಷ್ಠ ಆದುದಾದರೂ ಹೇಗೆ? ಇದೊಂದು ವ್ಯವಸ್ಥಿತ ಯೋಜನೆ. ಒಂದೆಡೆ ಅವಳನ್ನು ಆದಿಶಕ್ತಿ, ಪರಾಶಕ್ತಿ ಎಂದು ವೈಭವೀಕರಿಸಿ ಅಟ್ಟದಲ್ಲಿ ಕೂರಿಸಲಾಯಿತು. ಮತ್ತೊಂದೆಡೆ ಅವಳು ನಾಜೂಕು, ಸುಕೋಮಲೆ, ಅಬಲೆ ಎಂದು ಕೋಣೆಯಲ್ಲಿ ಕೂಡಿಹಾಕಲಾಯಿತು. ಅಷ್ಟಕ್ಕೂ ಮೀರಿ ಗೆರೆ ದಾಟಿ ಬಂದವರನ್ನು 'ಹೆಣಮಕ್ಕಳ ಬುದ್ಧಿ ಮೊಣಕಾಲ ಕೆಳಗೆ', 'ಹೆಣಮಕ್ಕಳ ಕೈಯಾಗ ಹಿರಿತನ ಕೊಟ್ರ ಹಾಳಾಗಲಾರ್ದ ಇನ್ನೇನಾಗ್ತದ?' ಎಂಬಂಥ ಮಾತುಗಳ ಮೂಲಕ ಧೈರ್ಯಗುಂದಿಸಲಾಯಿತು. ನಮ್ಮ ಸಮನಾಗಿ ನಿಲ್ಲಿಸಿಕೊಂಡು ನೋಡಲಿಲ್ಲ ಅಥವಾ ನೋಡುವ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಲಿಲ್ಲ. ಬಹುಶಃ ಇದರ ಹಿಂದೆ ಕಳೆದುಕೊಳ್ಳುವ ಭೀತಿ ಮತ್ತು ಒಡೆತನದ ಅಹಂಗೆ ಬಲವಾದ ಪೆಟ್ಟು ಬೀಳುವ ಭಯಗಳು ಇದ್ದಿರಬಹುದು. ಅವರ ಧೈರ್ಯ, ಶಕ್ತಿ ಮತ್ತು ಜಾಣ್ಮೆಗಳ ಬಗ್ಗೆ ಒಳಗೊಳಗೆ ಇರುವ ಭಯವೂ ಕಾರಣವಾಗಿದ್ದಿರಬಹುದು. ಅವರ ದೃಢತೆಯ ಬಗ್ಗೆ ಇಲ್ಲೊಂದು ಮಾತು ಹೇಳಬೇಕು. ಆತ್ಮಹತ್ಯೆಗಳು ಮತ್ತು ಆತ್ಮಹತ್ಯಾ ಪ್ರಯತ್ನದ ಪ್ರಕರಣಗಳ ವಿಚಾರವಾಗಿ ಹೆಂಗಸರು ತಮ್ಮ ತೀರ್ಮಾನದ ಬಗ್ಗೆ ಹೆಚ್ಚು ಖಚಿತವೂ ಮತ್ತು ದೃಢವೂ ಆದ ನಿರ್ಧಾರ ಹೊಂದಿರುತ್ತಾರೆ ಎಂದು ಅಪರಾಧಶಾಸ್ತ್ರ ಹೇಳುತ್ತದೆ.
ಪ್ರಕೃತಿ ಕೂಡ ಹೆಣ್ಣಿಗೆ ಈ ಶಕ್ತಿ ಮತ್ತು ದೃಢತೆಯನ್ನು ಹುಟ್ಟಿನಿಂದಲೇ ಕೊಟ್ಟು ಕಳಿಸಿರುತ್ತದೆ ಅಂತ ಕಾಣಿಸುತ್ತದೆ. ಒಬ್ಬ ತಾಯಿಯನ್ನು ಇದರ ಬಗ್ಗೆ ಕೇಳಿ ನೋಡಿದೆ. ಆಕೆ ಸೋದಾಹರಣವಾಗಿ ನನಗೆ ಹೀಗೆ ತಿಳಿಸಿ ಹೇಳಿದಳು- 'ಹುಟ್ಟಿದ ಮಗು ಹೆಣ್ಣಾಗಿದ್ದರೆ ಬಾಣಂತಿಯು ಹೆಚ್ಚು ಬಾಯಿಕಟ್ಟಬೇಕಾದಅಗತ್ಯವಿಲ್ಲ. ಅದಕ್ಕೆ ವಿಶೇಷ ಜೋಪಾನವೂ ಬೇಕಿಲ್ಲ. ಅದೇ ಮಗುವು ಗಂಡಾಗಿದ್ದರೆ ಬಾಣಂತಿ ತುಂಬಾ ನಾಜೂಕಾಗಿರಬೇಕು. ಬಾಯಿ ರುಚಿ ಅಂತ ಬಾಣಂತಿ ಸ್ವಲ್ಪ ಹೆಚ್ಚು ಕಡಿಮೆ ಉಂಡಳೋ; ಹಾಲು ಕುಡಿದ ಮಗುವಿಗೆ ಹೇಲಾಟ ಶುರುವೇ ಅಂತ ತಿಳಿಯಿರಿ. ಬಲು ಜತನದಿಂದ ಕಾಯಬೇಕು. ನೋವನ್ನು ಸಹಿಸುವ, ರೋಗವನ್ನು ನಿರೋಧಿಸುವ ಗುಣ ಹೆಣ್ಣಿಗೆ ಪ್ರಕೃತಿದತ್ತವಾಗಿ ಬಂದಿರುತ್ತದೆ'. ಒಂದೇ ಸಲಕ್ಕೆ ನಮ್ಮ ನೂರಾರು ಮೂಳೆಗಳನ್ನು ಕಣ್ಣೆದುರಿಗೇ ನಿಧಾನವಾಗಿ ಮುರಿಯುತ್ತ ಹೋದರೆ ಆಗುವ ನೋವಿಗಿಂತ ನೂರು ಪಟ್ಟು ಹೆಚ್ಚು ನೋವು ಹೆರಿಗೆ ಸಮಯದಲ್ಲಾಗುವುದೆಂದು ಎಲ್ಲೋ ಓದಿದ್ದ ನೆನಪು. ಇಂಥ ನೋವನ್ನು ನೂರು ಬಾರಿ ಅನುಭವಿಸಿ, ನೂರು ಮಕ್ಕಳನ್ನು ಹೆತ್ತ ಗಾಂಧಾರಿಯ ಪಾತ್ರ ನಮ್ಮ ಮಹಾಭಾರತದಲ್ಲಿ ಬರುತ್ತದೆ. ಅದೆಲ್ಲ ಕಲ್ಪನೆ ಅಂತ ತಳ್ಳಿಹಾಕಿದರೂ ಹತ್ತಿಪ್ಪತ್ತು ಮಕ್ಕಳನ್ನು ಹಡೆದ ಎಷ್ಟೋ ತಾಯಂದಿರನ್ನು ನಾವೇ ನೋಡಿದ್ದೇವೆ. ಆದರೆ ಗಂಡು ಹಾಗಲ್ಲ. ಒಬ್ಬ ಹುಡುಗಿ ಕೈ ಕೊಟ್ಟರೂ ಸಾಕು, ಜೀವಮಾನ ಪೂರ್ತಿ ಅದರ ನೋವುಣ್ಣುತ್ತಾನೆ. ಅದನ್ನು ಮೀರಲಾಗದೆ ಒದ್ದಾಡುತ್ತಾನೆ. ಕುಂಡಿ ಒರೆಸಿಕೊಂಡು ಮರೆತುಬಿಡಬಹುದಾದಸಂಗತಿಯನ್ನು ಮುಂದೆ ಹರವಿಕೊಂಡು ಗೋಳಾಡುತ್ತಾನೆ. ನನ್ನ ಗೆಳೆಯನೊಬ್ಬ ನೆನಪಾಗ್ತಿದಾನೆ. ಹುಡುಗಿ ಕೈ ಕೊಟ್ಟಳು ಅಂತ ಅವನು ಕೊರಗ್ತಾ ಮತ್ತೊಬ್ಬಳನ್ನು ಪ್ರೀತಿಸಿದ. ಕೈ ಮೇಲೆ ಹಾಕಿಸಿಕೊಂಡಿದ್ದ ಮೊದಲಿನವಳ ಹೆಸರಿನ ಹಚ್ಚೆಯನ್ನು ಅಳಿಸಿ ಅದರ ಮೇಲೆ ಮತ್ತೆ ಇವಳ ಹೆಸರು ಹಾಕಿಸಿಕೊಂಡ. ಇವಳೂ ಕೈ ಕೊಟ್ಟಳು. ಹೀಗೆ ಅವನ ಕೈ ಮೇಲಿನ ಹಚ್ಚೆಯಲ್ಲಿ ನಾಲ್ಕು ಹೆಸರು ಬದಲಾಗಿ, ಯಾವುದೂ ಊರ್ಜಿತವಾಗದ ಕೊರಗಿನಲ್ಲಿ ಕುಡಿತಕ್ಕೆ ಬಲಿಯಾಗಿ ಸತ್ತೇ ಹೋದ. ಹೆಣ್ಣಿನ ಹೆರಿಗೆಯ ಆ ನೋವು ದೈಹಿಕವಾದುದು ಮತ್ತು ಗಂಡಿನ ಈ ಬಗೆಯ ದುಃಖ ಮಾನಸಿಕವಾದುದು ಎಂದು ಕೈಕೊಡವಿಬಿಡಬಹುದಾದಷ್ಟು ಸುಲಭದಲ್ಲೂ ಇದು ಇಲ್ಲ ಅಂತ ನನಗನಿಸುತ್ತೆ. ಅದಕ್ಕೇ ಒಂದು ಮಗುವಿನ ಜೊತೆಗೆ ಒಬ್ಬ ತಾಯಿಯೂ 'ಹುಟ್ಟುತ್ತಾಳೆ' ಎನ್ನುವುದು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅವಳು ಸತ್ತು ಮಗು ಹುಟ್ಟಬೇಕಾಗುತ್ತದೆ. ಸಾವಿರ ಪಾಲು ಸಾವಿನ ಬಾಗಿಲೇ ಆಗಿರುವ ಹೆರಿಗೆಯನ್ನು ಒಬ್ಬ ಹೆಂಗಸು ನೂರು ಬಾರಿ ಅನುಭವಿಸಿ ಗೆಲ್ಲಬಲ್ಲಳು. ಆದರೆ ಜೈವಿಕವಾಗಿ ಸಾವಿಗೆ ಸಮೀಪವೂ ಇಲ್ಲದ ಪ್ರೇಮವೈಫಲ್ಯವು ಎರಡಲ್ಲದೆ ಮೂರು ಸಾರಿ ಅವನ ಜೀವನದಲ್ಲಿ ಘಟಿಸಿತೆನ್ನಿ ಅವನು ಹರೋಹರ ಅನ್ನುವುದು ಗ್ಯಾರಂಟಿ. ನೂರು ನೋವು ನುಂಗಿ ನಗುವ ಅವಳ ಕೋಪಕ್ಕೆ ಹಾಗಾಗಿಯೇ ಜಗವನ್ನು ಸುಡುವ ಶಕ್ತಿಯಿರುವುದು.
ಗಂಡಸು ಮತ್ತು ಹೆಂಗಸರಲ್ಲಿರುವ ಮತ್ತೊಂದು ಮೂಲಭೂತ ವ್ಯತ್ಯಾಸ ಕರುಳಿಗೆ ಸಂಬಂಧಿಸಿದ್ದು. ತುಂಬಾ ಅಕ್ಕರೆಯ, ಮಾನವೀಯ ಗುಣಗಳ ಮನುಷ್ಯನನ್ನು ಹೆಂಗರುಳಿನವನು ಎನ್ನುತ್ತೇವೆ. ಇದೊಂದು ಇತ್ಯಾತ್ಮಕವಾದ ಗುಣವಿಶೇಷಣ. ಆದರೆ ಸ್ವಲ್ಪ ಜೋರಾಗಿರುವ ಹೆಂಗಸರನ್ನು ಗಂಡುಬೀರಿ ಎಂಬ ನೇತ್ಯಾತ್ಮಕ ಧ್ವನಿಯಿರುವ ಗುಣವಿಶೇಷಣ ಹಚ್ಚಿ ಗುರುತಿಸಲಾಗುತ್ತದೆ. ಮಕ್ಕಳಾದ ಮೇಲೆ ಗಂಡಸು ಅಪ್ಪ 'ಆಗುತ್ತಾನೆ'; ಆದರೆ ಹೆಣ್ಣು ಹುಟ್ಟಿದಾಗಲೇ ಅಮ್ಮ 'ಆಗಿರುತ್ತಾಳೆ'. ಮಕ್ಕಳು ಹುಟ್ಟಿದ ಮೇಲೆ ಜೀವಿಗಳಲ್ಲಿ ಕೆಲವು ಜೈವಿಕ ಬದಲಾವಣೆಗಳಾಗುವುದನ್ನು ಕಾಣುತ್ತೇವೆ. ಒರಟನಾದ ಗಂಡ ಮಕ್ಕಳಾದ ಮೇಲೆ ಮೃದುವಾಗುತ್ತಾನೆ. ಅದರಲ್ಲೂ ಹೆಣ್ಣು ಮಗುವಿನ ತಂದೆಯಾದರೆ ಹೆಚ್ಚು ಮೃದುವಾಗುತ್ತಾನೆ. ಶಹಾಪುರದ ಹಿರಿಯ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿಯವರು ಹೇಳಿದ್ದು ನೆನಪಾಗ್ತಿದೆ- 'ಮಗನೋ ಮಗಳೋ ಹುಟ್ಟಿದಾಗ ಸಹಜವಾಗಿ ಜೈವಿಕವಾಗಿ ಗಂಡಸಿನಲ್ಲಿ ಪೇರೆಂಟಲ್ ಭಾವ ಚಿಗುರೊಡೆಯುತ್ತದೆ. ಹೆಣ್ಣಿಗೆ ಹಾಗಲ್ಲ. ಅವಳು ತಾನು ಮಗುವಾಗಿದ್ದಾಗಲೂ ಒಬ್ಬ ಪುಟ್ಟ ತಾಯಿಯೇ. ನಿರ್ಜೀವ ಗೊಂಬೆಗಾದರೂ ಸ್ನಾನ ಮಾಡಿಸಿ, ತಲೆ ಬಾಚಿ, ಹಾಲುಣಿಸಿ, ಜೋ ಮಾಡಿ ಮಲಗಿಸುವಳು. ಗೊಂಬೆ ಸಿಕ್ಕಿಲ್ಲವೆಂದರೆ ಕಲ್ಲನ್ನೋ ಕಟ್ಟಿಗೆಯನ್ನೋ ಕೂಸಾಗಿ ಭಾವಿಸಿ ಅದರ ಭಾವಲೋಕದಲ್ಲಿ ಇಳಿಯಬಲ್ಲಳಾಕೆ. ಅದೇ ಗಂಡು ಹುಡುಗರ ಆಟಿಕೆಗಳೇನಿದ್ದರೂ ಜೀಪು, ಲಾರಿ, ಗನ್, ಮೆಷಿನ್ನುಗಳೇ. ಇದಕ್ಕೆ ಕಾರಣ ಹೆಣ್ಣು ಮೂಲತಃ ತಾಯಿಯೇ, ಹಡೆದಾಗ ಅವಳ ತಾಯ್ತನ ಜೈವಿಕವಾಗಿ ಪ್ರಕಟಗೊಳ್ಳುತ್ತದೆ ಅಷ್ಟೆ. ಗಂಡು ಹಾಗಲ್ಲ, ಅವನು ಅಪ್ಪ ಆಗುವುದೇ ಅವನಿಗೆ ಮಗು ಹುಟ್ಟಿದಾಗ. ಅಷ್ಟಾಗಿಯೂ ಮಗನ ತಂದೆಯಾದವನು ಮತ್ತು ಮಗಳ ತಂದೆಯಾದವನು ಈ ಇಬ್ಬರ ನಡುವೆ ಸಾಕಷ್ಟು ಸೂಕ್ಷ್ಮ ವ್ಯತ್ಯಾಸಗಳಂತೂ ಇರುತ್ತವೆ. ಮಗ, ಅವನ ಪುರುಷತ್ವ ಮತ್ತು ವಾರಸುದಾರಿಕೆಯ ಅಹಂನ ಮುಂದುವರಿಕೆ ಅಥವಾ ವಿಸ್ತರಣೆಯಾಗಿದ್ದರೆ, ಮಗಳು ಅವನಲ್ಲಿ ಮಾತೃತ್ವ ಮತ್ತು ಮಗುತನಗಳನ್ನು ಬಿತ್ತುವ ಬೀಜವಾಗಿ ಉದಿಸಿರುತ್ತಾಳೆ. ಯಾವುದೇ ತಂದೆ ತನ್ನ ಮಗನಿಗೆ ಲೇ, ಕಳ್ಳ, ಬದ್ಮಾಶ್, ಒದೀತೀನಿ ಅಂತ ತಮಾಷೆಗಾದರೂ ಅನ್ನಬಹುದು. ಆದರೆ ಮಗಳನ್ನು ಮಾತ್ರ 'ಅಮ್ಮಾ' ಎಂದೇ ಕರೆಯುತ್ತಾನೆ, ಕರೆಯಬೇಕಾಗುತ್ತದೆ'. ಎಂಥ ಸತ್ಯವಾದ ಮಾತು. ಅವರ ಮಾತುಗಳನ್ನು ಕೇಳಿದಾಗ ತೆಲುಗಿನ ಮಹೆಜಬೀನ್ ಎಂಬ ಕವಯಿತ್ರಿ ಬರೆದಿರುವ 'ಚಿಕ್ಕತಾಯಿ' ಎಂಬ ಪದ್ಯದ ನೆನಪಾಯಿತು. ಮನೆಗೆಲಸಕ್ಕೆ ಬರುವ ಹುಡುಗಿ ಹೇಗೆ ತನ್ನ ಪಾಲಿಗೆ ಚಿಕ್ಕತಾಯಿ ಎಂಬುದನ್ನಾಕೆ ಅಲ್ಲಿ ವಿವರಿಸಿದ್ದಾರೆ.
ದೈಹಿಕ ಕ್ಷಮತೆಯ ವಿಚಾರಕ್ಕೆ ಬಂದರೆ ಹೆಂಗಸರೇ ಹೆಚ್ಚು ಶಕ್ತಿಶಾಲಿಗಳೆಂದು ಹಲವಾರು ಅಧ್ಯಯನಗಳು ಹೇಳಿವೆ. ಬಾಕ್ಸಿಂಗ್, ಅಥ್ಲೆಟಿಕ್ಸ್, ಪರ್ವತಾರೋಹಣ, ಜಂಪಿಂಗ್‌ನಂಥ ಆಟಗಳಲ್ಲಿ ಅವರು ಸಾಧಿಸಿ ತೋರಿಸಿದ್ದುನಮ್ಮ ಕಣ್ಮುಂದೆಯೇ ಇದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವನ್ನು ಅತಿ ಹೆಚ್ಚು ಕಾಲ ಆಳಿದ ಖ್ಯಾತಿ ಕೂಡ ಇಂದಿರಾಗಾಂಧಿಯ ಹೆಸರಿನಲ್ಲಿದೆ. ಕಾರ್ಯಾಂಗ ದಲ್ಲೂ ಮೇಲಿನಿಂದ ಕೆಳಗಿನವರೆಗೆ ಇಂದು ಹೆಂಗಸರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಆದರೆ ಗ್ರಾಮೀಣ ಭಾಗದ ಮಹಿಳೆಯರ ಸ್ಥಿತಿ ಗತಿಯಲ್ಲಿ ಅಂಥ ಮಹತ್ತರ ಬದಲಾವಣೆಯೇನೂ ಆದಂತೆ ಕಾಣುತ್ತಿಲ್ಲ. ಗುಲ್ಬರ್ಗಾ ಜಿಲ್ಲೆ ಚಿಂಚೋಳಿ ತಾಲೂಕಿನ ಕೊಂಚಾವರಂ, ಒಂಟಿಗುಡ್ಸಿ, ಒಂಟಿಚಿಂತಾ ಮತ್ತು ಭಿಕ್ಕುನಾಯಕ ಮುಂತಾದ ತಾಂಡಾಗಳಲ್ಲಿ ನಡೆದ ಹೆಣ್ಣು ಶಿಶುಗಳ ಮಾರಾಟ ಇದಕ್ಕೊಂದು ಜ್ವಲಂತ ನಿದರ್ಶನ. ಹೆಣ್ಣು ಕೂಸು ಜನಿಸಿದರೆ ಅದಕ್ಕೆ ಹಾಲೂಡಿಸದೆ ಸಾಯಿಸಿದ ಮತ್ತು ನವಜಾತ ಶಿಶುವಿನ ಗಂಟಲಿಗೆ ಹತ್ತಿಯನ್ನು ತುರುಕಿ ಹಾಲೂಡಿ ಸಾಯಿಸಿದ ಘಟನೆಗಳು ವರದಿಯಾದಾಗ ಕನಲಿಹೋಗಿದ್ದೆ. ಹೆಣ್ಣು ಶಿಶು ಕೆಟ್ಟದ್ದೆಂದು ಅವರ ತಲೆಯಲ್ಲಿ ತುಂಬಿದವರ್ಯಾರೋ? ಸರಿಸುಮಾರು ಅದೇ ಕಾಲಕ್ಕೆ ರಾಯಚೂರು ಜಿಲ್ಲೆ ಲಿಂಗಸೂಗೂರಿನಿಂದ ಬೇರೊಂದು ಬಗೆಯ ಸುದ್ದಿ ವರದಿಯಾಗಿತ್ತು. ಅಲ್ಲಿನ ಖೈರವಾಡಗಿ ತಾಂಡಾದ ಈಶಪ್ಪ ಚವ್ಹಾಣರ ಕುಟುಂಬಕ್ಕೆ ಎರಡು ಎಕರೆ ಜಮೀನೇನೋ ಇದೆ, ಆದರೆ ಉಳಲು ಎತ್ತುಗಳಿಲ್ಲ. ಹೀಗಿರುವಾಗ ಇನ್ನೂ ಎರಡು ಎಕರೆ ಪಕ್ಕದವರ ಹೊಲವನ್ನು ಲೀಸಿಗೆ ಪಡೆದು ಒಟ್ಟು ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪತ್ನಿ ಗೋಗಿಬಾಯಿ ಮತ್ತು ಮಗಳು ಸುಮಿತ್ರಾ ಎತ್ತುಗಳ ಬದಲಿಗೆ ತಾವು ನೊಗಕ್ಕೆ ಹೆಗಲು ಕೊಟ್ಟು ಉಳುಮೆ ಮಾಡುತ್ತಿದ್ದಾರೆ. ಗೋಗಿಬಾಯಿ ಮತ್ತು ಸುಮಿತ್ರಾ ಕೂಡ ಹೆಂಗಸರೇ. ಕೇಶಪ್ಪ ಚವ್ಹಾಣ ಕೂಡ ಲಂಬಾಣಿಗರೇ.
ಹೊಂದಾಣಿಕೆಯ ಗುಣವು ಬದುಕಿನ ಅವಿಭಾಜ್ಯ ಅಂಗವೆಂದು ಮನೋವಿಜ್ಞಾನ ಗುರುತಿಸುತ್ತದೆ. ಹೆಂಗಸರಲ್ಲಿ ಅದು ಪ್ರಥಮ ಮತ್ತು ಪರಮ ಎನ್ನಬಹುದಾದ ಮಟ್ಟದಲ್ಲಿ ಕಾಣಿಸಿಕೊಳ್ಳುವುದು. ಆಕೆಗೆ ಎರಡು ಮನೆಗಳು, ಎರಡು ದಡಗಳು. ಹುಟ್ಟಿದ ಮನೆಯಿಂದ ಕೊಟ್ಟ ಮನೆಗೆ ಹೆಸರು ಬದಲಾಯಿಸಿಕೊಂಡು, ಅಸ್ಮಿತೆ ಬದಲಾಯಿಸಿಕೊಂಡು ಬರುವ ಆಕೆ ಈ ಎರಡರಲ್ಲೂ ತಾನು ಒಂದಾಗಿರುತ್ತ, ಈ ಎರಡನ್ನೂ ಒಂದಾಗಿಸುವ ಕೆಲಸದಲ್ಲಿ ತೊಡಗಿಕೊಂಡಿರುತ್ತಾಳೆ. ಅತ್ತೆ ಬೈದರೆ ಬೈಸಿಕೊಂಡು, ಮಾವ ಅಂದರೆ ಅನಿಸಿಕೊಂಡು, ನಾದಿನಿ ಸೆಟಗೊಂಡರೆ ಸೈರಿಸಿಕೊಂಡು, ಗಂಡ ತಾಚಿಕಾರ ಮಾಡಿದರೆ ನುಂಗಿಕೊಂಡು, ತವರಿನ ಆಸೆ ಅದುಮಿಟ್ಟುಕೊಂಡು ಹೊಸ ಪರಿಸರದಲ್ಲಿ ಸದ್ದಿಲ್ಲದೆ ಒಂದು ಸ್ಥಾನ ಸಂಪಾದಿಸಿಕೊಳ್ಳುತ್ತಾಳೆ. ಸಮಾಯೋಜನೆಗೆ ಮತ್ತೊಂದು ಹೆಸರು ಅವಳು. ಅತ್ತ ತವರು, ಇತ್ತ ತನ್ನವರು ಎರಡೂ ಭಾವಲೋಕಗಳನ್ನು ತನ್ನೊಳಗೆ ಸರಿಸಮನಾಗಿ ತೂಗಿಕೊಂಡು ಹೋಗುವ ಹೆಣ್ಣಿಗೆ ಒಳಗೆಲ್ಲೋ ತವರಿನ ಕಡೆಗೇ ಒಂದು ಗುಲಗಂಜಿ ತೂಕ ವಾಲಿಕಿ ಜಾಸ್ತಿ ಅನಿಸುತ್ತೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಅಂತಾರೆ, ಆದರೆ ಹಾಗೆ ಹೊರಗೆ ಹೋದ ಆಕೆಗೆ ಒಳಗಿನ ಬಗ್ಗೇ ಚಿಂತೆ. ಎಲ್ಲ ಹೆಣಮಕ್ಕಳೂ ಮದುವೆಯಾಗಿ ಗಂಡನ ಮನೆ ಸೇರಿದ ಮೇಲೂ ತಮ್ಮ ತವರುಮನಿ ತಣ್ಣಗಿರಲೆಂದು ಹಾರೈಸುತ್ತಾ ಇರುತ್ತಾರೆ. ಗಂಡಸರು ಮದುವೆಯಾದ ನಂತರ ಅಪ್ಪ ಅಮ್ಮಂದಿರನ್ನು ಬಿಟ್ಟು ಹೆಂಡತಿಯೊಂದಿಗೆ ಹೊಸಮನೆ ಮಾಡುತ್ತಾರೆ. ಅದಕ್ಕೇ ಇರಬೇಕು ಹಿರಿಯರು 'ಹೆಣ್ಣು ಹೆತ್ತ ಮನೆ ತಣ್ಣಗಿರುತೆ'್ತ ಅಂತಾರೆ. ನಾಲ್ಕು ಜನ ಬೆಟ್ಟದಂಥ ಗಂಡು ಮಕ್ಕಳಿರುವ ಬಸ್ಸಪ್ಪ ತಾತ ನನಗೆ ಹೇಳಿದ್ದು ನೆನಪಾಗ್ತಿದೆ 'ನೀನೇ ಪುಣ್ಯವಂತನಪ್ಪ. ಸತ್ತರೆ ನನ್ನ ಹೆಣದ ಮುಂದೆ ಭೋರ್ಯಾಡಿ ಅಳಾಕ ಈ ಪಾಪಿ ಜನ್ಮಕ್ಕ ಒಬ್ಬ ಮಗಳಿಲ್ಲ. ಹೆಣ್ಣು ಮಕ್ಕಳಿದ್ರೆ ಅಪ್ಪ ಆದವನು ಸತ್ರೂ ಬದುಕಿರ್ತಾನಪ. ಬರೇ ಗಂಡು ಮಕ್ಕಳಿದ್ರೆ ಸತ್ತ ದಿವಸಕ್ಕೇ ಮುಗೀತು ಸಂತೆ'. ಈ ಮಾತಿನಲ್ಲೂ ತಥ್ಯವಿದೆ ಅನ್ನಿಸಿತು ನನಗೆ. ಮೊಮ್ಮಕ್ಕಳನ್ನು ಕಂಡಿರುವ ನನ್ನ ಅಮ್ಮ, ಅಕ್ಕಿಯಲ್ಲಿ ಹಳ್ಳು ಆರಿಸುತ್ತ, ಈಗಲೂ ಗತಿಸಿ ಹೋಗಿರುವ ತನ್ನ ಅಪ್ಪ, ಅಮ್ಮ, ತಮ್ಮನನ್ನು ನೆನೆಸಿಕೊಂಡು ಆಗಾಗ ಕಣ್ಣೀರಾಗುತ್ತಾಳೆ. ಚೆಲುವೆಯಾದ ತನ್ನಮ್ಮ ಸುಖಕ್ಕಿಂತ ಹೆಚ್ಚು ಕಷ್ಟವನ್ನೇ ಅನುಭವಿಸಿದಳೆಂದೂ; ಕಣ್ಣೀರಿನಲ್ಲಿ ಕೈ ತೊಳೆಯುತ್ತ ಬಾಳಿದ ಆಕೆ ಇನ್ನೂ ನಾಲ್ಕಾರು ವರ್ಷ ಇರಬೇಕಾಗಿತ್ತೆಂಬ ನುಡಿಯನ್ನು ನೂರು ಸಲ ಹೇಳುತ್ತಿರುತ್ತಾಳೆ. ಒಂದೇ ಮಾತಲ್ಲಿ ಹೇಳಬೇಕೆಂದರೆ ಜಗತ್ತಿನ ಎಲ್ಲ ಸಾಧಕರ ಸಾಧನೆಯಲ್ಲಿ ಅವರ ತಾಯಿ ಅಥವಾ ಪತ್ನಿಯ ಪ್ರೀತಿ ಮತ್ತು ತ್ಯಾಗಗಳ ಸಿಂಹಪಾಲಿದೆ. ಹಾಗೆಯೇ ಮನೆ ಬಿಟ್ಟು ಓಡಿ ಹೋದ ಮಕ್ಕಳಿಗೆ ಅಪ್ಪನ ಭಯ ಅಥವಾ ಅಮ್ಮನ ವಾತ್ಸಲ್ಯದ ಕೊರತೆಯೇ ಪ್ರಮುಖ ಕಾರಣವಾಗಿದೆ.
ಇದಲ್ಲದೆ ನಾವು ಕಾಣದಿರುವ ಮುಖ ಅಥವಾ ಕಂಡೂ ಕಾಣದಂತಿರುವ, ಕೇಳಿಯೂ ಕೇಳದಂತಿರುವ ಮುಖವೂ ಅವಳಿಗಿದೆ. ಆಕೆಯಲ್ಲಿ ಸಣ್ಣತನಗಳಿಗೇನೂ ಕೊರತೆಯಿಲ್ಲ. ನೀಚರು, ಖದೀಮರು, ಕೊಲೆಗಡುಕರು, ಧನದಾಹಿಗಳು,ಪತಿಪೀಡಕರು, ಪರಮಲೋಭಿಗಳುಅಲ್ಲಿಯೂ ಇದ್ದಾರೆ, ಗಂಡಸರಲ್ಲಿರುವಂತೆ. ಆದರೆ ಅಪರಾಧ ಪ್ರಕರಣಗಳಲ್ಲಿ ಮಹಿಳೆಯರ ಬಳಕೆಯ ಹಿಂದೆ ಹೆಂಗಸರನ್ನು ಅಪರಾಧಿಯಾಗಿ ನೋಡಲು ಇನ್ನೂ ತಯಾರಿರದ ಸಾಮಾಜಿಕ ಮನಃಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಬಯಕೆ ಒಂದು ತಂತ್ರವಾಗಿ ಕೆಲಸ ಮಾಡಿರುವಂತಿದೆ. ಶೇಕ್ಸ್‌ಪಿಯರ್ ಎಂದೋ 'ಓ ವುಮನ್, ದೈ ನೇಮ್ ಈಸ್ ಜಲಸಿ' ಎಂದಿದ್ದಾನೆ. ನೀವು ಬೇಕಾದರೆ ಗಮನಿಸಿ, ಬಸ್ಸಿನಲ್ಲಿ ಯಾರಿಗಾದರೂ ಸೀಟು ಬಿಡಬೇಕಾಗಿ ಬಂದರೆ ಬೇಕೆಂದೇ ಮತ್ತಷ್ಟು ಅಗಲವಾಗಿ ಕೂತು, ಕೆಳಗಿದ್ದ ಬ್ಯಾಗನ್ನು ಸೀಟ್ ಮೇಲಿಟ್ಟು, ನಿಂತಿರುವ ಮಕ್ಕಳನ್ನು ಬಲವಂತದಿಂದ ಕೂರಿಸಿ ಸೀಟಿಲ್ಲ ಎನ್ನುವುದು ಅವರೇ. ಎಲ್ಲೇ ಆಗಲಿ ಹೇಳಿಸಿಕೊಂಡ ಮೇಲೇ ಅವರು ಸೀಟು ಬಿಡುವುದು, ಅದೂ ಗೊಣಗುತ್ತ. ಇರಲಿ ಅವಳಿಂದಾಗಿಯೇ ರಾಮಾಯಣ ಜರುಗಿದೆ, ಅವಳಿಂದಾಗಿಯೇ ಮಹಾಭಾರತ ನಡೆದಿದೆ. ರಾಜ್ಯಗಳು ಅರಳಿವೆ, ರಾಜ್ಯಗಳು ಉರುಳಿವೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಪತ್ನಿಪೀಡಿತ ಪತಿಗಳ ಒಂದು ಸಂಘಟನೆಯೇ ಅಸ್ತಿತ್ವಕ್ಕೆ ಬಂದಿದ್ದು, ಕೌಟುಂಬಿಕ ದೌರ್ಜನ್ಯ, ಮಾನಸಿಕ ಹಿಂಸೆ, ವರದಕ್ಷಿಣೆ, ಅತ್ಯಾಚಾರದ ಕಾನೂನುಗಳ ದುರ್ಬಳಕೆಯಿಂದ ತಮ್ಮನ್ನು ರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದು ವರದಿಯಾಗಿದೆ. ಅವಿಭಕ್ತ ಕುಟುಂಬದ ಕಾಲದಲ್ಲಿ ಹಾಗಿತ್ತು, ಅತಿ ಚಿಕ್ಕ ಕುಟುಂಬಗಳ ಕಾಲದಲ್ಲಿ ಹೀಗಾಗಿದೆ. ಈಗಂತೂ ಅವಳು ಸದಾ ಉರಿಯುವ ಒಂದು ಬೆಂಕಿಯಾಗಿದ್ದಾಳೆ. ಅಲ್ಲಿ ಆನಂದ ಮತ್ತು ಅಪಾಯಗಳು ಒಂದರೊಳಗೊಂದು ಬಿಡಿಸಲಾಗದಂತೆ ಬೆರೆತು ನಿಂತಿವೆ. ಅವಳು ಸಂತಸದಾಯಿನಿಯಾಗಿರುವಂತೆ ಸಂಘರ್ಷಕ್ಕೆ ಸನ್ನದ್ಧಳಾಗಿಯೂ ಇದ್ದಾಳೆ. ಅವಳು ಮಾಯೆ, ಅವಳು ತಾಯಿ, ಅವಳು ಮಹಾಕಾಳಿಯೂ!
'ಕವಿಯು ಶಿವನಂತೆ ಅರ್ಧನಾರೀಶ್ವರ; ಅವನೊಳಗೆ ಅರ್ಧ ಅಥವಾ ಅರ್ಧಕ್ಕಿಂತ ಹೆಚ್ಚೇ ಸ್ತ್ರೀ ಇದ್ದಾಳೆ' ಎಂದರು ತೆಲುಗು ಕವಿ ಕೆ. ಶಿವಾರೆಡ್ಡಿ. ಆ ಮಾತು ನನ್ನನ್ನು ಗಾಢವಾಗಿ ತಾಕಿತು. ಆಲೋಚಿಸಿ ನೋಡಿದೆ. ನಮ್ಮ ಪುರಾಣಗಳಲ್ಲೆಲ್ಲೂ ಯಾವ ಹೆಣ್ಣು ದೇವತೆಯೂ ತನ್ನೊಳಗೆ ಅರ್ಧವಾಗಿ ಪುರುಷನನ್ನು ಪರಿಭಾವಿಸಿಕೊಂಡ ಚಿತ್ರಣವಿಲ್ಲ. ಅಂದರೆ ಇಡಿಯಾಗಿ ಅವಳಿದ್ದಾಳೆ. ಬಿಡಿಯಾಗಿ ಇರುವ ಅವನು ಇಡಿಯಾಗಿರುವ ಅವಳಲ್ಲಿ ಹಿಡಿಯಷ್ಟು ಜಾಗ ಪಡೆದು ಇಡಿಯೇ ತಾನಾದ ಭ್ರಮಾಭಾವದಲ್ಲಿದ್ದಾನೆ. ಆದರೆ ನಿಜದಲ್ಲಿ ಯಾವುದು ಪೂರ್ಣವೋ ಅದು ಅಂಶವೂ ತಾನಾಗಿದೆ ಸಿಂಧುವಿನಂತೆ. ಆದರೆ ಯಾವುದೋ ಅಂಶ ಅದು ಪೂರ್ಣವೂ ತಾನಾಗಿರುವಂತೆ ಗೋಚರಿಸುತ್ತ, ಪೂರ್ಣದ ಒಂದಂಶ ಮಾತ್ರವಾಗಿ ತಾನಿದೆ, ಒಂದು ಬಿಂದುವಿನಂತೆ. ಕಂಡೇನೆಂದರೆ ಬಿಂದುವಿಗೆ ಉದ್ದವಿಲ್ಲ, ಅಗಲವಿಲ್ಲ, ವಿಸ್ತೀರ್ಣವಿಲ್ಲ, ಘನಫಲವಿಲ್ಲ. ಆದರೆ ಬಿಂದುವಿಲ್ಲದ ಬದುಕೇ ಇಲ್ಲ. ಸಿಂಧುವಿಗೆ ಹಾಗಲ್ಲ. ಹಲವು ಸಾವಿರ ಬಿಂದುಗಳು ಒಂದಾಗಿ ಘನೀಭವಿಸಿ ಉಂಟಾದ ಇದಕ್ಕೆ ಉದ್ದ, ಅಗಲ, ಎತ್ತರ, ಆಳ, ವಿಸ್ತೀರ್ಣ, ಘನಫಲಗಳೆಲ್ಲ ಗೋಚರಸ್ವರೂಪದಲ್ಲೇ ಉಂಟು. ಬಿಂದುವಿಲ್ಲದೆ ಸಿಂಧುವಿಲ್ಲ ಸಿಂಧು ಒಳಗೊಳ್ಳದ ಬಿಂದುವಿಲ್ಲ. ಅವೆರಡೂ ಭಿನ್ನ ಬೇಧವ ಮರೆತು ಏಕೋಭಾವದಲ್ಲಿ ಸಂಧಿಸಿದಾಗ ಹಿಂದು-ಮುಂದುಗಳೆಲ್ಲ ಇಂದು ಎಂಬಲ್ಲಿ ಒಂದುಗೂಡಿ ಒಂದೆಂಬ ಭಾವವನ್ನು ಹಡೆಯುವವು. ಈ ಜಗದ, ಮನುಕುಲದ, ಅಷ್ಟೇಕೆ ಸಕಲ ಜೀವಸಂಕುಲದ ಕಲ್ಯಾಣವು ಈ ಭಾವದಲ್ಲಿ ಬೀಜವಾಗಿ ಹುದುಗಿ ಕುಳಿತಿದೆ. ಯಾವುದೂ ಹೆಚ್ಚಲ್ಲದ, ಯಾವುದೂ ಕಡಿಮೆಯಲ್ಲದ ಈ ಸರ್ವ ಸಮಭಾವದ ಅರಿವಿನಲ್ಲಿ ಜಗವು ಹೆಣ್ಣನ್ನು ಎದುರುಗೊಳ್ಳಬೇಕಾಗಿದೆ. <

-ಚಿದಾನಂದ ಸಾಲಿ
chidusali@yahoo.com, 9886891883

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest//58543ಗೆ ಭೇಟಿನೀಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.